
ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಅಧಿಕವಾಗುತ್ತಿದ್ದು, ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಂಚಾರಿ ಪೊಲೀಸರೊಂದಿಗೆ ಶುಕ್ರವಾರ ನಗರಸಭೆ ಆಡಳಿತ ಅಧ್ಯಕ್ಷೆ ಕೆ.ಸಿ ಗೀತಾ ರಾಜಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಚರ್ಚೆ ನಡೆಸಿತು.
ಭದ್ರಾವತಿ: ನಗರಸಭೆ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಅಧಿಕವಾಗುತ್ತಿದ್ದು, ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಂಚಾರಿ ಪೊಲೀಸರೊಂದಿಗೆ ಶುಕ್ರವಾರ ನಗರಸಭೆ ಆಡಳಿತ ಅಧ್ಯಕ್ಷೆ ಕೆ.ಸಿ ಗೀತಾ ರಾಜಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಚರ್ಚೆ ನಡೆಸಿತು.
ನಗರಸಭೆ ಹಿರಿಯ ಸದಸ್ಯ ಬಿ.ಟಿ ನಾಗರಾಜ್ ಮಾತನಾಡಿ, ಈ ಹಿಂದೆ ಪೊಲೀಸ್ ಅಧಿಕಾರಿಗಳು ಪ್ರತಿನಿತ್ಯ ಸಂಜೆ ಬೀದಿಗೆ ಬರುತ್ತಿದ್ದರು. ಸುಗಮ ಸಂಚಾರಕ್ಕೆ ಮಾಧ್ಯಮ ಪ್ರತಿನಿಧಿ, ಮುಖಂಡರು, ಸಾರ್ವಜನಿಕರಿಂದ ಮಾಹಿತಿ ಪಡೆಯುತ್ತಿದ್ದರು. ಸ್ವತಃ ಅಧಿಕಾರಿಗಳೇ ನಗರಸಭೆ, ಮತ್ತಿತರರ ಸಿಬ್ಬಂದಿಗಳೊಂದಿಗೆ ಬಿಡಾಡಿ ದನಗಳನ್ನು ಹಿಡಿದು ಠಾಣೆಗಳಲ್ಲಿ ಕಟ್ಟಿ ಹಾಕುತ್ತಿದ್ದರು. ಈಗ ಪೊಲೀಸ್ ಅಧಿಕಾರಿಗಳಿಗೆ ಜನ ಸಂಪರ್ಕವೇ ಇಲ್ಲವಾಗಿದೆ. ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕಾಲ ಕಳೆದು ಹೋಗುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿ, ಈ ಹಿಂದೆ ನಗರಸಭೆಯಿಂದ ಸಂಚಾರ ನಿಯಂತ್ರಣಕ್ಕಾಗಿ ೫ ಲಕ್ಷ ರೂ ವೆಚ್ಚದಲ್ಲಿ ಟವರ್, ಮೈಕ್, ಸಿಗ್ನಲ್ ಮಾಡಿಸಲಾಗಿತ್ತು. ಅವೆಲ್ಲವೂ ಈಗ ನಾಪತ್ತೆಯಾಗಿದೆ. ಎಲ್ಲಿಗೆ ಹೋಗಿದೆ ಪತ್ತೆ ಹಚ್ಚಿ ಎಂದು ಪೊಲೀಸ್ ಅಧಿಕಾರಿಗಳಿಗೆ ಪ್ರಶ್ನಿಸಿದರು.
