Sunday, February 21, 2021

ಬರಡು ರಾಸುಗಳ ಉಚಿತ ಆರೋಗ್ಯ ತಪಾಸಣೆ, ಮಿಶ್ರ ತಳಿ ಹಸು, ಕರುಗಳ ಪ್ರದರ್ಶನ


ಭದ್ರಾವತಿ ತಾಲೂಕಿನ ಗೋಣಿಬೀಡು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ  ಏರ್ಪಡಿಸಲಾಗಿದ್ದ ಬರಡು ರಾಸುಗಳ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಮಿಶ್ರ ತಳಿ ಹಸು, ಕರುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಆಯ್ದ ಸದಸ್ಯರಿಗೆ ಹಾಲು ಶೇಖರಣೆಗೆ ಅಗತ್ಯವಿರುವ ಹಾಲಿನ ಕ್ಯಾನ್‌ಗಳನ್ನು ವಿತರಿಸಲಾಯಿತು.
    ಭದ್ರಾವತಿ, ಫೆ. ೨೧: ತಾಲೂಕಿನ ಗೋಣಿಬೀಡು ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಶಿವಮೊಗ್ಗ ಹಾಲು ಒಕ್ಕೂಟ ಹಾಗು ಪಶು ವೈದ್ಯಕೀಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಬರಡು ರಾಸುಗಳ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಮಿಶ್ರ ತಳಿ ಹಸು, ಕರುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
    ಕಾರ್ಯಕ್ರಮದಲ್ಲಿ ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಡಿ. ಆನಂದ್, ನಿರ್ದೇಶಕ ದಿನೇಶ್, ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಕೆ.ಎಸ್ ಬಸವರಾಜ, ಶಿವಮೊಗ್ಗ ಪಶು ವೈದ್ಯಕೀಯ ಮಹಾ ವಿದ್ಯಾಲಯದ ಮುಖ್ಯಸ್ಥ ಡಾ. ಎನ್.ಬಿ ಶ್ರೀಧರ್, ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಕೆ. ಬಸವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
   ಗೋಣಿಬೀಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಡಿ. ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಿ. ಪರಮೇಶ್ವರಪ್ಪ ಸ್ವಾಗತಿಸಿದರು. ಆಯ್ದ ಸದಸ್ಯರಿಗೆ ಹಾಲು ಶೇಖರಣೆಗೆ ಅಗತ್ಯವಿರುವ ಹಾಲಿನ ಕ್ಯಾನ್‌ಗಳನ್ನು ವಿತರಿಸಲಾಯಿತು.

