Tuesday, March 21, 2023

ಕೋಮು ಸಂಘರ್ಷಕ್ಕೆ ಕಾರಣರಾಗಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಬಂಧಿಸಿ

ರಾಜ್ಯಪಾಲರಿಗೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಮನವಿ

ಮಾಜಿ ಸಚಿವ ಕೆ.ಎಸ್ ಈಶ್ವರಪ್ಪರವರು ಮುಸ್ಲಿಂ ಧರ್ಮ ಹಾಗು ದೇವರ ಕುರಿತು ಬಾಯಿಗೆ ಬಂದಂತೆ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುತ್ತಿದ್ದು, ಇವರನ್ನು ತಕ್ಷಣ ಬಂಧಿಸಿ ಕಾರಾಗೃಹದಲ್ಲಿಸಬೇಕೆಂದು ಆಗ್ರಹಿಸಿ ಮರ್ಕರ್ಜಿ ಇದಾರ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್, ಅಹಲೆ ಸುನ್ನತ್-ಉಲ್-ಜಮಾತೆ ಭದ್ರಾವತಿ ತಾಲೂಕು ಶಾಖೆವತಿಯಿಂದ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಮಾ. ೨೧ : ಮಾಜಿ ಸಚಿವ ಕೆ.ಎಸ್ ಈಶ್ವರಪ್ಪರವರು ಮುಸ್ಲಿಂ ಧರ್ಮ ಹಾಗು ದೇವರ ಕುರಿತು ಬಾಯಿಗೆ ಬಂದಂತೆ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುತ್ತಿದ್ದು, ಇವರನ್ನು ತಕ್ಷಣ ಬಂಧಿಸಿ ಕಾರಾಗೃಹದಲ್ಲಿಸಬೇಕೆಂದು ಆಗ್ರಹಿಸಿ ಮರ್ಕರ್ಜಿ ಇದಾರ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್, ಅಹಲೆ ಸುನ್ನತ್-ಉಲ್-ಜಮಾತೆ ತಾಲೂಕು ಶಾಖೆವತಿಯಿಂದ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
    ಪ್ರಮುಖರು ಮಾತನಾಡಿ, ದೇಶದಲ್ಲಿ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಧರ್ಮದವರು ಒಗ್ಗಟ್ಟಾಗಿ ಸಮಾನತೆ, ಸೌಹಾರ್ದತೆ ಭಾರತೀಯ ಸಂಸ್ಕೃತಿ ಮೈಗೂಡಿಸಿಕೊಂಡು ಬದುಕುತ್ತಿದ್ದು, ಈ ನಡುವೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪರವರು ಮುಸ್ಲಿಂ ಧರ್ಮ ಹಾಗು ದೇವರ ಕುರಿತು ಬಾಯಿಗೆ ಬಂದಂತೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದು, ಇವರು ಕೋಮುವಾದಿ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದಾರೆಯೋ ಅಥವಾ ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದಾರೆಯೋ ಎಂಬುದು ತಿಳಿಯುತ್ತಿಲ್ಲ. ನೆಮ್ಮದಿಯಿಂದ ಬದುಕುತ್ತಿರುವ ನಮ್ಮ ನಡುವೆ ಕೋಮು ಸಂಘರ್ಷ ಉಂಟಾಗಲು ಕಾರಣರಾಗಿರುತ್ತಾರೆಂದು ಆರೋಪಿಸಿದರು.
ತಮ್ಮ ಸ್ವಾರ್ಥಕ್ಕಾಗಿ ಇವರು ಹಿಂದುತ್ವ ಹೆಸರಿನಲ್ಲಿ ಬಾಯಿ ಬಂದಂತೆ ಮಾತನಾಡುತ್ತಿದ್ದು,  ಈ ಹಿನ್ನಲೆಯಲ್ಲಿ ಇವರನ್ನು ತಕ್ಷಣ ಬಂಧಿಸಿ ಕಾರಾಗೃಹದಲ್ಲಿಸಿ ಎಲ್ಲರೂ ನೆಮ್ಮದಿಯಾಗಿ ಬದುಕು ವಾತಾವರಣ ಕಲ್ಪಿಸಿಕೊಡುವಂತೆ ಕೋರಿದರು.
