Sunday, June 19, 2022

ಕಾಯ್ದೆ ಜಾರಿ ಬಳಿಕವೂ ಹೆಚ್ಚುತ್ತಿದೆ ಗೋ ಹತ್ಯೆ

ವಿವಿಧೆಡೆ ಕಾರ್ಯಾಚರಣೆ ಗೋ ಮಾಂಸ ವಶ, ಗೋವುಗಳ ರಕ್ಷಣೆ


ಭದ್ರಾವತಿ ಹಳೇನಗರ ಪೊಲೀಸರು ನಗರಸಭೆ ವ್ಯಾಪ್ತಿಯ ಅನ್ವರ್ ಕಾಲೋನಿಯಲ್ಲಿ ಗೋ ಮಾಂಸ ಮರಾಟ ಮಾಡುತ್ತಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿ ಹತ್ಯೆ ಮಾಡುವ ಉದ್ದೇಶಕ್ಕಾಗಿ ಅಕ್ರಮವಾಗಿ ಕೂಡಿ ಹಾಕಲಾಗಿದ್ದ ಗೋವುಗಳನ್ನು ರಕ್ಷಣೆ ಮಾಡಿರುವುದು.
    ಭದ್ರಾವತಿ, ಜೂ. ೧೯: ರಾಜ್ಯದಲ್ಲಿ ಗೋ ಹತ್ಯೆ ನಿಷೇಧಿಸಲಾಗಿದ್ದರೂ ಸಹ ಅಕ್ರಮವಾಗಿ ಗೋ ಹತ್ಯೆ ನಡೆಯುತ್ತಿದ್ದು, ಕಾಯ್ದೆ ಜಾರಿಗೊಂಡ ನಂತರವೂ ಸಹ ಅದರಲ್ಲೂ ಕ್ಷೇತ್ರದಲ್ಲಿ ಗೋ ಹತ್ಯೆ ವ್ಯಾಪಕವಾಗಿ ನಡೆಯುತ್ತಿರುವುದು ಇತ್ತೀಚಿನ ಕೆಲವು ಪ್ರಕರಣಗಳಿಂದ ಬಯಲಾಗುತ್ತಿದೆ.
    ಕೆಲವು ದಿನಗಳ ಹಿಂದೆ ಕೊಪ್ಪ ಪೊಲೀಸರು ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ಸುಮಾರು ೪೫ ಕೆ.ಜಿ ಗೋ ಮಾಂಸ ವಶಪಡಿಸಿಕೊಂಡಿದ್ದಾರೆ. ಬಂಧಿತರು ಕ್ಷೇತ್ರದ ನಿವಾಸಿಗಳಾಗಿದ್ದು, ಕಳೆದ ಸುಮಾರು ೨ ವರ್ಷಗಳಿಂದ ನಿರಂತರವಾಗಿ ಗೋ ಮಾಂಸ ಮಾರಾಟದಲ್ಲಿ ತೊಡಗಿರುವುದು ತಿಳಿದು ಬಂದಿದೆ. ಅಲ್ಲದೆ ಗೋ ಮಾಂಸ ಸಾಗಟಕ್ಕೆ ದ್ವಿಚಕ್ರ ವಾಹನ ಬಳಕೆ ಮಾಡುತ್ತಿರುವುದು ಈ ಪ್ರಕರಣದಿಂದ ಬಯಲಾಗಿದೆ.
    ಶನಿವಾರ ತಾಲೂಕಿನ ಲಕ್ಷ್ಮೀಪುರದ ಬಳಿ ರೈಲ್ವೆ ಟ್ರಾಕ್ ಹತ್ತಿರ ಇಬ್ಬರು ವ್ಯಕ್ತಿಗಳು ಬಕ್ರೀದ್ ಹಬ್ಬಕ್ಕಾಗಿ ಬಲಿ ಕೊಡಲು ಹೋರಿ ಎತ್ತನ್ನು ಎಳೆದುಕೊಂಡು ಹೋಗುತ್ತಿದ್ದಾಗ ನ್ಯೂಟೌನ್ ಪೊಲೀಸರ ಕೈಗೆ ಸಿಕ್ಕಿ ಓರ್ವ ಬಿದ್ದಿದ್ದಾನೆ.
ಪೊಲೀಸರ ವಿಚಾರಣೆ ವೇಳೆ ಸತ್ಯಾಂಶ ಹೊರಬಿದ್ದಿದ್ದು, ಈ ಪ್ರಕರಣದ ಮತ್ತೊಬ್ಬ ವ್ಯಕ್ತಿ ಪರಾರಿಯಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
    ಭಾನುವಾರ ಬೆಳಿಗ್ಗೆ ನಗರಸಭೆ ವ್ಯಾಪ್ತಿಯ ಅನ್ವರ್ ಕಾಲೋನಿಯಲ್ಲಿ ಪೊಲೀಸರು ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡಲಾಗುತ್ತಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿದ್ದು, ಸುಮಾರು ೫೦ ಕೆ.ಜಿ ಗೋ ಮಾಂಸ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಹತ್ಯೆ  ಮಾಡುವ ಉದ್ದೇಶಕ್ಕಾಗಿ ಕೂಡಿ ಹಾಕಲಾಗಿದ್ದ ಸುಮಾರು ೨೯ ಗೋವುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಭದ್ರಾವತಿ ಹಳೇನಗರ ಪೊಲೀಸರು ನಗರಸಭೆ ವ್ಯಾಪ್ತಿಯ ಅನ್ವರ್ ಕಾಲೋನಿಯಲ್ಲಿ ಗೋ ಮಾಂಸ ಮರಾಟ ಮಾಡುತ್ತಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಕಂಡು ಬಂದ ದೃಶ್ಯ.

