Monday, June 30, 2025

ಜು.೨ರಂದು ರಸ್ತೆ ತಡೆ ಚಳುವಳಿ, ಬೃಹತ್ ಪ್ರತಿಭಟನೆ


    ಭದ್ರಾವತಿ : ಭದ್ರಾ ಬಲದಂಡೆ ನಾಲೆ ಸೀಳಿ ಸರ್ಕಾರ ಕೈಗೊಳ್ಳುತ್ತಿರುವ ಅವೈಜ್ಞಾನಿಕ ಕಾಮಗಾರಿ ಖಂಡಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗು ಹಸಿರುಸೇನೆ ಮತ್ತು ಭದ್ರಾ ಅಚ್ಚುಕಟ್ಟು ರೈತರ ಹಿತರಕ್ಷಣಾ ಸಮಿತಿ ತಾಲೂಕು ಶಾಖೆ ವತಿಯಿಂದ ಜು.೨ರಂದು ರಸ್ತೆ ತಡೆ ಚಳುವಳಿ ಹಾಗು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 
    ತಾಲೂಕಿನ ಅರಹತೊಳಲು ಕೈಮರ, ಎನ್.ಡಿ ಸುಂದರೇಶ್ ವೃತ್ತದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ರಸ್ತೆ ತಡೆ ಚಳುವಳಿ ಹಾಗು ಮಧ್ಯಾಹ್ನ ೧೨.೩೦ಕ್ಕೆ ತಾಲೂಕು ಕಛೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 
    ರೈತ ಮುಖಂಡ ಕೆ.ಟಿ ಗಂಗಾಧರ್ ನೇತೃತ್ವವಹಿಸಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಪ್ರಧಾನ ಮಂತ್ರಿ ಅವಾಸ್ ಯೋಜನೆ ೨.೦ ಯೋಜನೆಯಡಿ ಅರ್ಜಿ ಆಹ್ವಾನ

ನಗರ ವ್ಯಾಪ್ತಿಯ ಕಂಪ್ಯೂಟರ್ ಸಿಬ್ಬಂದಿಗಳಿಗೆ ಮಾಹಿತಿ 

ಪ್ರಧಾನ ಮಂತ್ರಿ ಅವಾಸ್ ಯೋಜನೆ ೨.೦ ಯೋಜನೆಯಡಿ ಭದ್ರಾವತಿ ನಗರಸಭೆ ವ್ಯಾಪ್ತಿಯ ವಸತಿ ರಹಿತ ಹಾಗು ನಿವೇಶನ ರಹಿತ ಕುಟುಂಬಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಈ ಸಂಬಂಧ ಸೋಮವಾರ ನಗರಸಭೆ ಸಭಾಂಗಣದಲ್ಲಿ ಕಂಪ್ಯೂಟರ್ ಸೆಂಟರ್ ಸಿಬ್ಬಂದಿಗಳ ಜೊತೆ ಸಭೆ ನಡೆಸಲಾಯಿತು.
    ಭದ್ರಾವತಿ: ಪ್ರಧಾನ ಮಂತ್ರಿ ಅವಾಸ್ ಯೋಜನೆ ೨.೦ ಯೋಜನೆಯಡಿ ನಗರಸಭೆ ವ್ಯಾಪ್ತಿಯ ವಸತಿ ರಹಿತ ಹಾಗು ನಿವೇಶನ ರಹಿತ ಕುಟುಂಬಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಈ ಸಂಬಂಧ ಸೋಮವಾರ ನಗರಸಭೆ ಸಭಾಂಗಣದಲ್ಲಿ ಕಂಪ್ಯೂಟರ್ ಸೆಂಟರ್ ಸಿಬ್ಬಂದಿಗಳ ಜೊತೆ ಸಭೆ ನಡೆಸಲಾಯಿತು. 
    ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಅವಾಸ್ ೨.೦ ಯೋಜನೆಯನ್ನು ರಾಜ್ಯ ಸರ್ಕಾರದ ನಗರ ವಸತಿ ಯೋಜನೆಗಳೊಂದಿಗೆ ಸಂಯೋಜನೆಗೊಳಿಸಿ ಅನುಷ್ಠಾನಗೊಳಿಸುತ್ತಿದ್ದು, ನಗರಸಭೆ ವ್ಯಾಪ್ತಿಯ ವಸತಿ ರಹಿತ(ಕಚ್ಚಾ ಮನೆ ಹೊಂದಿರುವ) ಮತ್ತು ನಿವೇಶನ ರಹಿತ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ಯೂನಿಫೈಡ್ ವೆಬ್ ಪೋರ್ಟಲ್ (Unified Web Portal )  ನಲ್ಲಿ ಅರ್ಜಿ ಆಹ್ವಾನಿಸಿದೆ. 
    ನಗರ ವ್ಯಾಪ್ತಿಯ ಯಾವುದೇ ಕಂಪ್ಯೂಟರ್ ಸೆಂಟರ್‌ಗಳಲ್ಲಿ ದಿನಾಂಕ ಜು.೧೭, ೨೦೨೫ರೊಳಗಾಗಿ ಕೇಂದ್ರ ಸರ್ಕಾರದ https//pmay.urban.gov.in  ಈ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನಲೆಯಲ್ಲಿ ಅರ್ಜಿ ಸಲ್ಲಿಸಲು ಕಂಪ್ಯೂಟರ್ ಸೆಂಟರ್‌ಗಳಿಗೆ ಬರುವ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡುವ ಮೂಲಕ ಅರ್ಜಿ ಸಲ್ಲಿಸಲು ನೆರವಾಗುವಂತೆ ಕಂಪ್ಯೂಟರ್ ಸೆಂಟರ್ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಯಿತು. 
ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್ ಮತ್ತು ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ನಗರ ವಸತಿ ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ಸಮುದಾಯ ಸಂಘಟನಾ ಅಧಿಕಾರಿ ಸುವಾಸಿನಿ ಉಪಸ್ಥಿತರಿದ್ದರು. 

