ಗುರುವಾರ, ಸೆಪ್ಟೆಂಬರ್ 18, 2025

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಮಾನವ ಸರಪಳಿ

ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ

ಸಾಗರ ಗಡಿಭಾಗದ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹೋರಾಟಗಾರರಿಗೆ ಬೆಂಬಲ ಸೂಚಿಸಿ ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ಧ ಗುರುವಾರ ಭದ್ರಾವತಿ ನಗರದಲ್ಲಿ ಪರಿಸರ ಪ್ರೇಮಿಗಳಿಂದ ಮಾನವ ಸರಪಳಿ ನಿರ್ಮಿಸಿ ತಹಸೀಲ್ದಾರ್ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. 

 ಭದ್ರಾವತಿ: ಸಾಗರ ಗಡಿಭಾಗದ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹೋರಾಟಗಾರರಿಗೆ ಬೆಂಬಲ ಸೂಚಿಸಿ ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ಧ ಗುರುವಾರ ನಗರದಲ್ಲಿ ಪರಿಸರ ಪ್ರೇಮಿಗಳಿಂದ ಮಾನವ ಸರಪಳಿ ನಿರ್ಮಿಸಿ ತಹಸೀಲ್ದಾರ್ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. 
     ಕೆಆರ್‌ಎಸ್ ಪಕ್ಷದ ತಾಲೂಕು ಅಧ್ಯಕ್ಷ ಸಿ. ತೀರ್ಥೇಶ್ ನೇತೃತ್ವದಲ್ಲಿ ಸಂಜೆ ಮಾಧವಚಾರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಯೋಜನೆಗೆ ವಿರೋಧ ವ್ಯಕ್ತಪಡಿಸಲಾಯಿತು. ಹೋರಾಟದಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದರು. 
  ಈ ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡಿರುವುದು ಸರಿಯಲ್ಲ. ಅಲ್ಲದೆ ಯೋಜನೆಯಿಂದ ಯಾವುದೇ ರೀತಿ ಲಾಭವಿಲ್ಲ. ನಷ್ಟದ ಜೊತೆಗೆ ಪರಿಸರ ನಾಶವಾಗಲಿದೆ ತಕ್ಷಣ ಜಿಲ್ಲಾಧಿಕಾರಿಗಳು ಈ ಸಂಬಂಧ ಗಮನ ಹರಿಸಿ ಯೋಜನೆ ಸ್ಥಗಿತಗೊಳಿಸಲು ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಮನವಿಯಲ್ಲಿ ಕೋರಲಾಯಿತು. 
ತಹಸೀಲ್ದಾರ್ ಮಂಜಾನಾಯ್ಕ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಪರಿಸರ ಪ್ರೇಮಿಯಲ್ಲಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. 
 

