Sunday, April 4, 2021

ಅಧಿಕ ಪ್ರವಾಹದ ವಿದ್ಯುತ್ ತಂತಿ ತಗುಲಿ ಎತ್ತು ಸಾವು

ವಿದ್ಯುತ್ ತಂತಿ ತಗುಲಿದ ಪರಿಣಾಮ ಎತ್ತು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಭದ್ರಾವತಿ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
    ಭದ್ರಾವತಿ, ಏ. ೪: ವಿದ್ಯುತ್ ತಂತಿ ತಗುಲಿದ ಪರಿಣಾಮ ಎತ್ತು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
   ಕಲ್ಲಹಳ್ಳಿ ಗ್ರಾಮದ ಅಂತರಘಟ್ಟಮ್ಮ ದೇವಸ್ಥಾನದ ಬಳಿ ವಿದ್ಯುತ್ ಕಂಬದ ಮೇಲೆ ಮರದ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ ಅಧಿಕ ವಿದ್ಯುತ್ ಪ್ರವಾಹದ ತಂತಿ ಕತ್ತರಿಸಿಕೊಂಡು ರಸ್ತೆಗೆ ಬಿದ್ದಿದ್ದು, ಮಂಜಪ್ಪ ಎಂಬುವರು ತಮ್ಮ ಎತ್ತಿನ ಗಾಡಿಯಲ್ಲಿ ತೋಟಕ್ಕೆ ಹೋಗುವಾಗ ವಿದ್ಯುತ್ ತಂತಿ ಎತ್ತಿನ ಕಾಲಿಗೆ ತಲುಲಿದ ಪರಿಣಾಮ ಎತ್ತು ಸ್ಥಳದಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದೆ ಎನ್ನಲಾಗಿದೆ. \
    ಎತ್ತಿನ ಸಾವಿಗೆ ಮೆಸ್ಕಾಂ ಇಲಾಖೆ ನಿರ್ಲಕ್ಷ್ಯತನ  ಕಾರಣ ಎಂದು ಆರೋಪಿಸಲಾಗಿದೆ. ಘಟನೆ ಕುರಿತು ಗ್ರಾಮ ಪಂಚಾಯಿತಿ ಸದಸ್ಯ ಧನಂಜಯ ಆತಂಕ ವ್ಯಕ್ತಪಡಿಸಿದ್ದಾರೆ.

ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷರಾಗಿ ೨ನೇ ಬಾರಿಗೆ ಜಗದೀಶ್ ಪುನರ್ ಆಯ್ಕೆ

ಜೆ. ಜಗದೀಶ್
    ಭದ್ರಾವತಿ, ಏ. ೪: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್ ಪುನರ್ ಆಯ್ಕೆಯಾಗಿದ್ದಾರೆ.
   ಭಾನುವಾರ ನಡೆದ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆ. ಜಗದೀಶ್ ೧೧೭, ಸುರೇಶ್ ೩೮ ಮತ್ತು ಶ್ರೀನಿವಾಸ್ ೬೩ ಮತಗಳನ್ನು ಪಡೆದುಕೊಂಡರು. ಜೆ. ಜಗದೀಶ್ ೨ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶೈಲಶ್ರೀ ಮತ್ತು ಕುಮಾರ್ ಆಳ್ವಾ ಇಬ್ಬರು ೮೯ ಸಮಮತಗಳನ್ನು ಹಾಗು ರಾಘವೇಂದ್ರ ೩೭ ಮತಗಳನ್ನು ಪಡೆದುಕೊಂಡಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಲಾಟರಿ ಮೂಲಕ ಆಯ್ಕೆ ನಡೆದು ಮೊದಲ ಅವಧಿಗೆ ಕುಮಾರ್ ಆಳ್ವಾ ಹಾಗು ಎರಡನೇ ಅವಧಿಗೆ ಶೈಲಶ್ರೀ ಆಯ್ಕೆಯಾಗಿದ್ದಾರೆ. ಕಾರ್ಮಿಕ ಸಂಘದ ಚುನಾವಣೆ ಇತಿಹಾಸದಲ್ಲಿ ಎರಡನೇ ಬಾರಿಗೆ ಮಹಿಳೆಯೊಬ್ಬರು ಆಯ್ಕೆಯಾಗಿ ಗಮನ ಸೆಳೆದಿದ್ದಾರೆ. ಈ ಹಿಂದೆ ಮೊದಲ ಬಾರಿಗೆ ರಾಜಮ್ಮ ಎಂಬುವರು ಆಯ್ಕೆಯಾಗಿದ್ದರು.