    ಇದಕ್ಕೂ ಮೊದಲು ನಗರದ ರಂಗಪ್ಪ ವೃತ್ತದಿಂದ ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.  ಮರ್ಕರ್ಜಿ ಇದಾರ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್, ಅಹಲೆ ಸುನ್ನತ್-ಉಲ್-ಜಮಾತೆ ತಾಲೂಕು ಶಾಖೆ ಅಧ್ಯಕ್ಷ ಮುರ್ತುಜಾ ಖಾನ್ ನೇತೃತ್ವ ವಹಿಸಿದ್ದರು.     ಪ್ರಮುಖರಾದ ಮಹಮದ್ ಸನ್ನಾವುಲ್ಲಾ, ಅಮೀರ್‌ಜಾನ್, ಬಾಬಾ ಜಾನ್, ದಿಲ್‌ದಾರ್, ಎ. ಮಸ್ತಾನ್, ಮುಕ್ರಮ್ ಖಾನ್, ಇಬ್ರಾಹಿಂ ಖಾನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಡಾ. ಬಿ.ಆರ್ ಅಂಬೇಡ್ಕರ್‌ಗೆ ಕನಿಷ್ಠ ಮಟ್ಟದ ಗೌರವ ನೀಡದ ಕಾಂಗ್ರೆಸ್ ಪಕ್ಷಕ್ಕೆ ಮತ ಕೇಳುವ ನೈತಿಕತೆ ಇಲ್ಲ : ಮೋನಪ್ಪ ಭಂಡಾರಿ

ಜಿಲ್ಲಾ ಬಿಜೆಪಿ ಎಸ್.ಸಿ ಮೋರ್ಚಾ ವತಿಯಿಂದ ಭದ್ರಾವತಿಯಲ್ಲಿ ಪಕ್ಷದ ಮಂಡಲ ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ 'ನಮ್ಮ ನಡೆ ಭೀಮ ನಡೆ' ಸಮಾವೇಶ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಪ್ರಭಾರಿ, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.  
    ಭದ್ರಾವತಿ, ಮಾ. ೨೧ : ದೇಶದ ಸಂವಿಧಾನ ನಿರ್ಮಾತೃ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಬದುಕಿರುವಾಗ ಕಾಂಗ್ರೆಸ್ ಪಕ್ಷ ಅವರಿಗೆ ಕನಿಷ್ಠ ಮಟ್ಟದ ಗೌರವ ಸಹ ನೀಡಲಿಲ್ಲ. ಸಾವಿನ ನಂತರವೂ ಅವರನ್ನು ಅವಮಾನಿಸಿತು. ಇಂತಹ ಪಕ್ಷಕ್ಕೆ ಅಂಬೇಡ್ಕರ್ ಹೆಸರು ಹೇಳುವ ಹಾಗು ದೇಶದ ಜನರ ಮತ ಕೇಳುವ ಯಾವುದೇ ನೈತಿಕತೆ ಇಲ್ಲವಾಗಿದೆ ಎಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಪ್ರಭಾರಿ, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಹೇಳಿದರು.
    ಅವರು ಜಿಲ್ಲಾ ಬಿಜೆಪಿ ಎಸ್.ಸಿ ಮೋರ್ಚಾ ವತಿಯಿಂದ ಪಕ್ಷದ ಮಂಡಲ ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ 'ನಮ್ಮ ನಡೆ ಭೀಮ ನಡೆ' ಸಮಾವೇಶ ಉದ್ಘಾಟಿಸಿ ಮಾತನಾಡಿದರು.
