Monday, May 10, 2021

ಕೊರೋನಾ ಸಂಕಷ್ಟ : ಯುವ ಕಾಂಗ್ರೆಸ್ ವತಿಯಿಂದ ‘ಹಸಿದವರಿಗೆ ಅನ್ನ’

ಯುವ ಕಾಂಗ್ರೆಸ್ ವತಿಯಿಂದ ಭದ್ರಾವತಿಯಲ್ಲಿ ಕಳೆದ ೩ ದಿನಗಳಿಂದ 'ಹಸಿದವರಿಗೆ ಅನ್ನ' ಎಂಬ ಕಾರ್ಯಕ್ರಮದಡಿ ದೀನದಲಿತರು, ನಿಗರ್ತಿಕರು, ಅಸಹಾಯಕರ ಹಸಿವು ನೀಗಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ.
     ಭದ್ರಾವತಿ, ಮೇ. ೧೦: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ನಡುವೆಯೂ ಯುವ ಕಾಂಗ್ರೆಸ್ ವತಿಯಿಂದ ಕಳೆದ ೩ ದಿನಗಳಿಂದ 'ಹಸಿದವರಿಗೆ ಅನ್ನ' ಎಂಬ ಕಾರ್ಯಕ್ರಮದಡಿ ದೀನದಲಿತರು, ನಿಗರ್ತಿಕರು, ಅಸಹಾಯಕರ ಹಸಿವು ನೀಗಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ.
    ಯುವ ಕಾಂಗ್ರೆಸ್ ನಗರ ಅಧ್ಯಕ್ಷ ಜಿ.ವಿನೋದ್‌ಕುಮಾರ್ ನೇತೃತ್ವದಲ್ಲಿ ಜನ್ನಾಪುರ ನಿರಾಶ್ರಿತರ ಕೇಂದ್ರ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಹಾಗು ಪ್ರಮುಖ ರಸ್ತೆಗಳಲ್ಲಿ ದೀನದಲಿತರು, ನಿಗರ್ತಿಕರು, ಅಸಹಾಯಕರಿಗೆ ಸಿದ್ದಪಡಿಸಿದ ಆಹಾರದ ಜೊತೆಗೆ ನೀರಿನ ಬಾಟಲ್ ಸಹ ವಿತರಿಸಲಾಯಿತು. ಜೊತೆಗೆ ಮಹಾಮಾರಿ ಕೊರೋನಾ ನಿಯಂತ್ರಣಕ್ಕೆ ಎಚ್ಚರ ವಹಿಸುವ ಜೊತೆಗೆ ಕಡ್ಡಾಯ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಯಿತು.
    ನಗರ ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಎ.ಪಿ ಗಣೇಶ್,  ಭರತ್, ಸಂತೋಷ್, ಯೋಗೇಶ್, ತೇಜಸ್, ವಿನ್‌ಸ್ಟನ್  ಮತ್ತು ಆದರ್ಶ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
      ಟಿ.ಎಂ.ಎ.ಇ.ಎಸ್ ವತಿಯಿಂದ ಆಹಾರ ಪದಾರ್ಥ ವಿತರಣೆ:  
   ಟಿ.ಎಂ.ಎ.ಇ.ಎಸ್ ಆಯುರ್ವೇದ ಮಹಾವಿದ್ಯಾಲಯ ವತಿಯಿಂದ ಜನ್ನಾಪುರ ಎನ್‌ಟಿಬಿ ಕಛೇರಿ ಆವರಣದಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿರುವ ನಿರ್ಗತಿಕರಿಗೆ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು.
     ಮಹಾವಿದ್ಯಾಲಯದ ಆಡಳಿತಾಧಿಕಾರಿ ಹಿರೇಮಠ್, ಪೌರಾಯುಕ್ತ ಮನೋಹರ್, ಸಮುದಾಯ ಸಂಘಟನಾ ಅಧಿಕಾರಿಗಳಾದ ಸುಹಾಸಿನಿ, ಈಶ್ವರಪ್ಪ, ಡಿಎಸ್‌ಎಸ್ ಅಂಗವಿಕಲರ ವಿಭಾಗದ ಜಿಲ್ಲಾಧ್ಯಕ್ಷ ಕಾಣಿಕ್‌ರಾಜ್, ಜೀವ ಸಂಸ್ಥೆಯ ಅರಿಲಾ ಆನ್ಸ್, ಲಕ್ಷ್ಮಮ್ಮ, ಜಿಂಕ್‌ಲೈನ್ ಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಟಿ.ಎಂ.ಎ.ಇ.ಎಸ್ ಆಯುರ್ವೇದ ಮಹಾವಿದ್ಯಾಲಯ ವತಿಯಿಂದ ಭದ್ರಾವತಿ ಜನ್ನಾಪುರ ಎನ್‌ಟಿಬಿ ಕಛೇರಿ ಆವರಣದಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿರುವ ನಿರ್ಗತಿಕರಿಗೆ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು.



