Wednesday, April 6, 2022

ಬಿಜೆಪಿ ಸಂಸ್ಥಾಪನಾ ದಿನ : ಶೋಭಯಾತ್ರೆ


ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಬುಧವಾರ ಭದ್ರಾವತಿಯಲ್ಲಿ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಿಂದ ಮಾಧವಚಾರ್ ವೃತ್ತದವರೆಗೂ ಶೋಭಯಾತ್ರೆ ನಡೆಸಲಾಯಿತು.
    ಭದ್ರಾವತಿ, ಏ. ೬: ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಬುಧವಾರ ನಗರದಲ್ಲಿ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಿಂದ ಮಾಧವಚಾರ್ ವೃತ್ತದವರೆಗೂ ಶೋಭಯಾತ್ರೆ ನಡೆಸಲಾಯಿತು.
    ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಪಕ್ಷದ ಪ್ರಮುಖರು, ಕಾರ್ಯಕರ್ತರು ಪಕ್ಷದ ತತ್ವ, ಸಿದ್ದಾಂತಗಳು, ಧ್ಯೇಯೋದ್ದೇಶಗಳನ್ನು ಹಾಗು ಬಿಜೆಪಿ ಸರ್ಕಾರದ ಸಾಧನೆಗಳಿಗೆ ಪ್ರಶಂಸೆ ವ್ಯಕ್ತಪಡಿಸಿ ಘೋಷಣೆಗಳನ್ನು ಹಾಕಿದರು. ಶೋಭಯಾತ್ರೆ ಹಾಲಪ್ಪ ವೃತ್ತ ಮೂಲಕ ಮಾಧವಚಾರ್ ವೃತ್ತ ತಲುಪಿತು. ಪಕ್ಷದ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ನೇತೃತ್ವ ವಹಿಸಿದ್ದರು.
    ಪ್ರಮುಖರಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ರಂಗಸ್ವಾಮಿ, ಎಸ್. ಕುಮಾರ್, ಎನ್. ವಿಶ್ವನಾಥರಾವ್, ಕರ್ನಾಟಕ ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಾಟೀಲ್, ಎಸಿ.ಸಿ ಮೋರ್ಚಾ ಅಧ್ಯಕ್ಷ ಪಿ. ಗಣೇಶ್‌ರಾವ್, ಯುವ ಘಟಕದ ಅಧ್ಯಕ್ಷ ವಿಜಯ್‌ರಾಜ್, ನಗರಸಭೆ ಸದಸ್ಯರಾದ ಅನಿತಾ ಮಲ್ಲೇಶ್, ಕರಿಗೌಡ, ಮಂಜುನಾಥ್, ಜಿ. ಆನಂದಕುಮಾರ್, ಎಂ. ಮಂಜುನಾಥ್, ಬಿ.ಎಸ್ ಶ್ರೀನಾಥ್, ರಾಮನಾಥ್ ಬರ್ಗೆ, ರಾಜಶೇಖರ್ ಉಪ್ಪಾರ್, ಚಂದ್ರಪ್ಪ, ಹೇಮಾವತಿ, ಕವಿತಾ, ಅನ್ನಪೂರ್ಣ, ಮಂಜುಳ, ಚಂದ್ರು, ಸತೀಶ್‌ಕುಮಾರ್, ಸುಬ್ರಮಣಿ, ಧನುಷ್ ಬೋಸ್ಲೆ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ಪಕ್ಷಕ್ಕೆ ಸೇರ್ಪಡೆ :
    ಪಕ್ಷದ ತತ್ವ, ಸಿದ್ದಾಂತಗಳು, ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ವೈಖರಿಗಳನ್ನು ಮೆಚ್ಚಿ ಪಕ್ಷದ ಸಂಸ್ಥಾಪನಾ ದಿನದಂದು ನಗರದಲ್ಲಿ ಕೆಲವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಹರೀಶ್, ಮೋಹನ್, ವೆಂಕಟೇಶ್ ಮತ್ತು ವಿಶು ಸೇರಿದಂತೆ ಇನ್ನಿತರರು ಪಕ್ಷಕ್ಕೆ ಸೇರ್ಪಡೆಗೊಂಡರು. ಪಕ್ಷದ ಸ್ಥಳೀಯ ಮುಖಂಡ ರಾಜಶೇಖರ ಉಪ್ಪಾರ ಪಕ್ಷದ ಧ್ವಜ ನೀಡಿ ಪರಮಾಡಿ ಕೊಂಡರು.