    ಕಾಂಗ್ರೆಸ್ ಪಕ್ಷ ಅಂಬೇಡ್ಕರ್‌ರವರನ್ನು ಹೆಸರಿಗೆ ಮಾತ್ರ ಮೀಸಲು ಮಾಡಿತು ಹೊರತು ಅವರಿಗೆ ಯಾವುದೇ ಕನಿಷ್ಠ ಮಟ್ಟದ ಗೌರವ ನೀಡಲಿಲ್ಲ. ಚುನಾವಣೆಯಲ್ಲಿ ಅವರನ್ನು ಸೋಲಿಸುವ ಹುನ್ನಾರ ನಡೆಸಿತು. ಅಂಬೇಡ್ಕರ್‌ರವರಿಗೆ ಅಂದು ಬಿಜೆಪಿ ಪಕ್ಷದ ಮಾತೃ ಸಂಘಟನೆ ಜನಸಂಘ ಬೆಂಬಲ ನೀಡಿತು. ದೆಹಲಿಯಲ್ಲಿ ಅಂಬೇಡ್ಕರ್‌ರವರ ಕೊನೆಯ ಅವಧಿಯಲ್ಲಿ ಅವರ ಅಂತ್ಯ ಸಂಸ್ಕಾರಕ್ಕೂ ಕಾಂಗ್ರೆಸ್ ಅವಕಾಶ ನೀಡಲಿಲ್ಲ. ಈ ಪಕ್ಷಕ್ಕೆ ದಲಿತರು, ಪರಿಶಿಷ್ಟರು ಕೇವಲ ೫ ವರ್ಷಗಳಿಗೆ ಒಮ್ಮೆ ಮಾತ್ರ ಕಾಣಿಸುತ್ತಾರೆ. ನಮ್ಮನ್ನು ಮತ ಬ್ಯಾಂಕ್ ರೀತಿಯಲ್ಲಿ ನೋಡುತ್ತಿದ್ದಾರೆ. ನಮ್ಮ ಮೇಲೆ ಯಾವುದೇ ರೀತಿ ಕಾಳಜಿ, ಬದ್ಧತೆ ಇಲ್ಲವಾಗಿದೆ. ನಮ್ಮ ಶಕ್ತಿ ತೋರಿಸುವ ದಿನಗಳು ಇಂದು ಎದುರಾಗಿವೆ ಎಂದರು.
    ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕಾಸರವಳ್ಳಿ ಶ್ರೀನಿವಾಸ್ ಮಾತನಾಡಿ, ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮೊದಲು ದೇಶದ ಸಂವಿಧಾನಕ್ಕೆ ನಮಸ್ಕರಿಸಿದರು. ಆ ಮೂಲಕ ಅವರು ಬಾಬಾ ಸಾಹೇಬ್ ಅಂಬೇಡ್ಕರ್‌ರವರನ್ನು ಗೌರವದಿಂದ ಕಂಡಿದ್ದಾರೆ. ಅಲ್ಲದೆ ಅಂಬೇಡ್ಕರ್‌ರವರ ಜನ್ಮಸ್ಥಳ, ವಿದ್ಯಾಭ್ಯಾಸ ನಡೆಸಿದ ಸ್ಥಳ, ಅವರು ಮರಣ ಹೊಂದಿದ ಸ್ಥಳ ಹಾಗು ಸಮಾದಿ ಸ್ಥಳ ಒಟ್ಟು ೫ ಪಂಚ ಸ್ಥಳಗಳ ಅಭಿವೃದ್ಧಿ ಕೈಗೊಂಡಿದ್ದಾರೆ. ಕೇಂದ್ರ ಹಾಗು ರಾಜ್ಯದಲ್ಲಿ ಪರಿಶಿಷ್ಟರು, ದಲಿತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಈ ಹಿಂದಿನ ಕಾಂಗ್ರೆಸ್ ಪಕ್ಷ ಮಾಡದಿರುವ ಕೆಲಸಗಳನ್ನು ಬಿಜೆಪಿ ಪಕ್ಷ ತನ್ನ ಅಧಿಕಾರದ ಅವಧಿಯಲ್ಲಿ ಮಾಡಿ ತೋರಿಸಿದೆ.  ಈ ಹಿನ್ನಲೆಯಲ್ಲಿ ನಾವೆಲ್ಲರೂ ಸಹ ಬಿಜೆಪಿ ಪಕ್ಷವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿಸುವ ಮೂಲಕ ಪುನಃ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ ಎಂದರು.  
