Monday, July 4, 2022

ಅಸಂಘಟಿತ ಕಾರ್ಮಿಕರಿಗೆ ಕಾರ್ಡ್ ವಿತರಣೆ, ಸಾಧಕರಿಗೆ ಅಭಿನಂದನೆ

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ವತಿಯಿಂದ ಭದ್ರಾವತಿ ತಾಲೂಕಿನ ಶ್ರೀರಾಮನಗರ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಅಸಂಘಟಿತ ಕಾರ್ಮಿಕರ ಕಾರ್ಡ್ ವಿತರಣೆ, ಅಭಿನಂದನಾ ಹಾಗು ಕೋವಿಡ್ ಜಾಗೃತಿ ಕಾರ್ಯಕ್ರಮದಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಮಾಡಿರುವ ಎರಡೂವರೆ ವರ್ಷದ ಲಕಿತ್ ಗೌಡ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಜು. ೪: ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ವತಿಯಿಂದ ತಾಲೂಕಿನ ಶ್ರೀರಾಮನಗರ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಅಸಂಘಟಿತ ಕಾರ್ಮಿಕರ ಕಾರ್ಡ್ ವಿತರಣೆ, ಅಭಿನಂದನಾ ಹಾಗು ಕೋವಿಡ್ ಜಾಗೃತಿ ಕಾರ್ಯಕ್ರಮವನ್ನು ಸಂಘದ ಗೌರವಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಉದ್ಘಾಟಿಸಿದರು.
      ಕಾರ್ಯಕ್ರಮದಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಮಾಡಿರುವ ಎರಡೂವರೆ ವರ್ಷದ ಲಕಿತ್ ಗೌಡ ಹಾಗು ಬಸಲಿಕಟ್ಟೆ ನಿವಾಸಿ ಯೂತ್ ಗೇಮ್ಸ್ ಅಂತರಾಷ್ಟ್ರೀಯ ಖೋ ಖೋ ಕ್ರೀಡಾಪಟು ಎಂ. ಹರ್ಷಿತ್ ಮತ್ತು ವೀರಾಪುರ ನಿವಾಸಿ ಯೂತ್ ಗೇಮ್ಸ್ ಅಂತರಾಷ್ಟ್ರೀಯ ಟ್ರಿಪಲ್ ಜಂಪ್ ಕ್ರೀಡಾಪಟು ಸಮರ್ಥ ಲೋಕೇಶ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
      ಸಂಘದ ಗ್ರಾಮಾಂತರ ಅಧ್ಯಕ್ಷೆ ಶಕುಂತಲಾ ಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡ ಬಿ.ಎಸ್ ಗಣೇಶ್, ಬಿಜೆಪಿ ಮಂಡಲ ತಾಲೂಕು ಅಧ್ಯಕ್ಷ ಎಂ. ಪ್ರಭಾಕರ್, ಸಂಘದ ಸಂಸ್ಥಾಪಕ ಆಯನೂರ್ ಕುಪೇಂದ್ರ, ರಾಜ್ಯಾಧ್ಯಕ್ಷ ಕೇಶವಮೂರ್ತಿ ಪೇಟ್ಕರ್, ರಾಜ್ಯ ಸಂಘಟನಾ ಕಾರ್ಯದಶಿ ಪ್ರದೀಪ್, ಜಿಲ್ಲಾಧ್ಯಕ್ಷೆ ಸುರೇಖಾ ಪಾಲಾಕ್ಷಪ್ಪ, ತಾಲೂಕು ನಗರ ಅಧ್ಯಕ್ಷ ಬಾರಂದೂರು ಮಂಜುನಾಥ್, ನಗರ ಪ್ರಧಾನ ಕಾರ್ಯದರ್ಶಿ ರೂಪ ನಾಗರಾಜ್, ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಲೋಲಾಕ್ಷಿ ರಂಗಸ್ವಾಮಿ, ಉಪಾಧ್ಯಕ್ಷೆ ಶಶಿಕಲಾ ಶಿವಮೂರ್ತಿ, ಕಾರ್ಯದರ್ಶಿ ಜಬಿವುಲ್ಲಾ, ಮೋಹನ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮೊಬೈಲ್ ಆಪ್ ಬಳಸಿ ಶಾಲಾ ಸಂಸತ್ತು ಚುನಾವಣೆ : ನೂತನ ಪ್ರತಿನಿಧಿಗಳ ಆಯ್ಕೆ