೧೧ ವರ್ಷ ಅಧಿಕಾರಾವಧಿಯಲ್ಲಿ ಸಂಸದರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳು

ಭದ್ರಾವತಿಯಲ್ಲಿ ಬಿಜೆಪಿ ಪಕ್ಷದ ನಗರ ಮಂಡಲದ ಹುತ್ತ  ಹಾಗೂ ಜನ್ನಾಪುರ ಮಹಾಶಕ್ತಿ ಕೇಂದ್ರಗಳ ವತಿಯಿಂದ ಬಿ.ಎಚ್ ರಸ್ತೆ ಶ್ರೀ ಭದ್ರೇಶ್ವರ ಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ವಿಕಸಿತ ಭಾರತ ಸಾಧನ ಸಮಾವೇಶ ಜರುಗಿತು. 
    ಭದ್ರಾವತಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ೧೧ ವರ್ಷ ಅಧಿಕಾರಾವಧಿ ಯಶಸ್ವಿಯಾಗಿ ಪೂರೈಸಿದ್ದು,  ಜಿಲ್ಲೆಯಲ್ಲಿ ಸಂಸದ ಬಿ.ವೈ ರಾಘವೇಂದ್ರರವರು ಕೈಗೊಂಡಿರುವ ಹಲವಾರು ಅಭಿವೃದ್ಧಿ ಕಾರ್ಯಗಳು ಕೇಂದ್ರ ಸರ್ಕಾರದ ಸಾಧನೆಗೆ ಸಾಕ್ಷಿ ಎಂಬಂತೆ ಕಂಡು ಬರುತ್ತಿವೆ ಎಂದು ಪಕ್ಷದ ಜಿಲ್ಲಾ ಮುಖಂಡರು ಹೇಳಿದರು.  
    ಪಕ್ಷದ ನಗರ ಮಂಡಲದ ಹುತ್ತ  ಹಾಗೂ ಜನ್ನಾಪುರ ಮಹಾಶಕ್ತಿ ಕೇಂದ್ರಗಳ ವತಿಯಿಂದ ಬಿ.ಎಚ್ ರಸ್ತೆ ಶ್ರೀ ಭದ್ರೇಶ್ವರ ಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಕಸಿತ ಭಾರತ ಸಾಧನ ಸಮಾವೇಶದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ್, ಜಿಲ್ಲಾ ಖಜಾಂಚಿ ರಾಮಣ್ಣ ಮತ್ತು ಶಿವಮೊಗ್ಗ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ದೀನ್ ದಯಾಳುರವರು, ಜಿಲ್ಲೆಯಲ್ಲಿ ಸಂಸದ ಬಿ.ವೈ ರಾಘವೇಂದ್ರರವರ ನೇತೃತ್ವದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಬಹುಮುಖ್ಯವಾಗಿ ವಿಮಾನ ನಿಲ್ದಾಣ, ಹೆದ್ದಾರಿ, ರೈಲ್ವೆ ಅಭಿವೃದ್ಧಿ ಕಾರ್ಯಗಳು, ಸಿಗಂದೂರು ಸೇತುವೆ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಲಾಗಿದೆ ಎಂದರು. 