   ಪ್ರಧಾನ ಕಾರ್ಯದರ್ಶಿಯಾಗಿ ಬಸಂತ್‌ಕುಮಾರ್ ಆಯ್ಕೆಯಾಗಿದ್ದು, ೧೨೫ ಮತಗಳನ್ನು ಹಾಗು ಅಮೃತ್‌ಕುಮಾರ್ ೮೭ ಮತಗಳನ್ನು ಪಡೆದುಕೊಂಡಿದ್ದಾರೆ. ಉಳಿದಂತೆ ಎಂ.ಎಲ್ ಯೋಗೀಶ್, ಮನೋಹರ್, ಸುನಿಲ್, ರಾಜು, ಕುಮಾರಸ್ವಾಮಿ, ಮಂಜುನಾಥ್ ಆಯ್ಕೆಯಾಗಿದ್ದಾರೆ.
ಒಟ್ಟು ೨೨೨ ಮತಗಳಲ್ಲಿ ೨೧೮ ಮತಗಳು ಚಲಾವಣೆಯಾಗಿವೆ. ಇಳಯರಾಜ ಮತ್ತು ಅಡವೀಶಯ್ಯ ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು.

ಸರ್ಕಾರದ ಯಾವುದೇ ಅನುದಾನವಿಲ್ಲದೆ ಕೆರೆಗಳ ಹೂಳು ತೆಗೆಯುವ ಕಾರ್ಯಾಚರಣೆ

೫ ಕೆರೆಗಳ ಹೂಳು ತೆಗೆಯುವ ಕಾರ್ಯ ಪೂರ್ಣ :  ಪೌರಾಯುಕ್ತ ಮನೋಹರ್ ಖುದ್ದು ಪರಿಶೀಲನೆ


ಪೌರಾಯುಕ್ತ ಮನೋಹರ್ ಭಾನುವಾರ ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳ ಹೂಳು ತೆಗೆಯುವ ಕಾರ್ಯಾಚರಣೆ ನಡೆಸುತ್ತಿರುವ ತಂಡದೊಂದಿಗೆ ಖುದ್ದಾಗಿ ಭೇಟಿ ನೀಡಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಪರಿಶೀಲನೆ ನಡೆಸಿದರು. 
   ಭದ್ರಾವತಿ, ಏ. ೪: ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಹೇಗಾದರೂ ಮಾಡಿ ಅಭಿವೃದ್ಧಿಗೊಳಿಸಬೇಕೆಂಬ ಉದ್ದೇಶದೊಂದಿಗೆ ಕಳೆದ ಸುಮಾರು ೨ ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿರುವ ನಗರಸಭೆ ಪೌರಾಯುಕ್ತ ಮನೋಹರ್ ನೇತೃತ್ವದ ತಂಡ ಬಹುತೇಕ ಯಶಸ್ವಿ ದಾರಿಯಲ್ಲಿ ಸಾಗುತ್ತಿದೆ.
