Sunday, October 3, 2021

ವಿಐಎಸ್‌ಎಲ್ ಸೇರಿದಂತೆ ವಿವಿಧೆಡೆ ಮಹಾತ್ಮಗಾಂಧಿ ಜಯಂತಿ

ಕೇಂದ್ರ ಭಾರತೀಯ ಉಕ್ಕು ಪ್ರಾಧಿಕಾರದ  ಅಂಗ ಸಂಸ್ಥೆಯಾಗಿರುವ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ೧೫೨ನೇ ಮಹಾತ್ಮಗಾಂಧಿ ಜಯಂತಿ ಆಚರಿಸಲಾಯಿತು.
    ಭದ್ರಾವತಿ, ಅ. ೩: ಕೇಂದ್ರ ಭಾರತೀಯ ಉಕ್ಕು ಪ್ರಾಧಿಕಾರದ  ಅಂಗ ಸಂಸ್ಥೆಯಾಗಿರುವ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸೇರಿದಂತೆ ವಿವಿಧೆಡೆ ೧೫೨ನೇ ಮಹಾತ್ಮಗಾಂಧಿ ಜಯಂತಿ ಆಚರಿಸಲಾಯಿತು.
    ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ, ಸಿಬ್ಬಂದಿ ಮತ್ತು ಆಡಳಿತ ವಿಭಾಗದ ಪ್ರಭಾರ ಮಹಾ ಪ್ರಬಂಧಕ ಪಿ.ಪಿ ಚಕ್ರವರ್ತಿ, ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್ ಮತ್ತು ಅಧಿಕಾರಿಗಳ ಸಂಘದ ಅಧ್ಯಕ್ಷ  ಎ.ಆರ್ ವೀರಣ್ಣ ಮಹಾತ್ಮಗಾಂಧಿ  ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಡಾ. ಎಸ್. ಕವಿತ ಭಗದ್ಗೀತೆ, ನೂರಾ ಮೆನೆಜಸ್ ಬೈಬಲ್  ಮತ್ತು ಹಫೀಜ್ ಉರ್ ರಹಮಾನ್ ಕುರಾನ್ ಪವಿತ್ರ ಗ್ರಂಥಗಳ ಸಂದೇಶಗಳನ್ನು ಪಠಿಸಿದರು.
    ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದಿರುವ ರಿತ್ವಿಕ್ ಸುರೇಶ್, ಜಿ. ಪ್ರಿತಿಕಾ ಮತ್ತು ಧನುಷ್ ಶೆಟ್ಟಿ ಹಾಗು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದಿರುವ ಟಿ. ಸಂಗಮಿತ್ರ, ಕೆ. ಶ್ರೇಯಾ ಸುಜಿತ್, ಜಿ. ಹರಿಸಂಜಯ್ ಮತ್ತು ಪನ್ನಗ್ ಕುಮಾರ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
    ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ  'ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು' ವಿಷಯದ ಬಗ್ಗೆ ಹಮ್ಮಿಕೊಳ್ಳಲಾಗಿದ್ದ  ವೇಷಭೂಷಣ ಸ್ಪರ್ಧೆ ಮತ್ತು ಏಕಪಾತ್ರಾಭಿಯದಲ್ಲಿ ವಿಜೇತರಾದ ಕೆ. ಮೋಹಿತ್(ಪ್ರಥಮ), ಕೆಸರ್ ಡಿ. ಭೋನ್ಸಲೆ(ದ್ವಿತೀಯ) ಮತ್ತು ಡಿ. ನಾಗಲಕ್ಷ್ಮಿ(ತೃತೀಯ) ಹಾಗು ಸಿ. ನಂದಿನಿ, ಬಿ.ಯು ಪೂರ್ವಿಕ, ವಿ.ಎಸ್ ಗೌರಿ, ವೈ. ಭುವನ್, ಬಿಎನ್ ಧೃವನಶ್ರೀ ಮತ್ತು ಬಿ.ಎಸ್ ಜೀವಿತಾ ಅವರಿಗೆ ಬಹುಮಾನಗಳನ್ನು ನೀಡಲಾಯಿತು. ನಿಶ್ಚಿತ್ ಮೌರ್ಯ ಕಾರ್ಯಕ್ರಮ ನಿರೂಪಿಸಿದರು.


