Sunday, December 18, 2022

ದೇವಸ್ಥಾನ ಆವರಣದಲ್ಲಿ ವೃದ್ಧೆ ಭಿಕ್ಷಿಕಿ ಕೊಲೆ ಪ್ರಕರಣ : ಓರ್ವನ ಸೆರೆ

ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಪೇಪರ್‌ಟೌನ್ ಪೊಲೀಸರು

ಭದ್ರಾವತಿ ತಾಲೂಕಿನ ಇತಿಹಾಸ ಪ್ರಸಿದ್ದ ಸುಣ್ಣದಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಭಕ್ತರಿಂದ ಭಿಕ್ಷೆ ಬೇಡಿ ಬದುಕು ಸಾಗಿಸುತ್ತಿದ್ದ ವೃದ್ಧೆಯೊಬ್ಬರ ಕೊಲೆ ಪ್ರಕರಣ ಬೇಧಿಸುವಲ್ಲಿ ಪೇಪರ್‌ಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
    ಭದ್ರಾವತಿ, ಡಿ. ೧೮: ತಾಲೂಕಿನ ಇತಿಹಾಸ ಪ್ರಸಿದ್ದ ಸುಣ್ಣದಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಭಕ್ತರಿಂದ ಭಿಕ್ಷೆ ಬೇಡಿ ಬದುಕು ಸಾಗಿಸುತ್ತಿದ್ದ ವೃದ್ಧೆಯೊಬ್ಬರ ಕೊಲೆ ಪ್ರಕರಣ ಬೇಧಿಸುವಲ್ಲಿ ಪೇಪರ್‌ಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
    ಸುಣ್ಣದಹಳ್ಳಿ ಗ್ರಾಮದ ನಿವಾಸಿ ಸುಮಾರು ೭೦ ವರ್ಷ ವಯಸ್ಸಿನ ವೃದ್ಧೆ ಶಂಕ್ರಮ್ಮ ಕೊಲೆಯಾಗಿದ್ದು, ಈ ಸಂಬಂಧ ಓರ್ವನನ್ನು ಬಂಧಿಸಿದ್ದಾರೆ. ಶಂಕ್ರಮ್ಮ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಭಕ್ತರಿಂದ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು. ರಾತ್ರಿ ವೇಳೆ ದೇವಸ್ಥಾನ ಎದುರಿನ ಅಂತರಘಟ್ಟಮ್ಮ ದೇವರ ಗುಡಿಯ ಕಾಂಪೌಂಡ್ ಒಳಭಾಗದಲ್ಲಿ ಮಲಗುತ್ತಿದ್ದರು. ಡಿ.೩ ರಂದು ಬೆಳಿಗ್ಗೆ ಇವರು ಮೃತಪಟ್ಟಿರುವುದಾಗಿ ಪೊಲೀಸರಿಗೆ ದೇವಸ್ಥಾನದ ಅರ್ಚಕರು ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಎರಡೂ ಕಿವಿಯಲ್ಲಿದ್ದ ಚಿನ್ನದ ಓಲೆಗಳು ಮತ್ತು ಮೂಗು ಬಟ್ಟನ್ನು ಕಿತ್ತುಕೊಂಡು ಕೊಲೆ ಮಾಡಿ ಹೋಗಿರುತ್ತಾರೆಂದು ಈ ನಡುವೆ ಶಂಕ್ರಮ್ಮರವರ ಮೊಮ್ಮಗಳು ದೂರು ನೀಡಿದ್ದರು.  ಈ  ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಪ್ರಕರಣ ಬೇಧಿಸಲು ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ ದಯಾಮ ಮಾರ್ಗದರ್ಶನದಲ್ಲಿ ಠಾಣೆಯ ಪೊಲೀಸ್  ನಿರೀಕ್ಷಕ ಈ.ಓ ಮಂಜುನಾಥ್‌ರವರ ನೇತೃತ್ವದಲ್ಲಿ ಠಾಣಾಧಿಕಾರಿ ಶಿಲ್ಪಾ ನಾಯನೇಗಲಿ ಮತ್ತು ಸಿಬ್ಬಂದಿಗಳಾದ ರತ್ನಾಕರ, ವಾಸುದೇವ, ಚಿನ್ನನಾಯ್ಕ, ಹನಮಂತ ಅವಟಿ, ಆದರ್ಶ ಶೆಟ್ಟಿ, ಮೌನೇಶ ಶೀಖಲ್, ಆರ್. ಅರುಣ್ ಮತ್ತು ವಿಕ್ರಮ್ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.
    ಡಿ.೧೭ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿ ಕೊಲೆಯಾದ ಶಂಕ್ರಮ್ಮರವರ ಮೈಮೇಲಿಂದ ಕಿತ್ತುಕೊಂಡಿದ್ದ ಅಂದಾಜು ೧೪,೦೦೦ ರು. ಮೌಲ್ಯದ ಒಂದು ಜೊತೆ ಬಂಗಾರದ ಕಿವಿ ಓಲೆ ಮತ್ತು ಮೂಗುತಿಯನ್ನು ವಶಪಡಿಸಿಕೊಳ್ಳಲಾಗಿದೆ. ಡಿ.೨ ರಂದು ರಾತ್ರಿ ಶಂಕ್ರಮ್ಮ ರವರ ಕಿವಿಯಲ್ಲಿದ್ದ ಬಂಗಾರದ ಓಲೆ ಮತ್ತು ಮೂಗಿನಲ್ಲಿದ್ದ ಮೂಗು ಬಟ್ಟನ್ನು ಕಿತ್ತುಕೊಳ್ಳುವ ಸಂಬಂಧ ಆಕೆಯ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬುದು ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ. ಯಾವುದೇ ಸುಳಿವು ಇಲ್ಲದ ಜಟಿಲವಾದ ಕೊಲೆ ಪ್ರಕರಣವನ್ನು ಪತ್ತೆ ಮಾಡಿದ ತನಿಖಾ ತಂಡದ ಉತ್ತಮ ಕಾರ್ಯಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಓಂ ಕ್ರಿಕೆಟರ್ಸ್ ತಂಡಕ್ಕೆ ದ್ವಿತೀಯ ಬಹುಮಾನ

