Sunday, May 25, 2025

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಚುನಾವಣೆ : ಪುನಃ ಹಾಲಿ ಪದಾಧಿಕಾರಿಗಳು ಆಯ್ಕೆ

ಭದ್ರಾವತಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಪುನಃ ಹಾಲಿ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. 
    ಭದ್ರಾವತಿ:  ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುತ್ತಿಗೆ ಕಾರ್ಮಿಕ ಸಂಘ(ವಿಐಎಸ್‌ಪಿ ಕಾಂಟ್ರಾಕ್ಟ್ ವರ್ಕರ್ಸ್ ಯೂನಿಯನ್)ದ ೩ ವರ್ಷಗಳ ಅವಧಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಪುನಃ ಬಹುತೇಕ ಹಾಲಿ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. 
    ಅಧ್ಯಕ್ಷರಾಗಿ ಸುರೇಶ್, ಉಪಾಧ್ಯಕ್ಷರಾಗಿ ಮಂಜುನಾಥ್ ಮತ್ತು ಎನ್. ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿಯಾಗಿ ರಾಕೇಶ್ ಹಾಗು ಸಹಕಾರ್ಯದರ್ಶಿಯಾಗಿ ಅಂತೋಣಿ ದಾಸ್, ಎಚ್.ಡಿ ತ್ಯಾಗರಾಜ್ ಮತ್ತು ಎನ್.ಬಿ ಮಂಜುನಾಥ್ ಹಾಗು ಖಜಾಂಚಿಯಾಗಿ ಆನಂದ ಆಯ್ಕೆಯಾಗಿದ್ದಾರೆ. 
      ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆವರೆಗೂ ನ್ಯೂಟೌನ್ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆ (ಜೆಟಿಎಸ್)ಯಲ್ಲಿ ಮತದಾನ ನಡೆಯಿತು. ನಂತರ ಮತದಾನ ಕಾರ್ಯ ನಡೆದು ಫಲಿತಾಂಶ ಪ್ರಕಟಗೊಂಡಿತು.  . ಸಹಪ್ರಾಧ್ಯಾಪಕ ಡಾ. ಎಸ್. ಸುಮಂತ್ ಕುಮಾರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. 

ವಿಜೃಂಭಣೆಯಿಂದ ಜರುಗಿದ ಶ್ರೀ ಕರುಮಾರಿಯಮ್ಮ ದೇವಿಯ ೪೫ನೇ ವರ್ಷದ ಕರಗ ಉತ್ಸವ

ಭದ್ರಾವತಿ ನ್ಯೂಟೌನ್, ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕರುಮಾರಿಯಮ್ಮ ದೇವಸ್ಥಾನದ ಕರಗ ಉತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು. 
    ಭದ್ರಾವತಿ : ನಗರದ ನ್ಯೂಟೌನ್, ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕರುಮಾರಿಯಮ್ಮ ದೇವಸ್ಥಾನದ ೪೫ನೇ ವರ್ಷದ ಕರಗ ಉತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು. 
    ಬೆಳಿಗ್ಗೆ ಅಮ್ಮನವರಿಗೆ ಎಳನೀರು ಮತ್ತು ಪಂಚಾಮೃತ ಅಭಿಷೇಕ, ತೀರ್ಥಪ್ರಸಾದ ವಿನಿಯೋಗ ನೆರವೇರಿತು. ಮಧ್ಯಾಹ್ನ ಬುಳ್ಳಾಪುರ ಚಾನಲ್ ಬಳಿ ಅಮ್ಮನವರಿಗೆ ಶಕ್ತಿ ಕರಗ ಸ್ಥಾಪನೆ ಮಾಡಿ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತರಲಾಯಿತು. ನಂತರ ಮಹಾಮಂಗಳಾರತಿಯೊಂದಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. 
