Monday, February 21, 2022

ಬಜರಂಗದಳ ಕಾರ್ಯಕರ್ತ ಹತ್ಯೆಗೆ ಹಿಂದೂ ಪರ ಸಂಘಟನೆಗಳಿಂದ ಖಂಡನೆ : ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮನವಿ

ಶಿವಮೊಗ್ಗ ನಡೆದಿರುವ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ  ಖಂಡಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ವಿಶ್ವ ಹಿಂದೂ ಪರಿಷದ್ ವತಿಯಿಂದ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಫೆ. ೨೧: ಶಿವಮೊಗ್ಗದಲ್ಲಿ ನಡೆದಿರುವ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯನ್ನು ಖಂಡಿಸಿ ತಕ್ಷಣ ತಪ್ಪಿತಸ್ಥರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ನಗರದಲ್ಲಿ ಹಿಂದೂಪರ ಸಂಘಟನೆಗಳು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿವೆ.
    ಹರ್ಷ ಹತ್ಯೆ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ನಗರದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ಸೋಮವಾರ ನಿಷೇದಾಜ್ಞೆ ಜಾರಿಗೊಳಿಸಿದ್ದ ಹಿನ್ನಲೆಯಲ್ಲಿ ಯಾವುದೇ ರೀತಿ ಪ್ರತಿಭಟನೆ, ಮೆರವಣಿಗೆಗಳಿಗೆ ಅವಕಾಶ ನೀಡಲಿಲ್ಲ. ಈ ಹಿನ್ನಲೆಯಲ್ಲಿ ಕೆಲವು ಖಂಡನೆಗಳು ತಾಲೂಕು ಕಛೇರಿಗೆ ತೆರಳಿ ಮನವಿ ಸಲ್ಲಿಸಿದವು.
    ವಿಎಚ್‌ಪಿ ಮನವಿ :
    ವಿಶ್ವ ಹಿಂದೂ ಪರಿಷದ್ ವತಿಯಿಂದ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮನವಿ ಸಲ್ಲಿಸಲಾಯಿತು. ಇತ್ತೀಚಿನ ದಿನಗಳಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಹೆಚ್ಚಾಗುತ್ತಿದ್ದು, ಹಿಂದೂಪರ ಕಾರ್ಯಕರ್ತರಿಗೆ ಸೂಕ್ತ ಭದ್ರತೆ ನೀಡುವ ಜೊತೆಗೆ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
    ವಿಶ್ವ ಹಿಂದೂ ಪರಿಷತ್ ದಕ್ಷಣ ಪ್ರಾಂತ್ಯ ಉಪಾಧ್ಯಕ್ಷ ಹಾ. ರಾಮಪ್ಪ, ಪ್ರಮುಖರಾದ ಸತ್ಯಣ್ಣ, ಡಿ.ಆರ್ ಶಿವಕುಮಾರ್, ರಾಮೂರ್ತಿ, ಮಂಜುನಾಥರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಶಿವಮೊಗ್ಗ ನಡೆದಿರುವ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ  ಖಂಡಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಹಿಂದೂ ಪಡೆ ವತಿಯಿಂದ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. 
    ಹಿಂದೂ ಪಡೆಯಿಂದ ಮನವಿ :
    ಹೊಸಮನೆ ಹಿಂದೂಪಡೆ ವತಿಯಿಂದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ  ಖಂಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ಹಿಂದೂ ಸಮುದಾಯದವರನ್ನು ಮಾತ್ರ ಗುರಿಯಾಗಿಸಿಕೊಂಡು ಇತ್ತೀಚಿನ ದಿನಗಳಲ್ಲಿ ಹತ್ಯೆ ನಡೆಸಲಾಗುತ್ತಿದೆ. ವಿನಾಕಾರಣ ನಡೆಸಲಾಗುತ್ತಿರುವ ಹತ್ಯೆಗೆ ಕಾರಣರಾಗಿರುವವರನ್ನು ತಕ್ಷಣ ಬಂಧಿಸಬೇಕು. ಹಿಂದೂಪರ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕು. ಹತ್ಯೆಯಾದ ಹಿಂದೂ ಕಾರ್ಯಕರ್ತರ ಕುಟುಂಬಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಹಿಂದೂ ಸಮುದಾಯದವರ ಭಾವನೆಗಳಿಗೆ ಬೆಲೆ ನೀಡುವ ಮೂಲಕ ನ್ಯಾಯ ಒದಗಿಸಿಕೊಡಬೇಕೆಂದು ಕೋರಲಾಗಿದೆ.  
    ಹಿಂದೂಪಡೆ ಅಧ್ಯಕ್ಷ ಹರೀಶ್ ನೇತೃತ್ವದಲ್ಲಿ ತಹಸೀಲ್ದಾರ್-೨ ರಂಗಮ್ಮ ಮೂಲಕ ಮನವಿ ಸಲ್ಲಿಸಲಾಯಿತು. ಉಪಾಧ್ಯಕ್ಷ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಅಭಿಜಿತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಶಾಲೆಗಳಿಗೆ ಫೆ.೨೨ರಂದು ರಜೆ ಇಲ್ಲ :
    ಹರ್ಷ ಹತ್ಯೆ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಸೋಮವಾರ ತಾಲೂಕಿನಾದ್ಯಂತ ೧ ರಿಂದ ೧೦ ತರಗತಿವರೆಗಿನ ಸರ್ಕಾರಿ, ಅನುದಾನ ಮತ್ತು ಅನುದಾನ ರಹಿತ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಮಂಗಳವಾರ ಎಂದಿನಂತೆ ಶಾಲೆಗಳು ಆರಂಭಗೊಳ್ಳಲಿವೆ. ಶಾಲೆಗಳ ಸುತ್ತಮುತ್ತ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಲು ಹೆಚ್ಚಿನ ಗಮನ ಹರಿಸುವಂತೆ ಸಂಬಂಧಪಟ್ಟ ಶಾಲೆಗಳ ಮುಖ್ಯಸ್ಥರಿಗೆ, ಇಲಾಖೆಯ ಸಂಪನ್ಮೂಲ ವ್ಯಕ್ತಿಗಳಿಗೆ ಶಿಕ್ಷಣ ಇಲಾಖೆ ಸೂಚಿಸಿದೆ.

