Wednesday, May 25, 2022

ಬಿಳಿಕಿ ವೃತ್ತಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ಅಂತಿಮಗೊಳಿಸಿ

ಭದ್ರಾವತಿ ನಗರದ ಬಿ.ಎಚ್ ರಸ್ತೆ ಮತ್ತು ಬೈಪಾಸ್ ರಸ್ತೆ ಡಾಬಾ ಎದುರಿನ ಬಿಳಿಕಿ ವೃತ್ತಕ್ಕೆ ಈಗಾಗಲೇ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಾಮಕರಣಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಈ ಪ್ರಕ್ರಿಯೆಯನ್ನು ಹಿಂಪಡೆಯಬಾರದು.  ಯಾವುದೇ ಹೊಸ ಹೆಸರನ್ನು ಅನುಮೋದಿಸಬಾರದು ಎಂದು ಆಗ್ರಹಿಸಿ ಬುಧವಾರ ನಗರಸಭೆ ಪೌರಾಯುಕ್ತ ಮನುಕುಮಾರ್ ಅವರಿಗೆ ತಾಲೂಕು ಒಕ್ಕಲಿಗರ ಸಂಘ ಮನವಿ ಸಲ್ಲಿಸಿದೆ.  
    ಭದ್ರಾವತಿ, ಮೇ. ೨೫ : ನಗರದ ಬಿ.ಎಚ್ ರಸ್ತೆ ಮತ್ತು ಬೈಪಾಸ್ ರಸ್ತೆ ಡಾಬಾ ಎದುರಿನ ಬಿಳಿಕಿ ವೃತ್ತಕ್ಕೆ ಈಗಾಗಲೇ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಾಮಕರಣಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಈ ಪ್ರಕ್ರಿಯೆಯನ್ನು ಹಿಂಪಡೆಯಬಾರದು.  ಯಾವುದೇ ಹೊಸ ಹೆಸರನ್ನು ಅನುಮೋದಿಸಬಾರದು ಎಂದು ಆಗ್ರಹಿಸಿ ಬುಧವಾರ ನಗರಸಭೆ ಪೌರಾಯುಕ್ತ ಮನುಕುಮಾರ್ ಅವರಿಗೆ ತಾಲೂಕು ಒಕ್ಕಲಿಗರ ಸಂಘ ಮನವಿ ಸಲ್ಲಿಸಿದೆ.  
    ಈ ಹಿಂದೆ ನಗರಸಭೆ ಆಡಳಿತಕ್ಕೆ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಾಮಕರಣ ಗೊಳಿಸುವಂತೆ ಮನವಿ ಸಲ್ಲಿಸಲಾಗಿತ್ತು. ಜನವರಿ ೨೦೧೬ರಂದು ಸಾಮಾನ್ಯಸಭೆಯಲ್ಲಿ ಅನುಮೋದನೆ ಸಹ ಪಡೆಯಲಾಗಿದೆ. ೨೦೧೯ರಲ್ಲಿ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆ ಇಲ್ಲದಿರುವ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳಿಂದ ಅನುಮತಿ ಸಹ ಪಡೆಯಲಾಗಿರುತ್ತದೆ. ಹೆಸರನ್ನು ನಾಮಕರಣಗೊಳಿಸುವ ಪ್ರಕ್ರಿಯೆ ಇದೀಗ ಸರ್ಕಾರದ ಮಟ್ಟದಲ್ಲಿದೆ. ಇದೀಗ ಈ ವೃತ್ತಕ್ಕೆ ಬೇರೆಂದು ಹೆಸರನ್ನು ನಾಮಕರಣ ಗೊಳಿಸುವಂತೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಾಮಕರಣಗೊಳಿಸುವ ಪ್ರಕ್ರಿಯೆಯಿಂದ ಹಿಂದೆ  ಸರಿಯಬಾರದು ಎಂದು ಆಗ್ರಹಿಸಲಾಗಿದೆ.
    ಸಂಘದ ಅಧ್ಯಕ್ಷ ಎ ಟಿ ರವಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಪ್ರಕಾಶ್, ಖಜಾಂಚಿ ಎ.ಎನ್ ಕಾರ್ತಿಕ್, ನಂಜುಂಡೇಗೌಡ, ಕೃಷ್ಣೇಗೌಡ, ಉಮೇಶ್ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.