ಭದ್ರಾವತಿ, ಜು. ೪: ಶಾಲಾ ಚಟುವಟಿಕೆಯ ಪ್ರತಿಯೊಂದರಲ್ಲೂ ವಿಶಿಷ್ಟತೆಯನ್ನು ಕಾಯ್ದುಕೊಂಡು ಬರುತ್ತಿರುವ ನಗರದ ಅಪ್ಪರ್ ಹುತ್ತಾದಲ್ಲಿರುವ ಅನನ್ಯ ಪೂರ್ವ ಪ್ರಾಥಮಿಕ ಹಾಗು ಪ್ರೌಢಶಾಲೆಯಲ್ಲಿ ಸೋಮವಾರ ಶಾಲಾ ಸಂಸತ್ತು ಚುನಾವಣೆ ಯಶಸ್ವಿಯಾಗಿ ನಡೆಯಿತು.
      ವಿಶೇಷವಾಗಿ ಶಾಲಾ ಸಂಸತ್ತು ಚುನಾವಣೆಯನ್ನು ಮೊಬೈಲ್ ಆಪ್ ಬಳಕೆ ಮಾಡಿ ಡಿಜಿಟಲ್ ವೋಟಿಂಗ್ ಮುಖಾಂತರ ನಡೆಸಲಾಯಿತು. ಚುನಾವಣೆಯಲ್ಲಿ ವಿದ್ಯಾರ್ಥಿಗಳು ಸಂಭ್ರಮದಿಂದ ಪಾಲ್ಗೊಂಡು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು.
      ಚುನಾವಣೆಯಲ್ಲಿ ಆಯ್ಕೆಯಾದವರು :
      ಉಪಾಧ್ಯಕ್ಷರಾಗಿ ಸುರೇಶ್ ಗೌಡ  ಹಾಗೂ ಸಿ.ಎನ್ ಶ್ರೇಯ ಹಾಗೂ ಕಾರ್ಯದರ್ಶಿಯಾಗಿ ಜಿ.ಎಸ್ ಪುನೀತ್ ಮತ್ತು  ಸಹ ಕಾರ್ಯದರ್ಶಿಯಾಗಿ ಹರ್ಷಿತ್ ಹಾಗೂ ಖಜಾಂಚಿಯಾಗಿ ಪ್ರಿಯಾಂಕ ಆಯ್ಕೆಯಾದರು. ವಿದ್ಯಾಸಂಸ್ಥೆಯ ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಚುನಾವಣೆ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಲು ಸಹಕರಿಸಿದರು. ಆಡಳಿತಾಧಿಕಾರಿ ವೇಣುಗೋಪಾಲ್, ಪ್ರಾಂಶುಪಾಲ ಕಲ್ಲೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಶಾಲಾ ಚಟುವಟಿಕೆಯ ಪ್ರತಿಯೊಂದರಲ್ಲೂ ವಿಶಿಷ್ಟತೆಯನ್ನು ಕಾಯ್ದುಕೊಂಡು ಬರುತ್ತಿರುವ ಭದ್ರಾವತಿ ಅಪ್ಪರ್ ಹುತ್ತಾದಲ್ಲಿರುವ ಅನನ್ಯ ಪೂರ್ವ ಪ್ರಾಥಮಿಕ ಹಾಗು ಪ್ರೌಢಶಾಲೆಯಲ್ಲಿ ಸೋಮವಾರ ಶಾಲಾ ಸಂಸತ್ತು ಚುನಾವಣೆ ಯಶಸ್ವಿಯಾಗಿ ನಡೆಯಿತು.

