Tuesday, May 27, 2025

ತಾಲೂಕು ಛಾಯಾಗ್ರಾಹಕರ ಸಂಘಕ್ಕೆ ನೂತನ ಪದಾಧಿಕಾರಿಗಳು ಆಯ್ಕೆ

ಭದ್ರಾವತಿ ತಾಲೂಕು ಛಾಯಾಗ್ರಾಹಕರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು. 
    ಭದ್ರಾವತಿ : ತಾಲೂಕು ಛಾಯಾಗ್ರಾಹಕರ ಸಂಘಕ್ಕೆ ಮುಂದಿನ ೨ ವರ್ಷಗಳ ಅವಧಿಗೆ ಮಂಗಳವಾರ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. 
    ಅಧ್ಯಕ್ಷರಾಗಿ ಎಚ್. ಶ್ರೀನಿವಾಸ್, ಉಪಾಧ್ಯಕ್ಷರಾಗಿ ರಾಜು, ಪ್ರಧಾನ ಕಾರ್ಯದರ್ಶಿ ಶೈಲೇಶ್ ಕುಮಾರ್ ಮತ್ತು ಖಜಾಂಚಿಯಾಗಿ ಜಿ.ಡಿ ಮಂಜುನಾಥ್ ಆಯ್ಕೆಯಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ತಾಲೂಕು ಛಾಯಾಗ್ರಾಹಕರ ಸಂಘ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಆರೋಗ್ಯ ಶಿಬಿರ ಹಾಗು ಪ್ರತಿ ವರ್ಷ ಛಾಯಾಗ್ರಾಹಕರು ಹಾಗು ಕುಟುಂಬ ವರ್ಗದವರಿಗೆ ವಿವಿಧ ಕ್ರೀಡಾ ಹಾಗು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸುವ ಜೊತೆಗೆ ಛಾಯಾಗ್ರಾಹಕರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುತ್ತಿದೆ. 
    ಸಂಘಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ನಗರದ ವಿವಿಧ ಸಂಘ-ಸಂಸ್ಥೆಗಳ ಗಣ್ಯರು, ಛಾಯಾ ಗ್ರಾಹಕರು ಅಭಿನಂದಿಸಿದ್ದಾರೆ. 

ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾಗಿ ೨ನೇ ಬಾರಿಗೆ ಎಚ್. ಶ್ರೀನಿವಾಸ್ ಆಯ್ಕೆ

ಎಚ್. ಶ್ರೀನಿವಾಸ್ 
    ಭದ್ರಾವತಿ : ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾಗಿ ೨ನೇ ಬಾರಿಗೆ ಹಳೇನಗರದ ನಿವಾಸಿ, ಛಾಯಾಗ್ರಾಹಕ ಎಚ್. ಶ್ರೀನಿವಾಸ್ ಮಂಗಳವಾರ ಆಯ್ಕೆಯಾಗಿದ್ದಾರೆ. 
    ಶ್ರೀನಿವಾಸ್ ಈ ಹಿಂದೆ ತಾಲೂಕು ಛಾಯಾಗ್ರಾಹಕರ ಸಂಘದಲ್ಲಿ ತಲಾ ೨ ಬಾರಿ ಕಾರ್ಯದರ್ಶಿಯಾಗಿ, ಖಜಾಂಚಿಯಾಗಿ ಹಾಗು ಒಂದು ಬಾರಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಛಾಯಾಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳು ಹಾಗು ಅವರ ಬೇಡಿಕೆಗಳ ಈಡೇರಿಕೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದು, ಈ ಸಂಬಂಧ ಹಲವಾರು ಬಾರಿ ಸ್ಥಳೀಯ ಜನಪ್ರತಿನಿಧಿಗಳಿಗೆ, ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗು ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. 
    ತಾಲೂಕು ಕುರುಬರ ಸಂಘದಲ್ಲಿ ಶ್ರೀನಿವಾಸ್ ಈ ಹಿಂದೆ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ನಗರದ ವಿವಿಧ ಸಂಘ-ಸಂಸ್ಥೆಗಳ ಗಣ್ಯರು, ಛಾಯಾ ಗ್ರಾಹಕರು ಅಭಿನಂದಿಸಿದ್ದಾರೆ. 

