ಅಪ್ಪರ್‌ಹುತ್ತಾದಲ್ಲಿ ನೂತನ ಕಛೇರಿ ಉದ್ಘಾಟನೆ
ಭದ್ರಾವತಿ ಅಪ್ಪರ್‌ಹುತ್ತಾ ಶ್ರೀ ನಂದಿ ಈಶ್ವರ ಸಂಕಷ್ಟಹರ ಗಣಪತಿ ದೇವಸ್ಥಾನ ಮುಂಭಾಗ ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆಯ ನೂತನ ಕಛೇರಿ ಉದ್ಘಾಟನೆ ನೆರವೇರಿತು.
ಭದ್ರಾವತಿ, ಮಾ. ೪: ಕ್ಷೇತ್ರದಲ್ಲಿ ಒಕ್ಕಲಿಗರು ಸಮಾಜದ ಎಲ್ಲಾ ಸಮುದಾಯಗಳೊಂದಿಗೆ ಒಗ್ಗಟ್ಟಾಗಿ ಎಲ್ಲರ ಹಿತರಕ್ಷಣೆಗೆ ಬದ್ಧವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆ ಅಸ್ತಿತ್ವಕ್ಕೆ ತರಲಾಗಿದೆ. ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕೆಂದು ವೇದಿಕೆ ಅಧ್ಯಕ್ಷ ಟಿ. ಚಂದ್ರೇಗೌಡ ಹೇಳಿದರು.
ಅವರು ನಗರದ ಅಪ್ಪರ್‌ಹುತ್ತಾ ಶ್ರೀ ನಂದಿ ಈಶ್ವರ ಸಂಕಷ್ಟಹರ ಗಣಪತಿ ದೇವಸ್ಥಾನ ಮುಂಭಾಗ ವೇದಿಕೆಯ ನೂತನ ಕಛೇರಿ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಒಕ್ಕಲಿಗರು ಎಲ್ಲಾ ಸಮುದಾಯದ ಪರವಾಗಿ ಇದ್ದಾರೆ. ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದವರು, ಶೋಷಿತರು, ಅಸಹಾಯಕರಿದ್ದು, ಅವರ ಪರವಾಗಿ ನಿಲ್ಲಲಿದೆ. ಸಮಾಜದ ಶ್ರೀಗಳ ಮಾರ್ಗದರ್ಶನದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್, ರಾಷ್ಟ್ರಕವಿ ಕುವೆಂಪು, ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗು ನಾಡಪ್ರಭು ಕೆಂಪೇಗೌಡ ಸೇರಿದಂತೆ ಮಹಾನ್ ಆದರ್ಶ ವ್ಯಕ್ತಿಗಳ ಆದರ್ಶತನಗಳನ್ನು ಮೈಗೂಡಿಸಿಕೊಂಡು ಅವರ ಹೆಸರಿಗೆ ಚ್ಯುತಿ ಬರದಂತೆ ವೇದಿಕೆ ಭವಿಷ್ಯದಲ್ಲಿ ಮುನ್ನಡೆಯಲಿದೆ ಎಂದರು.
ವೇದಿಕೆ ಗೌರವಾಧ್ಯಕ್ಷ ಎಸ್. ಕುಮಾರ್ ಮಾತನಾಡಿ, ನಾವೆಲ್ಲರೂ ಒಂದೇ ಎಂಬ ಸಂದೇಶ ಈ ವೇದಿಕೆ ಮೂಲಕ ಸಮಾಜಕ್ಕೆ ನೀಡಬೇಕಾಗಿದೆ. ಈ ಹಿನ್ನಲೆಯಲ್ಲಿ ಪಕ್ಷಾತೀತವಾಗಿ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ವೇದಿಕೆಯನ್ನು ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಬಳಸಿಕೊಳ್ಳುವುದಿಲ್ಲ ಎಂದರು.
ವೇದಿಕೆ ಪ್ರಮುಖರಾದ ಬಾಲಕೃಷ್ಣ, ಟಿ. ವೆಂಕಟೇಶ್, ನಗರಸಭಾ ಸದಸ್ಯರಾದ ಮಣಿ ಎಎನ್‌ಎಸ್, ಲತಾ ಚಂದ್ರಶೇಖರ್ ಸೇರಿದಂತೆ ಇನ್ನಿತರರು ಮಾತನಾಡಿದರು.
ವೇದಿಕೆ ಪದಾಧಿಕಾರಿಗಳು, ಒಕ್ಕಲಿಗ ಸಮುದಾಯದ ಮುಖಂಡರು, ವಿವಿಧ ಸಮುದಾಯಗಳ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.