ರೈಲಿಗೆ ಸಿಲುಕಿ ೩೦ಕ್ಕೂ ಹೆಚ್ಚು ಕುರಿಗಳು ಬಲಿ

ಭದ್ರಾವತಿ ಉಂಬ್ಳೆಬೈಲು ರಸ್ತೆ ಅಂಡರ್ ಬ್ರಿಡ್ಜ್ ಬಳಿ ಎಲ್‌ಐಸಿ ಕಛೇರಿ ಮುಂಭಾಗ ಸೋಮವಾರ ಸಂಜೆ ಸುಮಾರು ೩೦ಕ್ಕೂ ಹೆಚ್ಚು ಕುರಿಗಳು ಚಲಿಸುತ್ತಿದ್ದ ರೈಲಿಗೆ ಸಿಲುಕಿಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ.
    ಭದ್ರಾವತಿ, ಜು. ೪ :  ನಗರದ ಉಂಬ್ಳೆಬೈಲು ರಸ್ತೆ ಅಂಡರ್ ಬ್ರಿಡ್ಜ್ ಬಳಿ ಎಲ್‌ಐಸಿ ಕಛೇರಿ ಮುಂಭಾಗ ಸೋಮವಾರ ಸಂಜೆ ಸುಮಾರು ೩೦ಕ್ಕೂ ಹೆಚ್ಚು ಕುರಿಗಳು ಚಲಿಸುತ್ತಿದ್ದ ರೈಲಿಗೆ ಸಿಲುಕಿಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ.


      ಕುರಿಗಾಹಿಗಳು ಉಂಬ್ಳೆಬೈಲು ರಸ್ತೆಯಲ್ಲಿ ಬರುತ್ತಿದ್ದಾರೆ. ವಾಹನ ದಟ್ಟಣೆ ಹೆಚ್ಚಾದ ಹಿನ್ನಲೆಯಲ್ಲಿ ಕುರಿಗಳು ಏಕಾಏಕಿ ರೈಲ್ವೆ ಹಳಿ ಕಡೆಗೆ ತಿರುಗಿವೆ. ಈ ಸಂದರ್ಭದಲ್ಲಿ ತಾಳಗುಪ್ಪ-ಮೈಸೂರು ರೈಲಿಗೆ ಸಿಲುಕಿಕೊಂಡಿವೆ. ಕೆಲವು ಕುರಿಗಳು ರೈಲಿಗೆ ಸಿಲುಕಿ ಛಿದ್ರ ಛಿದ್ರವಾಗಿವೆ. ಸ್ಥಳದಲ್ಲಿಯೇ ಸುಮಾರು ೩೦ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.
      ಕುರಿಗಳು ಹಾವೇರಿ ಸವಣೂರಿನ ವ್ಯಕ್ತಿಯೊಬ್ಬರಿಗೆ ಸೇರಿದ್ದಾಗಿದ್ದು, ಘಟನೆ ನಡೆದ ಕೆಲವೇ ಸಮಯದಲ್ಲಿ ಮೃತ ಕುರಿಗಳನ್ನು ತೆರವುಗೊಳಿಸಲಾಯಿತು.