    ಭಕ್ತರಿಂದ ಅಂಬಲಿ ಸಮರ್ಪಣೆಯೊಂದಿಗೆ ಅನ್ನದಾನ ನೆರವೇರಿತು. ಯುವ ಮುಖಂಡ ಬಿ.ಎಸ್ ಗಣೇಶ್, ನಗರಸಭೆ ಸದಸ್ಯ ಕಾಂತರಾಜ್, ಗುತ್ತಿಗೆದಾರ ಎಂ.ಜಿ ರಾಮಚಂದ್ರ ಸೇರಿದಂತೆ ಇನ್ನಿತರರು ಭಕ್ತರಿಗೆ ಅಂಬಲಿ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಸಂಜೆ ದೇವಿಗೆ ಅರಿಶಿನ ಅಭಿಷೇಕ ಮತ್ತು ಮಹಾ ಮಂಗಳಾರತಿಯೊಂದಿಗೆ ಕರಗ ಭದ್ರಾ ನದಿಯಲ್ಲಿ ವಿಸರ್ಜಿಸಲಾಯಿತು. 
ಯುವ ಮುಖಂಡ ಬಿ.ಎಸ್ ಗಣೇಶ್, ನಗರಸಭೆ ಸದಸ್ಯ ಕಾಂತರಾಜ್, ಗುತ್ತಿಗೆದಾರ ಎಂ.ಜಿ ರಾಮಚಂದ್ರ ಸೇರಿದಂತೆ ಇನ್ನಿತರರು ಭಕ್ತರಿಗೆ ಅಂಬಲಿ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದರು. 
    ಪ್ರತಿವರ್ಷದಂತೆ ಈ ಬಾರಿ ಸಹ ವಿಜಯ್ ಕುಮಾರ್-ಮಮತಾಶ್ರೀ ದಂಪತಿ ಕರಗ ಅಲಂಕಾರದ ಸೇವಾಕರ್ತರಾಗಿ ಅಮ್ಮನವರಿಗೆ ಶಕ್ತಿ ಕರಗ ಸ್ಥಾಪನೆ ಮಾಡಿ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತಂದು ಭಕ್ತಿ ಸಮರ್ಪಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಕಾಶಿಪತಿ ಅವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ನೆರವೇರಿದವು.  
    ದೇವಸ್ಥಾನ ಸಮಿತಿ ಪ್ರಮುಖರಾದ ಅಧ್ಯಕ್ಷ ಬಿ. ಕುಪ್ಪಸ್ವಾಮಿ, ಉಪಾಧ್ಯಕ್ಷ ಸುಬ್ರಮಣಿ, ಕಾರ್ಯದರ್ಶಿ ಕಾಳಿಯಪ್ಪ, ಖಜಾಂಚಿ ಡಿ. ಶಬರಿವಾಸನ್, ನಿರ್ದೇಶಕರಾದ ದೊರೆಸ್ವಾಮಿ, ಧರ್ಮಪ್ಪ, ಮುರುಗನ್, ಕುಪ್ಪರಾಜ್, ಪಳನಿಸ್ವಾಮಿ, ಕೆ. ರವಿ, ಶ್ರೀನಿವಾಸ್, ಜೆ. ಬಾಲು, ವಿಕ್ರಂ, ರಮೇಶ್, ಧನಶೇಖರ್ ಮತ್ತು ಎ. ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಜನ್ನಾಪುರ, ನ್ಯೂಟೌನ್, ವಿದ್ಯಾಮಂದಿರ, ಗಣೇಶ್ ಕಾಲೋನಿ, ಹುಡ್ಕೋಕಾಲೋನಿ, ಆಂಜನೇಯ ಅಗ್ರಹಾರ, ಸುರಗಿತೋಪು, ಬಾಲಭಾರತಿ, ಜೆಪಿಎಸ್ ಕಾಲೋನಿ ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಆಗಮಿಸಿದ್ದರು. 

