Thursday, November 16, 2023

ನ.೧೭ರಂದು ಪ್ರತಿಭಾ ಕಾರಂಜಿ-ಕಲೋತ್ಸವ

    ಭದ್ರಾವತಿ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗು ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ, ಎಸ್.ಬಿ.ಎಂ.ಎಂ.ಆರ್ ಪ್ರೌಢಶಾಲೆ, ಹಿರಿಯೂರು ವತಿಯಿಂದ ಹುಣಸೆಕಟ್ಟೆ ಮತ್ತು ನಗರ-೧ ವಲಯದ ಪ್ರೌಢ ಶಾಲಾ ಹಂತದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ನ.೧೭ರಂದು ನಡೆಯಲಿದೆ.
    ಹಿರಿಯೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಬೆಳಿಗ್ಗೆ ೯ ಗಂಟೆಗೆ ನಡೆಯಲಿದ್ದು, ಪ್ರೌಢ ಶಾಲಾ ಮಕ್ಕಳು ತಮ್ಮ ಪ್ರತಿಭೆ ಅನಾವರಣಗೊಳಿಸಲಿದ್ದಾರೆ. ಕಳೆದ ಬಾರಿ ಸಹ ಇದೆ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ನಡೆಸಲಾಗಿತ್ತು.

ಸರ್.ಎಂ ವಿಶ್ವೇಶ್ವರಾಯ ಸರ್ಕಾರಿ ವಿಜ್ಞಾನ ಕಾಲೇಜಿನ ಹಳೇಯ ವಿದ್ಯಾರ್ಥಿ ಕುಲಸಚಿವ

ಡಾ. ಸಿ.ಕೆ ರಮೇಶ್ ಕುಲಸಚಿವ(ಮೌಲ್ಯಮಾಪನ) ಹುದ್ದೆಗೆ ನಿಯೋಜನೆ

ಡಾ.ಸಿ.ಕೆ ರಮೇಶ್
    ಭದ್ರಾವತಿ: ನಗರದ ಬೊಮ್ಮನಕಟ್ಟೆ ಸರ್.ಎಂ ವಿಶ್ವೇಶ್ವರಾಯ ಸರ್ಕಾರಿ ವಿಜ್ಞಾನ ಕಾಲೇಜಿನ ಹಳೇಯ ವಿದ್ಯಾರ್ಥಿ, ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರಾಧ್ಯಾಪಕ ಡಾ. ಸಿ.ಕೆ ರಮೇಶ್ ಅವರನ್ನು ಸರ್ಕಾರ ದಾವಣಗೆರೆ ವಿಶ್ವ ವಿದ್ಯಾನಿಲಯದ ಕುಲಸಚಿವ(ಮೌಲ್ಯಮಾಪನ) ಹುದ್ದೆಗೆ ನಿಯೋಜನೆಗೊಳಿಸಿ ಆದೇಶ ಹೊರಡಿಸಿದೆ.
    ಕುಲಸಚಿವರಾಗಿದ್ದ ಡಾ. ಕೆ. ಶಿವಶಂಕರ್ ಅವರ ಸೇವೆಯನ್ನು ಮಾತೃ ವಿಶ್ವವಿದ್ಯಾಲಯ/ವಿಭಾಗಕ್ಕೆ ಹಿಂದಿರುಗಿಸಲಾಗಿದ್ದು, ಸರ್ಕಾರ ಡಾ. ಸಿ.ಕೆ ರಮೇಶ್ ಅವರನ್ನು ನೇಮಕಗೊಳಿಸಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಶೀತಲ್ ಎಂ. ಹಿರೇಮಠ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
    ಡಾ.ಸಿ.ಕೆ ರಮೇಶ್ ಅವರನ್ನು ಕುಲಸಚಿವ ಹುದ್ದೆಗೆ ಸರ್ಕಾರ ನೇಮಕಗೊಳಿಸಿರುವುದಕ್ಕೆ ಸರ್.ಎಂ ವಿಶ್ವೇಶ್ವರಾಯ ಸರ್ಕಾರಿ ವಿಜ್ಞಾನ ಕಾಲೇಜಿನ ಹಳೇಯ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಸಹಕಾರ ಕ್ಷೇತ್ರ ಇನ್ನೂ ಹೆಚ್ಚು ಬಲಗೊಳಿಸಲಿ : ಸಂಗಮೇಶ್ವರ್