ತಿಮ್ಲಾಪುರಕ್ಕೆ ಸಂಪರ್ಕಗೊಂಡಿರುವ ರಸ್ತೆಗೆ ಹೋರಾಟಗಾರ ಬಿ.ವಿ ಗಿರೀಶ್ ಹೆಸರನ್ನು ನಾಮಕರಣಗೊಳಿಸಿ

ಮೂಲ ಸೌಕರ್ಯಗಳ ಸಮಸ್ಯೆ ಬಗೆಹರಿಸಿ : ಶಶಿಕುಮಾರ್ ಗೌಡ ಆಗ್ರಹ

ಭದ್ರಾವತಿ ನಗರದ ಬೈಪಾಸ್ ರಸ್ತೆಯಿಂದ ತಿಮ್ಲಾಪುರಕ್ಕೆ ಸಂಪರ್ಕಗೊಂಡಿರುವ ರಸ್ತೆಗೆ ಹೋರಾಟಗಾರ ದಿವಂಗತ ಬಿ.ವಿ ಗಿರೀಶ್ ಹೆಸರನ್ನು ನಾಮಕರಣಗೊಳಿಸುವಂತೆ ಹಾಗು ೩೨ನೇ ವಾರ್ಡ್ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ ಬುಧವಾರ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
    ಭದ್ರಾವತಿ, ಮೇ. ೨೫: ನಗರದ ಬೈಪಾಸ್ ರಸ್ತೆಯಿಂದ ತಿಮ್ಲಾಪುರಕ್ಕೆ ಸಂಪರ್ಕಗೊಂಡಿರುವ ರಸ್ತೆಗೆ ಹೋರಾಟಗಾರ ದಿವಂಗತ ಬಿ.ವಿ ಗಿರೀಶ್ ಹೆಸರನ್ನು ನಾಮಕರಣಗೊಳಿಸುವಂತೆ ಹಾಗು ೩೨ನೇ ವಾರ್ಡ್ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ ಬುಧವಾರ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
    ಕನ್ನಡಪರ ಹಾಗು ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ಬಿ.ವಿ ಗಿರೀಶ್‌ರವರ ಮೊದಲ ವರ್ಷದ ಪುಣ್ಯಸ್ಮರಣೆಯಂದು ಬೈಪಾಸ್ ರಸ್ತೆಯಿಂದ ತಿಮ್ಲಾಪುರಕ್ಕೆ ಸಂಪರ್ಕಗೊಂಡಿರುವ ರಸ್ತೆಗೆ ಅವರ ಹೆಸರನ್ನು ನಾಮಕರಣಗೊಳಿಸುವಂತೆ ತಹಸೀಲ್ದಾರ್ ಹಾಗು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಈ ಹಿನ್ನಲೆಯಲ್ಲಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಈ ಸಂಬಂಧ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
    ಈ ಹಿಂದೆ ಮಹಾಮಾರಿ ಕೊರೋನಾ ಹಿನ್ನಲೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬಡ ವರ್ಗದ ಬಿಪಿಎಲ್ ಪಡಿತರ ಚೀಟಿ ಕುಟುಂಬಗಳಿಗೆ ನಗರಸಭೆ ವತಿಯಿಂದ ಉಚಿತವಾಗಿ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗಿದೆ. ಆದರೆ ವಾರ್ಡ್ ನಂ.೩೨ರ ಫಿಲ್ಟರ್ ಶೆಡ್‌ನಲ್ಲಿ ವಾಸಿಸುತ್ತಿರುವ ಸುಮಾರು ೨೦೦ ಬಿಪಿಎಲ್ ಪಡಿತರ ಚೀಟಿದಾರರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಿರುವುದಿಲ್ಲ. ಈ ಸಂಬಂಧ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದ್ದರೂ ಸಹ ಇದುವರೆಗೂ ಯಾವುದೇ ಕೈಗೊಂಡಿರುವುದಿಲ್ಲ. ಮುಂದಿನ ಒಂದು ವಾರದೊಳಗೆ ಬಡ ಜನರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸುವಂತೆ ಮನವಿ ಮಾಡಿದ್ದಾರೆ.
    ವಾರ್ಡ್ ನಂ.೩೨ರ ಫಿಲ್ಟರ್‌ಶೆಡ್‌ನಲ್ಲಿ ಚರಂಡಿ ನಿರ್ವಹಣೆ ಸರಿಯಾಗಿ ಕೈಗೊಳ್ಳದ ಕಾರಣ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಅಲ್ಲದೆ ಮನೆ ಮನೆಗೆ ಸಂಪರ್ಕ ಕಲ್ಪಿಸಿರುವ ಕುಡಿಯುವ ನೀರು ಕಳೆದ ಸುಮಾರು ೩ ತಿಂಗಳಿನಿಂದ ಮಣ್ಣು ಮಿಶ್ರಿತವಾಗಿ ಕೂಡಿದೆ. ಈ ಸಂಬಂಧ ಸಹ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.