ಮಹಿಳೆಯರು ಆರೋಗ್ಯ ರಕ್ಷಣೆ ಕುರಿತು ಹೆಚ್ಚಿನ ತಿಳುವಳಿಕೆ ಹೊಂದಿ : ಎಂ.ಎಸ್ ಸುಧಾಮಣಿ

ಭದ್ರಾವತಿಯಲ್ಲಿ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಅಪ್ಪರ್ ಹುತ್ತಾದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಉಚಿತ ಕ್ಯಾನ್ಸರ್ ರೋಗ ತಪಾಸಣೆ ಹಾಗು ಅರಿವು ಕಾರ್ಯಕ್ರಮವನ್ನು ನಗರಸಭೆ ಪೌರಾಯುಕ್ತ ಮನೋಹರ್ ಉದ್ಘಾಟಿಸಿದರು.
   ಭದ್ರಾವತಿ, ಫೆ. ೨೧: ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ನಿಟ್ಟಿನಲ್ಲಿ ಆರೋಗ್ಯ ರಕ್ಷಣೆ ಕುರಿತು ಹೆಚ್ಚಿನ ತಿಳುವಳಿಕೆ ಹೊಂದುವುದು ಅಗತ್ಯವಾಗಿದೆ ಎಂದು ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಹೇಳಿದರು.
   ಅವರು ವೇದಿಕೆ ವತಿಯಿಂದ ಅಪ್ಪರ್ ಹುತ್ತಾದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ  ಉಚಿತ ಕ್ಯಾನ್ಸರ್ ರೋಗ ತಪಾಸಣೆ ಹಾಗು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
   ಕೆಮ್ಮು, ಶೀತ, ನೆಗಡಿ, ಚಳಿ ಜ್ವರ, ತಲೆ ನೋವು ಸೇರಿದಂತೆ ಇನ್ನಿತರ ಸಾಮಾನ್ಯ ಕಾಯಿಲೆಗಳ ಹೊರತಾಗಿ ಕ್ಯಾನ್ಸರ್‌ನಂತಹ ಕಾಯಿಲೆಗಳ ಕುರಿತು ಸಹ ಮಹಿಳೆಯರು ತಿಳುವಳಿಕೆ ಹೊಂದಬೇಕಾಗಿದೆ. ಈ ಹಿನ್ನಲೆಯಲ್ಲಿ ವೇದಿಕೆ ವತಿಯಿಂದ ಆರೋಗ್ಯ ಶಿಬಿರವನ್ನು ವಿಶೇಷವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕೆಂದರು.
   ನಗರಸಭೆ ಪೌರಾಯುಕ್ತ ಮನೋಹರ್ ಕಾರ್ಯಕ್ರಮ ಉದ್ಘಾಟಿಸಿದರು. ಶಿವಮೊಗ್ಗ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ತಜ್ಞ ವೈದ್ಯರು ತಪಾಸಣೆ ನಡೆಸುವ ಜೊತೆಗೆ ಮಾಹಿತಿ ನೀಡಿದರು.
   ವೇದಿಕೆ ಉಪಾಧ್ಯಕ್ಷೆ ಸುಮಾ ಶಂಕರ್, ಕಾರ್ಯದರ್ಶಿ ಲತಾ ಪ್ರಭಾಕರ್, ಸಹ ಕಾರ್ಯದರ್ಶಿ ನಳಿನಾ, ಖಜಾಂಚಿ ಶಶಿಕಲಾ ಹಾಗು ಸದಸ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಬೆಲೆ ಏರಿಕೆ ಖಂಡಿಸಿ ಫೆ.೨೨ರಂದು ಎಸ್‌ಡಿಪಿಐ ಪ್ರತಿಭಟನೆ

