ಸಂಜೀವಿನಿ ವೃದ್ಧಾಶ್ರಮ ಸೇರಿದ ಮಹಿಳೆ
ಭದ್ರಾವತಿ ನಗರದ ಉಂಬ್ಳೆಬೈಲು ರಸ್ತೆ ರೈಲ್ವೆ ಅಂಡರ್ ಬ್ರಿಡ್ಜ್ ಸಮೀಪದ ಆಟೋನಿಲ್ದಾಣದಲ್ಲಿ ಕಳೆದ ಸುಮಾರು 6 ತಿಂಗಳಿಂದ ಆಶ್ರಯ ಪಡೆದಿದ್ದ ಅಪರಿಚಿತ ಮಹಿಳೆಯೊಬ್ಬರನ್ನು ಎಂಪಿಎಂ ಬಡಾವಣೆಯಲ್ಲಿರುವ ಸಂಜೀವಿನಿ ವೃದ್ಧಾಶ್ರಮಕ್ಕೆ ದಾಖಲಿಸುವ ಮೂಲಕ ಆಟೋ ಚಾಲಕರು ಹಾಗು ಪೊಲೀಸರು ಮಾನವೀಯತೆ ಮೆರದಿದ್ದಾರೆ.
ಭದ್ರಾವತಿ: ನಗರದ ಉಂಬ್ಳೆಬೈಲು ರಸ್ತೆ ರೈಲ್ವೆ ಅಂಡರ್ ಬ್ರಿಡ್ಜ್ ಸಮೀಪದ ಆಟೋನಿಲ್ದಾಣದಲ್ಲಿ ಕಳೆದ ಸುಮಾರು 6 ತಿಂಗಳಿಂದ ಆಶ್ರಯ ಪಡೆದಿದ್ದ ಅಪರಿಚಿತ ಮಹಿಳೆಯೊಬ್ಬರಿಗೆ ಆಟೋ ಚಾಲಕರು ಹಾಗು ಪೊಲೀಸರು ನೆರವಾಗುವ ಮೂಲಕ ಮಾನವೀಯತೆ ಮೆರದಿದ್ದಾರೆ.
ಆಟೋ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದ ಮಹಿಳೆ ಯಾರ ಬಳಿಯೂ ಭಿಕ್ಷೆ ಬೇಡುತ್ತಿರಲಿಲ್ಲ. ಯಾರಾದರೂ ತಾವೇ ಏನಾದರೂ ನೀಡಿದರೆ ಮಾತ್ರ ಸ್ವೀಕರಿಸುತ್ತಿದ್ದರು. ಅಲ್ಲದೆ ತಮ್ಮ ವಿವರಗಳನ್ನು ಕೇಳಿದರೆ ಮೌನವಾಗಿರುತ್ತಿದ್ದರು. ಇದನ್ನು ಗಮನಿಸಿದ ಆಟೋಚಾಲಕರು ನ್ಯೂಟೌನ್ ಪೊಲೀಸರ ಗಮನಕ್ಕೆ ವಿಷಯ ತಂದಿದ್ದು, ನಂತರ ಆಟೋ ಚಾಲಕರು ಮತ್ತು ಪೊಲೀಸರು ಈ ಮಹಿಳೆಗೆ ನೆರವಾಗುವ ಮೂಲಕ ನಗರದ ಎಂಪಿಎಂ ಬಡಾವಣೆಯಲ್ಲಿರುವ ಸಂಜೀವಿನಿ ವೃದ್ಧಾಶ್ರಮಕ್ಕೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಜೀವಿನಿ ವೃದ್ಧಾಶ್ರಮದ ಸಂಸ್ಥಾಪಕಿ ಹಾಗು ಅಧ್ಯಕ್ಷೆ ಸುನೀತಾ ಮತ್ತು ಸವಿತಾ, ಸಿಬ್ಬಂದಿ ರಮೇಶ್ ಹಾಗು ಪ್ರಿಯಾರವರು ಮಹಿಳೆಯನ್ನು ಆಶ್ರಮಕ್ಕೆ ಬರಮಾಡಿಕೊಂಡಿದ್ದು, ನ್ಯೂಟೌನ್ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ಮಂಜಪ್ಪ, ಮುಖಂಡರಾದ ಬಾಲಕೃಷ್ಣ ಹಾಗು ಆಟೋ ಚಾಲಕರು ಉಪಸ್ಥಿತರಿದ್ದರು.