ಉಕ್ಕಿನ ನಗರದಲ್ಲಿ ಕೊರೋನಾ ಸ್ಪೋಟ : ಒಂದೇ ದಿನ ೨೪೮ ಮಂದಿಗೆ ಸೋಂಕು

ಗ್ರಾಮ ಪಂಚಾಯಿತಿ ಅಧ್ಯಕ್ಷ ಸೇರಿ ೬ ಮಂದಿ ಬಲಿ


   
ಕಲ್ಲಿಹಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್
ಭದ್ರಾವತಿ, ಮೇ. ೧೦: ಲಾಕ್‌ಡೌನ್ ಮೊದಲ ದಿನವೇ ತಾಲೂಕಿನಲ್ಲಿ ಕೊರೋನಾ ಸೋಂಕು ಸ್ಪೋಟಗೊಂಡಿದ್ದು, ಒಂದೇ ದಿನ ೨೪೮ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ನಡುವೆ ಕೊರೋನಾ ಸೋಂಕಿಗೆ ತಾಲೂಕಿನ ಕಲ್ಲಿಹಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್(೩೮) ಬಲಿಯಾಗಿದ್ದಾರೆ.
    ಒಟ್ಟು ೩೬೯ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ಈ ಪೈಕಿ ೨೪೮ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ನಗರ ಪ್ರದೇಶದಲ್ಲಿ ೧೫೬ ಹಾಗು ಗ್ರಾಮೀಣ ಪ್ರದೇಶದಲ್ಲಿ ೮೩ ಮಂದಿಗೆ ಸೋಂಕು ತಗುಲಿದೆ. ಈ ನಡುವೆ ೧೩೨ ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ೧೮೦ ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ೨೫ ಕಂಟೈನ್‌ಮೆಂಟ್ ಜೋನ್‌ಗಳಿದ್ದು, ೨ ಜೋನ್ ತೆರವುಗೊಳಿಸಲಾಗಿದೆ.
      ಒಂದೇ ದಿನ ೬ ಮಂದಿ ಬಲಿ:
  ಗ್ರಾಮ ಪಂಚಾಯಿತಿ ಅಧ್ಯಕ್ಷ ಸೇರಿದಂತೆ ಒಂದೇ ದಿನ ಕೊರೋನಾ ಸೋಂಕಿಗೆ ೬ ಮಂದಿ ಬಲಿಯಾಗಿದ್ದಾರೆ.
     ಕಲ್ಲಿಹಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಸೋಂಕಿಗೆ ಬಲಿಯಾಗಿದ್ದು, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಹೊಂದಿದ್ದರು. ಶ್ರೀನಿವಾಸ್ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಕಲ್ಲಿಹಾಳ್ ಶಕ್ತಿ ಕೇಂದ್ರದ ಪ್ರಮುಖರಾಗಿದ್ದರು. ಇವರ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.
     ಉಳಿದಂತೆ ಗ್ರಾಮೀಣ ಭಾಗದ ಅರೆಬಿಳಚಿ ಒಂದೇ ಗ್ರಾಮದಲ್ಲಿ ೩ ಮಂದಿ ಬಲಿಯಾಗಿದ್ದು, ನಗರ ಪ್ರದೇಶದ ಜನ್ನಾಪುರ ಹಾಗು ಉಜ್ಜನಿಪುರದಲ್ಲಿ ತಲಾ ಓರ್ವ ಸೋಂಕಿಗೆ ಬಲಿಯಾಗಿದ್ದಾರೆ.