ಭದ್ರಾವತಿ ಓಂ ಕ್ರಿಕೆಟರ್ಸ್ ತಂಡ ಶಿವಮೊಗ್ಗ ಸೂಳೆಬೈಲು ಮಲೆನಾಡು ಟ್ರೋಫಿ-೨೦೨೨ರ ಕ್ರಿಕೆಟ್ ಪಂದ್ಯಾವಳಿಯಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿದೆ.
    ಭದ್ರಾವತಿ, ಡಿ. ೧೮: ನಗರದ ಓಂ ಕ್ರಿಕೆಟರ್ಸ್ ತಂಡ ಶಿವಮೊಗ್ಗ ಸೂಳೆಬೈಲು ಮಲೆನಾಡು ಟ್ರೋಫಿ-೨೦೨೨ರ ಕ್ರಿಕೆಟ್ ಪಂದ್ಯಾವಳಿಯಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿದೆ.
    ಓಂ ಕ್ರಿಕೆಟರ್ಸ್ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡುವ ಮೂಲಕ ದ್ವಿತೀಯ ಬಹುಮಾನ ೫೦,೦೦೦ ನಗದು ಹಾಗೂ ಟ್ರೋಫಿ ತಮ್ಮದಾಗಿಸಿಕೊಂಡರು. ಹಲವಾರು ವರ್ಷಗಳಿಂದ ಓಂ ಕ್ರಿಕೆಟರ್ಸ್ ತಂಡ ಅನೇಕ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡುವ ಮೂಲಕ ನಗರದ ಪ್ರತಿಷ್ಠಿತ ಕ್ರಿಕೆಟ್ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡು ಗಮನ ಸೆಳೆದಿದೆ. ಕೇಸರಿ ಪಡೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಕ್ರಿಕೆಟ್ ಅಭಿಮಾನಿಗಳು ವಿಜೇತ ತಂಡವನ್ನು ಅಭಿನಂದಿಸಿದ್ದಾರೆ.