ಮೇ.೨೮ರಂದು ವಿದ್ಯುತ್ ವ್ಯತ್ಯಯ


    ಭದ್ರಾವತಿ : ಮೆಸ್ಕಾಂ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ. ೨೮ರ ಬುಧವಾರ ಬೆಳಿಗ್ಗೆ ೧೦.೩೦ ರಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಸಂತೆ ಮೈದಾನ, ಹೊಸಮನೆ, ಎನ್‌ಎಂಸಿ ರಸ್ತೆ, ಕೇಶವಪುರ, ಸುಭಾಷ್ ನಗರ, ಸಿ.ಎನ್ ರಸ್ತೆ, ಎಪಿಎಂಸಿ ಮತ್ತು ಭೋವಿಕಾಲೋನಿ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ. 

ಮಳೆ ಅನಾಹುತ ಎದುರಿಸಲು ವಿಪತ್ತು ನಿರ್ವಹಣಾ ತಂಡ ರಚಿಸಿ : ತಹಸೀಲ್ದಾರ್

ಭದ್ರಾವತಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಂದಾಯ ಇಲಾಖೆ, ನಗರಸಭೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಮತ್ತು ಪಿಡಿಓಗಳಿಗೆ ಏರ್ಪಡಿಸಲಾಗಿದ್ದ ವಿಪತ್ತು ನಿರ್ವಹಣಾ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಪರುಸಪ್ಪ ಕುರುಬರ, ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ.ಚನ್ನಣ್ಣನವರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಭದ್ರಾವತಿ: ತಾಲೂಕಿನಾದ್ಯಂತ ಮಳೆ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಮಳೆಯಿಂದ ಸಂಭವಿಸಬಹುದಾದ ಅನಾಹುತಗಳನ್ನು ನಿಯಂತ್ರಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಬಾರಿಯಂತೆ ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಿಕೊಂಡು ಅಗತ್ಯ ಮಾಹಿತಿ ಸಂಗ್ರಹಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕೆಂದು ತಹಸೀಲ್ದಾರ್ ಪರುಸಪ್ಪ ಕುರುಬರ ಸೂಚಿಸಿದರು. 
    ಅವರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಂದಾಯ ಇಲಾಖೆ, ನಗರಸಭೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಮತ್ತು ಪಿಡಿಓಗಳಿಗೆ ಏರ್ಪಡಿಸಲಾಗಿದ್ದ ವಿಪತ್ತು ನಿರ್ವಹಣಾ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
    ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಅಧಿಕಾರಿಗಳು ವಿಪತ್ತು ನಿರ್ವಹಣಾ ಸಮಿತಿ ರಚಿಸಿಕೊಂಡು ತಮ್ಮ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳು,  ಸರ್ಕಾರಿ ಶಾಲೆ, ವಿದ್ಯಾರ್ಥಿ ನಿಲಯ ಮುಂತಾದವುಗಳನ್ನು ಗುರುತಿಸಿ ಆಗಬಹುದಾದ ತೊಂದರೆಗಳನ್ನು ಮೇಲಾಧಿಕಾರಿಗಳಿಗೆ ತಿಳಿಸಬೇಕು. ಮಳೆಗಾಳಿಗೆ ಮರ ಹಾಗೂ ಮರದ ರೊಂಬೆ-ಕೊಂಬೆಗಳು ಬೀಳುವಂತಿದ್ದರೆ ಅವುಗಳ ಮಾಹಿತಿಯನ್ನು ಅರಣ್ಯ ಇಲಾಖೆ, ವಿದ್ಯುತ್ ಇಲಾಖೆಗೆ, ರಸ್ತೆ ಮುಚ್ಚಿ ಹೋಗುವ ಅಥವಾ ಸೇತುವೆ ಮುಳುಗುವ ಸಾಧ್ಯತೆ ಕಂಡು ಬಂದರೆ ಹಾಗು ಮಳೆ ಕಾರಣ ಕೆರೆ ಕೋಡಿ ಒಡೆಯುವ ಸಾಧ್ಯತೆಯಿರುವುದು ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದರು.