ಸದಾ ಉದ್ವಿಗ್ನತೆಯಲ್ಲಿರುವ ಪೊಲೀಸರಿಗೆ ಧ್ಯಾನ ಸಹಕಾರಿ : ಕೃಷ್ಣಕುಮಾರ್ ಮಾನೆ

ಭದ್ರಾವತಿ ಹೊಸಮನೆ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಿತ್ರ ಲೈಟ್ ಫೌಂಡೇಷನ್ ಜೊತೆ ಐಕ್ಯತೆಯಲ್ಲಿ `ಬೃಹತ್ ಸಸ್ಯಹಾರ ಜನಜಾಗೃತಿ ಜಾಥಾ' ಕಾರ್ಯಕ್ರಮ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಕೃಷ್ಣಕುಮಾರ್ ಮಾನೆ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ : ಪೊಲೀಸ್ ತರಬೇತಿಯಲ್ಲಿ ಧ್ಯಾನ ಸಹ  ಒಂದು ಕಲಿಕೆಯ ವಿಭಾಗವಾಗಿರುತ್ತದೆ ಎಂದು ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಕೃಷ್ಣಕುಮಾರ್ ಮಾನೆ ಹೇಳಿದರು.
  ಅವರು  ಭಾನುವಾರ ಹೊಸಮನೆ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಿತ್ರ ಲೈಟ್ ಫೌಂಡೇಷನ್ ಜೊತೆ ಐಕ್ಯತೆಯಲ್ಲಿ `ಬೃಹತ್ ಸಸ್ಯಹಾರ ಜನಜಾಗೃತಿ ಜಾಥಾ' ಉದ್ಘಾಟಿಸಿ ಮಾತನಾಡಿದರು. 
    ಪ್ರಸ್ತುತ ಧ್ಯಾನದ ಮಹತ್ವ ಪೊಲೀಸ್ ಇಲಾಖೆಗೆ ಸದಾ ಅತ್ಯವಶ್ಯಕವಾಗಿದ್ದು, ಸದಾ ಉದ್ವಿಗ್ನತೆಯಲ್ಲಿರುವ ಪೊಲೀಸರಿಗೆ ಧ್ಯಾನ ಸಹಕಾರಿಯಾಗಿದೆ. ದೇಹವನ್ನು ಮನಸ್ಸು ಒಂದುಗೂಡಿಸುವುದು ಧ್ಯಾನ. ಹಣವೆಂಬುದು ಸಂಬಂಧಕ್ಕೆ ಬೆಲೆ ಕಡಿಮೆ ಮಾಡುತ್ತದೆ. ಇದನ್ನು ಕಡಿವಾಣ ಹಾಕಲು ಧ್ಯಾನ ಅವಶ್ಯಕ ಎಂದರು.
    ಪ್ರಸ್ತುತ ಮೊಬೈಲ್ ಬಳಕೆಯಿಂದ ಸೈಬರ್ ಅಪರಾಧಗಳು ಹೆಚ್ಚಳವಾಗುತ್ತಿವೆ. ಇದರಿಂದಾಗಿ ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಮೊಬೈಲ್‌ಗಳಲ್ಲಿ ಕಾಲಹರಣ ಮಾಡುವವರು ಧ್ಯಾನಕ್ಕೆ ಹೆಚ್ಚಿನ ಆದ್ಯತೆ ನೀಡಿ ಸಮಯ ಮೀಸಲಿಡಬೇಕು. ಮಾಂಸಹಾರ ಸೇವನೆಯಿಂದ ದೂರವಿದ್ದಲ್ಲಿ ಮಾನಸಿಕವಾಗಿ, ದೈಹಿಕವಾಗಿ ಉತ್ತಮ ಆರೋಗ್ಯದೊಂದಿಗೆ ಬದಕಲು ಸಾಧ್ಯ ಎಂದರು. 
    ವಿಶ್ವ ಮಿತ್ರ ಲೈಟ್ ಫೌಂಡೇಷನ್ ದಾವಣಗೆರೆ ಹಿರಿಯ ಮಾರ್ಗದರ್ಶಕ ಮಾರುತಿ ರಾವ್ ಮಾತನಾಡಿ, ಧ್ಯಾನವು ಋಷಿಗಳಿಂದ ಪ್ರಾರಂಭವಾಗಿದೆ. ಪ್ರಸ್ತುತ ಜಟಿಲತೆಯಿಂದ ಬಳಲುವ ಮನಸ್ಸಿಗೆ ಭೇದಭಾವವಿಲ್ಲದ ಧ್ಯಾನವೊಂದೇ ಮಾರ್ಗವಾಗಿದ್ದು, ಋಷಿ ಮುನಿಗಳು ಧ್ಯಾನದ ಮೂಲಕ ತಪಸ್ಸನ್ನು ಮಾಡಿ ಪ್ರಪಂಚಕ್ಕೆ ಒಳಿತನ್ನು ತಂದು ಕೊಟ್ಟವರು ಅದನ್ನು ಉಳಿಸಿಕೊಳ್ಳಲು ನಾವಿಂದು ಧ್ಯಾನ ಮಾಡುವುದು ಆತ್ಯವಶ್ಯಕ ಎಂದರು. 