ಕ್ರಿಕೆಟ್ ಆಟವಾಡುವಾಗ ನಗರಸಭೆ ಹೊರಗುತ್ತಿಗೆ ಪೌರಕಾರ್ಮಿಕ ಸಾವು

ದಿನೇಶ್‌ರಾವ್
    ಭದ್ರಾವತಿ, ಜೂ. ೧೯: ನಗರಸಭೆ ವತಿಯಿಂದ ಭಾನುವಾರ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕ್ರೀಡಾ ಕೂಟದಲ್ಲಿ ಆಟವಾಡುತ್ತಿದ್ದಾಗ ಹೊರ ಗುತ್ತಿಗೆ ಪೌರಕಾರ್ಮಿಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
    ಹಳೇನಗರದ ಭೂತನಗುಡಿ ನಿವಾಸಿ ದಿನೇಶ್‌ರಾವ್(೩೮) ಮೃತಪಟ್ಟಿದ್ದು, ಪತ್ನಿ, ಇಬ್ಬರು ಮಕ್ಕಳನ್ನು ಹೊಂದಿದ್ದರು. ಕಳೆದ ಸುಮಾರು ೪ ವರ್ಷಗಳಿಂದ ನಗರದ ಬೈಪಾಸ್ ರಸ್ತೆ ಆನೇಕೊಪ್ಪದಲ್ಲಿರುವ ನಗರಸಭೆ ಜಲ ಸಂಗ್ರಹಗಾರದಲ್ಲಿ(ಪಂಪ್ ಹೌಸ್) ಹೊರ ಗುತ್ತಿಗೆ ಪೌರಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸಿದ್ದರು.
    ಕ್ರಿಕೆಟ್ ಆಟವಾಡುತ್ತಿದ್ದಾಗ ದಿನೇಶ್‌ರಾವ್ ಏಕಾಏಕಿ ಕುಸಿದು ಕೆಳಗೆ ಬಿದ್ದಿದ್ದು, ತಕ್ಷಣ ಸ್ಥಳದಲ್ಲಿಯೇ ಹಾಜರಿದ್ದ ಆರೋಗ್ಯ ಸಿಬ್ಬದಿ ತಪಾಸಣೆ ನಡೆಸಿದ್ದು ಮೃತಪಟ್ಟಿರುವುದನ್ನು ಖಚಿತ ಪಡಿಸಿದ್ದಾರೆ.  
    ದಿನೇಶ್‌ರಾವ್ ನಿಧನಕ್ಕೆ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪೌರಾಯುಕ್ತರು, ಪೌರಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಪೌರಕಾರ್ಮಿಕರು ಸಂತಾಪ ಸೂಚಿಸಿದ್ದಾರೆ.

