Friday, April 15, 2022

ಈಜಲು ಹೋದ ವಿದ್ಯಾರ್ಥಿ ಸಾವು


    ಭದ್ರಾವತಿ, ಏ. ೧೫: ಕಾಲುವೆಯಲ್ಲಿ ಈಜಲು ಹೋದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ರಂಗನಾಥಪುರದಲ್ಲಿ ನಡೆದಿದೆ.
    ಮೃತಪಟ್ಟ ವಿದ್ಯಾರ್ಥಿಯನ್ನು ದೊಡ್ಡೇರಿ ಅಲ್ಪಸಂಖ್ಯಾತ ವಸತಿ ಶಾಲೆಯ ವಿದ್ಯಾರ್ಥಿ ಮಹಮದ್ ಅಲ್ಹನ್(೧೬) ಎಂದು ಗುರುತಿಸಲಾಗಿದೆ. ವಸತಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ಅಲ್ಹನ್ ಪರೀಕ್ಷೆ ಮುಗಿಸಿಕೊಂಡು ರಜೆ ಮೇಲೆ ಮನೆಗೆ ಹಿಂದಿರುಗುವಷ್ಟರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
    ವಿದ್ಯಾರ್ಥಿ ಅಲ್ಹನ್ ಶಿವಮೊಗ್ಗ ವಾದಿ-ಏ-ಹುದಾ ನಿವಾಸಿಯಾದ ಮಹಮದ್ ಹರೂನ್ ಪುತ್ರನಾಗಿದ್ದು, ಈತ ೬ನೇ ತರಗತಿಯಿಂದ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಪರೀಕ್ಷೆ ಮುಕ್ತಾಯಗೊಂಡ ಮರುದಿನ ಈತ ವಸತಿ ಶಾಲೆಯಿಂದ ಸ್ನೇಹಿತರೊಂದಿಗೆ ರಂಗನಾಥಪುರದ ಭದ್ರಾ ನದಿ ಕಾಲುವೆಯಲ್ಲಿ ಈಜಲು ತೆರಳಿದ್ದು, ಈ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿದ್ದಾನೆ. ೨ ದಿನಗಳ ಹಿಂದೆ ಈತನ ಮೃತ ದೇಹ ಹಕ್ಕಿಪಿಕ್ಕಿ ಕ್ಯಾಂಪ್‌ನಲ್ಲಿ ಪತ್ತೆಯಾಗಿದೆ.
    ರಜೆ ಹಿನ್ನಲೆಯಲ್ಲಿ ತಂದೆ ಹರೂನ್ ಪರೀಕ್ಷೆ ಮುಗಿದ ತಕ್ಷಣ ಮಗನನ್ನು ಮನೆಗೆ ಕರೆದೊಯ್ಯಲು ಮುಂದಾಗಿದ್ದರು. ಆದರೆ ಅಷ್ಟರಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂತರಾಷ್ಟ್ರೀಯ ಜಾನಪದ ಕಲಾವಿದ ಎಂ.ಆರ್ ರೇವಣಪ್ಪನವರ ‘ನನ್ನೊಳಗೆ’ ಕವನ ಸಂಕಲನ ಬಿಡುಗಡೆ