ಕಾಂಗ್ರೆಸ್ ಮುಖಂಡ ಎಂ.ಎಸ್ ಮುರುಳಿಧರ ನಿಧನ

ಎಂ.ಎಸ್ ಮುರುಳಿಧರ
   ಭದ್ರಾವತಿ, ಮೇ. ೧೦: ನಗರದ ರಂಗಪ್ಪ ವೃತ್ತ ಸರ್ಕಲ್ ಸ್ವೀಟ್ಸ್ ಮಾಲೀಕ, ಕಾಂಗ್ರೆಸ್ ಮುಖಂಡ ಎಂ.ಎಸ್ ಮುರುಳಿಧರ(೪೫) ಅನಾರೋಗ್ಯದಿಂದ ನಿಧನ ಹೊಂದಿದರು.
   ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮುರುಳಿಧರ್ ಕೆಲವು ವರ್ಷಗಳಿಂದ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಸರ್ಕಲ್ ಸ್ವೀಟ್ಸ್ ಹೆಸರಿನಲ್ಲಿಯೇ ಗುರುತಿಸಿಕೊಂಡಿದ್ದರು. ಇವರ ನಿಧನಕ್ಕೆ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಕೋವಿಡ್ ಆಸ್ಪತ್ರೆ ಬಳಕೆಗೆ ಎಂಪಿಎಂ ಕಲ್ಯಾಣ ಮಂಟಪ : ೧೦೦ ಹಾಸಿಗೆ ವ್ಯವಸ್ಥೆ

ಕ್ಷೇತ್ರದ ಜನರ ಆರೋಗ್ಯ ಮುಖ್ಯ, ಎಷ್ಟೇ ಹಣ ಖರ್ಚಾದರೂ ವೈಯಕ್ತಿಕವಾಗಿ ನೀಡಲು ಬದ್ಧ : ಬಿ.ಕೆ ಸಂಗಮೇಶ್ವರ್


