Wednesday, August 26, 2020

ಸ್ಮಶಾನ ಜಾಗ ಒತ್ತುವರಿ : ಜಮೀನು ಕಳೆದುಕೊಂಡ ರೈತರು

ಏಕಾಏಕಿ ಕಾರ್ಯಾಚರಣೆಯಿಂದ ಬೆಳೆ ನಾಶ : ಆರೋಪ

ಭದ್ರಾವತಿ ತಾಲೂಕಿನ ತಾವರಘಟ್ಟ ಗ್ರಾಮ ಪಂಚಾಯಿತಿಗೆ ಸೇರಿದ ತಾವರಘಟ್ಟ ಸ್ಮಶಾನ ಜಾಗಕ್ಕೆ ಸಂಬಂಧಿಸಿದಂತೆ ಒತ್ತುವರಿ ತೆರವು ಕಾರ್ಯಾಚರಣೆ ಬುಧವಾರ ಸಂಜೆ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ನಡೆದಿದೆ.
ಭದ್ರಾವತಿ: ತಾಲೂಕಿನ ತಾವರಘಟ್ಟ ಗ್ರಾಮ ಪಂಚಾಯಿತಿಗೆ ಸೇರಿದ ತಾವರಘಟ್ಟ ಸ್ಮಶಾನ ಜಾಗಕ್ಕೆ ಸಂಬಂಧಿಸಿದಂತೆ ಒತ್ತುವರಿ ತೆರವು ಕಾರ್ಯಾಚರಣೆ ಬುಧವಾರ ಸಂಜೆ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ನಡೆದಿದೆ.
     ತಾವರಘಟ್ಟ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂ. ೨೯(ಹಳೇ ಸರ್ವೆ ನಂ.೧೪)ರ ಗೋಮಾಳ ಜಾಗದಲ್ಲಿ ಸ್ಮಶಾನ ನಿರ್ಮಾಣಕ್ಕೆ ಸರ್ಕಾರದಿಂದ ೧ ಎಕರೆ ೨೦ ಗುಂಟೆ ಜಮೀನು ಮಂಜೂರಾತಿಯಾಗಿದ್ದು, ಈ ಹಿನ್ನಲೆಯಲ್ಲಿ ತಾಲೂಕು ಆಡಳಿತದಿಂದ ಜು.೨೧ರಂದು ಸರ್ವೆ ಕಾರ್ಯ ನಡೆಸಲು ಗ್ರಾಮಕ್ಕೆ ತೆರಳಿದ್ದಾಗ ಗೋಮಾಳ ಒತ್ತುವರಿ ಮಾಡಿರುವ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಹಾಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಲಘು ಲಾಠಿ ಪ್ರಹಾರ ಸಹ ನಡೆದಿತ್ತು.  


   ಇದೀಗ ಏಕಾಏಕಿ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಜಮೀನು ತೆರವು ಕಾರ್ಯಾಚರಣೆ ನಡೆಸಲಾಗಿದ್ದು,  ಇದರಿಂದಾಗಿ ಜಮೀನು ಕಳೆದುಕೊಂಡ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಯಾವುದೇ ಮುನ್ಸೂಚನೆ ನೀಡದೆ ಕಾರ್ಯಾಚರಣೆ ನಡೆಸಿರುವುದರಿಂದ ಹೆಚ್ಚಿನ ಹಾನಿ ಉಂಟಾಗಿದ್ದು, ಶುಂಠಿ, ಭತ್ತ, ಅಡಕೆ, ತೆಂಗಿನ ಬೆಳೆಗಳು ನಾಶವಾಗಿದೆ. ಅಲ್ಲದೆ ಒತ್ತುವರಿ ಕಾರ್ಯಾಚರಣೆಯಲ್ಲೂ ತಾರತಮ್ಯ ಮಾಡಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಭದ್ರಾ ಜಲಾಶಯಕ್ಕೆ ಬಾಗಿನ

ಭದ್ರಾವತಿ ತಾಲೂಕಿನ ಭದ್ರಾ ಜಲಾಶಯದಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ರೈತ ವರಿಷ್ಠ ಕೆ.ಟಿ ಗಂಗಾಧರ್ ನೇತೃತ್ವದಲ್ಲಿ ಬಾಗಿನ ಸಮರ್ಪಿಸಲಾಯಿತು.
ಭದ್ರಾವತಿ, ಆ. ೨೬:  ತಾಲೂಕಿನ ಜೀವನದಿ ಭದ್ರಾ ನದಿ ಜಲಾಶಯ ಬಹುತೇಕ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಬಾಗಿನ ಸಮರ್ಪಿಸಲಾಯಿತು.
   ಭದ್ರಾ ಜಲಾಶಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ರೈತ ಮುಖಂಡ, ವರಿಷ್ಠ ಕೆ.ಟಿ ಗಂಗಾಧರ್ ನೇತೃತ್ವವಹಿಸಿದ್ದರು.
    ಪ್ರಮುಖರಾದ ಯಶವಂತರಾವ್ ಘೋರ್ಪಡೆ,  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ ವೀರೇಶ್, ತಾಲೂಕು ಅಧ್ಯಕ್ಷ ಹಿರಿಯಣ್ಣಯ್ಯ, ಗೊಂದಿ ಜಯರಾಂ, ಮಂಜಪ್ಪ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.