ಭದ್ರಾವತಿ ತಾಲೂಕಿನ ಸುಲ್ತಾನ್ ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ, ಅಂತರಾಷ್ಟ್ರೀಯ ಜಾನಪದ ಕಲಾವಿದ ಎಂ.ಆರ್ ರೇವಣಪ್ಪನವರ 'ನನ್ನೊಳಗೆ' ಕವನ ಸಂಕಲನ ಬಿಡುಗಡೆ ಸಮಾರಂಭ ಹೊಸನಗರ ತಾಲೂಕಿನ ಮಾದಾಪುರದಲ್ಲಿ ನಡೆಯಿತು.
    ಭದ್ರಾವತಿ, ಏ. ೧೫: ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ತಾಲೂಕಿನ ಸುಲ್ತಾನ್ ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ, ಅಂತರಾಷ್ಟ್ರೀಯ ಜಾನಪದ ಕಲಾವಿದ ಎಂ.ಆರ್ ರೇವಣಪ್ಪನವರ ‘ನನ್ನೊಳಗೆ’ ಕವನ ಸಂಕಲನ ಬಿಡುಗಡೆ ಹಾಗು ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಹೊಸನಗರ ತಾಲೂಕಿನ ಮಾದಾಪುರದಲ್ಲಿ ನಡೆಯಿತು. 
ಶಿವಮೊಗ್ಗ ಜಾನಪದ ಕಲಾ ಮತ್ತು ಸಾಹಿತ್ಯ ವೇದಿಕೆ ಹಾಗು ಮಾದಾಪುರ ಶ್ರೀ ಶನಿಪರಮೇಶ್ವರ ಯುವಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಎಂ.ಆರ್ ರೇವಣಪ್ಪನವರ ಮಾತೃಶ್ರೀ ಭರ್ಮಮ್ಮ ‘ನನ್ನೊಳಗೆ’ ಕವನ ಸಂಕಲನ ಬಿಡುಗಡೆಗೊಳಿಸಿದರು. 
ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಮಾಜಿ ಸದಸ್ಯೆ ಶ್ವೇತಾ ಆರ್. ಬಂಡಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೀರೇಶ್ ಹಾಲವಳ್ಳಿ, ಮಾಜಿ ಸದಸ್ಯೆ ಸರಸ್ವತಿ ಗಣಪತಿ, ಗ್ರಾ.ಪಂ. ಮಾಜಿ ಸದಸ್ಯ ಎಂ.ಆರ್ ಲೋಕಪ್ಪ, ಉದ್ಯಮಿ ಬಿ.ಕೆ ಜಗನ್ನಾಥ್, ಶಿಕ್ಷಕರಾದ ಯು. ಮಹಾದೇವಪ್ಪ, ಧನಂಜಯ ಮತ್ತು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ಮತ್ತು ಶ್ರೀ ಶನಿಪರಮೇಶ್ವರ ಯುವಕ ಸಂಘದ ಅಧ್ಯಕ್ಷ ಜಿ. ಹರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಗಣೇಶ್, ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ,  ಶಿಕ್ಷಕಿ ಭಾರತಿ ಗೋವಿಂದಸ್ವಾಮಿ, ಮಹಾಬಲೇಶ್ವರ ಹೆಗಡೆ, ಹುಚ್ಚಪ್ಪ ಮಾಸ್ಟರ್, ಲಕ್ಷ್ಮಣ್ ರಾವ್ ಬೋರತ್, ನಿಸ್ಸಾರ್ ಖಾನ್ ಕೆಂಚಾಯಿಕೊಪ್ಪ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. 
  ಜ್ಯೂನಿಯರ್ ಶಂಕರ್‌ನಾಗ್, ಜ್ಯೂನಿಯರ್ ವಿಷ್ಣುವರ್ಧನ್ ಮತ್ತು ಜ್ಯೂನಿಯರ್ ಪುನೀತ್ ರಾಜ್‌ಕುಮಾರ್ ಕಲಾವಿದರಿಂದ ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮಗಳು ಜರುಗಿದವು.  ಎಂ.ಆರ್ ರೇಣಪ್ಪ ನಿರ್ದೇಶನದಲ್ಲಿ ಸಂಗ್ಯಾ ಬಾಳ್ಯ ನಾಟಕ ಶ್ರೀ ಶನಿಪರಮೇಶ್ವರ ಯುವಕ ಸಂಘದ ಕಲಾವಿದರಿಂದ ಪ್ರದರ್ಶನಗೊಂಡು ಪ್ರೇಕ್ಷಕರ ಮನಸೂರೆಗೊಂಡಿತು. 

