Sunday, November 26, 2023

ಸಂವಿಧಾನ ದಿನಾಚರಣೆ : ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ

ಸಂವಿಧಾನ ದಿನಾಚರಣೆ ಅಂಗವಾಗಿ ಭಾನುವಾರ ಭದ್ರಾವತಿ ನಗರದಲ್ಲಿ ವಿವಿಧ ಸಂಘಟನೆಗಳಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೀಠಿಕೆ ವಾಚಿಸಲಾಯಿತು.
    ಭದ್ರಾವತಿ: ಸಂವಿಧಾನ ದಿನಾಚರಣೆ ಅಂಗವಾಗಿ ಭಾನುವಾರ ನಗರದಲ್ಲಿ ವಿವಿಧ ಸಂಘಟನೆಗಳಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
    ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ ತಾಲೂಕು ಶಾಖೆ ನಗರದ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೀಠಿಕೆ ವಾಚಿಸಲಾಯಿತು.
    ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್. ಗೋಪಾಲಪ್ಪ, ಡಿಎಸ್‌ಎಸ್ ಪ್ರಮುಖರಾದ ಜಿಲ್ಲಾ ಸಂಚಾಲಕ ಚಿನ್ನಯ್ಯ, ತಾಲೂಕು ಸಂಚಾಲಕ ಕೆ. ರಂಗನಾಥ್, ಜಿಂಕ್‌ಲೈನ್ ಮಣಿ, ರಂಗನಾಥ ಅರಹತೊಳಲು, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ ತಾಲೂಕು ಶಾಖೆ ಪ್ರಮುಖರಾದ ಎಸ್. ಚೇತನ್‌ಕುಮಾರ್, ಡಿ.ಎಸ್ ಹೇಮಂತ್‌ಕುಮಾರ್, ಆರ್. ನರಸಿಂಹಮೂರ್ತಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ವಿಐಎಸ್‌ಎಲ್ ಉಳಿಸಲು ಪೇಜಾವರ ಶ್ರೀಗಳಿಗೆ ಮನವಿ

