ಭಾನುವಾರ, ಆಗಸ್ಟ್ 22, 2021

ಚಿನ್ನ ಬೆಳ್ಳಿ ವರ್ತಕ ಬದರಿನಾರಾಯಣ ಶರ್ಮ ನಿಧನ

ಬದ್ರಿನಾರಾಯಣ ಶರ್ಮಾ
    ಭದ್ರಾವತಿ, ಆ. ೨೨:  ಹಳೇನಗರದ ಎನ್‌ಎಸ್‌ಟಿ ರಸ್ತೆ ನಿವಾಸಿ ಚಿನ್ನ ಬೆಳ್ಳಿ ವರ್ತಕ ಬದ್ರಿನಾರಾಯಣ ಶi(೮೮) ಭಾನುವಾರ ಬೆಳಗ್ಗೆ ನಿಧನ ಹೊಂದಿದರು.
     ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು, ಸೊಸೆ, ಅಳಿಯಂದಿರು ಹಾಗು ಮೊಮ್ಮಕ್ಕಳನ್ನು ಹೊಂದಿದ್ದರು.  ಇವರ ಅಂತ್ಯಕ್ರಿಯೆ ಸಂಜೆ ಜೈನ್ ರುದ್ರಭೂಮಿಯಲ್ಲಿ ನೆರವೇರಿತು. ಎನ್‌ಎಸ್‌ಟಿ ರಸ್ತೆಯ ಚಿನ್ನ ಬೆಳ್ಳಿ ವರ್ತಕರು ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಮೃತರಿಗೆ ಗೌರವ ಸೂಚಿಸಿದರು.    

ವಾರ್ಡ್ ನಂ.೨೯ರ ಚುನಾವಣೆ : ಆ.೨೩ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ

೩ ಪಕ್ಷಗಳಿಂದ ಅಭ್ಯರ್ಥಿಗಳು ಘೋಷಣೆ, ಬಿಜೆಪಿ ಅಭ್ಯರ್ಥಿಯಾಗಿ ರಮಾ ವೆಂಕಟೇಶ್

ಭದ್ರಾವತಿ ನಗರಸಭೆ ವಾರ್ಡ್ ನಂ.೨೯ರ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ರಮಾ ವೆಂಕಟೇಶ್ ಆಯ್ಕೆಯಾಗಿದ್ದು, ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಸೋಮವಾರ ಅಭ್ಯರ್ಥಿಯನ್ನು ಅಭಿನಂದಿಸುವ ಮೂಲಕ ಅಧಿಕೃತವಾಗಿ ಘೋಷಿಸಿದರು.
    ಭದ್ರಾವತಿ, ಆ. ೨೨: ನಗರಸಭೆ ವಾರ್ಡ್ ನಂ.೨೯ರ ಚುನಾವಣೆಗೆ ನಾಮಪತ್ರ ಸಲ್ಲಿಸಲು ಆ.೨೩ರ ಸೋಮವಾರ ಕೊನೆಯ ದಿನವಾಗಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ೩ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿವೆ.
    ಕಾಂಗ್ರೆಸ್ ಪಕ್ಷದಿಂದ ನ್ಯಾಯವಾದಿ ಲೋಯಿತಾ ನಂಜಪ್ಪ, ಜೆಡಿಎಸ್ ಪಕ್ಷದಿಂದ ಹಾಲಿ ನಗರಸಭಾ ಸದಸ್ಯ ಅನಿಲ್‌ಕುಮಾರ್ ಅವರ ಪತ್ನಿ ಅರ್. ನಾಗರತ್ನ ಹಾಗು ಬಿಜೆಪಿ ಪಕ್ಷದಿಂದ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ರಮಾ ವೆಂಕಟೇಶ್ ಅವರನ್ನು ಕಣಕ್ಕಿಳಿಸಲು ಮುಂದಾಗಿವೆ. ೩ ಪಕ್ಷಗಳು ಸಹ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿರುವುದು ವಿಶೇಷವಾಗಿದೆ.
    ಭಾನುವಾರ ಸಂಜೆ ಜನ್ನಾಪುರ ಬಬ್ಬೂರು ಕಮ್ಮೆ ಸೇವಾ ಸಂಘದ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಸಮ್ಮುಖದಲ್ಲಿ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಿಸಲಾಯಿತು.
    ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಎಂ. ಪ್ರಭಾಕರ್, ಪ್ರಮುಖರಾದ ಆರ್.ಎಸ್. ಶೋಭಾ, ಎಂ. ಮಂಜುನಾಥ್, ಚಂದ್ರಪ್ಪ ಸೇರಿದಂತೆ ಇನ್ನಿತರರು ವಾರ್ಡ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ. ಗೆಲುವಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಶಕ್ತಿಮೀರಿ ಶ್ರಮಿಸಬೇಕೆಂದು ಕರೆ ನೀಡಿದರು.
    ಅಭ್ಯರ್ಥಿ ರಮಾ ವೆಂಕಟೇಶ್ ಮಾತನಾಡಿ, ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ಆತ್ಮ ವಿಶ್ವಾಸ ಹೊಂದಿದ್ದೇನೆ. ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
    ಶಕ್ತಿ ಕೇಂದ್ರದ ಅಧ್ಯಕ್ಷ ನವೀನ್‌ಗೌಡ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ಹನುಮಂತನಾಯ್ಕ, ರೂಪನಾಗರಾಜ್, ಶೈಲಜಾ ರಾಮಕೃಷ್ಣ, ಗಾಯತ್ರಿ ಹಾಗು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
    ಜೆಡಿಎಸ್ ಅಭ್ಯರ್ಥಿಯಿಂದ ಆರ್. ನಾಗರತ್ನ ಈಗಾಗಲೇ ವಾರ್ಡ್ ವ್ಯಾಪ್ತಿಯಲ್ಲಿ ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಷ್ಟ್ರೀಯ ನಾಯಕರ ಚಿಂತನೆ, ಆದರ್ಶಗಳು ಒಂದು ಪಕ್ಷಕ್ಕೆ ಸೀಮಿತವಾಗಬಾರದು