    ಕೇಂದ್ರ ಸರ್ಕಾರದ ಹಲವಾರು ಯೋಜನೆಗಳು ರೈತರು, ಕಾರ್ಮಿಕರು, ಬಡವರು, ಮಕ್ಕಳು-ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಸರ್ವರ ಅಭಿವೃದ್ಧಿಗೆ ಪೂರಕವಾಗಿವೆ ಎಂದರು. 
      ಮಹಾಶಕ್ತಿ ಕೇಂದ್ರಗಳ  ಅಧ್ಯಕ್ಷರಾದ ಸತೀಶ್ ಕುಮಾರ್ ಹಾಗೂ ರಘುರಾವ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಆಪರೇಷನ್ ಸಿಂಧೂರದ ಯಶಸ್ವಿಗೆ ಕಾರಣಕರ್ತರಾದ ಭಾರತೀಯ ವೀರಯೋಧರಿಗೆ ಗೌರವ ನಮನಗಳನ್ನು ಸಮರ್ಪಿಸಿ ದೇಶ ಸೇವೆ ಮಾಡಿದ ಮಾಜಿ ಸೈನಿಕರಿಗೆ ಗೌರವಿಸಿ ಸನ್ಮಾನಿಸಲಾಯಿತು. ಅಲ್ಲದೆ ವಿಕಸಿತ ಭಾರತದ ಅಮೃತಕಾಲದ ಸಂಕಲ್ಪ  ಮಾಡಲಾಯಿತು. 
    ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ, ಮಾಜಿ ಸೈನಿಕ ಸಂಘದ ತಾಲೂಕು ಅಧ್ಯಕ್ಷ ಸುಬೇದಾರ್ ಗುಲ್ಗುಲೆ, ಸುಬೇದಾರ್ ಶ್ರೀನಿವಾಸ್, ಕಮಾಂಡೋ ಗಿರೀಶ್, ಹವಲ್ದಾರ್‌ಗಳಧ ಸುರೇಶ್, ಧರ್ಮಕುಮಾರ್ ಮತ್ತು ಜಿ. ವಾಸುದೇವನ್,  ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್ ಹಾಗೂ ಮೊಸರಳ್ಳಿ ಅಣ್ಣಪ್ಪ,  ಪ್ರಮುಖರಾದ  ಜಿ. ರಾಮುಲಿಂಗಯ್ಯ, ಜಿಲ್ಲಾ ವಿಶೇಷ ಆಹ್ವಾನಿತ ಎಂ. ಮಂಜುನಾಥ್, ಪ್ರಮುಖರಾದ ಪ್ರೇಮ್ ಕುಮಾರ್, ಸುಲೋಚನಾ ಪ್ರಕಾಶ್, ಅನ್ನಪೂರ್ಣ, ರಾಜಶೇಖರ್ ಉಪ್ಪಾರ್, ಲತಾ ಪ್ರಭಾಕರ್, ರವಿಕುಮಾರ್, ಚಂದ್ರಪ್ಪ, ನಂಜಪ್ಪ, ಶೋಭಾ ಪಾಟೀಲ್, ಆಶಾ ಪುಟ್ಟಸ್ವಾಮಿ, ಆಟೋ ಮೂರ್ತಿ, ಮಂಜುಳ, ಉಮಾವತಿ, ಮಂಜುನಾಥ್, ದೀಪಕ್, ಧರ್ಮಣ್ಣ, ಮಂಜೇಗೌಡ, ಶ್ರೀನಿವಾಸ್ ಕಾರಂತ್, ಮಹಾಶಕ್ತಿ ಕೇಂದ್ರ ಹಾಗೂ ಬೂತ್ ಪ್ರಮುಖ ಕಾರ್ಯಕರ್ತರು ಪಾಲ್ಗೊಂಡಿದ್ದರು. 