     ಬೇಸಿಗೆಯಲ್ಲಿ ರೈತರಿಗೆ, ಜಾನುವಾರುಗಳಿಗೆ ಅನುಕೂಲ ಕಲ್ಪಿಸಿಕೊಡುವ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಿಸಲು ನಗರಸಭೆ ವ್ಯಾಪ್ತಿಯಲ್ಲಿನ ಕೆರೆಗಳನ್ನು ಅಭಿವೃದ್ಧಿಗೊಳಿಸುವಂತೆ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಹಲವಾರು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಈ ಸಂಬಂಧ ನಗರಸಭೆಗೆ ಹಲವಾರು ಬಾರಿ ಮನವಿ ಸಹ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಕಳೆದ ಸುಮಾರು ೨ ವರ್ಷಗಳಿಂದ ನಿರಂತರವಾಗಿ ಪೌರಾಯುಕ್ತ ಮನೋಹರ್ ನಗರಸಭೆ ವ್ಯಾಪ್ತಿಯಲ್ಲಿ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ವಹಿಸಿ ತಾಲೂಕು ಆಡಳಿತದ ನೆರವಿನೊಂದಿಗೆ ಬೌಂಡರಿ ನಿಗದಿಪಡಿಸುವ ಮೂಲಕ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು ೭೦ ಕೆರೆಗಳ ಪೈಕಿ ಪ್ರಸ್ತುತ ೧೮ ಕೆರೆಗಳ ಬೌಂಡರಿ ನಿಗದಿಪಡಿಸುವ ಜೊತೆಗೆ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ.
       ಸರ್ಕಾರದ ನೆರವಿಲ್ಲದೆ ಹೂಳು ತೆಗೆಯುವ ಕಾರ್ಯಾಚರಣೆ:
     ಗ್ರಾಮಾಂತರ ಭಾಗದಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಲಕ್ಷಾಂತರ ರು. ಹಣ ವ್ಯಯ ಮಾಡಿ  ಹೂಳುವ ತೆಗೆಯುವ ಮೂಲಕ ಕೆರೆಗಳ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಆದರೆ ನಗರಸಭೆ ವ್ಯಾಪ್ತಿಯಲ್ಲಿನ ಕೆರೆಗಳನ್ನು ಸರ್ಕಾರದ ಯಾವುದೇ ಅನುದಾನವಿಲ್ಲದೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪೌರಾಯುಕ್ತರ ತಂಡ ಮುಂದಾಗಿದೆ.
     ವಿವಿಧ ಸಂಘಟನೆಗಳ ಸಹಕಾರೊಂದಿಗೆ, ಸ್ವಯಂ ಸೇವಕರು, ಸ್ಥಳೀಯ ರೈತರು ಹಾಗು ದಾನಿಗಳ ನೆರವಿನೊಂದಿಗೆ ಲಕ್ಷಾಂತರ ರು. ವೆಚ್ಚದಲ್ಲಿ ಹೂಳು ತೆಗೆಯುವ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಇದುವರೆಗೂ ೧೮ ಕೆರೆಗಳ ಪೈಕಿ ಸಿದ್ದಾಪುರದ ಗೌಡನ ಕಟ್ಟೆ ಕೆರೆ, ಚಿಕ್ಕಯ್ಯನ ಕೆರೆ, ಹೊಸೂರು ಕೆರೆ, ಬುಳ್ಳಾಪುರ ಚಿಕ್ಕಯ್ಯನ ಕೆರೆ ಮತ್ತು ಬಾಳೆಕಟ್ಟೆ ಕೆರೆ ಒಟ್ಟ ೫ ಕೆರೆಗಳ ಹೂಳು ತೆಗೆಯುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ.
      ಪೌರಾಯುಕ್ತರಿಂದ ಖುದ್ದು ಪರಿಶೀಲನೆ :
    ಪೌರಾಯುಕ್ತ ಮನೋಹರ್ ಭಾನುವಾರ ಕೆರೆಗಳ ಹೂಳು ತೆಗೆಯುವ ಕಾರ್ಯಾಚರಣೆ ನಡೆಸುತ್ತಿರುವ ತಂಡದೊಂದಿಗೆ ಖುದ್ದಾಗಿ ಭೇಟಿ ನೀಡಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಪರಿಶೀಲನೆ ನಡೆಸಿದರು. ಅಲ್ಲದೆ ಸ್ಥಳೀಯ ರೈತರು, ಮುಖಂಡರು ಹಾಗು ವಿವಿಧ ಸಂಘಟನೆಗಳ ಪ್ರಮುಖರೊಂದಿಗೆ ಚರ್ಚಿಸಿದರು.
    ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ಪ್ರಮುಖರಾದ ಆರ್. ವೇಣುಗೋಪಾಲ್, ರಮಾ ವೆಂಕಟೇಶ್, ಶೈಲಜಾ ರಾಮಕೃಷ್ಣ, ಶಶಿಕಲಾ ವಿಶ್ವನಾಥ್, ಮುರುಗನ್, ಹೂಳು ತೆಗೆಯುವ ಕಾರ್ಯಾಚರಣೆ ನಡೆಸುತ್ತಿರುವ ರೈತ ಮುಖಂಡರಾದ ಸತೀಶ್, ಕಂಠಪ್ಪ, ಬಸವರಾಜ್, ಚಂದ್ರಪ್ಪ, ಇಂದ್ರಣ್ಣ, ಮುರುಗಣ್ಣ, ನಾಸೀರ್, ನಾಗಣ್ಣ, ಜಗದೀಶ್ ಹಾಗು ನಗರಸಭೆ ಸೂಪರ್‌ವೈಸರ್ ಗೋವಿಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭದ್ರಾವತಿ ನಗರಸಭೆ : ಒಟ್ಟು ೧,೨೫,೫೭೯ ಮತದಾರರು

ವಾರ್ಡ್ ನಂ. ೧೯ ಅತಿ ಕಡಿಮೆ, ವಾರ್ಡ್ ನಂ. ೮ ಅತಿ ಹೆಚ್ಚು ಮತದಾರರು

    ಭದ್ರಾವತಿ, ಏ. ೩: ನಗರಸಭೆ ವ್ಯಾಪ್ತಿಯಲ್ಲಿ ಈ ಬಾರಿ ಒಟ್ಟು ೧,೨೫,೫೭೯ ಮತದಾರರಿದ್ದು, ಈ ಪೈಕಿ ೬೦,೮೭೪ ಪುರುಷ ಹಾಗು ೬೪,೭೦೫ ಮಹಿಳಾ ಮತದಾರರಿದ್ದಾರೆ.
ವಿಧಾನಸಭಾ ಚುನಾವಣೆ ಮತದಾರರಪಟ್ಟಿ ಆನ್ವಯ ಪ್ರಸ್ತುತ ನಗರಸಭೆ ಮತದಾರರ ಪಟ್ಟಿ ಸಿದ್ದಪಡಿಸಲಾಗಿದ್ದು, ಒಟ್ಟು ೩೫ ವಾರ್ಡ್‌ಗಳನ್ನು ಒಳಗೊಂಡಿರುವ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು ೧,೨೫,೫೭೯ ಮತದಾರರಿದ್ದಾರೆ.
