ಭಾನುವಾರ, ಜೂನ್ 28, 2020

ವೈದ್ಯರು, ಸಿಬ್ಬಂದಿಗಳಿಗೆ ಅಭಿನಂದನಾ ಸಮಾರಂಭ

ಭದ್ರಾವತಿ, ಜೂ. ೨೮: ಕೊರೋನಾ ವೈರಸ್ ಪರಿಣಾಮ ಪ್ರಸ್ತುತ ಎದುರಾಗಿರುವ ಸಂಕಷ್ಟದ ಪರಿಸ್ಥಿತಿಯಲ್ಲೂ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ಜೂ.೨೯ರಂದು ಮಧ್ಯಾಹ್ನ ೩.೩೦ಕ್ಕೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ. 
ತಾಲೂಕು ಆರೋಗ್ಯ ರಕ್ಷಾ ಸಮಿತಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಳೆದ ಕೆಲವು ದಿನಗಳ ಹಿಂದೆ ನಗರದ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರ ಯಶಸ್ವಿಯಾದ ಹಿನ್ನಲೆಯಲ್ಲಿ ಕಾರಣಕರ್ತರಾದವರಿಗೂ ಸಹ ಅಭಿನಂದನೆ ನಡೆಯಲಿದ್ದು, ಸಮಾರಂಭ ಯಶಸ್ವಿಗೊಳ್ಳುವಂತೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಓ ಮಲ್ಲಪ್ಪ ಕೋರಿದ್ದಾರೆ. 

ರೋಟರಿ ಕ್ಲಬ್ ವತಿಯಿಂದ ಸಂಚಾರಿ ಸೂಚಕ, ನಾಮಫಲಕ ವಿತರಣೆ

ಭದ್ರಾವತಿಯಲ್ಲಿ ರೋಟರಿ ಕ್ಲಬ್ ವತಿಯಿಂದ ಸಂಚಾರಿ ಸೂಚಕ ಹಾಗೂ ನಾಮಫಲಕಗಳನ್ನು ನಗರದ ರಂಗಪ್ಪ ವೃತ್ತದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು. 
ಭದ್ರಾವತಿ, ಜೂ. ೨೮: ಕೊರೋನಾ ವೈರಸ್ ಸಂಕಷ್ಟಗಳಿಗೆ ಸ್ಪಂದಿಸುವ ಜೊತೆಗೆ ಸೇವಾ ಕಾರ್ಯಗಳನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ರೋಟರಿ ಕ್ಲಬ್ ಈ ಬಾರಿ ನಗರದ ವಿವಿಧೆಡೆ ಸಂಚಾರಿ ಸೂಚಕ ಹಾಗೂ ನಾಮಫಲಕಗಳನ್ನು ಕೊಡುಗೆಯಾಗಿ ನೀಡಿದೆ. 
ಜಿಲ್ಲಾ ಗವರ್ನರ್ ಬಿ.ಎನ್ ರಮೇಶ್‌ರವರು ಕ್ಲಬ್‌ಗೆ ಅಧಿಕೃತ ಭೇಟಿ ನೀಡಿದ ಹಿನ್ನಲೆಯಲ್ಲಿ ಸಂಚಾರಿ ಪೊಲೀಸರಿಗೆ ನೆರವಾಗುವ ಉದ್ದೇಶದೊಂದಿಗೆ ಸಂಚಾರಿ ಸೂಚಕ ಹಾಗೂ ನಾಮಫಲಕಗಳನ್ನು ನಗರದ ರಂಗಪ್ಪ ವೃತ್ತದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಯಿತು. 
  ತಾಲೂಕಿನ ಗ್ರಾಮೀಣಾ ಭಾಗದ ಮಕ್ಕಳ ನೆರವಿಗೆ ಮುಂದಾಗುವ ಉದ್ದೇಶದೊಂದಿಗೆ ಕೊಮಾರನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಕ್ಲಬ್ ವತಿಯಿಂದ ಅಗತ್ಯವಿರುವ ಅಲ್ಮೇರಾ  ಕೊಡುಗೆಯಾಗಿ ನೀಡಲಾಯಿತು. 
ಸಹಾಯಕ ಜಿಲ್ಲಾ ಗವರ್ನರ್ ಮುರುಳಿ, ಕ್ಲಬ್ ಅಧ್ಯಕ್ಷ ತೀರ್ಥಯ್ಯ, ಕಾರ್ಯದರ್ಶಿ ಅಡವೀಶಯ್ಯ,  ಪೊಲೀಸ್ ಉಪಾಧೀಕ್ಷಕ ಸುಧಾಕರ ನಾಯ್ಕ್, ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ, ಕ್ಲಬ್‌ನ ಪ್ರಮುಖವಾರ ಕೆ. ನಾಗರಾಜ್, ಕೂಡ್ಲಿಗೆರೆ ಹಾಲೇಶ್, ಡಿ. ಪ್ರಭಾಕರ ಬೀರಯ್ಯ, ಸುಂದರ್ ಬಾಬು, ಪಿ.ಸಿ ಜೈನ್, ರಾಘವೇಂದ್ರ ಉಪಾಧ್ಯಾಯ, ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.