ಸದಸ್ಯ ಚನ್ನಪ್ಪ ಮಾತನಾಡಿ, ತರೀಕೆರೆ ರಸ್ತೆಯ ಗಾಂಧಿ ವೃತ್ತದಲ್ಲಿ ಗ್ಯಾರೇಜ್‌ಗಳ ಮುಂಭಾಗದಲ್ಲಿ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿಕೊಂಡು ರಿಪೇರಿ ಮಾಡುತ್ತಾ ಸಂಚಾರಕ್ಕೆ ಅಡ್ಡಿಪಡಿಸುತ್ತಾ ಸಂಚಾರಕ್ಕೆ ತೊಂದರೆಯಾಗಿದೆ. ಭದ್ರಾ ಕಾಲೋನಿ ಸರ್ಕಾರಿ ಶಾಲೆ ಮುಂಭಾಗ ಅಪಘಾತ ವಲಯವಾಗಿದೆ. ಅಲ್ಲಿ ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ. ನಗರದೆಲ್ಲೆಡೆ ಸಂಚಾರ ವ್ಯವಸ್ಥೆ ತುಂಬಾ ಹದಗೆಟ್ಟಿದೆ ಸರಿಪಡಿಸಿ, ಟ್ರಾಫಿಕ್ ಸಿಗ್ನಲ್‌ಗೆ ಅಳವಡಿಕೆಗೆ ಅಗತ್ಯವಿರುವ ಅನುದಾನ ಸಂಬಂಧ ಶಾಸಕರ ಬಳಿ ಚರ್ಚಿಸೋಣ, ಮಾರ್ಕೆಟ್ ಬಳಿ ರಂಜಾನ್ ಹಾಗು ಯುಗಾದಿ ಹಬ್ಬಕ್ಕೆ ಸುಗಮ ವಾಹನ ಸಂಚಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಿ ಎಂದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್ ಮಾತನಾಡಿ, ಯಾವ ರಸ್ತೆಯಲ್ಲಿ ನೋಡಿದರೂ ಬಾರ್‌ಗಳ ಮುಂದೆ ಮತ್ತು ನಗರಸಭೆ ಕಚೇರಿ ಮುಂದೆ ವಾಹನಗಳ ದಟ್ಟಣೆ ಹೆಚ್ಚಾಗಿದೆ. ರೈಲು ಬರುವಾಗ ಬಿ.ಎಚ್.ರಸ್ತೆ ಲಕ್ಷ್ಮೀ ಸ್ವೀಟ್ ಹೌಸ್, ಸೃಷ್ಟಿ ಸಿಲ್ಕ್ಸ್ ಮುಂಭಾಗ ಆಟೋಗಳ ನಿಲ್ದಾಣವಾಗಿ ಮಾರ್ಪಾಡಾಗುತ್ತಿದ್ದು, ಇದರಿಂದಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದರು.
ಸದಸ್ಯ ಜಾರ್ಜ್ ಮಾತನಾಡಿ, ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ವಾಹನಗಳು ನಿಲ್ಲಿಸಿ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದರು, ಸದಸ್ಯ ಮೋಹನ್‌ಕುಮಾರ್ ಮಾತನಾಡಿ, ಬಿ.ಎಚ್ ರಸ್ತೆಯ ಫುಟ್‌ಪಾತ್ ಜನರಿಗೆ ಉಪಯೋಗವಾಗದೆ ವ್ಯಾಪಾರಸ್ಥರು, ಕೋಳಿ ಅಂಗಡಿ ಮುಂತಾದವರಿಂದ ತೊಂದರೆಯಾಗುತ್ತಿದೆ, ಪೊಲೀಸ್ ಅಧಿಕಾರಿಗಳ ಆದೇಶದಂತೆ ಪೊಲೀಸರು ಕೇವಲ ಕೇಸುಗಳನ್ನು ಹಾಕಿಕೊಂಡು ಕಾಲ ಕಳೆಯುತ್ತಿದ್ದಾರೆ. ಸುಗಮ ರಸ್ತೆ ಸಂಚಾರಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು. ಸದಸ್ಯ ಆರ್. ಶ್ರೇಯಸ್(ಚಿಟ್ಟೆ)ಮಾತನಾಡಿ, ಎಲ್ಲಾ ವೃತ್ತಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕೆಂದರು. ಸದಸ್ಯ ಹನುಮಂತಪ್ಪ ಅಂಬೇಡ್ಕರ್ ವೃತ್ತದಲ್ಲಿರುವ ಕಟ್ಟೆಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕೆಂದರು.
ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್ ಮಾತನಾಡಿ, ನಗರದೆಲ್ಲೆಡೆ ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನಗಳ ನಿಲುಗಡೆಯಿಂದ ತೊಂದರೆಯಾಗುತ್ತಿದೆ. ಶಾಲೆಗಳ ಕಾಂಪೌಂಡ್ ಹಾರಿ ಮಧ್ಯ ಸೇವನೆ ಮಾಡುತ್ತಾರೆ. ಮಹಿಳೆಯರು ರಸ್ತೆಗಳಲ್ಲಿ ಓಡಾಡುವುದೇ ತೋದರೆಯಾಗಿದೆ. ಪೊಲೀಸರು ಶಿಸ್ತು ಕ್ರಮ ಜರುಗಿಸಿ ಎಂದರು.