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುತ್ತಿಗೆ, ಕಾಯಂ ಹಾಗು ನಿವೃತ್ತ ಕಾರ್ಮಿಕರು ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ರಾಮೀಜಿಯವರನ್ನು ಭೇಟಿಯಾಗಿ ಇತ್ತೀಚೆಗೆ ಜರುಗಿದ ಕಾರ್ಖಾನೆ ಶತಮಾನೋತ್ಸವ ಹಾಗೂ  ಪ್ರಸ್ತುತ ಬೆಳವಣಿಗೆಗಳನ್ನು ಶ್ರೀಗಳಿಗೆ ವಿವರಿಸಿ ಕಾರ್ಖಾನೆ ಉಳಿಸಿಕೊಳ್ಳಲು ಮನವಿ ಮಾಡಿದ್ದಾರೆ.
    ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಳೆದ ಸುಮಾರು ೧೧ ತಿಂಗಳಿನಿಂದ ನಿರಂತರವಾಗಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು ಇದೀಗ ಹೋರಾಟ ಮತ್ತಷ್ಟು ತೀವ್ರಗೊಳಿಸಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ತೀರ್ಮಾನಿಸಿದ್ದಾರೆ. ಈ ಹಿನ್ನಲೆಯಲ್ಲಿ ನಿಯೋಗದಲ್ಲಿ ಪಾಲ್ಗೊಳ್ಳಲು ಕಾರ್ಮಿಕರು ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ರಾಮೀಜಿಯವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.
    ಕಾರ್ಖಾನೆ ಮಾಜಿ ಉದ್ಯೋಗಿ, ಹಿರಿಯ ಚಲನಚಿತ್ರ ದೊಡ್ಡಣ್ಣನವರ ನೇತೃತ್ವದಲ್ಲಿ ಇತ್ತೀಚೆಗೆ ಜರುಗಿದ ಕಾರ್ಖಾನೆ ಶತಮಾನೋತ್ಸವ ಹಾಗೂ ಕಾರ್ಖಾನೆಯ ಪ್ರಸ್ತುತ ಬೆಳವಣಿಗೆಗಳನ್ನು ಕಾರ್ಮಿಕರು ಶ್ರೀಗಳಿಗೆ ವಿವರಿಸಿದ್ದಾರೆ.
    ಕಾರ್ಖಾನೆ ಉಳಿಸಿಕೊಳ್ಳಲು ಮೈಸೂರು ಮಹಾರಾಜರು, ಜಿಲ್ಲೆಯ ಸಂಸದರು, ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯದ ಪ್ರಮುಖ ಮಠಗಳ ಮಠಾಧೀಶರು ಹಾಗೂ ನಾಡಿನ ಪ್ರಮುಖರನ್ನೊಳಗೊಂಡ ನಿಯೋಗ ಪ್ರಧಾನಮಂತ್ರಿಯವರನ್ನು ಭೇಟಿಯಾಗುತ್ತಿದ್ದು. ಈ ನಿಯೋಗದಲ್ಲಿ ಭಾಗಿಯಾಗಿ ಪ್ರಧಾನಮಂತ್ರಿಯವರ ಮನವೊಲಿಸಿ ಕಾರ್ಖಾನೆ ಉಳಿಸಿ ಕೊಡಬೇಕಾಗಿ ಮನವಿ ಮಾಡಿದರು.
    ಕಾರ್ಮಿಕರ ಮನವಿಗೆ ಶ್ರೀಗಳು ಪೂರಕವಾಗಿ ಸ್ಪಂದಿಸಿದ್ದು, ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಅಭಯ ನೀಡಿದ್ದಾರೆ.
    ಗುತ್ತಿಗೆ, ಕಾಯಂ ಹಾಗು ನಿವೃತ್ತ ಕಾರ್ಮಿಕರಾದ ರಾಕೇಶ್, ಆನಂದ್, ಅಮೃತ್ ಮತ್ತು ನರಸಿಂಹಚಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ನಾಗರತ್ನ-ಸಿದ್ದಲಿಂಗಯ್ಯ ನಿವಾಸದಲ್ಲಿ ಯಶಸ್ವಿಯಾಗಿ ಜರುಗಿದ ೬೪೮ನೇ ವಚನ ಮಂಟಪ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಭದ್ರಾವತಿ ತಾಲೂಕು ಶಾಖೆ ವತಿಯಿಂದ ಸಿದ್ಧಾರೂಢನಗರದ ನಾಗರತ್ನ-ಸಿದ್ದಲಿಂಗಯ್ಯ ಕುಟುಂಬದ ಸಹಯೋಗದೊಂದಿಗೆ ೬೪೮ನೇ ವಚನ ಮಂಟಪ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಹಿರೇನಲ್ಲೂರು ಎಚ್.ಎಸ್ ವೀರಸಂಗಪ್ಪ ದತ್ತಿ-೭೦ ಕಾರ್ಯಕ್ರಮ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ಉದ್ಘಾಟಿಸಿದರು.
    ಭದ್ರಾವತಿ : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಶಾಖೆ ವತಿಯಿಂದ ಸಿದ್ಧಾರೂಢನಗರದ ನಾಗರತ್ನ-ಸಿದ್ದಲಿಂಗಯ್ಯ ಕುಟುಂಬದ ಸಹಯೋಗದೊಂದಿಗೆ ೬೪೮ನೇ ವಚನ ಮಂಟಪ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಹಿರೇನಲ್ಲೂರು ಎಚ್.ಎಸ್ ವೀರಸಂಗಪ್ಪ ದತ್ತಿ-೭೦ ಕಾರ್ಯಕ್ರಮ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ಉದ್ಘಾಟಿಸಿದರು.
    ಹೊಸನಗರ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಪತಿ ಹಳಗುಂದ `ಶರಣರ ಚಿಂತನೆಯಲ್ಲಿ ಬದುಕಿನ ಮೌಲ್ಯಗಳ ಪ್ರಸ್ತುತತೆ' ಕುರಿತು ಮಾತನಾಡಿದರು.  
    ಶಿವಮೊಗ್ಗ ಬಾಪೂಜಿನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಮಂಜುನಾಥ್ ವಚನ ಗಾಯನದೊಂದಿಗೆ ಶರಣರ ಮೌಖಿಕ ಚಿಂತನೆ ಕುರಿತು ಮಾತನಾಡಿದರು. ಪರಿಷತ್ ತಾಲೂಕು ಅಧ್ಯಕ್ಷ ಎನ್.ಎಸ್ ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು.
    ಪ್ರಮುಖರಾದ ಜಗದೀಶ್ ಕವಿ, ಎಚ್.ಆರ್ ಕುಮಾರಪ್ಪ, ಮಲ್ಲಿಕಾಂಬ ವಿರುಪಾಕ್ಷಪ್ಪ, ನಾಗರತ್ನ, ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಎಂ. ವಿರುಪಾಕ್ಷಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪೂರ್ಣಿಮ ಸಿದ್ದಲಿಂಗಯ್ಯ ಸ್ವಾಗತಿಸಿದರು. ನಂದಿನಿ ಮಲ್ಲಿಕಾರ್ಜುನ ನಿರೂಪಿಸಿದರು. ಕತ್ತಲಗೆರೆ ತಿಮ್ಮಪ್ಪ ಮತ್ತು ಕದಳಿ ಮಹಿಳಾ ವೇದಿಕೆ ಸದಸ್ಯರಿಂದ ವಚನ ಗಾಯನ ನಡೆಯಿತು.