ವಿಇಎಸ್ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

ಭದ್ರಾವತಿ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಮಕ್ಕಳ ತಜ್ಞ ಡಾ.ಕೆ.ಜೆ ರಾಜೇಂದ್ರ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಜು. ೪: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತ ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ರಾಷ್ಟ್ರೀಯ ವೈದ್ಯರ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು.
      ವಿದ್ಯಾಸಂಸ್ಥೆಯ ಹಳೇಯ ವಿದ್ಯಾರ್ಥಿ, ನಗರದ ಪ್ರಗತಿ ಮಕ್ಕಳ ಚಿಕಿತ್ಸಾಲಯದ ವೈದ್ಯ ಡಾ.ಕೆ.ಜೆ ರಾಜೇಂದ್ರ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
      ಈ ಸಂದರ್ಭದಲ್ಲಿ ಮಾತನಾಡಿದ ಡಾ.ಕೆ.ಜೆ ರಾಜೇಂದ್ರ, ವಿದ್ಯಾಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ.  ಈ ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಶಾಲಾ ದಿನಗಳು ಇಂದಿಗೂ ಅವಿಸ್ಮರಣೀಯವಾಗಿ ಉಳಿದುಕೊಂಡಿದ್ದು, ವೈದ್ಯರ ದಿನಾಚರಣೆಯಲ್ಲಿ ನನ್ನನ್ನು ಆಹ್ವಾನಿಸಿ ಸನ್ಮಾನಿಸುವ ಮೂಲಕ ಅಭಿನಂದಿಸುತ್ತಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ ಎಂದರು.  
       ವಿದ್ಯಾ ಸಂಸ್ಥೆಯ ಕಾರ್ಯಾಧ್ಯಕ್ಷ ಬಿ.ಎಲ್ ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಡಾ.ಎಸ್.ಪಿ ರಾಕೇಶ್, ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಶಿಕ್ಷಕರು ಹಾಗು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.  
      ಜೆ.ಆರ್ ಆಶಾ ಪ್ರಾರ್ಥಿಸಿದರು. ಕವಿತ ನಿರೂಪಿಸಿದರು. ರೇವತಿ ಸ್ವಾಗತಿಸಿ ರವಿ ವಂದಿಸಿದರು.

ಕೇಂದ್ರ, ರಾಜ್ಯ ಸರ್ಕಾರಗಳಿಂದ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನ

ಪಠ್ಯಪುಸ್ತಕ ಬದಲಾವಣೆ ಕೈಬಿಡಿ, ಪ್ರತ್ಯೇಕ ನಿಗಮ ಸ್ಥಾಪಿಸಿ : ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಆಗ್ರಹ

ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಪ್ರಮುಖರು ಸೋಮವಾರ ಭದ್ರಾವತಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಭದ್ರಾವತಿ, ಜು. ೪: ರಾಜ್ಯದ ಜನಸಂಖ್ಯೆಯಲ್ಲಿ ೪ನೇ ಸ್ಥಾನದಲ್ಲಿರುವ ಈಡಿಗ, ಬಿಲ್ಲವ, ನಾಮಧಾರಿಯಾಗಿ ೨೬ ಪಂಗಡಗಳನ್ನು ಒಳಗೊಂಡಿರುವ ಹಿಂದುಳಿದ ಸಮಾಜವನ್ನು ಕಡೆಗಣಿಸುವ ಜೊತೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಮುಂದಾಗಿವೆ ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಪ್ರಮುಖರು ಆರೋಪಿಸಿದರು.
      ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪ್ರಮುಖ್ ಪ್ರವೀಣ್, ತಾಲೂಕು ಅಧ್ಯಕ್ಷ ಎನ್. ನಟರಾಜ್ ಸೇರಿದಂತೆ ಇನ್ನಿತರರು, ಹಿಂದುಳಿದ ವರ್ಗದವರು ಎಂಬ ಏಕೈಕ ಕಾರಣಕ್ಕೆ ಸಮಾಜವನ್ನು ಕಡೆಗಣಿಸಲಾಗುತ್ತಿದೆ. ದೆಹಲಿಯಲ್ಲಿ ಜನವರಿ-೨೬ರ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಬ್ರಹಶ್ರೀ ನಾರಾಯಣ ಗುರುಗಳ ಸ್ಥಬ್ದಚಿತ್ರಕ್ಕೆ ಅವಕಾಶ ನೀಡದೆ ಗುರುಗಳನ್ನು ಅವಮಾನಿಸಿರುವ ಘಟನೆಯನ್ನು ಸಮಾಜ ಇನ್ನೂ ಮರೆತ್ತಿಲ್ಲ. ಈಗಿರುವಾಗ ರಾಜ್ಯ ಸರ್ಕಾರ ಇದೀಗ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ೧೦ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ತೆಗೆದು ಕನ್ನಡ ಪಠ್ಯ ಪುಸ್ತಕಕ್ಕೆ ಬದಾಯಿಸುವ ಮೂಲಕ ಮತ್ತೊಮ್ಮೆ ಅವಮಾನಗೊಳಿಸುವ ನಿಟ್ಟಿನಲ್ಲಿ ತೊಡಗಿದೆ. ಇದನ್ನು ವೇದಿಕೆ ಖಂಡಿಸುವ ಜೊತೆಗೆ ಕನ್ನಡ ಪಠ್ಯ ಪುಸ್ತಕಕ್ಕೆ ಬದಲಾಯಿಸಿರುವ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು.
      ಬ್ರಹ್ಮಶ್ರೀ ನಾರಾಯಣ ಗುರುಗಳ ಮತ್ತು ಪೆರಿಯಾರ್ ಅವರ ಜೀವನ ಚರಿತ್ರೆ ೧೦ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ಕೈಬಿಟ್ಟಿರುವ ಬಗ್ಗೆ ಪ್ರಾರಂಭವಾದ ಹೋರಾಟ ಆ ನಂತರದ ದಿನಗಳಲ್ಲಿ ಭಗತ್ ಸಿಂಗ್ ಚರಿತ್ರೆ ಕೈಬಿಟ್ಟಿರುವುದು ಜೊತೆಯಲ್ಲಿ ಬಸವಣ್ಣ, ಕುವೆಂಪು, ಅಂಬೇಡ್ಕರ್‌ರವರ ಚರಿತ್ರೆಯ ಪಾಠಗಳಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ಲಿಂಗಾಯಿತ, ಒಕ್ಕಲಿಗ ಸಮಾಜ ಮುಂತಾದ ಮೇಲ್ವರ್ಗಗಳ ಸ್ವಾಮೀಜಿಗಳ ಹೋರಾಟದ ಎಚ್ಚರಿಕೆ ಬಂದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ, ಶಿಕ್ಷಣ ಸಚಿವರು ರೋಹಿತ್ ಚಕ್ರತೀರ್ಥ ಸಮಿತಿ ವಿಸರ್ಜಿಸುವುದರ ಜೊತೆಗೆ ಕುವೆಂಪು ಮತ್ತು ಬಸವಣ್ಣನವರ ಚರಿತ್ರೆಯಲ್ಲಿ ಆಗಿರುವ ಕೆಲವು ಲೋಪದೋಷಗಳನ್ನು ಸರಿಪಡಿಸುವ ಮೂಲಕ ಮೇಲ್ವರ್ಗಗಳನ್ನು ಓಲೈಸಲು ಮುಂದಾಗಿರುವುದು ತಿಳಿದುಬಂದಿದೆ.