ಪೊಲೀಸ್ ನಗರವೃತ್ತ ನಿರೀಕ್ಷಕ ಶ್ರೀಶೈಲಕುಮಾರ್ ಮಾತನಾಡಿ, ನಗರದಲ್ಲಿ ಟಿ.ಕೆ ರಸ್ತೆ ಮಾದರಿ ರಸ್ತೆ ಡಿವೈಡರ್ ಇದ್ದರೆ ಸಿಗ್ನಲ್ ಲೈಟ್ಸ್ ಅಳವಡಿಸುವ ವ್ಯವಸ್ಥೆ ಮಾಡಬಹುದು. ಇಲ್ಲದಿರುವುದರಿಂದ ಅವಶ್ಯಕತೆಯಿಲ್ಲ. ಇರುವೆಡೆ ಸಿಗ್ನಲ್‌ಲೈಟ್ಸ್ ಅಳವಡಿಕೆಗೆ ಸುಮಾರು ಎರಡೂವರೆ ಲಕ್ಷ ರು. ಬೇಕಾಗುತ್ತದೆ. ನಗರದಲ್ಲಿ ಮದ್ಯಸೇವಿಸಿ ವಾಹನ ಚಲಾಯಿಸುವುದು ಹೆಚ್ಚಾಗಿದೆ. ಕಟ್ಟುನಿಟ್ಟಾಗಿ ಕ್ರಮಕೈಗೊಂಡರೆ ಬಿಡುವಂತೆ ಒತ್ತಡ ಹೆಚ್ಚಾಗುತ್ತದೆ. ಆದರೂ ಸಹ ಕ್ರಮ ಜರುಗಿಸುತ್ತೇವೆ ಎಂದರು. ಪೇಪರ್‌ಟೌನ್ ಠಾಣೆ ಉಪ ನಿರೀಕ್ಷಕಿ ಕವಿತಾ ಮಾತನಾಡಿ, ಮಿಲ್ಟ್ರಿಕ್ಯಾಂಪ್ ಬಳಿ ಪ್ರೊ.ಬಿ. ಕೃಷ್ಣಪ್ಪ ವೃತ್ತದಲ್ಲಿ ಸಂಚಾರ ನಿಯಂತ್ರಣಕ್ಕೆ ಪೊಲೀಸರಿಗೆ ಬಾಕ್ಸ್ ಒಂದನ್ನು ನಿರ್ಮಿಸಿಕೊಡಿ ಎಂದರು.
ಪೌರಾಯುಕ್ತ ಪ್ರಕಾಶ್ ಎಂ.ಚೆನ್ನಪ್ಪನವರ್ ಸಭೆಯ ಔಚಿತ್ಯವನ್ನು ಹಾಗೂ ಸಂಚಾರದಲ್ಲಿ ಆಗುತ್ತಿರುವ ಅವ್ಯವಸ್ಥೆಯನ್ನು ಸರಿಪಡಿಸಲು ಸಿ.ಸಿ ಕ್ಯಾಮರಾ, ಹೈಲೈಟ್ಸ್ ದೀಪಗಳು, ಸಂಚಾರ ನಿಯಂತ್ರಣಕ್ಕೆ ಬೇಕಾದ ಸೌಲಭ್ಯಗಳು, ಫುಟ್ ಪಾತ್ ಅವ್ಯವಸ್ಥೆ ಮುಂತಾದ ಉಪಯುಕ್ತ ವಿಚಾರಗಳು ಚರ್ಚೆಯಾಗಿರುವುದು ಸಂತಸ ತಂದಿದೆ ಎಂದರು. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಕೆ. ಸುದೀಪ್‌ಕುಮಾರ್, ಕಾಂತರಾಜ್ ಉಪಸ್ಥಿತರಿದ್ದರು. ವಿವಿಧ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು ಹಾಗು ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.