ವೀರಶೈವ ಲಿಂಗಾಯಿತ ಸಮಾಜ ಬಲಿಷ್ಠಗೊಳ್ಳಲಿ : ಬಿ.ಕೆ ಮೋಹನ್

ಭದ್ರಾವತಿ ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ ಜನ್ಮದಿನಾಚರಣೆ ಕಾಯಕ್ರಮದ ಪೂರ್ವಭಾವಿ ಸಭೆಯಲ್ಲಿ ವೀರಶೈವ ಲಿಂಗಾಯಿತ ಸಮಾಜದ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಮಾತನಾಡಿದರು.
    ಭದ್ರಾವತಿ, ಏ. ೧೫ : ವೀರಶೈವ ಲಿಂಗಾಯಿತರು ತಾಲೂಕಿನಲ್ಲಿ ಸುಮಾರು ೭೦ ರಿಂದ ೭೫ ಸಾವಿರ ಜನಸಂಖ್ಯೆ ಹೊಂದಿದ್ದು, ಎಲ್ಲರೂ ಒಗ್ಗಟ್ಟಾಗಿ ಬಲಿಷ್ಠ ಸಮಾಜ ಕಟ್ಟುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಸಮಾಜದ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹೇಳಿದರು.
    ಅವರು ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ ಜನ್ಮದಿನಾಚರಣೆ ಕಾಯಕ್ರಮದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ತಾಲೂಕಿನಲ್ಲಿ ಬಹುದೊಡ್ಡ ಸಮಾಜವಾಗಿದ್ದರೂ ಸಹ ಒಗ್ಗಟ್ಟು ಕಂಡು ಬರುತ್ತಿಲ್ಲ. ಸಮಾಜದ ಎಲ್ಲಾ ಒಳಪಂಗಡಗಳು ಸಹ ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ತೊರೆದು ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ. ಸಮಾಜವನ್ನು ಎಲ್ಲಾ ರೀತಿಯಿಂದಲೂ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ. ಸಮಾಜದ ಪ್ರತಿಯೊಬ್ಬರ ಕಷ್ಟಸುಖಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕಾಗಿದೆ ಎಂದರು.
    ಸಿದ್ದಗಂಗಾ ಶ್ರೀಗಳ ಜನ್ಮದಿನಾರಣೆ ಮೇ ತಿಂಗಳಿನಲ್ಲಿ ಅದ್ದೂರಿಯಾಗಿ ಆಚರಿಸಲು ಈಗಾಗಲೇ ತೀರ್ಮಾನಿಸಲಾಗಿದ್ದು, ವಿವಿಧ ಸಮಿತಿ ಗಳನ್ನು ರಚಿಸಿ ಪೂರ್ವ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಸಮಾಜದ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರಕೆರೆ ಎಚ್.ಎಲ್ ಷಡಾಕ್ಷರಿ, ಜಂಗಮ ಸಮಾಜದ ಅಧ್ಯಕ್ಷ ಅಡವೀಶಯ್ಯ, ಅಖಿಲ ಭಾರತ ವೀಶೈವ ಮಹಾಸಭಾ ತಾಲೂಕು ಅಧ್ಯಕ್ಷೆ ನಂದಿನಿ ಮಲ್ಲಿಕಾರ್ಜುನ್ ಮತ್ತು ಸಾಧು ವೀರಶೈವ ಸಮಾಜದ ಅಧ್ಯಕ್ಷೆ ಯಶೋಧ ವೀರಭದ್ರಪ್ಪ ಹಾಗು ಸಾಧು ವೀರಶೈವ ಸಮಾಜದ ಯುವ ಘಟಕದ ಅಧ್ಯಕ್ಷ ರವಿಕುಮಾರ್ ಸೇರಿದಂತೆ ಇನ್ನಿತರರು ವೀರಶೈವ ಲಿಂಗಾಯಿತ ಸಮಾಜವನ್ನು ಮತ್ತಷ್ಟು ಸಂಘಟಿಸುವ ಕುರಿತು ಮಾತನಾಡಿದರು.
    ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ನೋಳಂಬ ವೀರಶೈವ ಸಮಾಜದ ಉಪಾದ್ಯಕ್ಷ ರಾಜು, ವಕೀಲರ ಸಂಘದ ಉಪಾಧ್ಯಕ್ಷ ವಿಶ್ವನಾಥ್, ಪಂಚಮಸಾಲಿ ಸಮಾಜದ ಅಧ್ಯಕ್ಷ ಸತೀಶ್, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಹಳೇನಗರ ವೀರಶೈವ ಸೇವಾ ಸಮಿತಿ ಅಧ್ಯಕ್ಷ ಆರ್. ಮಹೇಶ್‌ಕುಮಾರ್, ವೀರಶೈವ ಲಿಂಗಾಯಿತ ಮಹಿಳಾ ಸಮಾಜದ ಆರ್.ಎಸ್.ಶೋಭಾ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು
    ವೀರಶೈವ ಸಮಾಜ ತಾಲೂಕು ಘಟಕದ ನೂತನ ಅಧ್ಯಕ್ಷ ಕೆ.ಎಚ್.ತೀರ್ಥಯ್ಯ ಮತ್ತು ನೇಪಾಳದಲ್ಲಿ ನಡೆಯಲಿರುವ ೧೬ವರ್ಷ ಒಳಗಿನ ಅಂತರಾಷ್ಟ್ರೀಯ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಗೆ ಆಯ್ಕೆಯಾಗಿರುವ ಬಾರಂದೂರಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿ ಸಮರ್ಥ ಎಂ. ಪಾಟೀಲ್‌ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಸಮಾಜದ ಮುಖಂಡರಾದ ವಾಗೀಶ್ ಸ್ವಾಗತಿಸಿದರು. ಎಂ.ಪರಮೇಶ್ವರ ನಿರೂಪಿಸಿದರು. ತೀರ್ಥಯ್ಯ ಪ್ರಸ್ತಾವಿಕ ನುಡಿಗಳನ್ನಾಡಿದರು.