    ಮಾಹಿತಿ ನೀಡುವಲ್ಲಿ ವಿಫಲರಾದರೆ ಅಥವಾ ತಪ್ಪು ಮಾಹಿತಿ ನೀಡಿದರೆ ಅಧಿಕಾರಿಗಳು, ಸಿಬ್ಬಂದಿಗಳನ್ನು ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಎಲ್ಲೆಡೆ ಡೆಂಗ್ಯೂ, ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ತಾಲೂಕಿನಲ್ಲಿ ರೋಗ ಉಲ್ಬಣಿಸದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಟೆಸ್ಟಿಂಗ್ ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಸಂಬಂಧ ನಾಗರೀಕರು ತಕ್ಷಣ ತಾಲೂಕು ಕಚೇರಿಯಲ್ಲಿ ತೆರೆಯಲಾಗಿರುವ ಸಹಾಯ ವಾಣಿ ಕೇಂದ್ರಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
    ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ ಮಾತನಾಡಿ, ಕಳೆದ ಬಾರಿ ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ರಚಿಸಿಕೊಂಡಂತೆ ಈ ಬಾರಿ ಸಹ ವಿಪತ್ತು ನಿರ್ವಹಣಾ ತಂಡ ರಚಿಸಿಕೊಳ್ಳಬೇಕು. ತಾಲೂಕಿನಲ್ಲಿರುವ ಸರ್ಕಾರಿ ಶಾಲೆಗಳಿಗೆ ಮಳೆಯಿಂದ ಸಮಸ್ಯೆಗಳು ಎದುರಾದಲ್ಲಿ ಅದೆ ಶಾಲೆಗಳಲ್ಲಿ ಪಾಠ ಪ್ರವಚನ ಮುಂದುವರೆಸುವ ಅಥವಾ ಪ್ರರ್ಯಾಯ ವ್ಯವಸ್ಥೆ ಕೈಗೊಳ್ಳುವ ಸಂಬಂಧ ಸೂಕ್ತ ಮಾಹಿತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪಿಡಿಓಗಳಿಗೆ ಪೂರ್ವಭಾವಿಯಾಗಿ ತಿಳಿಸಬೇಕು. ವಿಪತ್ತು ನಿರ್ವಹಣ ತಂಡದವರು ಆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ನೈಜ್ಯತೆಯನ್ನು ಅರಿತು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು.
    ಕ್ಷೇತ್ರಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮಾತನಾಡಿ, ಶಾಲೆಗಳು ಮೇ.೨೯ ರಿಂದ ಪುನಾರಂಭಗೊಳ್ಳಲಿವೆ. ಶಾಲೆಯ ಕಟ್ಟಡ ಹಾಗೂ ಅಲ್ಲಿ ಮಳೆ ಬಂದರೆ ಆಗಬಹುದಾದ ತೊಂದರೆಗಳ ಬಗ್ಗೆ ಅರಿಯುವ ಸಲುವಾಗಿ ಶಾಲೆಗಳ ಮುಖ್ಯೋಪಾಧ್ಯಾಯರ ಸಭೆ ಕರೆದು ಚರ್ಚಿಸಲಾಗುತ್ತದೆ. ಅಲ್ಲಿ ಪಡೆದ ಮಾಹಿತಿಯನ್ನು ಪಿಡಿಓಗಳಿಗೆ ತಿಳಿಸುವ ವ್ಯವಸ್ಥೆ ಮಾಡಲಾಗುವುದು ಎಂದರು. 
    ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ.ಚನ್ನಣ್ಣನವರ್ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ಪ್ರಶಾಂತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಓಗಳು, ಗ್ರಾಮಲೆಕ್ಕಿಗರು ಸಭೆಯಲ್ಲಿ ಭಾಗವಹಿಸಿದ್ದರು.