Saturday, June 25, 2022

ನ್ಯಾಯವಾದಿ ಎ.ಎನ್ ಕಾರ್ತಿಕ್ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕಾರ

ಭದ್ರಾವತಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ಎ.ಎನ್ ಕಾರ್ತಿಕ್ ಶನಿವಾರ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.
    ಭದ್ರಾವತಿ, ಜೂ. ೨೫: ನಗರದ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ಎ.ಎನ್ ಕಾರ್ತಿಕ್ ಶನಿವಾರ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.
    ಲಯನ್ಸ್ ಕ್ಲಬ್ ೨ನೇ ಜಿಲ್ಲಾ ಉಪ ಗೌರ್ವನರ್ ಮಹಮದ್ ಹನೀಫ್ ಪದಗ್ರಹಣ ಬೋಧಿಸಿದರು. ದೈವಜ್ಞ ಬ್ರಾಹ್ಮಣ ಸಂಘದ ಎಂ. ನಾಗರಾಜ ಶೇಟ್ ಕಾರ್ಯದರ್ಶಿಯಾಗಿ ಹಾಗು ಜಿ.ಪಿ ದರ್ಶನ್ ಖಜಾಂಚಿಯಾಗಿ, ಉಳಿದಂತೆ  ಲಿಯೋ ಕ್ಲಬ್ ಅಧ್ಯಕ್ಷರಾಗಿ ನಿಖಿತಾ ಎನ್ ಶೇಟ್, ಕಾರ್ಯದರ್ಶಿಯಾಗಿ ಆರ್. ಶ್ರೇಷ್ಠ ಮತ್ತು ಖಜಾಂಚಿಯಾಗಿ ಮೋನಾಲ್ ಕೆ. ಗೌಡ ಹಾಗು ಇನ್ನಿತರರು ಅಧಿಕಾರ ಸ್ವೀಕರಿಸಿದರು.
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಕ್ಲಬ್ ಪ್ರಮುಖರಾದ ಬಿ. ದಿವಾಕರ ಶೆಟ್ಟಿ, ಹೆಬ್ಬಂಡಿ ನಾಗರಾಜ್, ನಿಕಟಪೂರ್ವ ಪದಾಧಿಕಾರಿಗಳಾದ ಬಿ.ಎಸ್ ಮಹೇಶ್‌ಕುಮಾರ್, ಡಿ. ಶಂಕರಮೂರ್ತಿ, ವಿನೋದ್ ಗಿರಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜೂ.೨೮ರ ಉಚಿತ ಬೃಹತ್ ಆರೋಗ್ಯ ಶಿಬಿರ ಯಶಸ್ವಿಗೊಳಿಸಲು ಸಂಸದರ ಸಲಹೆ

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಭದ್ರಾವತಿಯಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಜೂ.೨೮ರಂದು ಹಮ್ಮಿಕೊಳ್ಳಲಾಗಿದ್ದು, ಶಿಬಿರ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶನಿವಾರ ಸಂಸದ ಬಿ.ವೈ ರಾಘವೇಂದ್ರ ಬಿಜೆಪಿ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಸಿದರು.
    ಭದ್ರಾವತಿ, ಜೂ. ೨೫ : ಕ್ಷೇತ್ರದಲ್ಲಿರುವ ಅಸಂಘಟಿತ ಹಾಗು ವಲಸೆ ಕಾರ್ಮಿಕರು ಮತ್ತು ಅವರ ಅವಲಂಬಿತ ಕುಟುಂಬ ವರ್ಗದವರ ಆರೋಗ್ಯ ಕಾಳಜಿ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಜೂ.೨೮ರಂದು ಹಮ್ಮಿಕೊಳ್ಳಲಾಗಿದ್ದು, ಶಿಬಿರ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶನಿವಾರ ಸಂಸದ ಬಿ.ವೈ ರಾಘವೇಂದ್ರ ಬಿಜೆಪಿ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಸಿದರು.
    ಕ್ಷೇತ್ರದಲ್ಲಿರುವ ಅಸಂಘಟಿತ ಹಾಗು ವಲಸೆ ಕಾರ್ಮಿಕರು ಮತ್ತು ಅವರ ಅವಲಂಬಿತ ಕುಟುಂಬ ವರ್ಗದವರನ್ನು ಗುರುತಿಸಿ ಉಚಿತ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಶಿವಮೊಗ್ಗ ಮ್ಯಾಕ್ಸ್ ಆಸ್ಪತ್ರೆ ಸಹಯೋಗದೊಂದಿಗೆ ಕಾರ್ಮಿಕರ ಕಲ್ಯಾಣ ಮಂಡಳಿ ಮುಂದಾಗಿದೆ. ಜೂ.೨೮ರಂದು ಬೆಳಿಗ್ಗೆ ೯ ಗಂಟೆಗೆ ಶಿಬಿರ ಆರಂಭಗೊಳ್ಳಲಿದ್ದು, ಎಲ್ಲಾ ರೀತಿಯ ಕಾಯಿಲೆಗಳ ತಪಾಸಣೆ ನಡೆಯಲಿದೆ. ಹೆಚ್ಚಿನ ಚಿಕಿತ್ಸೆಗೂ ಅವಕಾಶ ಕಲ್ಪಿಸಿಕೊಡಲಿದ್ದು, ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.  ಬೃಹತ್ ಶಿಬಿರ ಇದಾಗಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಕಾಳಜಿವಹಿಸಿ ಶಿಬಿರ ಯಶಸ್ವಿಗೊಳಿಸುವಂತೆ ಸಂಸದರು ಸಲಹೆ ನೀಡಿದರು.
    ಸಭೆಯಲ್ಲಿ ಪಕ್ಷದ ಪ್ರಮುಖರಾದ ಎಂ. ಪ್ರಭಾಕರ್, ಬಿ.ಕೆ ಶ್ರೀನಾಥ್, ಎಸ್. ಕುಮಾರ್, ಮಂಗೋಟೆ ರುದ್ರೇಶ್, ಜಿ. ಆನಂದ್‌ಕುಮಾರ್, ಹೇಮಾವತಿ ವಿಶ್ವನಾಥ್, ಕೆ. ಮಂಜುನಾಥ್, ರಾಮಲಿಂಗಯ್ಯ, ಚಂದ್ರಪ್ಪ, ಶಶಿಕಲಾ, ಅನ್ನಪೂರ್ಣ, ಪ್ರಭಾಕರ್, ರವಿಕುಮಾರ್, ಕರಿಗೌಡ, ಕವಿತಾ ರಾವ್, ಬಿ.ಎಸ್ ನಾರಾಯಣಪ್ಪ, ರಾಮನಾಥ್ ಬರ್ಗೆ, ಚನ್ನೇಶ್, ಶೋಭಾ ಪಾಟೀಲ್, ಮಂಜುಳ, ಎಸ್.ಎನ್ ನಾಗಮಣಿ, ಗೋಕುಲ್‌ಕೃಷ್ಣ, ನಕುಲ್, ಧನುಷ್, ಮಲ್ಲೇಶ್, ವಿಜಯ್, ಚಂದ್ರು ದೇವರಹಳ್ಳಿ ಸೇರಿದಂತೆ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