ಭದ್ರಾವತಿ ಹಳೇನಗರದ ವೀರಶೈವ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿಯಮಿತ, ಬೆಂಗಳೂರು, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಸಹಕಾರ ಹಾಲು ಒಕ್ಕೂಟ ನಿಯಮಿತ, ಶಿವಮೊಗ್ಗ, ಸಹಕಾರ ಇಲಾಖೆ ಹಾಗು ತಾಲೂಕಿನ ಎಲ್ಲಾ ರೀತಿಯ ಸಹಕಾರ ಸಂಘ ಮತ್ತು ಬ್ಯಾಂಕುಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ೭೦ನೇ ಅಖಲ ಭಾರತ ಸಹಕಾರ ಸಪ್ತಾಹ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ: ಸಾರ್ವಜನಿಕ ಕ್ಷೇತ್ರದಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುವ ಸಹಕಾರ ಕ್ಷೇತ್ರಕ್ಕೆ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದರು.
    ಅವರು ಗುರುವಾರ ಹಳೇನಗರದ ವೀರಶೈವ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿಯಮಿತ, ಬೆಂಗಳೂರು, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಸಹಕಾರ ಹಾಲು ಒಕ್ಕೂಟ ನಿಯಮಿತ, ಶಿವಮೊಗ್ಗ, ಸಹಕಾರ ಇಲಾಖೆ ಹಾಗು ತಾಲೂಕಿನ ಎಲ್ಲಾ ರೀತಿಯ ಸಹಕಾರ ಸಂಘ ಮತ್ತು ಬ್ಯಾಂಕುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ೭೦ನೇ ಅಖಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
    ಸಹಕಾರ ಕ್ಷೇತ್ರ ಉಳಿದರೆ ನಾವೆಲ್ಲರೂ ಉಳಿಯುತ್ತೇವೆ. ಸಹಕಾರ ಕ್ಷೇತ್ರದ ಕೊಡುಗೆ ಹೆಚ್ಚಿನದ್ದಾಗಿದೆ. ರಾಜ್ಯ ಸರ್ಕಾರ ಈ ಕ್ಷೇತ್ರ ಬಲಪಡಿಸುವ ಮೂಲಕ ಹಿತಕಾಪಾಡಬೇಕೆಂದರು.
    ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಆರ್.ಎಂ ಮಂಜುನಾಥಗೌಡ ಮಾತನಾಡಿ, ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದ ಬೆಳವಣಿಗೆ ಹಾಗು ಪ್ರಸ್ತುತ ಕೈಗೊಳ್ಳಬೇಕಾಗಿರುವ ಕ್ರಮಗಳ ವಿವರಿಸಿದರು.
    ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷ ಅರಕೆರೆ ಎಚ್.ಎಲ್ ಷಡಾಕ್ಷರಿ, ಶಿವಮೊಗ್ಗ ಸಹಕಾರಿ ಹಾಲು ಒಕ್ಕೂಟ ನಿಯಮಿತದ ಮಾಜಿ ಅಧ್ಯಕ್ಷ ಡಿ. ಆನಂದ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಕೆ.ಎಲ್ ಜಗದೀಶ್ವರ್ ಸೇರಿದಂತೆ ಇನ್ನಿತರರು ಮಾತನಾಡಿದರು.
    ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾ ಮಂಡಳ ನಿಯಮಿತದ ನಿರ್ದೇಶಕ ಕೆ.ಎನ್ ಭೈರಪ್ಪಗೌಡ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರಾದ ಜೆ.ಪಿ ಯೋಗೇಶ್, ದಶರಥಗಿರಿ, ರಾಜ್ಯ ಸಹಕಾರ ಅಡಕೆ ಮಾರಾಟ ಮಹಾಮಂಡಳ ನಿರ್ದೇಶಕ ಎಚ್.ಎನ್ ನಾಗರಾಜ್, ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಮಾಜಿ ಅಧ್ಯಕ್ಷ ಟಿ.ಎಸ್ ದುಗ್ಗೇಶ್, ನಿರ್ದೇಶಕ ಗೊಂದಿ ಜಯರಾಂ, ಮಾಡೆಲ್ ಹೌಸಿಂಗ್ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್ ಅಧ್ಯಕ್ಷ ಎನ್. ಕೃಷ್ಣಮೂರ್ತಿ, ಭದ್ರಾ ನೀರು ಬಳಕೆದಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದ ಉಪಾಧ್ಯಕ್ಷ ಆರ್. ಶ್ರೀನಿವಾಸ್, ಸಹಕಾರ ಹಾಲು ಒಕ್ಕೂಟ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಎಚ್.ಜಿ ಶೇಖರ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎನ್.ಜಿ ರುದ್ರಪ್ಪ, ಶ್ರೀ ಕನ್ನಿಕಾಪರಮೇಶ್ವರಿ ವಿವಿದೋದ್ದೇಶ ಸಹಕಾರ ಸಂಘ ನಿಯಮಿತದ ಸಿ.ಎನ್ ಗಿರೀಶ್, ಭದ್ರಾ ಕುರಿಉಣ್ಣೆ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಬಿ.ಎಚ್ ವಸಂತ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಕೆಐಸಿಎಂ ಉಪನ್ಯಾಸಕ ಏಕಾಂತ್ ಉಪನ್ಯಾಸ ನೀಡಿದರು. ಹೇಮಕ್ಕ ಪ್ರಾರ್ಥಿಸಿದರು. ಜಿಲ್ಲಾ ಸಹಕಾರ ಯೂನಿಯನ್ ನಿಯಮಿತದ ನಿರ್ದೇಶಕ ಎಚ್.ಎಸ್ ಸಂಜೀವಕುಮಾರ್ ಸ್ವಾಗತಿಸಿದರು. ರ್‍ಯಾಮ್ಕೋಸ್ ವ್ಯವಸ್ಥಾಪಕ ವಿರುಪಾಕ್ಷಪ್ಪ ನಿರೂಪಿಸಿದರು. ಜನ್ನಾಪುರ ಅಂಬೇಡ್ಕರ್ ಜಾನಪದ ಕಲಾತಂಡದ ಕಲಾವಿದರು ಜಾನಪದ ಗೀತೆಗಳನ್ನು ಹಾಡಿದರು.