    ಹೆಬ್ಬಂಡಿ, ಜೇಡಿಕಟ್ಟೆ ಒಳಗೊಂಡಿರುವ ವಾರ್ಡ್ ನಂ.೧ರ ವ್ಯಾಪ್ತಿಯಲ್ಲಿ ಒಟ್ಟು ೩,೯೨೧, ಲೋಯರ್ ಹುತ್ತಾ ಒಳಗೊಂಡಿರುವ ವಾರ್ಡ್ ನಂ.೨ರ ವ್ಯಾಪ್ತಿಯಲ್ಲಿ ಒಟ್ಟು ೩,೩೧೮, ಬಿ.ಎಚ್ ರಸ್ತೆ ಎಡ ಮತ್ತು ಬಲಭಾಗ, ಚಾಮೇಗೌಡ ಏರಿಯಾ ಒಳಗೊಂಡಿರುವ ವಾರ್ಡ್ ನಂ.೩ರ ವ್ಯಾಪ್ತಿಯಲ್ಲಿ ಒಟ್ಟು ೪,೩೬೭, ಕನಕಮಂಟಪ ಪ್ರದೇಶ ಒಳಗೊಂಡಿರುವ ವಾರ್ಡ್ ನಂ.೪ರ ವ್ಯಾಪ್ತಿಯಲ್ಲಿ ಒಟ್ಟು ೪,೪೦೯, ಕೋಟೆ ಏರಿಯಾ ಒಳಗೊಂಡಿರುವ ವಾರ್ಡ್ ನಂ.೫ರ ವ್ಯಾಪ್ತಿಯಲ್ಲಿ ಒಟ್ಟು ೩,೪೦೫, ಸಿದ್ದಾರೂಢನಗರ ಒಳಗೊಂಡಿರುವ ವಾರ್ಡ್ ನಂ.೬ರ ವ್ಯಾಪ್ತಿಯಲ್ಲಿ ಒಟ್ಟು ೩,೮೭೫, ದುರ್ಗಿಗುಡಿ ಹಾಗು ಖಲಂದರ್ ನಗರ ಒಳಗೊಂಡಿರುವ ವಾರ್ಡ್ ನಂ.೭ರ ವ್ಯಾಪ್ತಿಯಲ್ಲಿ ಒಟ್ಟು ೩೭೦೩, ಅನ್ವರ್ ಕಾಲೋನಿ, ಸೀಗೆಬಾಗಿ ಒಳಗೊಂಡಿರುವ ವಾರ್ಡ್ ನಂ.೮ರ ವ್ಯಾಪ್ತಿಯಲ್ಲಿ ಒಟ್ಟು ೬,೦೩೪, ಭದ್ರಾಕಾಲೋನಿ ಒಳಗೊಂಡಿರುವ ವಾರ್ಡ್ ನಂ. ೯ರ ವ್ಯಾಪ್ತಿಯಲ್ಲಿ ಒಟ್ಟು ೩,೨೧೭, ಹನುಮಂತನಗರ ಮತ್ತು ಅಶ್ವತ್‌ನಗರ ಒಳಗೊಂಡಿರುವ ವಾರ್ಡ್ ನಂ.೧೦ರ ವ್ಯಾಪ್ತಿಯಲ್ಲಿ ಒಟ್ಟು ೩,೧೬೮, ಸುಭಾಷ್‌ನಗರ ಒಳಗೊಂಡಿರುವ ವಾರ್ಡ್ ನಂ.೧೧ರ ವ್ಯಾಪ್ತಿಯಲ್ಲಿ ಒಟ್ಟು ೨,೯೬೪, ಅಣ್ಣಾನಗರ ಒಳಗೊಂಡಿರುವ ವಾರ್ಡ್ ನಂ.೧೨ರ ವ್ಯಾಪ್ತಿಯಲ್ಲಿ ಒಟ್ಟು ೩,೭೪೦ ಮತದಾರರಿದ್ದಾರೆ.