೫ ಕೋ.ರು ವೆಚ್ಚದ ಕಾರ್ಮಿಕರ ಭವನ ಮಂಜೂರಾತಿ : ಜೂ.೨೮ರಂದು ಗುದ್ದಲಿ ಪೂಜೆ

ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ಪೂರ್ವಭಾವಿ ಸಭೆ

೫ ಕೋ.ರು ವೆಚ್ಚದಲ್ಲಿ ಭದ್ರಾವತಿ ಉಜ್ಜನಿಪುರದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾರ್ಮಿಕರ ಭವನದ ಗುದ್ದಲಿ ಪೂಜೆ ಕಾರ್ಯಕ್ರಮದ ಪೂರ್ವಭಾವಿ ಸಭೆ ಶನಿವಾರ ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ನಡೆಯಿತು.
    ಭದ್ರಾವತಿ, ಜೂ. ೨೫ : ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನಗರದಲ್ಲಿ ನೂತನ ಕಾರ್ಮಿಕರ ಭವನ ಮಂಜೂರಾತಿಯಾಗಿದ್ದು, ಸುಮಾರು ೫ ಕೋ. ರು. ವೆಚ್ಚದ ಭವನದ ಗುದ್ದಲಿ ಪೂಜೆ ಜೂ.೨೮ರಂದು ನಡೆಯಲಿದೆ. ಈ ಸಂಬಂಧ ಸಂಸದ ಬಿ.ವೈ ರಾಘವೇಂದ್ರ ಶನಿವಾರ ನಗರದ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಿದರು.
    ಕ್ಷೇತ್ರದಲ್ಲಿ ಅಸಂಘಟಿತ ಹಾಗು ವಲಸೆ ಕಾರ್ಮಿಕರು ಹೆಚ್ಚಾಗಿದ್ದು, ಅಲ್ಲದೆ ವಲಸೆ ಕಾರ್ಮಿಕರ ಅನುಕೂಲಕ್ಕಾಗಿ ತಾತ್ಕಾಲಿಕ ವಸತಿ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಕಾರ್ಮಿಕರ ಭವನದಲ್ಲಿ ವಸತಿ ಸಮುಚ್ಚಯ ನಿರ್ಮಾಣಗೊಳ್ಳಲಿದೆ. ಎಂಪಿಎಂ ಕಾರ್ಖಾನೆ ಸೇರಿದ ಉಜ್ಜನಿಪುರ ವ್ಯಾಪ್ತಿಯಲ್ಲಿ ೨ ಎಕರೆ ಜಮೀನು ಮಂಜೂರಾತಿ ಮಾಡಲಾಗಿದೆ. ಭವನ ನಿರ್ಮಾಣಕ್ಕೆ ಜೂ.೨೮ರಂದು ಮಧ್ಯಾಹ್ನ ೧ ಗಂಟೆಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಕಾರ್ಯಕ್ರಮದ ಪೂರ್ವಭಾವಿಯಾಗಿ ಸಂಸದರು ವಿವಿಧ ಕಾರ್ಮಿಕ ಸಂಘಟನೆಗಳು, ತಹಸೀಲ್ದಾರ್, ನಗರಸಭೆ ಅಧಿಕಾರಿಗಳು ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
    ತಹಸೀಲ್ದಾರ್ ಆರ್. ಪ್ರದೀಪ್, ಜಿಲ್ಲಾ ಕಾರ್ಮಿಕ ಅಧಿಕಾರಿ, ಕಾರ್ಮಿಕ ನಿರೀಕ್ಷಕರು, ನಗರಸಭೆ ಅಧಿಕಾರಿಗಳು, ಕರ್ನಾಟಕ ಸ್ಟೇಟ್ ಕನಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು, ತಾಲೂಕು ಅಧ್ಯಕ್ಷ ಚಂದ್ರಶೇಖರ್ ಹಾಗು ಪದಾಧಿಕಾರಿಗಳು ಉಪಸ್ಥಿತರಿದ್ದರು.