ನ್ಯಾ.ಎಚ್.ಎನ್ ನಾಗಮೋಹನ್ ದಾಸ್‌ರವರ ಏಕ ಸದಸ್ಯ ಆಯೋಗದ ವರದಿ ಜಾರಿಗೊಳಿಸಿ ಪರಿಶಿಷ್ಟ ಜಾತಿ ಹಾಗು ಪಂಗಡದವರ ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಿ ಶುಕ್ರವಾರ ಭದ್ರಾವತಿಯಲ್ಲಿ ನಗರ ಮತ್ತು ಗ್ರಾಮಾಂತರ ಸ್ವಾಭಿಮಾನಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾಸಮಿತಿ ವತಿಯಿಂದ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಶಿರಸ್ತೇದಾರ್ ರಾಧಾಕೃಷ್ಣ ಭಟ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಮೇ. ೨೦: ನ್ಯಾ.ಎಚ್.ಎನ್ ನಾಗಮೋಹನ್ ದಾಸ್‌ರವರ ಏಕ ಸದಸ್ಯ ಆಯೋಗದ ವರದಿ ಜಾರಿಗೊಳಿಸಿ ಪರಿಶಿಷ್ಟ ಜಾತಿ ಹಾಗು ಪಂಗಡದವರ ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಿ ಶುಕ್ರವಾರ ನಗರ ಮತ್ತು ಗ್ರಾಮಾಂತರ ಸ್ವಾಭಿಮಾನಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾಸಮಿತಿ ವತಿಯಿಂದ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗು ಪಂಗಡಗಳ ಜನಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರೂ ಸಹ ಮೀಸಲಾತಿ ಹೆಚ್ಚಳ ಮಾಡಿಲ್ಲ. ರಾಜ್ಯದಲ್ಲಿ ೧೯೬೧ರ ಜನಗಣತಿಯಲ್ಲಿ ಪರಿಶಿಷ್ಟ ಪಂಗಡದವರ ಜನಸಂಖ್ಯೆ ೧,೯೨,೦೯೫(ಶೇ.೦.೮೧) ಇದ್ದು, ಮುಂದಿನ ೫ ಜನಗಣತಿಯಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ೨೦೧೧ರಲ್ಲಿ ೪೨,೪೮,೯೮೭ ಜನಸಂಖ್ಯೆ ಇದ್ದು, ೧೯೬೧ರ ಜನಗಣತಿಗೆ ಹೋಲಿಕೆ ಮಾಡಿದ್ದಲ್ಲಿ ಶೇ.೨೨.೧೧ರಷ್ಟು ಹೆಚ್ಚಾಗಿದೆ. ಇದೆ ರೀತಿ ಪರಿಶಿಷ್ಟ ಜಾತಿ ಜನಸಂಖ್ಯೆ ಸಹ ಹೆಚ್ಚಾಗಿದ್ದು, ೨೦೧೧ರ ಜನಗಣತಿಯಂತೆ ರಾಜ್ಯದಲ್ಲಿ ೧,೦೪,೭೪,೯೯೨ ಜನಸಂಖ್ಯೆ ಹೊಂದಿದೆ. ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಿಲ್ಲ. ಇದರಿಂದಾಗಿ ಪರಿಶಿಷ್ಟ ಜಾತಿ ಹಾಗು ಪಂಗಡದವರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ಪರಿಶಿಷ್ಟ ಜಾತಿಗೆ ಶೇ.೧೫ರಷ್ಟು ಹಾಗು ಪರಿಶಿಷ್ಟ ಪಂಗಡಕ್ಕೆ ಶೇ.