ಅಂಬೇಡ್ಕರ್ ಜಯಂತಿ : ವಿವಿಧ ಸಂಘಟನೆಗಳಿಂದ ಮಾಲಾರ್ಪಣೆ

ಭದ್ರಾವತಿ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್‌ನಲ್ಲಿ ಗುರುವಾರ ಛಲವಾದಿ ಮಹಾಸಭಾ ವತಿಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಂಭ್ರಮಿಸಲಾಯಿತು.
    ಭದ್ರಾವತಿ, ಏ. ೧೪ : ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್  ಜನ್ಮದಿನಾಚರಣೆ ಅಂಗವಾಗಿ ವಿವಿಧ ಸಂಘಟನೆಗಳು ಗುರುವಾರ ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸಂಭ್ರಮಿಸಿದವು.
    ದಲಿತಪರ ಸಂಘಟನೆಗಳು ಜೈ ಭೀಮ್ ಘೋಷಣೆಗಳನ್ನು ಹಾಕುವ ಮೂಲಕ ಪಟಾಕಿ ಸಿಡಿಸಿ, ಸಿಹಿ ಹಂಚಿಕೆ ಮಾಡಿದವು. ಸುಮಾರು ೨-೩ ತಾಸುಗಳ ವರೆಗೆ ಅಂಬೇಡ್ಕರ್ ವೃತ್ತದಲ್ಲಿ ಜನಸಂದಣಿ ಕಂಡು ಬಂದಿತು. ಈ ನಡುವೆ ಕೆಲವು ಸಂಘಟನೆಗಳು ನೀಲಿ ಪೇಟ, ಧ್ವಜ ಹಿಡಿದು ಕಲಾತಂಡಗಳೊಂದಿಗೆ ಹೆಜ್ಜೆ ಹಾಕಿದವು.
       ಛಲವಾದಿ ಮಹಾಸಭಾ :
    ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸುರೇಶ್ ನೇತೃತ್ವದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಮಹೇಶ್, ಜಯರಾಜ್, ಗೋಪಾಲ್, ಈ.ಪಿ. ಬಸವರಾಜ್, ಅನಿಲ್, ಕೂಡ್ಲಿಗೆರೆ, ರಮೇಶ್, ಕಾಳಿಂಗನಹಳ್ಳಿ ಜಗದೀಶ್, ವಿಶ್ವನಾಥ್, ಎನ್. ಶ್ರೀನಿವಾಸ್, ಪುಟ್ಟರಾಜ್, ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್‌ನಲ್ಲಿ ಗುರುವಾರ ಬಹುಜನ ಸಮಾಜವಾದಿ ಪಾರ್ಟಿ ವತಿಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
    ಬಹುಜನ ಸಮಾಜ ಪಾರ್ಟಿ:
    ಬಹುಜನ ಸಮಾಜ ಪಾರ್ಟಿ ವತಿಯಿಂದ ತಾಲೂಕು ಅಧ್ಯಕ್ಷ ರಹಮತ್ ಉಲ್ಲಾ ಖಾನ್ ನೇತೃತ್ವದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಸಂಯೋಜಕ ಎಂ. ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಪಿ.ವಿ ನರಸಯ್ಯ, ಗುಲಾಮ್ ಹುಸೇನ್, ಶೌಕತ್ ಸೇರಿದಂತೆ  ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.


