ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ಎಸ್. ಮಣಿಶೇಖರ್ ಆರೋಪ
ಯಾವುದೇ ರೀತಿ ಪಕ್ಷಕ್ಕೆ ದ್ರೋಹ ಬಗೆಯದ ನನಗೆ ತಿಳುವಳಿಕೆ ಪತ್ರ ನೀಡದೆ ಜೆಡಿಎಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಭದ್ರಾವತಿ ಕೂಡ್ಲಿಗೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮಾಜಿ ಸದಸ್ಯ ಎಸ್. ಮಣಿಶೇಖರ್ ಆರೋಪಿಸಿದರು.
ಭದ್ರಾವತಿ, ಜ. ೨೮: ಯಾವುದೇ ರೀತಿ ಪಕ್ಷಕ್ಕೆ ದ್ರೋಹ ಬಗೆಯದ ನನಗೆ ತಿಳುವಳಿಕೆ ಪತ್ರ ನೀಡದೆ ಜೆಡಿಎಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಕೂಡ್ಲಿಗೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮಾಜಿ ಸದಸ್ಯ ಎಸ್. ಮಣಿಶೇಖರ್ ಆರೋಪಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಜೆಡಿಎಸ್ ಪಕ್ಷಕ್ಕೆ ಯಾವುದೇ ರೀತಿ ದ್ರೋಹ ಬಗೆದಿಲ್ಲ. ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲೂ ಸಹ ಪಾಲ್ಗೊಂಡಿಲ್ಲ. ಪಕ್ಷದ ನಾಯಕರು ಹಾಗು ಪಕ್ಷಕ್ಕೆ ಮುಜುಗರ ಉಂಟು ಮಾಡುವ ರೀತಿಯಲ್ಲಿ ನಡೆದುಕೊಂಡಿಲ್ಲ. ಆದರೂ ಸಹ ನನ್ನನ್ನು ವಿನಾಕಾರಣ ಯಾವುದೇ ತಿಳುವಳಿಕೆ ಪತ್ರ ನೀಡದೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ ಎಂದರು.
ನನ್ನ ಮುಂದಿನ ರಾಜಕೀಯ ಬೆಳವಣಿಗೆ ಕುರಿತು ಅಭಿಮಾನಿಗಳು ಹಾಗು ಕಾರ್ಯಕರ್ತರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಬೇರೆ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಬಗ್ಗೆ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದರು.
ಗೌಂಡರ್ ಸಂಘದ ಅಧ್ಯಕ್ಷ, ನಗರಸಭಾ ಸದಸ್ಯ ಮಣಿ ಎಎನ್‌ಎಸ್ ಮಾತನಾಡಿ, ಯಾವುದೇ ಪಕ್ಷವಿರಲಿ ನಮ್ಮ ಸಮುದಾಯದ ಮುಖಂಡರಿಗೆ ಅನ್ಯಾಯ ಮಾಡಿರುವುದು ಸರಿಯಲ್ಲ. ಅನ್ಯಾಯದ ವಿರುದ್ಧ ಸಂಘ ಧ್ವನಿ ಎತ್ತಲಿದೆ. ಈ ನಿಟ್ಟಿನಲ್ಲಿ ಮಣಿಶೇಖರ್ ಅವರಿಗೆ ಸಂಘ ಸಂಪೂರ್ಣ ಬೆಂಬಲ ನೀಡಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಣಿಶೇಖರ್ ಅಭಿಮಾನಿಗಳು, ಬೆಂಬಲಿಗರು ಉಪಸ್ಥಿತರಿದ್ದರು.