ಜೆಡಿಎಸ್ ಕಾರ್ಮಿಕರ ವಿಭಾಗದ ಕಾರ್ಯಾಧ್ಯಕ್ಷರಾಗಿ ಉಮೇಶ್ ನೇಮಕ

ಭದ್ರಾವತಿ ಜೆಡಿಎಸ್ ಕಾರ್ಮಿಕರ ವಿಭಾಗದ ಕಾರ್ಯಾಧ್ಯಕ್ಷರಾಗಿ ಉಮೇಶ್ ನೇಮಕಗೊಂಡಿದ್ದು, ವಿಧಾನಸಭಾ ಕ್ಷೇತ್ರದ ಪಕ್ಷದ ನಿಯೋಜಿತ ಅಭ್ಯರ್ಥಿ ಶಾರದಾ ಅಪ್ಪಾಜಿ ನೇಮಕ ಆದೇಶ ಪತ್ರ ವಿತರಿಸಿದರು.
    ಭದ್ರಾವತಿ, ಡಿ. ೧೮: ಜಾತ್ಯಾತೀತ ಜನತಾದಳ ವಿಧಾನಸಭಾ ಕ್ಷೇತ್ರದ ಕಾರ್ಮಿಕರ ವಿಭಾಗದ ಕಾರ್ಯಾಧ್ಯಕ್ಷರಾಗಿ ಸುರಗಿತೋಪು ನಿವಾಸಿ, ಯುವ ಮುಖಂಡ ಉಮೇಶ್ ನೇಮಕಗೊಂಡಿದ್ದಾರೆ.
    ಪಕ್ಷದ ಕಾರ್ಮಿಕರ ವಿಭಾಗದ ಜಿಲ್ಲಾಧ್ಯಕ್ಷ ಡಿ. ಶ್ಯಾಮು ನೇಮಕಗೊಳಿಸಿ ಆದೇಶ ಹೊರಡಿಸಿದ್ದು, ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸುವ ಮೂಲಕ ಪಕ್ಷವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿಸುವಂತೆ ಕೋರಿದ್ದಾರೆ.
  ಕಾರ್ಯಾಧ್ಯಕ್ಷರಾಗಿ ನೇಮಕಗೊಳ್ಳಲು ಕಾರಣಕರ್ತರಾದ ಪಕ್ಷದ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ವಿಧಾನಸಭಾ ಕ್ಷೇತ್ರದ ಪಕ್ಷದ ನಿಯೋಜಿತ ಅಭ್ಯರ್ಥಿ ಶಾರದಾ ಅಪ್ಪಾಜಿ, ಕಾರ್ಮಿಕರ ವಿಭಾಗದ ಜಿಲ್ಲಾಧ್ಯಕ್ಷ ಡಿ. ಶ್ಯಾಮು, ಪ್ರಮುಖರಾದ ಆರ್. ಕರುಣಾಮೂರ್ತಿ, ಎಸ್. ಮಣಿಶೇಖರ್, ಜಯಶೀಲ ಸುರೇಶ್ ಹಾಗು ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರಿಗೆ ಉಮೇಶ್ ಕೃತಜ್ಞತೆ ಸಲ್ಲಿಸಿದ್ದಾರೆ.