ಭದ್ರಾವತಿ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್‌ನಲ್ಲಿ ಗುರುವಾರ ಕ್ರೈಸ್ತ ಸಮಾಜದ ವಿವಿಧ ಸಂಘಟನೆಗಳ ಮುಖಂಡರಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
      ಕ್ರೈಸ್ತ ಸಮಾಜದ ವಿವಿಧ ಸಂಘಟನೆಗಳು:
    ಕ್ರೈಸ್ತ ಸಮಾಜದ ವಿವಿಧ ಸಂಘಟನೆಗಳ ಮುಖಂಡರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಯುಸಿಎಟಿ ಅಧ್ಯಕ್ಷ ಸೆಲ್ವರಾಜ್, ಕ್ಯಾಥೋಲಿಕ್ ಅಸೋಸಿಯೇಷನ್ ಪ್ರೆಸಿಡೆಂಟ್ ಅಂತೋಣಿ, ಜೆಸಿಡಬ್ಲ್ಯೂಎ ಅಧ್ಯಕ್ಷ ಜೆ. ಭಾಸ್ಕರ್, ನಗರಸಭಾ ಸದಸ್ಯ ಜಾರ್ಜ್, ಐಸಾಕ್ ಲಿಂಕನ್, ಪೌಲ್ ಡಿಸೋಜಾ, ಥಾಮಸ್, ಜಾನ್ಸನ್, ಎಬಿಸಿಎಂಎಸ್ ರಾಜ್ಯ ಕಾರ್ಯದರ್ಶಿ ಸುರೇಶ್, ನಂದಾಕುಮಾರ್, ಫಾ. ಜ್ಞಾನ ಸುಂದರ್, ಫಾ. ಡ್ಯಾನಿಯಲ್, ಫಾ. ಹಬಕ್ಕೂರ್, ಮೋಸಸ್ ರೋಸಯ್ಯ, ಪ್ರಾನ್ಸಿಸ್ ಮತ್ತು ವಿಲ್ಸನ್ ಬಾಬು ಸೇರಿದಂತೆ ಉಪಸ್ಥಿತರಿದ್ದರು.


ಭದ್ರಾವತಿ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್‌ನಲ್ಲಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

    ಕರ್ನಾಟಕ ರಕ್ಷಣಾ ವೇದಿಕೆ :
    ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಾಲೂಕು ಅಧ್ಯಕ್ಷ ರಂಗಸ್ವಾಮಿ ನೇತೃತ್ವದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಭಂಡಾರಹಳ್ಳಿ ಘಟಕದ ಅಧ್ಯಕ್ಷ ಮಂಜುನಾಥ್, ಡಿ. ಜಯರಾಮ್, ಪ್ರವೀಣ್‌ಕುಮಾರ್, ಕೆ. ಮಂಜುನಾಥ್, ನಾಗರಾಜ್, ಪಿ. ಸುಂದರ್, ರಘು, ನಾಗರಾಜ್(ಅಂಬೇಡ್ಕರ್‌ನಗರ), ಜಯರಾಮ್(ವೇಲೂರು ಶೆಡ್), ಎಚ್. ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ):
    ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಂಘಟನಾ ಸಂಚಾಲಕ ಎಂ. ಪಳನಿರಾಜ್ ನೇತೃತ್ವದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ತಾಲೂಕು ಸಂಚಾಲಕ ಕುಬೇಂದ್ರಪ್ಪ, ಜಿಲ್ಲಾ ಸಮಿತಿ ಸದಸ್ಯ ಎಸ್.ಆರ್ ಕಲ್ಲೇಶ್, ನಗರ ಸಂಚಾಲಕ ಪುಟ್ಟರಾಜ್, ಮುರಳಿಧರ, ರಾಮಾನಾಯ್ಕ, ಮಂಜುನಾಥ್, ಬಸವರಾಜ್, ಪೆರಿಸ್ವಾಮಿ, ಉದಯಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್‌ನಲ್ಲಿ ಗುರುವಾರ ಮುಸ್ಲಿಂ ಸಮಾಜದ ವಿವಿಧ ಸಂಘಟನೆಗಳ ಮುಖಂಡರಿಂದ ವತಿಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
    ಮುಸ್ಲಿಂ ಸಮಾಜದ ವಿವಿಧ ಸಂಘಟನೆಗಳು:
    ಮುಸ್ಲಿಂ ಸಮಾಜದ ವಿವಿಧ ಸಂಘಟನೆಗಳ ಪ್ರಮುಖರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಪ್ರಮುಖರಾದ ಮುತುರ್ಜಾಖಾನ್, ದಿಲ್‌ದಾರ್, ಅಮಿರ್‌ಜಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್‌ನಲ್ಲಿ ಗುರುವಾರ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
    ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜ :
    ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ನಗರಸಭಾ ಸದಸ್ಯ, ಸಮಾಜದ ಅಧ್ಯಕ್ಷ ಬಸವರಾಜ ಬಿ ಆನೆಕೊಪ್ಪ ನೇತೃತ್ವದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಸಮಾಜದ ಗೌರವಾಧ್ಯಕ್ಷ ಟಿ.ವಿ ಬಸವರಾಜಪ್ಪ, ಪ್ರಧಾನ ಕಾರ್ಯದರ್ಶಿ ಶಿವಾನಂದ, ಮಂಜುನಾಥ್ ಪಾಳೆಗಾರ್, ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    