ಭದ್ರಾವತಿ, ಫೆ. ೨೧: ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಫೆ.೨೨ರಂದು ಬೆಳಿಗ್ಗೆ ೧೧.೩೦ಕ್ಕೆ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
    ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಶ್ರೀಸಾಮಾನ್ಯರು ಬದುಕು ಸಾಗಿಸುವುದು ದುಸ್ತರವಾಗಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿವೆ. ಈ ಹಿನ್ನಲೆಯಲ್ಲಿ ತಕ್ಷಣ ಬೆಲೆ ಏರಿಕೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಮುತ್ತಪ ರೈ ಸಾಮಾಜಿಕ ಕಾಳಜಿ ಹೊಂದಿದ್ದ ಅಪರೂಪದ ವ್ಯಕ್ತಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜಯ ಕರ್ನಾಟಕ ತಾಲೂಕು ಘಟಕದ ಪುನರ್ ರಚನೆ ಹಾಗು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
   ಭದ್ರಾವತಿ, ಫೆ. ೨೧: ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕರಾದ ದಿವಂಗತ ಮುತ್ತಪ್ಪ ರೈ ಕುರಿತು ಸಮಾಜದಲ್ಲಿ ತಪ್ಪು ಪರಿಕಲ್ಪನೆ ಮೂಡಿಸಲಾಗಿದ್ದು, ವಾಸ್ತವವಾಗಿ ಮುತ್ತಪ್ಪ ರೈ ಸಾಮಾಜಿಕ ಕಾಳಜಿ ಹೊಂದಿದ್ದರು ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಭಾನುವಾರ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜಯ ಕರ್ನಾಟಕ ತಾಲೂಕು ಘಟಕದ ಪುನರ್ ರಚನೆ ಹಾಗು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
  ಮುತ್ತಪ್ಪ ರೈ ನೆಲ, ಜಲ, ಭಾಷೆ ಅಭಿಮಾನದ ಜೊತೆಗೆ ಬಡವರು, ಶೋಷಿತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಸಮಾಜದಲ್ಲಿ ಹಣ ಹೊಂದಿರುವ ಸಾಕಷ್ಟು  ಜನರಿದ್ದಾರೆ. ಆದರೆ ಬಹುತೇಕ ಮಂದಿ ತಾವು ದುಡಿದ ಹಣ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುವುದಿಲ್ಲ. ಮುತ್ತಪ್ಪ ರೈ ಯಾರು ಸಹ ನಿರೀಕ್ಷಿಸಲಾರದಷ್ಟು ಸಾವಿರಾರು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅವರು ಸಮಾಜದಲ್ಲಿ ಅಕ್ರಮ, ಅನೀತಿ ಮಾರ್ಗಗಳಲ್ಲಿ ತೊಡಗಿರುವವರ ವಿರುದ್ಧ ಹೋರಾಟ ನಡೆಸಿದರು ಹೊರತು ಅವರಿಂದ ಸಮಾಜಕ್ಕೆ ಯಾವುದೇ ರೀತಿ ಕೆಡಕು ಉಂಡಾಗಿಲ್ಲ. ಈ ಹಿನ್ನಲೆಯಲ್ಲಿ ಅವರು ತೋರಿಸಿಕೊಟ್ಟಿರುವ ಮಾರ್ಗದಲ್ಲಿ ಪ್ರತಿಯೊಬ್ಬರು ಮುನ್ನಡೆಯುವ ಜೊತೆಗೆ ಸಂಘಟನೆಯನ್ನು ಮತ್ತಷ್ಟು ಸದೃಢಗೊಳಿಸಬೇಕೆಂದರು.
   ಮುಖಂಡರಾದ ಸಿ.ಎಂ ಖಾದರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಹಾಗು ಹಿರಿಯ ನಗರಸಭಾ ಸದಸ್ಯ ವಿ. ಕದಿರೇಶ್ ಮಾತನಾಡಿ,  ಜಯ ಕರ್ನಾಟಕ ಸಂಘಟನೆ ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಸಂಘಟನೆ ಮುಂದಾಳತ್ವವಹಿಸಿಕೊಂಡವರು ಸಂಘಟನೆಯನ್ನು ಒಳ್ಳೆಯ ಮಾರ್ಗದಲ್ಲಿ ಕೊಂಡೊಯ್ಯಲು ಶಕ್ತಿಮೀರಿ ಶ್ರಮಿಸಬೇಕು. ಯಾವುದೇ ಕಾರಣಕ್ಕೂ ಅಕ್ರಮ, ಅನೀತಿ ಮಾರ್ಗಗಳಿಗೆ ಅವಕಾಶ ಕಲ್ಪಿಸಿಕೊಡಬಾರದು ಎಂದರು.
   ಸಂಘಟನೆ ರಾಜ್ಯಾಧ್ಯಕ್ಷ ಡಾ. ಬಿ.ಎನ್ ಜಗದೀಶ್, ರಾಜ್ಯ ಕಾರ್ಯಾಧ್ಯಕ್ಷ ಎಚ್. ರಾಮಚಂದ್ರಯ್ಯ, ರಾಜ್ಯ ಉಪಾಧ್ಯಕ್ಷರಾದ ಮುನಿಸ್ವಾಮಿ, ಹರೀಶ್, ಜಿಲ್ಲಾಧ್ಯಕ್ಷ ಡಾ. ಜೆ.ಆರ್ ದೀಪಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಅರ್ ಶಿವಕುಮಾರ್ ಅದ್ವಾನಿ, ಕಾರ್ಯಾಧ್ಯಕ್ಷ ಅಬ್ದುಲ್ ರಹೀಮ್, ಮಹಿಳಾ ಘಟಕದ ಅಧ್ಯಕ್ಷೆ ನಾಜೀಮಾ, ತ್ಯಾಗರಾಜ್, ಡಿ.ಟಿ ಶಶಿಕುಮಾರ್, ಮುಕುಂದ, ಮುಖಂಡರಾದ ಬಾಲಕೃಷ್ಣ, ಚನ್ನಪ್ಪ, ಬಿ.ಎಸ್ ಬಸವೇಶ್ವರ್, ಶೋಭ ರವಿಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
  ನೂತನ ಪದಾಧಿಕಾರಿಗಳಾಗಿ ಆರ್. ಅರುಣ್, ಪಿ. ಶರವಣ, ಜೀವನ್, ಪಿ.ಬಿ ವಿನಯ್ ಸೇರಿದಂತೆ ಇನ್ನಿತರರು ಪದಗ್ರಹಣ ಸ್ವೀಕರಿಸಿದರು.  
    ಇದಕ್ಕೂ ಮೊದಲು ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದಿಂದ ಲಯನ್ಸ್ ಕ್ಲಬ್ ವರೆಗೂ ಬೈಕ್ ರ‍್ಯಾಲಿ ನಡೆಸಲಾಯಿತು. ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.