    ಪಕ್ಷದ ರಾಜ್ಯ ನಾಯಕ ಪಟಾಪಟ್ ಶ್ರೀನಿವಾಸ್, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ ಸಿದ್ದರಾಮಣ್ಣ, ಓಬಿಸಿ ಮೋರ್ಚಾ ಉಪಾಧ್ಯಕ್ಷ ಅಶೋಕ್ ಮೂರ್ತಿ, ಕಾಡಾ ಅಧ್ಯಕ್ಷೆ ಕೆ.ಬಿ ಪವಿತ್ರ ರಾಮಯ್ಯ, ದೇವರಾಜ್ ಮಂಡೇನ್ ಕೊಪ್ಪ, ಜಯರಾಮ್ ನಾಯ್ಕ್, ಎಂ. ರಾಜು, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಎಸ್.ಸಿ ಮೋರ್ಚಾ ತಾಲೂಕು ಅಧ್ಯಕ್ಷ ಗಣೇಶ್‌ರಾವ್, ಪ್ರಮುಖರಾದ ಕೂಡ್ಲಿಗೆರೆ ಹಾಲೇಶ್, ಎಸ್. ಕುಮಾರ್, ತೀರ್ಥಯ್ಯ, ಜಿ. ಆನಂದಕುಮಾರ್, ಕೆ. ಮಂಜುನಾಥ್, ಎಂ. ಪ್ರಭಾಕರ್, ಚಂದ್ರು ದೇವರನರಸೀಪುರ, ವಿವಿಧ ತಾಲೂಕುಗಳ ಎಸ್.ಸಿ ಮೋರ್ಚಾ ಅಧ್ಯಕ್ಷರುಗಳಾದ ಚಂದ್ರಶೇಖರ್, ತಿಪ್ಪೇಶ್ ಆನವೇರಿ, ಯೋಗೇಶ್, ಮಂಜುನಾಥ್, ರುಕ್ಮಿಣಿ ರಾಜ್, ರವಿಕುಮಾರ್, ಆನಂದಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಜಿಲ್ಲೆಯ ವಿವಿಧ ತಾಲೂಕುಗಳಿಂದ ಪಕ್ಷದ ಎಸ್.ಸಿ ಮೋರ್ಚಾ ಮುಖಂಡರು, ಕಾರ್ಯಕರ್ತರು ಸೇರಿದಂತೆ ವಿವಿಧ ಮೋರ್ಚಾಗಳ ಪ್ರಮುಖರು ಪಾಲ್ಗೊಂಡಿದ್ದರು.