ಭದ್ರಾವತಿ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್‌ನಲ್ಲಿ ಗುರುವಾರ ವೆಂಕಟೇಶ್ ಉಜ್ಜನಿಪುರ, ಉಮೇಶ್, ಶ್ಯಾಮ್, ಹಮಣ್ಣ, ವಿವೇಕ್ ಸೇರಿದಂತೆ ಇನ್ನಿತರರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
    ಉಳಿದಂತೆ ಅರುದಂತಿಯಾರ್ ಕ್ಷೇಮಾಭಿವೃದ್ಧಿ ಸಂಘದಿಂದ ಗೌರವ ಅಧ್ಯಕ್ಷ ಕುಪ್ಪಸ್ವಾಮಿ, ಅಧ್ಯಕ್ಷ ಎಂ. ಅಣ್ಣಾದೊರೈ ಮತ್ತು ಪದಾಧಿಕಾರಿಗಳು, ಸದಸ್ಯರು, ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್ ಮತ್ತು ಪದಾಧಿಕಾರಿಗಳು, ಯುವ ಮುಖಂಡರಾದ ವೆಂಕಟೇಶ್ ಉಜ್ಜನಿಪುರ, ಉಮೇಶ್, ಶ್ಯಾಮ್, ಹಮಣ್ಣ, ವಿವೇಕ್ ಮತ್ತು ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ ವತಿಯಿಂದ ರೈತ ವರಿಷ್ಠ ಕೆ.ಟಿ ಗಂಗಾಧರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ ವಿರೇಶ್ ಸೇರಿದಂತೆ ಪದಾಧಿಕಾರಿಗಳು, ರೈತ ಮುಖಂಡರು, ಬಂಜಾರ ಯುವ ಘಟಕದ ಅಧ್ಯಕ್ಷ ಕೃಷ್ಣನಾಯ್ಕ ಮತ್ತು ಪದಾಧಿಕಾರಿಗಳು ಹಾಗು ಪೊಲೀಸ್ ನಗರ ವೃತ್ತ ನಿರೀಕ್ಷ ರಾಘವೇಂದ್ರ ಕಾಂಡಿಕೆ ಮತ್ತು ಗ್ರಾಮಾಂತರ ವೃತ್ತ ನಿರೀಕ್ಷಕ ಚೈತನ್ಯ ಸೇರಿದಂತೆ ಇನ್ನಿತರರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.


ಭದ್ರಾವತಿ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್‌ನಲ್ಲಿ ಗುರುವಾರ  ಪೊಲೀಸ್ ನಗರ ವೃತ್ತ ನಿರೀಕ್ಷ ರಾಘವೇಂದ್ರ ಕಾಂಡಿಕೆ ಮತ್ತು ಗ್ರಾಮಾಂತರ ವೃತ್ತ ನಿರೀಕ್ಷಕ ಚೈತನ್ಯ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.