      ಆದರೆ ಹಿಂದುಳಿದ ವರ್ಗಗಳ ಉನ್ನತಿಯ ಹರಿಕಾರ, ಕೇರಳದಲ್ಲಿ ಮೇಲ್ವರ್ಗದವರ ಅನಾಚಾರ, ದಬ್ಬಾಳಿಕೆಯಿಂದಾಗಿ ಮತಾಂತರವಾಗುತ್ತಿದ್ದ ಹಿಂದುಳಿದ ವರ್ಗಗಳಿಗೆ ಧ್ವನಿಯಾಗಿ, ಶಕ್ತಿಯಾಗಿ ಅವರನ್ನು ಹಿಂದುತ್ವದಲ್ಲಿ ಉಳಿಸಿ ಕೇರಳವನ್ನು ದೇವರ ನಾಡನ್ನಾಗಿ ಪರಿವರ್ತಿಸಿದ ಮಹಾನ್ ಸಂತ, ವಿದ್ಯೆಯ ಮಹತ್ವ ಸಮಾಜಕ್ಕೆ ತಿಳಿಸಿಕೊಟ್ಟು ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ ಸಮಾಜ ಸುಧಾರಕರಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ಎಲ್ಲಾ ವಿದ್ಯಾರ್ಥಿಗಳು ಅಧ್ಯಯನ ಮಾಡಲೇಬೇಕಾದ ಸಮಾಜ ವಿಜ್ಞಾನ ಪಠ್ಯಪುಸ್ತಕದಿಂದ ತೆಗೆದು ವಿದ್ಯಾರ್ಥಿಗಳಿಗೆ ಐಚ್ಚಿಕವಾದ ಕನ್ನಡ ಪಠ್ಯಪುಸ್ತಕದಲ್ಲಿ ಸೇರ್ಪಡೆಗೊಳಿಸಿ ಹಿಂದುಳಿದ ಸಮಾಜದ ಕಣ್ಣೊರೆಸುವ ತಂತ್ರ ಮಾಡಲಾತ್ತಿದೆ ಎಂದು ಆರೋಪಿಸಿದರು. ಇದನ್ನು ಸಮಾಜ ಯಾವತ್ತಿಗೂ ಒಪ್ಪುತ್ತಿಲ್ಲ. ಈಗಾಗಲೇ ಈ ಕುರಿತು ಈ ಹಿಂದೆಯೇ ಸಮಾಜದ ಗಣ್ಯರು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿಯೇ ಬ್ರಹ್ಮಶ್ರೀ ನಾರಾಯಣಗುರುಗಳ ಜೀವನ ಚರಿತ್ರೆ ಮುಂದುವರೆಸಬೇಕೆಂದು ಆಗ್ರಹಿಸಿದರು.
       ರಾಜ್ಯದ ಜನಸಂಖ್ಯೆಯಲ್ಲಿ ೪ನೇ ಸ್ಥಾನದಲ್ಲಿರುವ ಈಡಿಗ, ಬಿಲ್ಲವ, ನಾಮಧಾರಿಯಾಗಿ ೨೬ ಪಂಗಡಗಳನ್ನು ಒಳಗೊಂಡಿರುವ ಹಿಂದುಳಿದ ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ರಚಿಸಬೇಕೆಂದು ಹಲವಾರು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ. ನಮ್ಮ ಹೋರಾಟದ ನಂತರ ಇತ್ತೀಚಿಗೆ ಕೆಲವು ಸಮಾಜಗಳು ಬೇಡಿಕೆ ಸಲ್ಲಿಸಿದ ತಕ್ಷಣ ಪ್ರತ್ಯೇಕ ನಿಗಮ ಮಂಡಳಿ ರಚಿಸಿ ನೂರಾರು ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಆದರೆ ನಮ್ಮ ಸಮಾಜಕ್ಕೆ ಪ್ರತ್ಯೇಕ ನಿಗಮ ರಚಿಸುವಲ್ಲಿ ನಿರ್ಲಕ್ಷ್ಯತನ ವಹಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಸಮಾಜದ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
      ವೇದಿಕೆ ತಾಲೂಕು ಗೌರವಾಧ್ಯಕ್ಷ ವಸಂತ ಬಿ. ಪೂಜಾರಿ, ಬಿ. ಲೋಕನಾಥ್, ಕೋಗಲೂರು ತಿಪ್ಪೇಸ್ವಾಮಿ, ಉಪಾಧ್ಯಕ್ಷರಾದ ಆರ್. ಚಂದ್ರಶೇಖರ್, ಕೆ.ಎನ್ ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.