ಮಾ.೨೨ರಂದು ಐತಿಹಾಸಿಕ ಮಾವಿನಕೆರೆ ಶಿಲುಬೆ ಬೆಟ್ಟದ ಮಹೋತ್ಸವ : ದಿವ್ಯ ಕರುಣೇಶ್ ಕ್ಯಾಪುಚಿನ್

ಭಕ್ತಿಯುತ ಜೀವಂತ ಶಿಲುಬೆ ಹಾದಿಯ ಪ್ರದರ್ಶನ, ವಿಐಎಸ್‌ಎಲ್-ಎಂಪಿಎಂ ಉಳಿವಿಗಾಗಿ ಪ್ರಾರ್ಥನೆ

ಭದ್ರಾವತಿ ತಾಲೂಕಿನ ಮಾವಿನಕೆರೆ ಗ್ರಾಮದ ಕಿರಿಯ ಪುಷ್ಪ ಸಂತ ತೆರೇಸರ ದೇವಾಲಯದಲ್ಲಿ ಮಾ.೨೨ ರಂದು ಐತಿಹಾಸಿಕ ಮಾವಿನಕೆರೆ ಶಿಲುಬೆ ಬೆಟ್ಟದ ಮಹೋತ್ಸವ ಹಾಗೂ ಭಕ್ತಿಯುತ ಜೀವಂತ ಶಿಲುಬೆ ಹಾದಿಯ ಪ್ರದರ್ಶನ ಏರ್ಪಡಿಸಲಾಗಿದೆ. ಈ ಹಿನ್ನಲೆಯಲ್ಲಿ ಸೋಮವಾರ ದೇವಾಲಯದ ಧರ್ಮಗುರು ಪಾದರ್ ದಿವ್ಯ ಕರುಣೀಶ್ ಕ್ಯಾಪುಚಿನ್ ಸೇರಿದಂತೆ ಭಕ್ತರು ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸುವ ಮೂಲಕ ಬುಧವಾರ ನಡೆಯಲಿರುವ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
    ಭದ್ರಾವತಿ, ಮಾ. ೨೧: ತಾಲೂಕಿನ ಮಾವಿನಕೆರೆ ಗ್ರಾಮದ ಕಿರಿಯ ಪುಷ್ಪ ಸಂತ ತೆರೇಸರ ದೇವಾಲಯದಲ್ಲಿ ಮಾ.೨೨ ರಂದು ಐತಿಹಾಸಿಕ ಮಾವಿನಕೆರೆ ಶಿಲುಬೆ ಬೆಟ್ಟದ ಮಹೋತ್ಸವ ಹಾಗೂ ಭಕ್ತಿಯುತ ಜೀವಂತ ಶಿಲುಬೆ ಹಾದಿಯ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ದೇವಾಲಯದ ಧರ್ಮಗುರು ಪಾದರ್ ದಿವ್ಯ ಕರುಣೀಶ್ ಕ್ಯಾಪುಚಿನ್ ಹೇಳಿದರು.
    ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ೪ ವರ್ಷಗಳಿಂದ ನ್ಯೂಟೌನ್, ಹಳೇನಗರ, ಕಾಗದನಗರ ಹಾಗೂ ಕಾರೇಹಳ್ಳಿ ಧರ್ಮಕೇಂದ್ರದ ಭಕ್ತರು ಜೀವಂತ ಶಿಲುಬೆ ಹಾದಿಯ ಪ್ರದರ್ಶನ ತ್ಯಾಗ ಮತ್ತು ಭಕ್ತಿಯಿಂದ ನಡೆಸುತ್ತಿದ್ದಾರೆ.
     ೨ ಸಾವಿರ ವರ್ಷಗಳ ಹಿಂದಿನ ದಿನಗಳಲ್ಲಿ ಯೇಸುವಿನ ಪಾಡು, ಯಾತನೆ ಹಾಗೂ ಮರಣವನ್ನು ಅಭಿನಯದಿಂದ ಮರುಕಳುಹಿಸುವುದೇ ಜೀವಂತ ಶಿಲುಬೆಯ ಹಾದಿಯಾಗಿದೆ. ಅಂದು ಬೆಳಿಗ್ಗೆ ೧೦ ಗಂಟೆಯಿಂದ ಸುಮಾರು ೨ ಗಂಟೆವರೆಗೆ  ಪ್ರದರ್ಶನ ನಡೆಯಲಿದ್ದು, ನೈಜತೆ ಅನಾವರಣಗೊಳ್ಳಲಿದೆ ಎಂದರು.  