ಬಿಜೆಪಿ ಪಕ್ಷದ ತತ್ವ, ಸಿದ್ದಾಂತಗಳು, ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ವೈಖರಿಗಳನ್ನು ಮೆಚ್ಚಿ ಪಕ್ಷದ ಸಂಸ್ಥಾಪನಾ ದಿನದಂದು ಭದ್ರಾವತಿಯಲ್ಲಿ  ಕೆಲವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಕೆರೆ ಕೋಡಿ ಶಿಥಿಲ : ನೀರು ಹರಿದು ಹಾಳಾದ ರಸ್ತೆ

ಸ್ಥಳ ಪರಿಶೀಲನೆ ನಡೆಸಿದ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ

ಭದ್ರಾವತಿ ನಗರಸಭೆ ವ್ಯಾಪ್ತಿಯ ತಮ್ಮಣ್ಣ ಕಾಲೋನಿಯಲ್ಲಿರುವ ಕೆರೆ ಕೋಡಿ ಶಿಥಿಲಗೊಂಡಿದ್ದು, ಇದರಿಂದಾಗಿ ಕೆರೆ ನೀರು ಹರಿದು ರಸ್ತೆ ಹಾಳಾಗಿದೆ. ಈ ಹಿನ್ನಲೆಯಲ್ಲಿ  ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಪವಿತ್ರ ರಾಮಯ್ಯ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.
    ಭದ್ರಾವತಿ, ಏ. ೬: ನಗರಸಭೆ ವ್ಯಾಪ್ತಿಯ ತಮ್ಮಣ್ಣ ಕಾಲೋನಿಯಲ್ಲಿರುವ ಕೆರೆ ಕೋಡಿ ಶಿಥಿಲಗೊಂಡಿದ್ದು, ಇದರಿಂದಾಗಿ ಕೆರೆ ನೀರು ಹರಿದು ರಸ್ತೆ ಹಾಳಾಗಿದೆ. ಈ ಹಿನ್ನಲೆಯಲ್ಲಿ  ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಪವಿತ್ರ ರಾಮಯ್ಯ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.
    ಕೆರೆ ಕೋಡಿ ಪಕ್ಕದಲ್ಲಿರುವ ರಸ್ತೆಯು ರೈತರ ಜಮೀನುಗಳಿಗೆ ಸಂಪರ್ಕಗೊಂಡಿದ್ದು, ರಸ್ತೆ ಹಾಳಾಗಿರುವುದರಿಂದ ಈ ಭಾಗದಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ. ಈ ಹಿನ್ನಲೆಯಲ್ಲಿ ರೈತರು ಹಾಗು ಸ್ಥಳೀಯರು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್ ನೇತೃತ್ವದಲ್ಲಿ ಕಾಡಾ ಅಧ್ಯಕ್ಷರನ್ನು ಭೇಟಿ ಮಾಡಿ ಸಮಸ್ಯೆ ವಿವರಿಸಿದ್ದರು.
    ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿದ ಅಧ್ಯಕ್ಷರು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ರೈತರು ಹಾಗು ಸ್ಥಳೀಯರು ಕೆರೆ ಕೋಡಿ ಬಳಿ ರಸ್ತೆಗೆ ಮೇಲ್ಸೇತುವೆ ನಿರ್ಮಿಸುವಂತೆ ಮನವಿ ಮಾಡಿದರು.