    ಭೂತನಗುಡಿ ಒಳಗೊಂಡಿರುವ ವಾರ್ಡ್ ನಂ.೧೩ರ ವ್ಯಾಪ್ತಿಯಲ್ಲಿ ಒಟ್ಟು ೩,೮೬೮, ಹೊಸಭೋವಿ ಕಾಲೋನಿ ಒಳಗೊಂಡಿರುವ ವಾರ್ಡ್ ನಂ.೧೪ರ ವ್ಯಾಪ್ತಿಯಲ್ಲಿ ಒಟ್ಟು ೩,೦೪೫, ಹೊಸಮನೆ ಹಾಗು ಅಶ್ವತ್‌ನಗರ ಬಲಭಾಗ ಒಳಗೊಂಡಿರುವ ವಾರ್ಡ್ ನಂ.೧೫ರ ವ್ಯಾಪ್ತಿಯಲ್ಲಿ ಒಟ್ಟು ೪,೫೩೪, ಗಾಂಧಿನಗರ ಒಳಗೊಂಡಿರುವ ವಾರ್ಡ್ ನಂ.೧೬ರ ವ್ಯಾಪ್ತಿಯಲ್ಲಿ ಒಟ್ಟು ೪,೦೪೯, ನೆಹರು ನಗರ ಒಳಗೊಂಡಿರುವ ವಾರ್ಡ್ ನಂ.೧೭ರ ವ್ಯಾಪ್ತಿಯಲ್ಲಿಇ ೩,೩೪೦, ಎಂ.ಎಂ ಕಾಂಪೌಂಡ್ ಒಳಗೊಂಡಿರುವ ವಾರ್ಡ್ ನಂ.೧೮ರ ವ್ಯಾಪ್ತಿಯಲ್ಲಿ ೨,೮೬೯, ಎಂಪಿಎಂ ಆಸ್ಪತ್ರೆ ಒಳಗೊಂಡಿರುವ ವಾರ್ಡ್ ನಂ. ೧೯ರ ವ್ಯಾಪ್ತಿಯಲ್ಲಿ ಒಟ್ಟು ೨,೨೭೧, ಸುರಗಿತೋಪು ಒಳಗೊಂಡಿರುವ ವಾರ್ಡ್ ನಂ.೨೦ರ ವ್ಯಾಪ್ತಿಯಲ್ಲಿ ಒಟ್ಟು ೪,೭೭೩, ಎಂಪಿಎಂ ೬ ಮತ್ತು ೮ನೇ ವಾರ್ಡ್ ಒಳಗೊಂಡಿರುವ ವಾರ್ಡ್ ನಂ. ೨೧ರ ವ್ಯಾಪ್ತಿಯಲ್ಲಿ ಒಟ್ಟು ೨,೫೯೦, ಉಜ್ಜನೀಪುರ ಒಳಗೊಂಡಿರುವ ವಾರ್ಡ್ ನಂ.೨೨ರ ವ್ಯಾಪ್ತಿಯಲ್ಲಿ ಒಟ್ಟು ೨,೮೭೭ ಮತದಾರರಿದ್ದಾರೆ.
    ತಿಮ್ಲಾಪುರ ಮತ್ತು ಡಿ.ಜಿ ಹಳ್ಳಿ ಒಳಗೊಂಡಿರುವ ವಾರ್ಡ್ ನಂ.೨೩ರ ವ್ಯಾಪ್ತಿಯಲ್ಲಿ ಒಟ್ಟು ೩,೬೮೭, ಬೊಮ್ಮನಕಟ್ಟೆ ಒಳಗೊಂಡಿರುವ ವಾರ್ಡ್ ನಂ.೨೪ರ ವ್ಯಾಪ್ತಿಯಲ್ಲಿ ಒಟ್ಟು ೩,೦೬೯, ಹುಡ್ಕೋ, ಹೊಸಬುಳ್ಳಾಪುರ ಒಳಗೊಂಡಿರುವ ವಾರ್ಡ್ ನಂ.೨೫ರ ವ್ಯಾಪ್ತಿಯಲ್ಲಿ ಒಟ್ಟು ೩,೭೭೬, ಬಾಲಭಾರತಿ-ಬೆಣ್ಣೆಕೃಷ್ಣ ಸರ್ಕಲ್ ಒಳಗೊಂಡಿರುವ ವಾರ್ಡ್ ನಂ.೨೬ರ ವ್ಯಾಪ್ತಿಯಲ್ಲಿ ಒಟ್ಟು ೨೯೯೫ ಮತದಾರರಿದ್ದಾರೆ.
