Monday, August 31, 2020

ಪೌರಕಾರ್ಮಿಕರ ದಿನಾಚರಣೆಯಲ್ಲಿ ಜಾನಪದ ಕಲಾವಿದರಿಗೆ ವೇದಿಕೆ ನೀಡಲು ಮನವಿ

 ಪೌರಕಾರ್ಮಿಕರ ದಿನಾಚರಣೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ಕಲಾವಿದರಿಗೆ ವೇದಿಕೆಯಲ್ಲಿ ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಸೋಮವಾರ ಭದ್ರಾವತಿ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಆ. ೩೧: ಪ್ರತಿ ವರ್ಷ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗುವ ಪೌರಕಾರ್ಮಿಕರ ದಿನಾಚರಣೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ಕಲಾವಿದರಿಗೆ ವೇದಿಕೆಯಲ್ಲಿ ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಸೋಮವಾರ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಮನವಿ ಸಲ್ಲಿಸಲಾಯಿತು.
      ಸ್ವಚ್ಛತೆ ಹಾಗು ಕಾರ್ಮಿಕರಿಗೆ ಸಂಬಂಧಿಸಿದ ಮತ್ತು ಅಂಬೇಡ್ಕರ್‌ರವರ ಕುರಿತು ಹಾಡುಗಳನ್ನು ಹಾಡಲು ಕಲಾವಿದರಿಗೆ ಅವಕಾಶ ನೀಡುವಂತೆ  ಮನವಿಯಲ್ಲಿ ಕೋರಲಾಗಿದೆ.
      ಕಲಾವಿದರಾದ ತಮಟೆ ಜಗದೀಶ್, ಜಿ. ದಿವಾಕರ, ಲಾವಣ್ಯ ಮತ್ತು ಶಿವಾನಂದ ಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕ ಜಿ.ಟಿ ಗುರುಲಿಂಗಪ್ಪ ನಿಧನ


ಜಿ.ಟಿ ಗುರುಲಿಂಗಪ್ಪ
ಭದ್ರಾವತಿ, ಆ. ೩೧: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷ, ನಿವೃತ್ತ ಶಿಕ್ಷಕ ಜಿ.ಟಿ ಗುರುಲಿಂಗಪ್ಪ ಸೋಮವಾರ ನಿಧನ ಹೊಂದಿದರು.
       ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹೊಂದಿದ್ದರು. ನಗರಸಭೆ ವ್ಯಾಪ್ತಿಯ ಭದ್ರಾ ಕಾಲೋನಿ ಭದ್ರಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು. ಸ್ಕೌಟ್ಸ್ ಮಾಸ್ಟರ್ ಆಗಿದ್ದ ಗುರುಲಿಂಗಪ್ಪನವರಿಗೆ ಹಲವು ಪ್ರಶಸ್ತಿಗಳು ಲಭಿಸಿದ್ದವು. ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್ ಸೇರಿದಂತೆ ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
      ಮೃತರ ನಿಧನಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್ ಸೇರಿದಂತೆ ಹಲವು ಸಂಘ-ಸಂಸ್ಥೆಗಳು, ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ನಿವೃತ್ತಿ ಹೊಂದಿದ ಶಿಕ್ಷಕರುಗಳಿಗೆ ಸನ್ಮಾನ, ಅಭಿನಂದನೆ

ಭದ್ರಾವತಿ ಕಾಗದನಗರ ಪೇಪರ್‌ಟೌನ್ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಬೇಲಿಮಲ್ಲೂರು ಎಂ. ನಾಗಪ್ಪ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಅವರನ್ನು ಸೋಮವಾರ ತಾಲೂಕು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಆ. ೩೧: ತಾಲೂಕಿನ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕರುಗಳಿಗೆ ಸೋಮವಾರ ತಾಲೂಕು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
    ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸುಮಾರು ೩೪ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಾಗದನಗರ ಎಂಪಿಎಂ ಶಿಕ್ಷಣ ಮಂಡಳಿಯ ಪೇಪರ್‌ಟೌನ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬೇಲಿಮಲ್ಲೂರು ಎಂ. ನಾಗಪ್ಪ, ಅರಬಿಳಚಿ ಬಸವೇಶ್ವರ ಪ್ರೌಢಶಾಲೆ ಸಹ ಶಿಕ್ಷಕ ದೇವೇಂದ್ರಪ್ಪ ಹಾಗೂ ನ್ಯೂಟೌನ್ ಸೇಂಟ್‌ಚಾರ್ಲ್ಸ್ ಕನ್ನಡ ಶಾಲೆಯ ಶಿಕ್ಷಕಿ ಜಾನಿ ಅವರನ್ನು ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ನೇತೃತ್ವದಲ್ಲಿ ಸನ್ಮಾನಿಸಿ ಅಭಿನಂದಿಸುವ ಮೂಲಕ ನಿವೃತ್ತಿ ಜೀವನಕ್ಕೆ ಶುಭ ಕೋರಲಾಯಿತು.