      ೧೨ ಗಂಟೆಗೆ ದಿವ್ಯ ಬಲಿಪೂಜೆ. ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ ಕಾರ್ಯ ನೆರವೇರಲಿದೆ. ತಾಲೂಕಿನ ವಿವಿಧ ಕ್ರೈಸ್ತ ದೇವಾಲಯಗಳ ೨ ಸಾವಿರಕ್ಕೂ
ಹೆಚ್ಚು ಭಕ್ತರು ಶಿಲುಬೆ ಬೆಟ್ಟದ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
      ಆಲ್ ಇಂಡಿಯಾ ಕ್ಯಾಥೋಲಿಕ್ ಯೂನಿಯನ್(ಎಐಸಿಯು) ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಂತೋಣಿ ವಿಲ್ಸನ್ ಮಾತನಾಡಿ, ಐತಿಹಾಸಿಕ ಮಾವಿನಕೆರೆ ಶಿಲುಬೆ ಬೆಟ್ಟದ ಮಹೋತ್ಸವಕ್ಕೆ ವರ್ಷದಿಂದ ವರ್ಷಕ್ಕೆ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜೀವಂತ ಶಿಲುಬೆ ಹಾದಿಯ ಪ್ರದರ್ಶನ ಭಕ್ತರಲ್ಲಿ ಒಂದು ಅದ್ಭುತ ಶಕ್ತಿ, ಚೈತನ್ಯ ತಂದು ಕೊಡಲಿದೆ. ಇಂತಹ ಪವಿತ್ರ ಕಾರ್ಯಕ್ರಮದಲ್ಲಿ ಈ ಬಾರಿ ವಿಐಎಸ್‌ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳ ಪುನರ್ ಆರಂಭ ಹಾಗೂ ಅಭಿವೃದ್ಧಿ ಕುರಿತು, ದೇಶದಲ್ಲಿರುವ ಎಲ್ಲರ ಏಳಿಗೆಗಾಗಿ ಪ್ರಾರ್ಥನೆ ಸಲ್ಲಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ೮೯೭೧೭೦೯೨೮೧ಕ್ಕೆ ಸಂಪರ್ಕಿಸಬಹುದಾಗಿದೆ ಎಂದರು. ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ಧರ್ಮಗುರು ಪಾದರ್ ಲಾನ್ಸಿ ಡಿಸೋಜಾ ಮಾತನಾಡಿ,  ನಾವು ಸೇವಿಸುವ ಆಹಾರ ಯಾವುದಾದರೂ ಇರಲಿ ಉತ್ತಮ ದೇಹ, ಪರಿಶುದ್ಧ ಮನಸ್ಸು, ಭಾವನೆಗಳನ್ನು ಹೊಂದುವ ನಿಟ್ಟಿನಲ್ಲಿ ಅನುಸರಿಸುವ ಆಚರಣೆಗಳಿಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
    ಗಾಂಧಿನಗರ ವೇಲಾಂಗಣಿ ಮಾತೆ ದೇವಾಲಯಗಳ ಧರ್ಮಗುರು ಪಾದರ್ ಸ್ಟೀವನ್ ಡೇಸಾ ಮಾತನಾಡಿ, ಬಲಿಪೂಜೆ ಮಹತ್ವ ಹಾಗು ಕ್ರೈಸ್ತ ಧರ್ಮದ ಆಚರಣೆಯಲ್ಲಿ ಅನುಸರಿಸುವ ಕ್ರಮಗಳನ್ನು ವಿವರಿಸಿದರು.
    ಕಾಗದನಗರದ ಸಂತ ಜೋಸೆಫರ ದೇವಾಲಯ ಧರ್ಮಗುರು ಡೊನೆಮಿಕ್ ಕ್ರಿಸ್ತರಾಜ್, ಡಾನ್ ಬೋಸ್ಕೋ ಕೈಗಾರಿಕಾ ತರಬೇತಿ ಸಂಸ್ಥೆ ನಿರ್ದೇಶಕ ಪಾದರ್ ಆರೋಗ್ಯ ರಾಜ್, ಪ್ರಮುಖರಾದ ದೇವಾಲಯದ ಪಾಲನ ಪರಿಷತ್ ಕಾರ್ಯದರ್ಶಿ ಅಂತೋಣಿ ಡಿಕಾಸ್ಟ, ಸೆಲ್ವರಾಜ್, ಡೇವಿಸ್, ನಗರಸಭಾ ಸದಸ್ಯ ಜಾರ್ಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.