ಮುಂಬರುವ ಚುನಾವಣೆಗೆ ಬಿಎಸ್‌ಪಿ ಸಿದ್ದತೆ : ೫೦ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ

ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಸರ್ಕಾರದಿಂದ ಕುತಂತ್ರ : ನಾಗೇಂದ್ರ ಆರೋಪ

ಭದ್ರಾವತಿಯಲ್ಲಿ  ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಮಾತನಾಡಿದರು.
    ಭದ್ರಾವತಿ, ಏ. ೬: ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ) ಮುಂಬರುವ ವಿಧಾನಸಭಾ ಹಾಗು ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನಲೆಯಲ್ಲಿ ಇದೀಗ ರಾಜ್ಯಾದ್ಯಂತ ವಿಭಿನ್ನ ರೀತಿಯ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಈಗಾಗಲೇ ೫೦ ವಿಧಾನಸಭಾ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಹೇಳಿದರು.
    ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಈಗಾಗಲೇ ಪಕ್ಷದ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಭೇಟಿ ನೀಡಿ ಸಂಘಟನಾ ಚಟುವಟಿಕೆಗಳಿಗೆ ಚಾಲನೆ ನೀಡಿದ್ದಾರೆ. ಪಕ್ಷದ ಸಂಸ್ಥಾಪಕರಾದ ಕಾನ್ಸಿರಾಂರವರ ಜನ್ಮದಿನದಂದು ರಾಜ್ಯದ ೪ ವಿಭಾಗಗಳಲ್ಲಿ ಕಾರ್ಯಕರ್ತರ ಸಮಾವೇಶಗಳನ್ನು ನಡೆಸಲಾಗಿದೆ. ಸಮಾವೇಶದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸುವ ಜೊತೆಗೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ರೂಪಿಸುವ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಇದರ ಮುಂದುವರೆದ ಭಾಗವಾಗಿ ಜಿಲ್ಲಾಮಟ್ಟದಲ್ಲಿ ಸಮಾವೇಶಗಳನ್ನು ನಡೆಸಲಾಗಿದ್ದು, ಇದೀಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ವಿಸ್ತರಿಸಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದ್ದು, ಈ ಕಾರ್ಯಗಾರದಲ್ಲಿ ಬಹುಜನ ಚಳುವಳಿಯ ಹಿನ್ನಲೆ, ನಡೆದು ಬಂದ ದಾರಿ, ದೇಶದ ಮೂಲ ನಿವಾಸಿಗಳು ಎದುರಿಸುತ್ತಿರುವ ಸವಾಲುಗಳು ಹಾಗು ಹೋರಾಟದ ರೂಪುರೇಷೆಗಳ ಕುರಿತು ಪಕ್ಷದ ಕಾರ್ಯಕರ್ತರಿಗೆ ತಿಳಿಸುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
    ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಮಾಯಾವತಿ ಪ್ರಚಾರ:
    ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಿ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಯಾವತಿಯವರು ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ. ಪ್ರತಿ ಬಾರಿ ಚುನಾವಣೆಯಲ್ಲೂ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಚೈತನ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲೂ ಅವರು ಆಗಮಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
    ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕುತಂತ್ರ :
    ರಾಜ್ಯದಲ್ಲಿ ಬಿಜೆಪಿ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಧಾರ್ಮಿಕ ವಿಚಾರಗಳಲ್ಲಿ ಸಂಘರ್ಷ ಉಂಟು ಮಾಡಿ ಆಶಾಂತಿ ವಾತಾವರಣ ರೂಪಿಸುತ್ತಿದೆ. ಹಿಜಾಬ್, ಹಲಾಲ್, ದೇವಸ್ಥಾನಗಳ ಬಳಿ ಹಾಗು ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಎಲ್ಲವೂ ಸಂವಿಧಾನ ಬಾಹಿರವಾಗಿವೆ. ಮತ್ತೊಂದೆಡೆ ಈ ವಿಚಾರಗಳನ್ನು ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಸೇರಿದಂತೆ ಬಿಜೆಪಿ ಅಂಗಸಂಸ್ಥೆಗಳು, ಸಂಘಟನೆಗಳು ಗುಮಾನಿ ಮಾಡುವ ಮೂಲಕ ಮುಖ್ಯಮಂತ್ರಿ ಸೇರಿದಂತೆ ಇಡೀ ಸರ್ಕಾರವನ್ನು ನಿಯಂತ್ರಿಸುತ್ತಿವೆ. ಅಲ್ಲದೆ ಈ ಸಂಘಟನೆಗಳು ದೇಶ ದ್ರೋಹದ ಹೇಳಿಕೆಗಳನ್ನು ನೀಡುತ್ತಿವೆ. ದೇಶ ದ್ರೋಹದ ನಿಲುವುಗಳನ್ನು ಪ್ರಕಟಿಸುತ್ತಿವೆ ಆದರೂ ಸಹ ಇವುಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
    ಬಿಎಸ್‌ಪಿ ಈ ಎಲ್ಲಾ ವಿಚಾರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಅವರ ನಿಜವಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೋರಾಟಗಳನ್ನು ರೂಪಿಸಲು ಮುಂದಾಗಿದೆ ಎಂದರು.
    ಪಕ್ಷದ ಜಿಲ್ಲಾ ಸಂಯೋಜಕ ಎಚ್.ಎನ್ ಶ್ರೀನಿವಾಸ್, ತಾಲೂಕು ಅಧ್ಯಕ್ಷ ರಹಮತ್‌ಉಲ್ಲಾ ಖಾನ್, ತಾಲೂಕು ಸಂಯೋಜಕ ಎಂ. ರಾಜೇಂದ್ರ ಉಪಸ್ಥಿತರಿದ್ದರು.

