ಶನಿವಾರ, ಜೂನ್ 10, 2023

ಸುಮಾರು ೨೬ ದಿನಗಳಿಂದ ಕ್ಷೇತ್ರಕ್ಕೆ ಹಿಂದಿರುಗದ ಸಂಗಮೇಶ್ವರ್

ಎದುರು ನೋಡುತ್ತಿರುವ ಮತದಾರರು, ಕಾರ್ಯಕರ್ತರು, ಅಭಿಮಾನಿಗಳು

ಬಿ.ಕೆ ಸಂಗಮೇಶ್ವರ್
    ಭದ್ರಾವತಿ, ಜೂ. ೧೦ : ಕ್ಷೇತ್ರದ ಶಾಸಕರಾಗಿ ೪ನೇ ಬಾರಿಗೆ ಆಯ್ಕೆಯಾಗಿರುವ ಬಿ.ಕೆ ಸಂಗಮೇಶ್ವರ್ ಕಳೆದ ಸುಮಾರು ೨೬ ದಿನಗಳಿಂದ ಕ್ಷೇತ್ರದಿಂದ ಹೊರಗಿದ್ದು, ಅವರು ಕ್ಷೇತ್ರಕ್ಕೆ ಪುನಃ ಹಿಂದಿರುಗುವ ನಿರೀಕ್ಷೆಯಲ್ಲಿ ಇಲ್ಲಿನ ಮತದಾರರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
    ಬಹುತೇಕ ನಿರೀಕ್ಷೆಯಂತೆ ಈ ಬಾರಿ ಚುನಾವಣೆಯಲ್ಲೂ ಸಂಗಮೇಶ್ವರ್ ಗೆಲುವು ಸಾಧಿಸಿದ್ದು, ಮೇ.೧೩ರಂದು ಫಲಿತಾಂಶ ಹೊರಬಿದ್ದ ನಂತರ ಬೆಂಗಳೂರಿಗೆ ತೆರಲಿದ್ದು, ಪುನಃ ಕ್ಷೇತ್ರಕ್ಕೆ ಹಿಂದಿರುಗಿಲ್ಲ. ಸರ್ಕಾರ ರಚನೆ ಆರಂಭದಲ್ಲಿಯೇ ಸಚಿವ ಸ್ಥಾನಕ್ಕಾಗಿ ಸಂಗಮೇಶ್ವರ್ ತೀವ್ರ ಪೈಪೋಟಿ ನಡೆಸಿದ್ದು, ನಂತರದ ಬೆಳವಣಿಗೆಯಲ್ಲೂ ಸಂಪುಟ ವಿಸ್ತರಣೆ ಸಂದರ್ಭದಲ್ಲೂ ಸಹ ತೀವ್ರ ಪೈಪೋಟಿಗೆ ಮುಂದಾಗಿದ್ದರು. ಆದರೆ ಸಚಿವ ಸ್ಥಾನ ಕೊನೆ ಘಳಿಗೆಯಲ್ಲಿ ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಅವರಿಗೆ ಲಭಿಸಿದ್ದು, ಒಟ್ಟಾರೆ ಮೊದಲ ಅವಧಿಯಲ್ಲಿ ಸಚಿವ ಸ್ಥಾನದಿಂದ ಸಂಗಮೇಶ್ವರ್ ವಂಚಿತರಾಗಿದ್ದಾರೆ.   ಈ ನಡುವೆ ಇದೀಗ ಯಾವುದಾದರೂ ಪ್ರತಿಷ್ಠಿತ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸುವಂತೆ ಸಂಗಮೇಶ್ವರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಒತ್ತಾಯಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಯಾವುದಕ್ಕೂ ಖಚಿತಪಡಿಸಿಕೊಳ್ಳುವವರೆಗೂ ಕ್ಷೇತ್ರದ ಕಡೆ ಮುಖ ಮಾಡದಿರುವ ನಿಲುವಿಗೆ ಸಂಗಮೇಶ್ವರ್ ಅಂಟಿಕೊಂಡಿರುವಂತೆ ಕಂಡು ಬರುತ್ತಿದೆ.
    ಈ ನಡುವೆ ಕ್ಷೇತ್ರದ ವಿವಿಧ ಸಂಘ-ಸಂಸ್ಥೆಗಳು, ಮತದಾರರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ೪ನೇ ಬಾರಿಗೆ ಗೆಲುವು ಸಾಧಿಸಿರುವ ಸಂಗಮೇಶ್ವರ್ ಅವರನ್ನು ಅಭಿನಂದಿಸಲು ಎದುರು ನೋಡುತ್ತಿದ್ದಾರೆ.
    ಮತ್ತೊಂದೆಡೆ ಬೆಂಗಳೂರಿನಲ್ಲಿಯೇ ಉಳಿದುಕೊಂಡಿರುವ ಸಂಗಮೇಶ್ವರ್ ಬಳಿಗೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ತೆರಳುತ್ತಿದ್ದು, ಸಂಗಮೇಶ್ವರ್ ಅಲ್ಲಿಯೇ ಅವರ ಸಮಸ್ಯೆಗಳನ್ನು ಆಲಿಸಿ ಪೂರಕವಾಗಿ ಸ್ಪಂದಿಸುತ್ತಿದ್ದಾರೆ. ಇದರಿಂದಾಗಿ  ಒಂದೆಡೆ ಶಾಸಕರ ಮೇಲಿನ ಅಸಮಾಧಾನ ಸ್ವಲ್ಪಮಟ್ಟಿಗೆ ದೂರವಾಗಿದೆ.  

ಜೂ.೧೧ರಂದು ಶಕ್ತಿ ಯೋಜನೆ ಉದ್ಘಾಟನೆ

    ಭದ್ರಾವತಿ, ಜೂ. ೧೦ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಶಿವಮೊಗ್ಗ ವಿಭಾಗದ ಭದ್ರಾವತಿ ಘಟಕದಲ್ಲಿ ರಾಜ್ಯ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ರಾಜ್ಯಾದ್ಯಂತ ಮಹಿಳೆಯರಿಗೆ ನಗರ ಸಾರಿಗೆ, ಸಾಮಾನ್ಯ ಹಾಗು ವೇಗದೂತ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಶಕ್ತಿ ಯೋಜನೆ ಉದ್ಘಾಟನೆ ಜೂ.೧೧ರಂದು ಮಧ್ಯಾಹ್ನ ೧೨.೩೦ಕ್ಕೆ ನಗರದ ಮುಖ್ಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ನಡೆಯಲಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಉಪವಿಭಾಗಾಧಿಕಾರಿ ರವಿಚಂದ್ರನಾಯಕ್, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ತಹಸೀಲ್ದಾರ್ ಸುರೇಶ್ ಆಚಾರ್, ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ಕುಮಾರ್ ದಯಾಮ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ನಗರಸಭೆ ಪೌರಾಯುಕ್ತ ಮನುಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಘಟಕ ವ್ಯವಸ್ಥಾಪಕಿ ಅಂಬಿಕಾ ಸುಧೀರ್ ಕೋರಿದ್ದಾರೆ.