ರಾಷ್ಟ್ರ ದ್ರೋಹ ಹೇಳಿಕೆ : ಸಚಿವ ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಆಗ್ರಹ

ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ

ದೇಶ ದ್ರೋಹದ ಹೇಳಿಕೆ ನೀಡಿರುವ ಸಚಿವ ಈಶ್ವರಪ್ಪರನ್ನು ತಕ್ಷಣ ಸಚಿವ ಸಂಪುಟದಿಂದ ಕೈಬಿಟ್ಟು, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಫೆ. ೨೧: ದೇಶ ದ್ರೋಹದ ಹೇಳಿಕೆ ನೀಡಿರುವ ಸಚಿವ ಈಶ್ವರಪ್ಪರನ್ನು ತಕ್ಷಣ ಸಚಿವ ಸಂಪುಟದಿಂದ ಕೈಬಿಟ್ಟು, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
    ಪಕ್ಷದ ಪ್ರಮುಖರು ಮಾತನಾಡಿ, ಸರ್ಕಾರದಲ್ಲಿ ಸಚಿವರಾಗಿರುವ ಈಶ್ವರಪ್ಪರವರು ರಾಷ್ಟ್ರಧ್ವಜ ಸ್ಥಾನದಲ್ಲಿ ಕೇಸರಿ ಧ್ವಜ(ಭಗವದ್ವಜ) ಹಾರಿಸುವುದಾಗಿ ಹೇಳಿಕೆಯನ್ನು ನೀಡುವ ಮೂಲಕ ದೇಶದ್ರೋಹವೆಸಗಿದ್ದಾರೆ. ಇವರ ಹೇಳಿಕೆ ಅತ್ಯಂತ ಅಪಾಯಕಾರಿಯಾಗಿದ್ದು, ತ್ರಿವರ್ಣ ಧ್ವಜವು ನಮ್ಮ ರಾಷ್ಟ್ರದ ಸ್ವಾತಂತ್ರ್ಯ, ಅಖಂಡತೆ, ಸಾರ್ವಭೌಮತೆ, ಅಸ್ಮಿತೆ ಮತ್ತು ಸಂವಿಧಾನದ ಸಂಕೇತವಾಗಿದೆ. ಈಶ್ವರಪ್ಪನವರ ಹೇಳಿಕೆಯಿಂದ ದೇಶದ ಪ್ರಜೆಗಳಿಗೆ ದಿಗ್ಭ್ರಮೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ತಕ್ಷಣ ಈಶ್ವರಪ್ಪರನ್ನು ಸಚಿವ ಸಂಪುಟದಿಂದ ಕೈಬಿಟ್ಟು ಅವರ ವಿರುದ್ಧ ದೇಹದ್ರೋಹದ ಪ್ರಕರಣ ದಾಖಲಿಸಿ ರಾಷ್ಟ್ರ ಧ್ವಜದ ಗೌರವ ಎತ್ತಿ ಹಿಡಿಯುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ಶಾಸಕರು ವಿಧಾನ ಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯತನದಿಂದ ವರ್ತಿಸುತ್ತಿದೆ. ಈ ಹಿನ್ನಲೆಯಲ್ಲಿ ಸಂವಿಧಾನ ರಕ್ಷಣೆಯ ಪವಿತ್ರ ಜವಾಬ್ದಾರಿಯನ್ನು ಹೊಂದಿರುವ ರಾಜ್ಯಪಾಲರು ತಕ್ಷಣ ಸಚಿವ ಸಂಪುಟದಿಂದ ಈಶ್ವರಪ್ಪರನ್ನು ಕೈಬಿಟ್ಟು ಅವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.
    ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಟಿ. ಚಂದ್ರೇಗೌಡ ನೇತೃತ್ವದಲ್ಲಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮನವಿ ಸಲ್ಲಿಸಲಾಯಿತು. ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಗ್ರಾಮಾಂತರ ಯುವ ಘಟಕದ ಅಧ್ಯಕ್ಷ ಅಫ್ತಾಬ್ ಅಹಮದ್, ಪ್ರಮುಖರಾದ ಸಿ.ಎಂ ಖಾದರ್, ಅಮೀರ್‌ಜಾನ್, ಫೀರ್ ಷರೀಫ್, ಬಿ. ಗಂಗಾಧರ್, ಗೋಪಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಚಪ್ಪಲಿ ಅಂಗಡಿಯಲ್ಲಿ ಬೆಂಕಿ : ಲಕ್ಷಾಂತರ ರು. ನಷ್ಟ