ನಗರಸಭೆ ಸದಸ್ಯೆಯಾಗಿ ೧ ವರ್ಷ ಅಧಿಕಾರ ಪೂರೈಸಿದ ಶಶಿಕಲಾ ಬಿ.ಎಸ್ ನಾರಾಯಣಪ್ಪ

ಮನೆ ಮನೆಗಳಿಗೆ ತೆರಳಿ ನರೇಂದ್ರ ಮೋದಿಯವರ ೮ ವರ್ಷದ ಸಾಧನೆ ವಿವರಿಸಿದ ಸದಸ್ಯೆ


ಭದ್ರಾವತಿ ೫ನೇ ವಾರ್ಡಿನ ನಗರಸಭಾ ಸದಸ್ಯೆ ಶಶಿಕಲಾ ಬಿ.ಎಸ್ ನಾರಾಯಣಪ್ಪ ಪ್ರತಿ ಮನೆ ಮನೆಗೆ ತರಳಿ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳನ್ನು ತಿಳಿಸಿದರು.
    ಭದ್ರಾವತಿ, ಜೂ. ೧೯ ; ನಗರಸಭೆ ಸದಸ್ಯೆಯಾಗಿ ೧ ವರ್ಷ ಪೂರೈಸಿದ ಹಿನ್ನಲೆಯಲ್ಲಿ ನಗರಸಭೆ ೫ನೇ ವಾರ್ಡಿನ ಸದಸ್ಯೆ ಶಶಿಕಲಾ ಬಿ.ಎಸ್ ನಾರಾಯಣಪ್ಪ ಭಾನುವಾರ ತಮ್ಮ ವಾರ್ಡಿನ ಮನೆ ಮನೆಗಳಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿಯವರ ೮ ವರ್ಷದ ಸಾಧನೆಗಳನ್ನು ತಿಳಿಸುವ ಮೂಲಕ ಜನರ ಆರ್ಶೀವಾದ ಪಡೆದುಕೊಂಡರು.
      ಹಳೇನಗರ ಭಾಗದ ದೊಡ್ಡಕುರುಬರ ಬೀದಿ, ಉಪ್ಪಾರರಬೀದಿ, ಬ್ರಾಹ್ಮಣರಬೀದಿ, ಮರಾಠ ಬೀದಿ, ರಥ ಬೀದಿ ರಸ್ತೆ ಹಾಗೂ ಕೋಟೆ ಏರಿಯಾ ಖಾಜಿಮೊಹಲ್ಲಾ, ಕನಕನಗರ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಪ್ರತಿ ಮನೆಗೆ ತೆರಳಿದ ಅವರು ವಾರ್ಡಿನ ಸಮಸ್ಯೆಗಳನ್ನು ಆಲಿಸಿ ತಕ್ಷಣ ಪರಿಹರಿಸಿಕೊಡುವುದಾಗಿ ಭರವಸೆ ನೀಡಿದರು. ಮುಂದಿನ ದಿನಗಳಲ್ಲೂ ಬಿಜೆಪಿ ಪಕ್ಷವನ್ನು ಬೆಂಬಲಿಸಿ ನರೇಂದ್ರ ಮೋದಿಯವರಿಗೆ ಶಕ್ತಿ ತುಂಬುವಂತೆ ಮನವಿ ಮಾಡಿದರು.
    ಪಕ್ಷದ ಪ್ರಮುಖರಾದ ನಾರಾಯಣಪ್ಪ, ಕೃಷ್ಣಾನಂದರಾಯ್ಕರ್, ತಾರಾಬಾಯಿ ಶಿವಾಜಿರಾವ್, ವೀಣಾ ಪರಶುರಾಮ್, ಆಯಿಶಾ ಪಾಷಾ, ದಾದು, ಮುನ್ನ, ವಿಶ್ವನಾಥ್‌ರಾವ್, ಹೇಮಾವತಿ, ಭಾರತಿ, ಕೃಷ್ಣಪ್ಪ, ನಾಗರಾಜ್ ಸೇರಿದಂತೆ ಇನ್ನಿತರರಿದ್ದರು.