ಭದ್ರಾವತಿ ಕಾಗದ ಎಂಪಿಎಂ ಕಲ್ಯಾಣ ಮಂಟಪವನ್ನು ೧೦೦ ಹಾಸಿಗೆಯುಳ್ಳ ಕೋವಿಡ್ ಆಸ್ಪತ್ರೆಯನ್ನಾಗಿ ರೂಪಿಸಲಾಗಿದ್ದು, ಸೋಮವಾರ ಶಾಸಕ ಬಿ.ಕೆ ಸಂಗಮೇಶ್ವರ್ ಸೇವೆಗೆ ಸಮರ್ಪಿಸಿದರು.
    ಭದ್ರಾವತಿ, ಮೇ. ೧೦: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಸೋಂಕಿತರ ಚಿಕಿತ್ಸೆಗೆ ಹೆಚ್ಚಿನ ಕಾಳಜಿವಹಿಸಿ ಪ್ರಸ್ತುತ ಎಂಪಿಎಂ ಕಲ್ಯಾಣ ಮಂಟಪವನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಬಳಸಿಕೊಳ್ಳಲಾಗುತ್ತಿದ್ದು, ಜೊತೆಗೆ ಉಚಿತವಾಗಿ ೪ ಅಂಬ್ಯುಲೆನ್ಸ್‌ಗಳನ್ನು ಸಹ ಸಮರ್ಪಿಸಲಾಗುತ್ತಿದೆ. ಇನ್ನು ಹೆಚ್ಚಿನ ಅವಶ್ಯಕತೆಗಳಿದ್ದಲ್ಲಿ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಲು ಬದ್ಧ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದರು.
    ಅವರು ಸೋಮವಾರ ಎಂಪಿಎಂ ಕಲ್ಯಾಣ ಮಂಟಪದಲ್ಲಿ ನಿರ್ಮಿಸಲಾಗಿರುವ ೧೦೦ ಹಾಸಿಗೆಯುಳ್ಳ ಕೋವಿಡ್ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದರು.
      ಕಳೆದ ೩ ದಿನಗಳ ಹಿಂದೆ ನಡೆದ ಪೂರ್ವಭಾವಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಶಾಸಕರ ನಿಧಿಯಿಂದ ೧ ಕೋ.ರು ಅನುದಾನ ಸದ್ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಅದರಂತೆ ಪ್ರಸ್ತುತ ಎಂಪಿಎಂ ಕಲ್ಯಾಣ ಮಂಟಪವನ್ನು ೧೦೦ ಹಾಸಿಗೆಯುಳ್ಳ ಕೋವಿಡ್ ಆಸ್ಪತ್ರೆಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಅಗತ್ಯವಿರುವ ಮಂಚ ಹಾಗು ಹಾಸಿಗೆಗಳನ್ನು ಖರೀದಿಸಲಾಗಿದೆ. ಇನ್ನೂ ಹೆಚ್ಚಿನ ಹಾಸಿಗೆಗಳ ಅವಶ್ಯಕತೆಗಳು ಕಂಡು ಬಂದಲ್ಲಿ ಇಲ್ಲಿಯೇ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.
    ಸೋಂಕಿತರಿಗಾಗಿ ೨ ಅಂಬ್ಯುಲೆನ್ಸ್‌ಗಳನ್ನು ಉಚಿತವಾಗಿ ನೀಡಲಾಗಿದೆ. ಇದರ ಜೊತೆಗೆ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಲಾ ಒಂದೊಂದು ಅಂಬ್ಯುಲೆನ್ಸ್‌ಗಳನ್ನು ನೀಡಲಾಗಿದೆ. ಒಟ್ಟು ೪ ಅಂಬ್ಯುಲೆನ್ಸ್‌ಗಳು ಸೇವೆಗೆ ಲಭ್ಯವಾಗಿವೆ.
    ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ತುರ್ತು ಚಿಕಿತ್ಸೆ ಅವಶ್ಯಕತೆ ಇರುವವರಿಗೆ ಆಕ್ಸಿಜನ್, ವೆಂಟಿಲೇಟರ್ ಒಳಗೊಂಡಂತೆ ೫೦ ಹಾಸಿಗೆಗಳನ್ನು ಹಾಗು ಸಣ್ಣ ಪ್ರಮಾಣದಲ್ಲಿ ಸೋಂಕು ಹೊಂದಿರುವವರಿಗೆ ಪ್ರತ್ಯೇಕವಾಗಿ ೫೦ ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲಾ ವ್ಯವಸ್ಥೆಗಳ ನಡುವೆ ಇನ್ನೂ ಹೆಚ್ಚಿನ ನೆರವು ಕಂಡುಬಂದಲ್ಲಿ ಕ್ಷೇತ್ರದ ಜನರ ಆರೋಗ್ಯದ ದೃಷ್ಟಿಯಿಂದ ಎಷ್ಟೇ ಹಣ ಖರ್ಚಾದರೂ ವೈಯಕ್ತಿಕವಾಗಿ ನೀಡಲು ಬದ್ಧವಾಗಿದ್ದೇನೆ. ಹಣಕ್ಕಿಂತ ಕ್ಷೇತ್ರದ ಜನರ ಆರೋಗ್ಯ ಮುಖ್ಯ ಎಂದರು.
        ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ, ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಸಮಾಜ ಕಲ್ಯಾಣಾಧಿಕಾರಿ ಎನ್. ಕೃಷ್ಣಪ್ಪ, ಕಂದಾಯಾಧಿಕಾರಿ ಪ್ರಶಾಂತ್, ಎಂಪಿಎಂ ಅಧಿಕಾರಿ ಸತೀಶ್, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಪ್ರಭಾಕರ ಬೀರಯ್ಯ, ಪರಮೇಶ್ವರಪ್ಪ, ಕುಂಚ ಕಲಾವಿದ ಬಿ. ಗುರು, ನಗರಸಭೆ ಮಾಜಿ ಸದಸ್ಯೆ ಲಕ್ಷ್ಮೀದೇವಿ, ಮಹೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿಯಲ್ಲಿ ಕೋವಿಡ್-೧೯ ಸೋಂಕಿತರಿಗಾಗಿ ಉಚಿತವಾಗಿ ಕಲ್ಪಿಸಲಾಗಿರುವ ೪ ಅಂಬ್ಯುಲೆನ್ಸ್‌ಗಳಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಸೋಮವಾರ ಚಾಲನೆ ನೀಡಿದರು.