ಫೈಲ್ವಾನ್ ಕೆಂಚಪ್ಪ ನಿಧನ

ಫೈಲ್ವಾನ್ ಕೆಂಚಪ್ಪ 
    ಭದ್ರಾವತಿ : ಹಳೇನಗರದ ಜಟ್‌ಪಟ್ ನಗರದ ನಿವಾಸಿ, ಕಂಚಿ ಗರಡಿ ಮನೆ ಹಿರಿಯ ಕುಸ್ತಿಪಟು, ಫೈಲ್ವಾನ್ ಕೆಂಚಪ್ಪ(೮೭) ಭಾನುವಾರ ನಿಧನ ಹೊಂದಿದರು. 
    ಇಬ್ಬರು ಪತ್ನಿಯರು, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. 
    ಕೆಂಚಪ್ಪ ನಗರದ ಪ್ರಸಿದ್ದ ಕುಸ್ತಿಪಟುಗಳಲ್ಲಿ ಒಬ್ಬರಾಗಿದ್ದು, ಇವರಿಂದ ಹಲವಾರು ಯುವಕರು ಕುಸ್ತಿ ತರಬೇತಿ ಪಡೆದು ಗುರುತಿಸಿಕೊಂಡಿದ್ದಾರೆ. ಕೆಂಚಪ್ಪ ಶಾಸಕ ಬಿ.ಕೆ ಸಂಗಮೇಶ್ವರ್ ಆಪ್ತರಲ್ಲಿ ಒಬ್ಬರಾಗಿದ್ದು, ಇವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ಇವರ ಸಹೋದರರಾದ ಬಿ.ಕೆ ಮೋಹನ್, ಬಿ.ಕೆ ಶಿವಕುಮಾರ್, ಯುವ ಮುಖಂಡ ಬಿ.ಎಸ್ ಗಣೇಶ್, ಸ್ಥಳೀಯ ಫೈಲ್ವಾನ್‌ಗಳು ಸಂತಾಪ ಸೂಚಿಸಿದ್ದಾರೆ. 

ಎಚ್. ಸಿದ್ದಲಿಂಗಸ್ವಾಮಿಗೆ ಪಿಎಚ್‌ಡಿ ಪದವಿ

ಎಚ್. ಸಿದ್ದಲಿಂಗಸ್ವಾಮಿ 
    ಭದ್ರಾವತಿ: ನಗರದ ಚಮನ್ ಷಾ ವಲಿ ಉರ್ದು ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಎಚ್. ಸಿದ್ದಲಿಂಗಸ್ವಾಮಿ ಅವರು ಶ್ರೀನಿವಾಸವನಮ್, ಕುಪ್ಪಮ್, ದ್ರಾವಿಡಿಯನ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ  ಪದವಿ ಪಡೆದುಕೊಂಡಿದ್ದಾರೆ. 
    ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಘಟನೋತ್ತರ ಪ್ರಾಂಶುಪಾಲ ಡಾ. ಕೆ.ಬಿ ಧನಂಜಯರವರ ಮಾರ್ಗದರ್ಶನಲ್ಲಿ `ಪ್ರಾಬ್ಲಮ್ಸ್ ಅಂಡ್ ಪ್ರಾಸ್ಪೆಕ್ಟಸ್ ಆಫ್ ಸ್ಮಾಲ್ ಇಂಡಸ್ಟ್ರೀಸ್ ಇನ್ ಕರ್ನಾಟಕ ವಿತ್ ಸ್ಪೆಷಲ್ ರೆಫೆರೆನ್ಸ್ ಆಫ್ ಶಿವಮೊಗ್ಗ ಡಿಸ್ಟ್ರಿಕ್ಟ್' ಎಂಬ ವಿಷಯ ಕುರಿತು ಅರ್ಥಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ನಡೆಸಿ ವರದಿ ಮಂಡಿಸಿದ್ದರು. ಸಿದ್ದಲಿಂಗಸ್ವಾಮಿಯವರು ಮೂಲತಃ ಶಿವಮೊಗ್ಗ ಹರಿಗೆ ನಿವಾಸಿಯಾಗಿದ್ದು, ಹನುಮಂತಪ್ಪ-ಗೌರಮ್ಮ ದಂಪತಿ ಪುತ್ರರಾಗಿದ್ದಾರೆ.