    ಧ್ಯಾನಕ್ಕೆ ವಯಸ್ಸಿನ ಅಂತರವಿಲ್ಲ, ಯಾವುದೇ ಸ್ಥಳದಲ್ಲಾದರೂ ಧ್ಯಾನ ಮಾಡಬಹುದು. ಧ್ಯಾನ ಯಾವುದೇ ಧರ್ಮ ಅಥವಾ ಆಚರಣೆ ಅಲ್ಲ. ಶ್ವಾಸದ ಮೇಲೆ ಸಂಪೂರ್ಣ ಗಮನ ನೀಡುವ ಮೂಲಕ ನಾವು ಆತ್ಮಜ್ಞಾನ ಹೊಂದಬಹುದು. ಇದು ಈ ಜನ್ಮದ ಪರಮ ಉದ್ದೇಶ ಎಂದರು.  
    ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಮಾತನಾಡಿ, ಧ್ಯಾನ ಮರೆತರೆ ನಮ್ಮನ್ನು ನಾವು ಕಳೆದುಕೊಂಡಂತೆ. ಇದರಿಂದಾಗಿ ಪರಿಸರ ಮತ್ತು ಆರೋಗ್ಯವನ್ನು ಕಳೆದುಕೊಳ್ಳುತ್ತೇವೆ. ಮೈ ಮನಸ್ಸುಗಳಿಗೆ ಧ್ಯಾನವೇ ಉತ್ತಮವಾದ ಆರೋಗ್ಯಕರವಾದ ಔಷಧಿ. ಧ್ಯಾನಕ್ಕೆ ಬರುವಾಗ ತಮ್ಮ ಅಕ್ಕಪಕ್ಕದವರನ್ನು, ಸ್ನೇಹಿತರನ್ನು, ಬಂಧುಗಳನ್ನು ಕರೆತಂದು ಧ್ಯಾನದಲ್ಲಿ ಪಾಲ್ಗೊಳ್ಳಿ ಎಂದರು. 
      ಆರ್ಯವೈಶ್ಯ ಸಮಾಜದ ಅಧ್ಯಕ್ಷ ನಾಗೇಶ್ ಉಪಸ್ಥಿತರಿದ್ದರು. ವಿಸ್ಮಯ ಪ್ರಾರ್ಥಿಸಿ, ಸೌಮ್ಯ ಸ್ವಾಗತಿಸಿದರು. ಶುಭ ಗಿರಿರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಮೇಘ ಗೌಡ ಮಾತನಾಡಿ, ಧ್ಯಾನ ಕುರಿತು ಅಂತರ್ಜಾಲದ ಮೂಲಕ ಮಾಹಿತಿ ನೀಡಲಾಗುತ್ತಿದ್ದು,  ಸೇರಲು ಇಚ್ಚಿಸುವರು ಮೊಬೈಲ್ ೮೯೭೧೩೩೫೯೫೫ ಸಂಖ್ಯೆಗೆ ಸಂಪರ್ಕಿಸುವಂತೆ ಮನವಿ ಮಾಡಿದರು. 
    ಜಾಥಾ ಶಿವಾಜಿ ಸರ್ಕಲ್ ಮಾರ್ಗವಾಗಿ, ಮಾರಿಯಮ್ಮ ದೇವಸ್ಥಾನ ಮತ್ತು ಸಂತೆ ಮೈದಾನ ಮೂಲಕ ರಂಗಪ್ಪ ವೃತ್ತದವರೆಗೂ ನಡೆಯಿತು.