ರಾಷ್ಟ್ರೀಯ ಸದ್ಭಾವನಾ ದಿನಾಚರಣೆಯಲ್ಲಿ ಡಾ. ಬಿ.ಜಿ ಧನಂಜಯ

ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸದ್ಭಾವನಾ ದಿನದ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.
    ಭದ್ರಾವತಿ : ಉದಾತ್ತ ಮತ್ತು ಒಳ್ಳೆಯ ಚಿಂತನೆಗಳು ಯಾವ ಮೂಲದಿಂದ ಬಂದರೂ ಸಹ ಅದನ್ನು ಸ್ವೀಕರಿಸುವುದೇ ಭಾರತೀಯತೆ. ಇದು ಭಾರತೀಯರ ಉದಾತ್ತ ಗುಣ ಎಂಬುದನ್ನು ಮಾಜಿ ಪ್ರಧಾನಿ ದಿವಂಗತ ರಾಜೀವ್‌ಗಾಂಧಿ ಅವರು ತೋರಿಸಿಕೊಟ್ಟಿದ್ದರು ಎಂದು ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಹೇಳಿದರು.
    ಅವರು ಕಾಲೇಜಿನಲ್ಲಿ ರಾಷ್ಟ್ರೀಯ ಸದ್ಭಾವನಾ ದಿನದ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.
    ಏಕತೆ ಮತ್ತು ಸಮಗ್ರತೆಗೆ ವಿಶೇಷ ಒತ್ತುನೀಡಿ ಮಾದರಿ ಆಡಳಿತ ನೀಡುವ ಜೊತೆಗೆ ರಾಷ್ಟ್ರೀಯ ನಾಯಕರ ಚಿಂತನೆ ಮತ್ತು ಆದರ್ಶಗಳು ಒಂದು ಪಕ್ಷಕ್ಕೆ ಸೀಮಿತವಾಗಿರಬಾರದು ಎಂಬುದನ್ನು ತೋರಿಸಿಕೊಟ್ಟಿದ್ದರು.
    ಡಿಜಿಟಲ್ ತಂತ್ರಜ್ಞಾನದತ್ತ ಯುವಕರನ್ನು ಆಕರ್ಷಿಸುವಲ್ಲಿ ಕಾರಣಕರ್ತರಾಗುವ ಜೊತೆಗೆ ಅಲ್ಪ ಕಾಲದಲ್ಲಿಯೇ ಎಲ್ಲಾ ನಾಯಕರನ್ನು ಆಕರ್ಷಿಸಿ ದೇಶಕ್ಕೆ ತಾಂತ್ರಿಕ ಸ್ಪರ್ಶನೀಡಿದ ಅಪರೂಪದ ರಾಜಕೀಯ ಮುತ್ಸದ್ದಿ ಯಾಗಿದ್ದರು. ವೈಜ್ಞಾನಿಕ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಆತ್ಮವಿಶ್ವಾಸ ಮತ್ತು ಭರವಸೆಯ ಕನಸ ಬಿತ್ತಿದ್ದರು. ಇಂತಹ ಮಹಾನ್ ಪುರುಷರ ಆದರ್ಶಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
    ರೋವರ‍್ಸ್ ಮತ್ತು ರೇಜರ‍್ಸ್ ಸಂಚಾಲಕ ಕೆ.ಬಿ ರೇವಣ ಸಿದ್ದಪ್ಪ, ಉಪನ್ಯಾಸಕ ಡಾ. ತಿಪ್ಪೇಶ್ ಸೇರಿದಂತೆ ಕಾಲೇಜಿನ ಉಪನ್ಯಾಸಕ ಹಾಗು ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮೊದಲ ವರ್ಷದ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

    ಭದ್ರಾವತಿ, ಆ. ೨೨: ನಗರದ ನ್ಯೂಟೌನ್ ಸರ್ಕಾರಿ ವಿಐಎಸ್‌ಎಸ್‌ಜೆ ಪಾಲಿಟೆಕ್ನಿಕ್‌ನಲ್ಲಿ ಪ್ರಸಕ್ತ ಸಾಲಿನ ಮೊದಲನೇ ವರ್ಷದ ಡಿಪ್ಲೋಮಾ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ.
    ೩ ವರ್ಷ ಅವಧಿಯ ಸಿವಿಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಮೆಕಾನಿಕಲ್ ಇಂಜಿನಿಯರಿಂಗ್ ಮತ್ತು ಮೆಟಲರ್ಜಿಕಲ್ ಇಂಜಿನಿಯರಿಂಗ್ ವೃತ್ತಿ ವಿಷಯಗಳಿಗೆ ತಲಾ ೬೦+೩ ಸ್ಥಾನಗಳು ಮೀಸಲಿವೆ.
    ಎಸ್‌ಎಸ್‌ಎಲ್‌ಸಿ/ಸಿಬಿಎಸ್‌ಇ/ಐಸಿಎಸ್‌ಇ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ೩೫ ಅಂಕಗಳೊಂದಿಗೆ ತೇರ್ಗಡೆ ಹೊಂದಿರುವವರು ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶ ಪಡೆಯಲು ಅರ್ಹರಾಗಿದ್ದು, ಐಟಿಐ ಹಾಗು ಪಿಯುಸಿ(ವಿಜ್ಞಾನ) ಪಾಸ್ ಆದ ವಿದ್ಯಾರ್ಥಿಗಳಿಗೆ ನೇರವಾಗಿ ೩ನೇ ಸೆಮಿಸ್ಟರ್ ಪ್ರವೇಶಕ್ಕೆ ಅವಕಾಶವಿದೆ.
    ಅರ್ಜಿ ಸಲ್ಲಿಸಲು ಆ. ೨೫ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಮೊ: ೯೯೮೬೦೭೨೬೯೭ ಅಥವಾ ೮೨೭೭೪೯೮೪೭೧ ಸಂಖ್ಯೆ ಕರೆ ಮಾಡಬಹುದಾಗಿದೆ.