ಗಾಣಿಗ ಸಮಾಜ ಸಂಘಟಿತವಾಗಲಿ : ಬಿ.ಕೆ ಮೋಹನ್

ಭದ್ರಾವತಿ ಹಳೇನಗರದ ನಗರದ ವೀರಶೈವ ಸಭಾ ಭವನದಲ್ಲಿ ಭಾನುವಾರ ತಾಲೂಕು ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು.
    ಭದ್ರಾವತಿ, ಜೂ. ೧೯: ಕ್ಷೇತ್ರದಲ್ಲಿ ಅಲ್ಪ ಪ್ರಮಾಣದಲ್ಲಿರುವ ಗಾಣಿಗ ಸಮುದಾಯದವರು ಹೆಚ್ಚು ಸಂಘಟಿತವಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಶಕ್ತಿ ಮೀರಿ ಶ್ರಮಿಸಬೇಕೆಂದು ತಾಲೂಕು ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ನೂತನ ಗೌರವಾಧ್ಯಕ್ಷ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹೇಳಿದರು.
    ಅವರು ಭಾನುವಾರ ಹಳೇನಗರದ ನಗರದ ವೀರಶೈವ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಅಧ್ಯಕ್ಷರು, ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ಮೊದಲು ನಮ್ಮ ಸಮುದಾಯ ಬೆಳವಣಿಗೆ ಹೊಂದಬೇಕು. ಈ ನಿಟ್ಟಿನಲ್ಲಿ ಚಿಂತಿಸಿ ಸಂಘಟಿಸುವವರ ಅಗತ್ಯವಿದೆ. ಸಮುದಾಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ನಾವು ಸಮಾಜದ ಇತರೆ ಸಮುದಾಯಗಳೊಂದಿಗೆ ಸಮಾನವಾಗಿ ಗುರುತಿಸಿಕೊಳ್ಳುವಂತಾಗಬೇಕೆಂದರು.
    ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ. ವಿಜಯ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಬಿ.ಕೆ ಜಗನ್ನಾಥ್, ಸಂಘದ ಜಿಲ್ಲಾ ಪ್ರಮುಖರಾದ ಮಾಜಿ ಅಧ್ಯಕ್ಷರಾದ ಎಸ್.ಎಸ್ ರುದ್ರಮುನಿ ಸಜ್ಜನ್, ಕೆ.ವಿ ಸಜ್ಜನ್ ಶೆಟ್ಟರ್, ಮಾಜಿ ಪ್ರಧಾನ ಕಾರ್ಯದರ್ಶಿ ಎ. ಅಶೋಕ್, ಜಿಲ್ಲಾ ಉಪಧ್ಯಕ್ಷ ಎನ್.ಬಿ ರಾಜಶೇಖರ್, ಕಾರ್ಯದರ್ಶಿ ಎಂ.ಆರ್ ಕಿರಣ್‌ಕುಮಾರ್, ಖಜಾಂಚಿ ಎ.ಎಸ್ ರವಿ, ನಿರ್ದೇಶಕರಾದ ಕೆ.ಪಿ ರವೀಶ್, ಸಿ.ಎಸ್ ಚನ್ನಬಸವರಾಜ್, ರೇಖಾ ರಾಜ್‌ಶೇಖರ್, ಚನ್ನವೀರೇಶ್, ಸುಜಾತ, ಬಸವರಾಜ್ ಹೊಸಮನಿ, ಮಹೇಶ್‌ಕುಮಾರ್, ಸಿ.ಎಂ ಬಸವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವಾಗೀಶ್ ಕೋಠಿ ನಿರೂಪಿಸಿದರು.
    ನೂತನ ಪದಾಧಿಕಾರಿಗಳು :
    ತಾಲೂಕು ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ನೂತನ ಗೌರವಾಧ್ಯಕ್ಷರಾಗಿ ಬಿ.ಕೆ ಮೋಹನ್, ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಟಿ.ಎಸ್ ಆನಂದಕುಮಾರ್, ಉಪಾಧ್ಯಕ್ಷರಾಗಿ ಎಂ. ಮಹಾದೇವಪ್ಪ, ಜೆ. ನಂದೀಶ್, ಕಾರ್ಯದರ್ಶಿಯಾಗಿ ಶಿವಾನಂದ, ನಿರ್ದೇಶಕರಾಗಿ ನಾಗರಾಜ, ಪ್ರದೀಪ್, ಜಿ.ಕೆ ವೀರೇಶ್, ಜಿ.ಪಿ ಚನ್ನೇಶ್ ಹಾಗು ಮಹಿಳಾ ನಿರ್ದೇಶಕರಾಗಿ ರೇಣುಕ ರುದ್ರೇಶ್ ಆಯ್ಕೆಯಾದರು.


ಭದ್ರಾವತಿ ತಾಲೂಕು ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಟಿ.ಎಸ್ ಆನಂದಕುಮಾರ್ ಭಾನುವಾರ ನಡೆದ ಸಭೆಯಲ್ಲಿ ಆಯ್ಕೆಯಾದರು.