ಭದ್ರಾವತಿ ನಗರಸಭೆ ವಾರ್ಡ್ ನಂ.೩ರ ನಗರದ ಬಿ.ಎಚ್ ರಸ್ತೆ ಕಿತ್ತೂರು ಚೆನ್ನಮ್ಮ ವಾಣಿಜ್ಯ ಮಳಿಗೆಗಳ ಚಪ್ಪಲಿ ಅಂಗಡಿಯಲ್ಲಿ ಭಾನುವಾರ ಮಧ್ಯ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
    ಭದ್ರಾವತಿ, ಫೆ. ೨೧: ನಗರಸಭೆ ವಾರ್ಡ್ ನಂ.೩ರ ನಗರದ ಬಿ.ಎಚ್ ರಸ್ತೆ ಕಿತ್ತೂರು ಚೆನ್ನಮ್ಮ ವಾಣಿಜ್ಯ ಮಳಿಗೆಗಳ ಚಪ್ಪಲಿ ಅಂಗಡಿಯಲ್ಲಿ ಭಾನುವಾರ ಮಧ್ಯ ರಾತ್ರಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರು. ನಷ್ಟ ಉಂಟಾಗಿರುವ ಘಟನೆ ನಡೆದಿದೆ. 
ಮಧ್ಯ ರಾತ್ರಿ ಸುಮಾರು ೨ ಗಂಟೆ ಸಮಯ ಬೆಂಕಿ ಕಾಣಿಸಿಕೊಂಡಿರುವುದು ತಿಳಿದು ಬಂದಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಇಲಾಖೆ ಸಿಬ್ಬಂದಿಗಳು ಬೆಳಿಗ್ಗೆ ೪ ಗಂಟೆವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಎನ್. ವಸಂತಕುಮಾರ್, ಸಿಬ್ಬಂದಿಗಳಾದ ಎ. ಸುಬ್ರಮಣ್ಯ, ಪಿ. ಮಂಜುನಾಥ್, ಎಂ. ವಿನೂತನ್, ಎಂ.ಸಿ ಮಹೇಂದ್ರ ಮತ್ತು ಎಚ್.ಎಂ ಹರೀಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಉಂಟಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂಗಡಿಯಲ್ಲಿದ್ದ ವಸ್ತುಗಳು ಸಂಪೂರ್ಣವಾಗಿ ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಸುಮಾರು ೨ ರಿಂದ ೩ ಲಕ್ಷ ರು. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. 
ಆರ್ಥಿಕ ನೆರವಿನ ಭರವಸೆ :
    ಘಟನಾ ಸ್ಥಳಕ್ಕೆ ಭೇಟಿ ನೀಡಿದ ವಾರ್ಡಿನ ನಗರಸಭಾ ಸದಸ್ಯ ಜಾರ್ಜ್, ಯುವ ಮುಖಂಡ ಬಿ.ಎಸ್ ಗಣೇಶ್ ಸೇರಿದಂತೆ ಇನ್ನಿತರರು ಅಂಗಡಿ ಮಾಲೀಕರಿಂದ ಘಟನೆ ಕುರಿತು ಮಾಹಿತಿ ಪಡೆದು ಸೂಕ್ತ ಪರಿಹಾರ ಕೊಡಿಸುವಂತೆ ಶಾಸಕರಿಗೆ ಮನವಿ ಮಾಡುವುದಾಗಿ ಭರವಸೆ ನೀಡಿದರು.



ಭದ್ರಾವತಿ ಬಿ.ಎಚ್ ರಸ್ತೆಯ ವಾಣಿಜ್ಯ ಮಳಿಗೆಗಳ ಚಪ್ಪಲಿ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹಾನಿಗೊಳಗಾದ ಸ್ಥಳಕ್ಕೆ ವಾರ್ಡ್ ನಗರಸಭೆ ಸದಸ್ಯೆ ಜಾರ್ಜ್, ಯುವ ಮುಖಂಡ ಬಿ.ಎಸ್ ಗಣೇಶ್ ಸೇರಿದಂತೆ ಇನ್ನಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.