ನಗರ ಹಾಗು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ, ಯುವ ಘಟಕ ಹಾಗು ಮಹಿಳಾ ಘಟಕ ವತಿಯಿಂದ ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮಹಾತ್ಮಗಾಂಧಿ ಜಯಂತಿ ಆಚರಿಸಲಾಯಿತು.
       ಬ್ಲಾಕ್ ಕಾಂಗ್ರೆಸ್‌ವತಿಯಿಂದ ಗಾಂಧಿ ಜಯಂತಿ:
    ನಗರ ಹಾಗು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ, ಯುವ ಘಟಕ ಹಾಗು ಮಹಿಳಾ ಘಟಕ ವತಿಯಿಂದ ನಗರದ ತರೀಕೆರೆ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮಹಾತ್ಮಗಾಂಧಿ ಜಯಂತಿ ಆಚರಿಸಲಾಯಿತು.
ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಯುವ ಘಟಕದ ನಗರ ಅಧ್ಯಕ್ಷ ಜಿ. ವಿನೋದ್‌ಕುಮಾರ್, ಗ್ರಾಮಾಂತರ ಅಧ್ಯಕ್ಷ ಅಫ್ತಾಬ್ ಅಹಮದ್, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ ರಾಮಚಂದ್ರ ಹಾಗು ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.


ಭದ್ರಾವತಿ ತಾಲೂಕಿನ ಶಂಕರಘಟ್ಟದಲ್ಲಿ ಜಯಕರ್ನಾಟಕ ಸಂಘಟನೆ ವತಿಯಿಂದ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗು ಲಾಲ್ ಬಹದ್ದೂರು ಶಾಸ್ತ್ರಿ ಜಯಂತಿ ಆಚರಿಸಲಾಯಿತು.
        ಜಯಕರ್ನಾಟಕ ಸಂಘಟನೆ ವತಿಯಿಂದ ಸ್ವಚ್ಛತಾ ಕಾರ್ಯ:
    ತಾಲೂಕಿನ ಶಂಕರಘಟ್ಟದಲ್ಲಿ ಜಯಕರ್ನಾಟಕ ಸಂಘಟನೆ ವತಿಯಿಂದ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗು ಲಾಲ್ ಬಹದ್ದೂರು ಶಾಸ್ತ್ರಿ ಜಯಂತಿ ಆಚರಿಸಲಾಯಿತು.
    ಬಿಸಿಎಂ ವಿದ್ಯಾರ್ಥಿ ನಿಲಯದ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಸಂಘಟನೆ ಜಿಲ್ಲಾಧ್ಯಕ್ಷ ಡಿ.ಟಿ ಶಶಿಕುಮಾರ್ ನೇತೃತ್ವ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ತ್ಯಾಗರಾಜ್, ನಂದೀಶ್‌ಕುಮಾರ್ ಸೇರಿದಂತೆ ಗ್ರಾಮದ ಮುಖಂಡರು, ಕಾರ್ಯಕರ್ತರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.


ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಆಚರಿಸಲಾಯಿತು.

    ಅಂತರಗಂಗೆ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛತಾ ಕಾರ್ಯ:
ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಆಚರಿಸಲಾಯಿತು.
ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ನಡೆಸುವ ಮೂಲಕ ಜಾಗೃತಿ ಮೂಡಿಸಲಾಯಿತು. ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ವರ್ಗ, ಆಶಾ ಹಾಗು ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಭದ್ರಾವತಿ ನಗರಸಭೆ ವ್ಯಾಪ್ತಿಯ ಆನೆಕೊಪ್ಪ ಎಂಪಿಎಂ ಬಡಾವಣೆಯಲ್ಲಿರುವ ಸಂಜೀವಿನಿ ವೃದ್ಧಾಶ್ರಮದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಮಹಾತ್ಮಗಾಂಧಿ ಜಯಂತಿ ವಿಶೇಷವಾಗಿ ಆಚರಿಸಲಾಯಿತು.
     ಲಯನ್ಸ್ ಕ್ಲಬ್ ವತಿಯಿಂದ ವೃದ್ಧಾಶ್ರಮದಲ್ಲಿ ಗಾಂಧಿ ಜಯಂತಿ:
    ನಗರಸಭೆ ವ್ಯಾಪ್ತಿಯ ಆನೆಕೊಪ್ಪ ಎಂಪಿಎಂ ಬಡಾವಣೆಯಲ್ಲಿರುವ ಸಂಜೀವಿನಿ ವೃದ್ಧಾಶ್ರಮದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಮಹಾತ್ಮಗಾಂಧಿ ಜಯಂತಿ ವಿಶೇಷವಾಗಿ ಆಚರಿಸಲಾಯಿತು.
    ಹಿರಿಯ ನಾಗರಿಕರಿಗೆ ಚೈತನ್ಯ ತುಂಬುವ ಜೊತೆಗೆ ಕೊರೋನಾ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಎಸ್ ಮಹೇಶ್‌ಕುಮಾರ್, ಬಾರಂದೂರು ಮಂಜುನಾಥ್, ವೃದ್ಧಾಶ್ರಮದ ಮುಖ್ಯಸ್ಥೆ ಸವಿತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಹಾತ್ಮರ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗಿರದಿರಲಿ : ಡಿ. ಮಂಜುನಾಥ್

