Sunday, May 15, 2022

೩ನೇ ರಾಷ್ಟ್ರಮಟ್ಟದ ಯೋಗಾಸನ ಚಾಂಪಿಯನ್‌ಶಿಪ್ ಪಂದ್ಯಾವಳಿ :

ಯೋಗಪಟು ಡಾ. ನಿಂಗೇಶ್‌ಗೆ ಪ್ರಥಮ ಬಹುಮಾನ

ವರ್ಷಿಣಿ ಯೋಗ ಎಜ್ಯುಕೇಷನ್ ಮತ್ತು ಕಲ್ಚರಲ್ ಸ್ಪೋರ್ಟ್ಸ್ ಟ್ರಸ್ಟ್ ವತಿಯಿಂದ ಶಿವಮೊಗ್ಗದಲ್ಲಿ ಆಯೋಜಿಸಲಾಗಿದ್ದ ೩ನೇ ರಾಷ್ಟ್ರಮಟ್ಟದ ಯೋಗಾಸನ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭದ್ರಾವತಿಯ ಅಂತರಾಷ್ಟ್ರೀಯ ಯೋಗಪಟು ಡಾ. ನಿಂಗೇಶ್‌ರವರು ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.
    ಭದ್ರಾವತಿ, ಮೇ. ೧೫: ವರ್ಷಿಣಿ ಯೋಗ ಎಜ್ಯುಕೇಷನ್ ಮತ್ತು ಕಲ್ಚರಲ್ ಸ್ಪೋರ್ಟ್ಸ್ ಟ್ರಸ್ಟ್ ವತಿಯಿಂದ ಶಿವಮೊಗ್ಗದಲ್ಲಿ ಆಯೋಜಿಸಲಾಗಿದ್ದ ೩ನೇ ರಾಷ್ಟ್ರಮಟ್ಟದ ಯೋಗಾಸನ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ನಗರದ ಅಂತರಾಷ್ಟ್ರೀಯ ಯೋಗಪಟು ಡಾ. ನಿಂಗೇಶ್‌ರವರು ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.
    ೫೧ ರಿಂದ ೬೦ ವರ್ಷದೊಳಗಿನ ವಯೋಮಾನ ವಿಭಾಗದಲ್ಲಿ ಉತ್ತಮ ಸಾಧನೆ ತೋರಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಬಹುಮಾನ ವಿತರಣೆ ಸಂದರ್ಭದಲ್ಲಿ ವರ್ಷಿಣಿ ಯೋಗ ಎಜ್ಯುಕೇಷನ್ ಮತ್ತು ಕಲ್ಚರಲ್ ಸ್ಪೋರ್ಟ್ಸ್ ಟ್ರಸ್ಟ್ ಅಧ್ಯಕ್ಷ ಪಿ. ಪೆಂಚಾಲಯ್ಯ, ಕಾರ್ಯದರ್ಶಿ ಎನ್.ಪಿ ವೆಂಕಟೇಶ್, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಂ.ಟಿ ಮಂಜುನಾಥ ಸ್ವಾಮಿ, ದೀಪಿಕಾ ವೆಂಕಟೇಶ್, ದೊಡ್ಡಮನಿ, ಬಾಲಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಡಾ. ನಿಂಗೇಶ್‌ರವರು ಹಲವಾರು ರಾಷ್ಟ್ರೀಯ, ಅಂತರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರ ಸಾಧನೆಯನ್ನು ನಗರದ ಗಣ್ಯರು, ಕ್ರೀಡಾಭಿಮಾನಿಗಳು ಅಭಿನಂದಿಸಿದ್ದಾರೆ.

ಮೇ.೧೬ರಂದು ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ, ಸನ್ಮಾನ ಸಮಾರಂಭ

    ಭದ್ರಾವತಿ, ಮೇ. ೧೬:  ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ಹಾಗು ಪ್ರತಿಕ್ಷಣ ಅಂತರ್ಜಾಲ ಸುದ್ದಿ ತಾಣ ಉದ್ಘಾಟನೆ ಹಾಗು ಬುದ್ಧ ಪೂರ್ಣಿಮಾ ಕಾರ್ಯಕ್ರಮ ಮೇ.೧೬ರಂದು ಸಂಜೆ ೬.೩೦ಕ್ಕೆ ನಡೆಯಲಿದೆ.
    ನಗರದ ನ್ಯೂಟೌನ್ ಪೀಪಲ್ ಲಿಬರೇಷನ್ ಸಂಘ ಮತ್ತು ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ವತಿಯಿಂದ ದಿವಂಗತ ಲಕ್ಷ್ಮಮ್ಮನವರ ೨ನೇ ಪುಣ್ಯ ಸ್ಮರಣೆ ಅಂಗವಾಗಿ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ಹಮ್ಮಿಕೊಳ್ಳಲಾಗಿರುವ ಸಮಾರಂಭವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ಬಿಪಿಎಲ್ ಸಂಘದ ಅಧ್ಯಕ್ಷ ಬಿ. ಜಗದೀಶ್ ಅಧ್ಯಕ್ಷತೆ ವಹಿಸಲಿದ್ದಾರೆ.
    ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ತಹಸೀಲ್ದಾರ್ ಆರ್. ಪ್ರದೀಪ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಪತ್ರಿಕಾ ಭವನ ಕಟ್ಟಡ ಸಮಿತಿ ಅಧ್ಯಕ್ಷ ಕಣ್ಣಪ್ಪ, ಜಿ. ಆನಂದಕುಮಾರ್, ಸರ್ವಮಂಗಳ, ಹೇಮಾವತಿ ವಿಶ್ವನಾಥ್, ಸತ್ಯ, ಚಿನ್ನಯ್ಯ, ಆರ್. ಕರುಣಾಮೂರ್ತಿ, ಎಲ್. ಪ್ರವೀಣ್‌ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.  
    ಶಿಕ್ಷಕಿ, ಸಮಾಜ ಸೇವಕಿ ಅನಿತಾ ಕುಮಾರಿ, ಸಿದ್ದಾರ್ಥ ಅಂಧರ ಕೇಂದ್ರದ ಆಡಳಿತಾಧಿಕಾರಿ ಶಾರದ ಶಿವಬಸಪ್ಪ ಅವರಿಗೆ ಸನ್ಮಾನ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಟ್ರಸ್ಟ್‌ನ ಅನಂತಕುಮಾರ್ ಕೋರಿದ್ದಾರೆ.