ಮತದಾನ ಹಕ್ಕಿನ ಮಹತ್ವ ತಿಳಿಯದೆ ಉತ್ತಮ ಸರ್ಕಾರ ರೂಪಿಸಿಕೊಳ್ಳಲು ಸಾಧ್ಯವಿಲ್ಲ : ಎ.ಡಿ ಶಿವಪ್ಪ

 ಬಹುಜನ ಸಮಾಜ ಪಾರ್ಟಿ ಭದ್ರಾವತಿ ತಾಲೂಕು ಘಟಕದ ವತಿಯಿಂದ ಬಿ.ಎಚ್ ರಸ್ತೆ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಉದ್ಘಾಟಿಸಿದರು.
    ಭದ್ರಾವತಿ, ಏ. ೬: ದೇಶದಲ್ಲಿ ನಾವು ಎಲ್ಲಿಯವರೆಗೆ ಮತದಾನ ಹಕ್ಕಿನ ಮಹತ್ವ ಅರಿತುಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಉತ್ತಮ ಸರ್ಕಾರ ರೂಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬಹುಜನ ಸಮಾಜ ಪಾರ್ಟಿ ಪಕ್ಷದ ಜಿಲ್ಲಾಧ್ಯಕ್ಷ ಎ.ಡಿ ಶಿವಪ್ಪ ಹೇಳಿದರು.
ಅವರು ಬುಧವಾರ ನಗರದ ಬಿ.ಎಚ್ ರಸ್ತೆ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಈ ದೇಶದಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಶೇ.೮೫ರಷ್ಟಿದ್ದು, ಆದರೆ ಶೇ.೩ರಷ್ಟಿರುವ ಮನುವಾದಿಗಳು ಆಡಳಿತ ನಡೆಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ದೇಶದ ಬಹಳಷ್ಟು ಜನರಿಗೆ ಮತದಾನದ ಬೆಲೆ ಗೊತ್ತಿಲ್ಲ. ಇದೀಗ ಪಕ್ಷದ ವತಿಯಿಂದ ಮತದಾನದ ಬೆಲೆ ತಿಳಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಭವಿಷ್ಯದಲ್ಲಿ ಬಿಎಸ್‌ಪಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಕಾರ್ಯ ತಂತ್ರಗಳನ್ನು ರೂಪಿಸಿಕೊಳ್ಳಲಾಗುತ್ತಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಇನ್ನೂ ಹೆಚ್ಚಿನ ಕ್ರಿಯಾಶೀಲರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು.
    ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಕಾರ್ಯಕ್ರಮ ಉದ್ಘಾಟಿಸಿ, ಬಹುಜನ ಚಳುವಳಿ ನಡೆದು ಬಂದ ದಾರಿ. ದೇಶದ ಮೂಲ ನಿವಾಸಿಗಳು ಅನುಭವಿಸುತ್ತಿರುವ ಸಂಕಷ್ಟಗಳು, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾಗಿರುವ ಕಾರ್ಯತಂತ್ರಗಳನ್ನು ವಿವರಿಸಿದರು. ಪಕ್ಷದ ಜಿಲ್ಲಾ ಸಂಯೋಜಕ ಎಚ್.ಎನ್ ಶ್ರೀನಿವಾಸ್, ತಾಲೂಕು ಅಧ್ಯಕ್ಷ ರಹಮತ್‌ಉಲ್ಲಾ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ತಾಲೂಕು ಸಂಯೋಜಕ ಎಂ. ರಾಜೇಂದ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಅರಣ್ಯ ಇಲಾಖೆ ಸರ್ಕಾರಿ ದಿನಗೂಲಿ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ

ಭದ್ರಾವತಿಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಸರ್ಕಾರಿ ದಿನಗೂಲಿ ನೌಕರರ ಸಂಘದ ವತಿಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ ಗಾಮನಗಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಏ. ೬: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಸರ್ಕಾರಿ ದಿನಗೂಲಿ ನೌಕರರ ಸಂಘದ ವತಿಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ ಗಾಮನಗಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.
    ೨೦೧೭ರವರೆಗೆ ಕನಿಷ್ಠ ೧೦ ವರ್ಷ ಕರ್ತವ್ಯ ಪೂರೈಸಿ ಉದ್ಯೋಗದಿಂದ ವಂಚಿತರಾಗಿರುವ ನೌಕರರನ್ನು ಪುನಃ ನೇಮಕ ಮಾಡಿಕೊಳ್ಳಬೇಕು. ದಿನಗೂಲಿಯನ್ನು ನಂಬಿ ಬದುಕುತ್ತಿರುವ ನೌಕರರಿಗೆ ಯಾವುದೇ ಕಾರಣಕ್ಕೂ ಉದ್ಯೋಗ ಕಡಿತಗೊಳಿಸಬಾರದು. ಅಲ್ಲದೆ ಕರ್ತವ್ಯ ಸಮಯ ನಿಗದಿಗೊಳಿಸಬೇಕು. ನೌಕರರನ್ನು ನಿಗದಿತ ಸಮಯ ಮೀರಿ ಕರ್ತವ್ಯಕ್ಕೆ ಬಳಸಿಕೊಳ್ಳಬಾರದು. ೧೦ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಬ್ಯಾಂಕ್ ಖಾತೆ ಮೂಲಕ ಓಚರ್ ಮೇಲೆ ಸಹಿ ಪಡೆದು ವೇತನ ಪಾವತಿಸಬೇಕು. ಎಲ್ಲಾ ಸರ್ಕಾರಿ ದಿನಗೂಲಿ ನೌಕರರಿಗೂ ಇಎಸ್‌ಐ ಮತ್ತು ಇಪಿಎಫ್ ಸೌಲಭ್ಯ ಕಲ್ಪಿಸಿಕೊಡಬೇಕು. ವೈಯಕ್ತಿಕ ಹಿತಾಸಕ್ತಿ ಹಿನ್ನಲೆಯಲ್ಲಿ ವಿನಾಕಾರಣ ನೌಕರರನ್ನು ಕರ್ತವ್ಯದಿಂದ ವಜಾಗೊಳಿಸಿ ಕಿರುಕುಳ ನೀಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು.
    ತಕ್ಷಣ ಬೇಡಿಕೆಗಳನ್ನು ಈಡೇರಿಸಿಕೊಡಬೇಕು. ಇಲ್ಲವಾದಲ್ಲಿ ಮುಂದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.
    ಸಂಘದ ಗೌರವಾಧ್ಯಕ್ಷ ಶಿವಕುಮಾರ್, ರಾಜ್ಯಾಧ್ಯಕ್ಷ ಎಚ್.ಕೆ ಹಿಂಚವಳ್ಳಿ ಶಂಕರಪ್ಪ, ಉಪಾಧ್ಯಕ್ಷ ಎಚ್.ಎಸ್ ಹರೀಶ್, ಕಾರ್ಯದರ್ಶಿ ಸಿ. ಬಸವರಾಜು ಮತ್ತು ಖಜಾಂಚಿ ಸಿ. ಪ್ರದೀಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.