ಭದ್ರಾವತಿ ಹಳೇನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ಕರ್ನಾಟಕ ಜಾನಪದ ಪರಿಷತ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಜನ್ಮದಿನಾಚರಣೆ, ಗುರುಗಳಿಗೆ ಅಭಿನಂದನೆ ಮತ್ತು ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ೧೫ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯದ ಎಮೆರಿಟಸ್ ಪ್ರಾಧ್ಯಾಪಕಿ ಡಾ. ಎಸ್.ಎಸ್ ವಿಜಯಾದೇವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಅ. ೩: ಮಹಾತ್ಮರ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗಿರದೆ ಅವರ ಆದರ್ಶತನಗಳು ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿರಬೇಕೆಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಹೇಳಿದರು.
ಅವರು ಹಳೇನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ಕರ್ನಾಟಕ ಜಾನಪದ ಪರಿಷತ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಜನ್ಮದಿನಾಚರಣೆ, ಗುರುಗಳಿಗೆ ಅಭಿನಂದನೆ ಮತ್ತು ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಹಿಂದಿನಿಂದಲೂ ನಾವುಗಳು ಮಹಾತ್ಮರ ಜಯಂತಿಗಳನ್ನು ಆಚರಣೆ ಮಾಡುತ್ತಿದ್ದೇವೆ. ಅವರ ಕುರಿತು ಮಾತನಾಡುತ್ತೇವೆ. ಆದರೆ ಅವರ ಆದರ್ಶತನಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಗಮನ ಹರಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಸದಸ್ಯೆ ಅನುಪಮ ಚನ್ನೇಶ್, ಜಾನಪದ ಸಂಸ್ಕೃತಿಗಳು ನಶಿಸಿ ಹೋಗುತ್ತಿದ್ದು, ಇವುಗಳನ್ನು ಸಂರಕ್ಷಿಸಿ ಮುಂದಿನ ತಲೆಮಾರುಗಳಿಗೆ ಉಳಿಸಿ ಬೆಳೆಸುವ ಕೆಲಸವಾಗಬೇಕು. ಮಹಿಳೆಯರು ಕೇವಲ ಕುಟುಂಬಕ್ಕೆ ಮಾತ್ರ ಸೀಮಿತವಾಗಿರದೆ ಸಮಾಜದ ಮುಖ್ಯವಾಹಿನಿಯಲ್ಲೂ ಗುರುತಿಸಿಕೊಂಡು ತಮ್ಮ ಸೇವೆಯನ್ನು ಸಲ್ಲಿಸುವ ನಿಟ್ಟಿನಲ್ಲಿ ಮಹಿಳಾ ಸೇವಾ ಸಮಾಜ ವೇದಿಕೆಯಾಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
    ೧೫ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯದ ಎಮೆರಿಟಸ್ ಪ್ರಾಧ್ಯಾಪಕಿ ಡಾ. ಎಸ್.ಎಸ್ ವಿಜಯಾದೇವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್‌ರಾವ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ಪರಿಷತ್ ತಾಲೂಕು ಶಾಖೆ ಅಧ್ಯಕ್ಷ ಟಿ.ಜಿ ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಹಿರಿಯೂರು ಕೆ.ಟಿ ಪ್ರಸನ್ನ, ಸಮಾಜದ ಕಾರ್ಯದರ್ಶಿ ಶೋಭಾ ಗಂಗರಾಜ್, ಖಜಾಂಚಿ ಜಯಂತಿ ನಾಗರಾಜ್ ಶೇಟ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಶೋಭಾ ಮತ್ತು ತಂಡದವರು ಪ್ರಾರ್ಥಿಸಿದರು. ಶಕುಂತಲ, ಇಂದಿರಾ ಆಥಿತಿಗಳನ್ನು ಪರಿಚಯ ಮಾಡಿದರು. ಶಾರದಾ ಶ್ರೀನಿವಾಸ್ ನಿರೂಪಿಸಿದರು. ಕಮಲಾ ಕುಮಾರಿ ವಂದಿಸಿದರು.
    ಸಮಾಜದ ಸದಸ್ಯೆಯರು ಉತ್ತರ ಕನ್ನಡ ಜಾನಪದ ಸೊಗಡಿನ ತವರು ಮನೆ ಜಾನಪದ ರೂಪಕ ಪ್ರಸ್ತುತ ಪಡಿಸುವ ಮೂಲಕ ವಿಶೇಷವಾಗಿ ಗಮನ ಸೆಳೆಯುವ ಜೊತೆಗೆ ಕಾರ್ಯಕ್ರಮಕ್ಕೆ ಮೆರಗು ತಂದುಕೊಟ್ಟರು.