೩ರಷ್ಟು ಮೀಸಲಾತಿ ಇದ್ದು, ಮೀಸಲಾತಿ ಹೆಚ್ಚಿಸುವಂತೆ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಹರಿಹರ ತಾಲೂಕಿನ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರು ೨೦೧೯ರಲ್ಲಿ ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಿ ರಾಜಧಾನಿ ಬೆಂಗಳೂರಿಗೆ ಪಾದಯಾತ್ರೆ ನಡೆಸಿ ಬೃಹತ್ ಸಮಾವೇಶ ಆಯೋಜಿಸುವ ಮೂಲಕ ಸರ್ಕಾರದ ಗಮನ ಸೆಳೆದಿದ್ದರು. ಸರ್ಕಾರ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ್ ದಾಸ್‌ರವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಿತ್ತು. ಆಯೋಗ ಜುಲೈ, ೨೦೨೦ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ಸರ್ಕಾರ ಆಯೋಗದ ವರದಿಯನ್ನು ಇದುವರೆಗೂ ಜಾರಿಗೊಳಿಸಿರುವುದಿಲ್ಲ. ಇದೀಗ ವರದಿಯನ್ನು ನಿವೃತ್ತ ನ್ಯಾಯಮೂರ್ತಿ ಸುಭಾಷ್ ಆಡಿಯವರ ತ್ರಿ ಸದಸ್ಯ ಸಮಿತಿಗೆ ಒಪ್ಪಿಸಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ತಕ್ಷಣ ಪರಿಶಿಷ್ಟ ಜಾತಿಯವರಿಗೆ ಶೇ.೧೫ರಿಂದ ಶೇ.೧೭ಕ್ಕೆ ಹಾಗು ಪರಿಶಿಷ್ಟ ಪಂಗಡದವರಿಗೆ ಶೇ.೩ರಿಂದ ೭.೫ಕ್ಕೆ ಮೀಸಲಾತಿ ಹೆಚ್ಚಿಸಬೇಕು. ನ್ಯಾ.ಎಚ್.ಎನ್ ನಾಗಮೋಹನ್ ದಾಸ್‌ರವರ ಏಕ ಸದಸ್ಯ ಆಯೋಗದ ವರದಿ ಜಾರಿಗೊಳಿಸಬೇಕು. ನ್ಯಾ. ಸುಭಾಷ್ ಆಡಿಯವರ ತ್ರಿ ಸದಸ್ಯ ಸಮಿತಿ ರದ್ದುಪಡಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನಾ ಮೆರವಣಿಗೆ ಆರಂಭಕ್ಕೂ ಮೊದಲು ನಗರದ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಶ್ರೀ ಮಹರ್ಷಿ ವಾಲ್ಮೀಕಿ ಸಮಾಜದ ನಗರ ಘಟಕದ ಅಧ್ಯಕ್ಷ ಬಸವರಾಜ ಬಿ ಆನೇಕೊಪ್ಪ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ, ಜಿಲ್ಲಾ ಸಂಚಾಲಕ ಚಿನ್ನಯ್ಯ, ಕೆ. ರಂಗನಾಥ್, ಎಪಿಎಂಸಿ ಮಾಜಿ ನಿರ್ದೇಶಕ ಎಂ.ಎಸ್ ಬಸವರಾಜಪ್ಪ, ಶ್ರೀ ಮಹರ್ಷಿ ವಾಲ್ಮೀಕಿ ಸಮಾಜದ ಗ್ರಾಮಾಂತರ ಅಧ್ಯಕ್ಷ ಎಲ್. ರಂಗಪ್ಪ, ದಲಿತ ನೌಕರರ ಒಕ್ಕೂಟದ ತಾಲೂಕು ಅಧ್ಯಕ್ಷ ಎಸ್. ಉಮಾ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಬಂಜಾರ ಯುವಕರ ವೇದಿಕೆ ಅಧ್ಯಕ್ಷ ಕೃಷ್ಣನಾಯ್ಕ, ಪ್ರಮುಖರಾದ ಲಕ್ಷ್ಮಣಪ್ಪ, ಶ್ರೀಧರ್, ಶೇಖರಪ್ಪ, ಸುಧಾಮಣಿ, ಶಿವಾನಂದ, ಉಜ್ಜನಿಪುರ ವೆಂಕಟೇಶ್, ವಿವೇಕ್ ಸೇರಿದಂತೆ ಇನ್ನಿತರರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆ ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡು ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ ಮೂಲಕ ತಾಲೂಕು ಕಛೇರಿ ತಲುಪಿತು. ನಂತರ ಶಿರಸ್ತೇದಾರ್ ರಾಧಾಕೃಷ್ಣ ಭಟ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.