ಕರ್ನಾಟಕ ಒನ್ ಕೇಂದ್ರದಿಂದ ಹೆಚ್ಚಿನ ಅನುಕೂಲ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ತಾಲೂಕು ಕಛೇರಿ ರಸ್ತೆ, ಡಿಸಿಸಿ ಬ್ಯಾಂಕ್ ಸಮೀಪ ನೂತನವಾಗಿ ಕಾರ್ಯಾರಂಭಗೊಂಡಿರುವ ಕರ್ನಾಟಕ ಒನ್ ಕೇಂದ್ರಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.  
    ಭದ್ರಾವತಿ, ಡಿ. ೧೮ : ತಾಲೂಕು ಮಟ್ಟದಲ್ಲೂ ಕರ್ನಾಟಕ ಒನ್ ಕೇಂದ್ರಗಳ ಕಾರ್ಯಾರಂಭದಿಂದಾಗಿ ಜನರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಸಮಯ ಹಾಗು ಹಣ ಉಳಿತಾಯದ ಜೊತೆಗೆ ಸರ್ಕಾರಿ ಕಛೇರಿಗಳನ್ನು ಅಲೆಯುವುದು ತಪ್ಪಿದಂತಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
      ಅವರು ತಾಲೂಕು ಕಛೇರಿ ರಸ್ತೆ, ಡಿಸಿಸಿ ಬ್ಯಾಂಕ್ ಸಮೀಪ ನೂತನವಾಗಿ ಕಾರ್ಯಾರಂಭಗೊಂಡಿರುವ ಕರ್ನಾಟಕ ಒನ್ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
      ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸಿವೆ. ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಲು ಕರ್ನಾಟಕ ಒನ್ ಕೇಂದ್ರಗಳು ಸಹಕಾರಿಯಾಗಿವೆ. ತಂತ್ರಜ್ಞಾನ ಬೆಳವಣಿಗೆಯಿಂದಾಗಿ ಪ್ರತಿಯೊಬ್ಬರ ಮನೆ ಬಾಗಿಲಿಗೆ ಸೌಲಭ್ಯಗಳು ಶೀಘ್ರವಾಗಿ, ಸುಲಭವಾಗಿ ತಲುಪುವಂತಾಗಿವೆ ಎಂದರು.
    ತಹಸೀಲ್ದಾರ್ ಆರ್. ಪ್ರದೀಪ್ ಮಾತನಾಡಿ, ನಗರದ ಜನರಿಗೆ ಸಮಗ್ರ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸರ್ಕಾರ ಈ ಕೇಂದ್ರ ಗಳನ್ನು ತೆರೆಯಲು ಅನುಮತಿ ನೀಡಿದೆ. ಈ ಕೇಂದ್ರಗಳು ಗ್ರಾಮ ಒನ್ ಮಾದರಿಯಲ್ಲಿ ಕಾರ್ಯ ನಿರ್ವಹಿಸಲಿವೆ ಎಂದರು.
      ಹಳೇನಗರ ಪೋಲಿಸ್ ಠಾಣಾಧಿಕಾರಿ ಕವಿತಾ, ಉದ್ಯಮಿ ಬಿ.ಕೆ ಜಗನ್ನಾಥ್, ಸಂಚಾಲಕರಾದ ಮಹಜರ್‌ಖಾನ್, ಲಕ್ಷ್ಮಿದೇವಿ, ಮೊಹಮ್ಮದ್ ಏಜಾಜ್ ಖಾನ್, ಸಂತೋಷ್, ಎಸ್.ಎನ್ ಶಿವಪ್ಪ ಮಂಜುಳಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶ್ರೀ ಅರಬಿಂದೋ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬಹುಮಾನ

ಭದ್ರಾವತಿ ಜಾವಳ್ಳಿ ಅರಬಿಂದೋ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
    ಭದ್ರಾವತಿ, ಡಿ. ೧೮: ಜ್ಞಾನದೀಪ ವಿದ್ಯಾಸಂಸ್ಥೆಯ ಜಾವಳ್ಳಿ ಶ್ರೀ ಅರಬಿಂದೋ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
    ಬೆಂಗಳೂರು ರಾಜಾಜಿನಗರ ಕೆಎಲ್‌ಇ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆರ್. ಸಿಂಧೂರ(ಆಂಗ್ಲ ಭಾಷೆ ಪ್ರಬಂಧ) ಪ್ರಥಮ ಮತ್ತು ತ್ರಿಷಾಂತ್ ಎನ್ ರಾಜ್ ಹಾಗು ಪ್ರಹ್ಲಾದ್ ಆರ್ ಶಾಸ್ತ್ರಿ(ರಸ ಪ್ರಶ್ನೆ) ದ್ವಿತೀಯ ಬಹುಮಾನಗಳನ್ನು ಪಡೆದುಕೊಂಡು ಕೀರ್ತಿ ತಂದಿದ್ದಾರೆ.
    ಕಾಲೇಜಿನ ಪ್ರಾಂಶುಪಾಲ ಡಾ.ಕೆ ನಾಗರಾಜ್ ಹಾಗೂ ಆಡಳಿತ ಮಂಡಳಿ, ಅಧ್ಯಾಪಕ ಮತ್ತು ಅಧ್ಯಾಪಕೇತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.