ಮಾಜಿ ಮುಖ್ಯಮಂತ್ರಿ ಜೆ.ಎಚ್ ಪಟೇಲರ ಹೆಸರಿನಲ್ಲಿ ವಿ.ವಿ ಆರಂಭಿಸಿ, ಹೆಸರಿಡಿ

ಮಾಜಿ ಮುಖ್ಯಮಂತ್ರಿ, ಸಮಾಜವಾದಿ ದಿವಂಗತ ಜೆ.ಎಚ್. ಪಟೇಲ್‌ರವರ ಹೆಸರಿನಲ್ಲಿ ನೂತನ ವಿಶ್ವವಿದ್ಯಾಲಯ ಆರಂಭಿಸುವಂತೆ ಅಥವಾ ಅಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯಕ್ಕೆ ಅವರ ಹೆಸರಿಡಬೇಕೆಂದು ಒತ್ತಾಯಿಸಿ ಭದ್ರಾವತಿ ನಗರದ ಜನ್ನಾಪುರ, ಫಿಲ್ಟರ್‌ಶೆಡ್ ನಿವಾಸಿ, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿದ್ದಾರೆ. 
    ಭದ್ರಾವತಿ: ಮಾಜಿ ಮುಖ್ಯಮಂತ್ರಿ, ಸಮಾಜವಾದಿ ದಿವಂಗತ ಜೆ.ಎಚ್. ಪಟೇಲ್‌ರವರ ಹೆಸರಿನಲ್ಲಿ ನೂತನ ವಿಶ್ವವಿದ್ಯಾಲಯ ಆರಂಭಿಸುವಂತೆ ಅಥವಾ ಅಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯಕ್ಕೆ ಅವರ ಹೆಸರಿಡಬೇಕೆಂದು ಒತ್ತಾಯಿಸಿ ನಗರದ ಜನ್ನಾಪುರ, ಫಿಲ್ಟರ್‌ಶೆಡ್ ನಿವಾಸಿ, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿದ್ದಾರೆ. 
    ಸಮಾಜವಾದಿ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಹೋರಾಟದ ಹಾದಿಯಲ್ಲಿ ಬೆಳೆದುಬಂದ ಪಟೇಲರು ತಮ್ಮ ಅಧಿಕಾರದ ಅವಧಿಯಲ್ಲಿ ರೈತರು, ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗಕ್ಕೆ, ಎಲ್ಲಾ ಸಮಾಜದ ಪರವಾಗಿ ತೆಗೆದುಕೊಂಡ ಉತ್ತಮ ಕಾರ್ಯಗಳ ಬಗ್ಗೆ, ಲೋಕಸಭೆಯಲ್ಲಿ ಪ್ರಪ್ರಥಮವಾಗಿ ಕನ್ನಡದಲ್ಲಿ ಮಾತನಾಡಿರುವ ಬಗ್ಗೆ, ವಿಧಾನಸಭೆ ಒಳಗೆ ಮತ್ತು ಹೊರಗೆ ಭಾಷಣಗಳ ಕುರಿತು ಹಾಗು ಸಮಗ್ರ ಜೀವನ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸಲುವಾಗಿ ಅವರ ಹೆಸರಿನಲ್ಲಿ ನೂತನ ವಿಶ್ವವಿದ್ಯಾಲಯ ಆರಂಭಿಸುವಂತೆ ಅಥವಾ ಅಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯಕ್ಕೆ ಅವರ ಹೆಸರಿಡಬೇಕು ಹಾಗೂ ಪಟೇಲರ ಹೆಸರಿನಲ್ಲಿ ಸಾರ್ವಜನಿಕ ನೀತಿ ಮತ್ತು ಆಡಳಿತ ಅಕಾಡೆಮಿ ನಿರ್ಮಿಸಿ ಮುಂದಿನ ರಾಜಕಾರಣಿಗಳಿಗೆ, ಯುವಕರಿಗೆ, ಆಡಳಿತಗಾರರಿಗೆ ಧೀಮಂತ ನಾಯಕನ ಜೀವನ ಚರಿತ್ರೆ ಪರಿಚಯಿಸುವ ಮೂಲಕ ಪಟೇಲರ ಚಿಂತನೆಗಳು ಉಳಿಯಬೇಕೆಂದು ಮನವಿಯಲ್ಲಿ ಕೋರಿದ್ದಾರೆ. 
    ಮನವಿಯನ್ನು ತಾಲೂಕು ಆಡಳಿತ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್, ಪೌರಾಯುಕ್ತ ಎನ್.ಕೆ ಹೇಮಂತ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಗಾಂಜಾ ಪ್ರಕರಣದ ಆರೋಪಿ ಆದಿಲ್ ಬಾಷಾ ಬಂಧನ

ಗಾಂಜಾ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯದ ಆದೇಶದಂತೆ ಭದ್ರಾವತಿ ನಗರದ ಕೂಲಿ ಬ್ಲಾಕ್ ಶೆಡ್ ನಿವಾಸಿ ಆದಿಲ್ ಬಾಷಾನನ್ನು ಬಂಧಿಸಲಾಗಿದೆ.
    ಭದ್ರಾವತಿ: ಗಾಂಜಾ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯದ ಆದೇಶದಂತೆ ನಗರದ ಕೂಲಿ ಬ್ಲಾಕ್ ಶೆಡ್ ನಿವಾಸಿ ಆದಿಲ್ ಬಾಷಾನನ್ನು ಬಂಧಿಸಲಾಗಿದೆ.
    ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ ಕಾಯ್ದೆ ಅಡಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹೊರಡಿಸಿದ್ದ ಸ್ಪೆಷಲ್ ಸಿ ೨೪೮ /೨೨ ಕಲಂ ೨೦(ಬಿ)(೨)(ಬಿ) ಪ್ರಕರಣದಲ್ಲಿ ಆರೋಪಿ ಎ೪ ಆದಿಲ್ ಬಾಷಾನನ್ನು ಬಂಧಿಸಲು ವಾರೆಂಟ್ ಹೊರಡಿಸಲಾಗಿತ್ತು.
    ಈ ಹಿನ್ನೆಲೆಯಲ್ಲಿ ನ್ಯೂಟೌನ್ ಪೊಲೀಸ್ ಠಾಣೆ ಉಪನಿರೀಕ್ಷಕ ರಮೇಶ್‌ರವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಹಸ್ತಾಂತರ ಮಾಡಲಾಗಿದೆ.