    ಆಂಜನೇಯ ಅಗ್ರಹಾರ-ಕೂಲಿಬ್ಲಾಕ್ ಒಳಗೊಂಡಿರುವ ವಾರ್ಡ್ ನಂ.೨೭ರ ವ್ಯಾಪ್ತಿಯಲ್ಲಿ ೩,೭೭೯, ಗಣೇಶ್ ಕಾಲೋನಿ-ವಿದ್ಯಾಮಂದಿರ ಒಳಗೊಂಡಿರುವ ವಾರ್ಡ್ ನಂ.೨೮ರ ವ್ಯಾಪ್ತಿಯಲ್ಲಿ ಒಟ್ಟು ೨,೭೩೪, ಕಿತ್ತೂರು ರಾಣಿ ಚನ್ನಮ್ಮ ಲೇಔಟ್-ಎನ್‌ಟಿಬಿ ಲೇಔಟ್ ಒಳಗೊಂಡಿರುವ ವಾರ್ಡ್ ನಂ.೨೯ರ ವ್ಯಾಪ್ತಿಯಲ್ಲಿ ಒಟ್ಟು ೩,೭೩೫, ಹೊಸಸಿದ್ದಾಪುರ ಒಳಗೊಂಡಿರುವ ವಾರ್ಡ್ ನಂ.೩೦ರ ವ್ಯಾಪ್ತಿಯಲ್ಲಿ ೨,೯೬೧, ಜಿಂಕ್‌ಲೈನ್ ಒಳಗೊಂಡಿರುವ ವಾರ್ಡ್ ನಂ.೩೧ರ ವ್ಯಾಪ್ತಿಯಲ್ಲಿ ಒಟ್ಟು ೩,೭೦೪, ಜನ್ನಾಪುರ ಒಳಗೊಂಡಿರುವ ವಾರ್ಡ್ ನಂ.೩೨ರ ವ್ಯಾಪ್ತಿಯಲ್ಲಿ ಒಟ್ಟು ೪,೨೫೨, ಹುತ್ತಾ ಕಾಲೋನಿ ಒಳಗೊಂಡಿರುವ ವಾರ್ಡ್ ನಂ.೩೩ರ ವ್ಯಾಪ್ತಿಯಲ್ಲಿ ೩,೧೯೮, ಅಪ್ಪರ್‌ಹುತ್ತಾ ಒಳಗೊಂಡಿರುವ ವಾರ್ಡ್ ನಂ.೩೪ರ ವ್ಯಾಪ್ತಿಯಲ್ಲಿ ಒಟ್ಟು ೪,೩೨೦ ಹಾಗು ಭಂಡಾರಹಳ್ಳಿ ಒಳಗೊಂಡಿರುವ ವಾರ್ಡ್ ನಂ.೩೫ರ ವ್ಯಾಪ್ತಿಯಲ್ಲಿ ಒಟ್ಟು ೩,೦೩೨ ಮತದಾರರಿದ್ದಾರೆ.
    ೩೫ ವಾರ್ಡ್‌ಗಳ ಪೈಕಿ ವಾರ್ಡ್ ನಂ.೮ರ ವ್ಯಾಪ್ತಿಯಲ್ಲಿ ಒಟ್ಟು ೬,೦೩೪ ಅತಿ ಹೆಚ್ಚು ಹಾಗು ವಾರ್ಡ್ ನಂ. ೧೯ರ ವ್ಯಾಪ್ತಿಯಲ್ಲಿ ಒಟ್ಟು ೨,೨೭೧ ಅತಿ ಕಡಿಮೆ ಮತದಾರರಿದ್ದಾರೆ. ಮತದಾರರ ಪ್ರಮಾಣದಲ್ಲೂ ಮಹಿಳೆಯರು ಮೇಲೂಗೈ ಸಾಧಿಸಿದ್ದು, ಪುರುಷ ಮತದಾರರಿಗಿಂತ ೩,೮೩೧ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂದು ವಾರ್ಡ್‌ನಷ್ಟು ಮಹಿಳಾ ಮತದಾರರಿರುವುದು ವಿಶೇಷವಾಗಿದೆ.