Wednesday, June 7, 2023

ವಿಐಎಸ್‌ಎಲ್‌ನಲ್ಲಿ ವಿಶ್ವ ಪರಿಸರ ದಿನಾಚರಣೆ : ಮುಂದಿನ ಪೀಳಿಗೆಗೆ ಭೂಮಿ ಸುರಕ್ಷಿತವಾಗಿಡಿ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ಇಸ್ಪಾತ್ ಭವನದ ಎದುರು "ಪ್ಲಾಸ್ಟಿಕ್ ಮಾಲಿನ್ಯವನ್ನು ತೊಡೆದುಹಾಕಿ ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರಗಳು" ಎಂಬ ಧೈಯದೊಂದಿಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಜೂ. ೭: ನಮ್ಮ ಪರಿಸರವನ್ನು ಮಾಲಿನ್ಯದಿಂದ ಮುಕ್ತವಾಗಿಡುವಲ್ಲಿ ಪ್ರತಿಯೊಬ್ಬರೂ ಸಕ್ರಿಯ ಪಾತ್ರವಹಿಸಿ, ಮುಂದಿನ ಪೀಳಿಗೆಗೆ ಭೂಮಿಯನ್ನು ಸುರಕ್ಷಿತವಾಗಿಡಬೇಕೆಂದು ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ ಹೇಳಿದರು.
    ಕಾರ್ಖಾನೆ ವತಿಯಿಂದ ಇಸ್ಪಾತ್ ಭವನದ ಎದುರು "ಪ್ಲಾಸ್ಟಿಕ್ ಮಾಲಿನ್ಯವನ್ನು ತೊಡೆದುಹಾಕಿ ಪ್ಲಾಸ್ಟಿಕ್ ಮಾಲಿನ್ಯಕ್ಕೆ
ಪರಿಹಾರಗಳು" ಎಂಬ ಧೈಯದೊಂದಿಗೆ ಹಮ್ಮಿಕೊಳ್ಲಲಾಗಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪರಿಸರದ ಮೇಲೆ ಪ್ಲಾಸ್ಟಿಕ್ ಮಾಲಿನ್ಯದ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು. ಇದಕ್ಕೂ ಮೊದಲು  ಸರ್.ಎಂ ವಿಶ್ವೇಶ್ವರಾಯನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
        ಹಿರಿಯ ಪ್ರಬಂಧಕರು (ಹಣಕಾಸು) ಉನ್ನಿಕೃಷ್ಣನ್ ಪ್ರಾರ್ಥಿಸಿದರು. ಮಹಾ ಪ್ರಬಂಧಕರು (ಪರಿಸರ
ನಿರ್ವಹಣೆ ಮತ್ತು ಸಿವಿಲ್ ಇಂಜಿನಿಯರಿಂಗ್-ಸ್ಥಾವರ) ಡಿ. ಲೋಕೇಶ್ವರ್ ವಿಶ್ವ ಪರಿಸರ ದಿನದ ಇತಿಹಾಸ ಕುರಿತು ಸಂಕ್ಷಿಪ್ತ ಪರಿಚಯ ನೀಡಿ ಸ್ವಾಗತಿಸಿದರು. ಮಹಾಪ್ರಬಂಧಕರು (ನಗರಾಡಳಿತ) ಮೋಹನ್‌ರಾಜ್ ಶೆಟ್ಟಿ ಕಾರ್ಪೊರೇಟ್ ಪರಿಸರ ನೀತಿ ಓದಿದರು. ಸಹಾಯಕ ಮಹಾಪ್ರಬಂಧಕರು (ಎಜೆಲೆನ್ಸ್) ಎಲ್. ಕುತಲನಾಥನ್ ವಂದಿಸಿದರು. ಮುಖ್ಯ ಮಹಾ ಪ್ರಬಂಧಕರು (ಸ್ಥಾವರ), ವಿಐಎಸ್‌ಎಲ್ ಕಾರ್ಮಿಕರ ಸಂಘ ಮತ್ತು ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳು, ಹಿರಿಯ ಅಧಿಕಾರಿಗಳು, ನೌಕರರು ಮತ್ತು ಗುತ್ತಿಗೆ ನೌಕರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಗುತ್ತಿಗೆ ನೌಕರರಿಗೆ ವೇತನ ಬಿಡುಗಡೆಗೆ ಆಗ್ರಹಿಸಿ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಮುಷ್ಕರ

ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಗ್ರಾಮಸ್ಥರು ಬೆಂಬಲ : ಭರವಸೆ

ಭದ್ರಾವತಿ ತಾಲೂಕಿನ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಗೆ ೨ ತಿಂಗಳಿನಿಂದ ವೇತನ ಬಿಡುಗಡೆಯಾಗದಿರುವ ಹಿನ್ನಲೆಯಲ್ಲಿ ಬುಧವಾರ ವಿಶ್ವವಿದ್ಯಾನಿಲಯದ ಶತಮಾನೋತ್ಸವ ಆವರಣದಲ್ಲಿ ಮುಷ್ಕರ ನಡೆಸಲಾಯಿತು.
    ಭದ್ರಾವತಿ, ಜೂ. ೭: ತಾಲೂಕಿನ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಗೆ ೨ ತಿಂಗಳಿನಿಂದ ವೇತನ ಬಿಡುಗಡೆಯಾಗದಿರುವ ಹಿನ್ನಲೆಯಲ್ಲಿ ಬುಧವಾರ ವಿಶ್ವವಿದ್ಯಾನಿಲಯದ ಶತಮಾನೋತ್ಸವ ಆವರಣದಲ್ಲಿ ಮುಷ್ಕರ ನಡೆಸಲಾಯಿತು.
    ೨ ತಿಂಗಳಿನಿಂದ ವೇತನ ಬಿಡುಗಡೆಯಾಗದ ಹಿನ್ನಲೆಯಲ್ಲಿ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಈ ಹಿಂದಿನ ಹೆಚ್ಚುವರಿ ವೇತನ ಸಹ ಬಿಡುಗಡೆಯಾಗಿಲ್ಲ. ತಕ್ಷಣ ವೇತನ ಬಿಡುಗಡೆ ಮಾಡುವಂತೆ ಗುತ್ತಿಗೆ ನೌಕರರ ಮನವಿ ಮೇರೆಗೆ ಹಾಗು ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಆದೇಶದ ಮೇರೆಗೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಮುಷ್ಕರಕ್ಕೆ ಬೆಂಬಲ ಸೂಚಿಸಿ ಪಾಲ್ಗೊಂಡಿದ್ದರು.
    ಮುಷ್ಕರನಿರತ ಸ್ಥಳಕ್ಕೆ ಆಗಮಿಸಿದ ಕುಲಸಚಿವೆ ಪ್ರೊ. ಗೀತಾ ಹಾಗು ಹಣಕಾಸು ಅಧಿಕಾರಿ ಪ್ರೊ. ವೈ.ಎಲ್ ರಾಮಚಂದ್ರರವರು ತಕ್ಷಣ ೨ ತಿಂಗಳ ವೇತನ ಬಿಡುಗಡೆ ಮಾಡಿಸುವುದಾಗಿ ಹಾಗು ಹೆಚ್ಚುವರಿ ವೇತನ ಕುರಿತು ಪರಿಶೀಲಿಸುವುದಾಗಿ ಭರವಸೆ ನೀಡಿದರು.
    ತಾವರಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕೇಶ್, ಸಿಂಗನಮನೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಶಶಿಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಗಿರೀಶ್, ಪುನೀತ್, ದೇವರಗಿರಿ, ಕಾಂಗ್ರೆಸ್ ಪಕ್ಷದ ಮುಖಂಡ ಮುರುಗೇಶ್ ಹಾಗು ಶಂಕರಘಟ್ಟ ಜೈ ಕರ್ನಾಟಕ ವೇದಿಕೆ ಅಧ್ಯಕ್ಷ ಡಿ.ಟಿ ಶಶಿಕುಮಾರ್, ಕಾರ್ಯಾಧ್ಯಕ್ಷ ಶ್ರೀಕಾಂತ್ ನೇತೃತ್ವ ವಹಿಸಿದ್ದರು. ಮುಷ್ಕರದಲ್ಲಿ ಗ್ರಾಮಸ್ಥರು ಸಹ ಪಾಲ್ಗೊಂಡಿದ್ದರು.

ಸಾಹಿತಿ, ನಿವೃತ್ತ ಪ್ರಾಂಶುಪಾಲ ಎಚ್.ಎಂ ರವಿಶಂಕರ್ ನಿಧನ

ಎಚ್.ಎಂ ರವಿಶಂಕರ್
    ಭದ್ರಾವತಿ, ಜೂ. ೭ : ನಗರದ ಹೊಸಮನೆ ನಿವಾಸಿ, ನಿವೃತ್ತ ಪ್ರಾಂಶುಪಾಲ ಎಚ್.ಎಂ ರವಿಶಂಕರ್(೬೩) ಬುಧವಾರ ಬೆಳಿಗ್ಗೆ ನಿಧನ ಹೊಂದಿದರು.
    ಪತ್ನಿ ಜ್ಯೋತಿ, ಬಿಂಬ ಮತ್ತು ಶುಭ ಇಬ್ಬರು ಪುತ್ರಿಯರು ಇದ್ದರು. ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ರವಿಶಂಕರ್ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
    ರವಿಶಂಕರ್‌ರವರು ಸಾಹಿತಿಯಾಗಿದ್ದು, ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಅಲ್ಲದೆ ಈ ಹಿಂದೆ ವಿಜಯ ಟೈಮ್ಸ್ ಆಂಗ್ಲ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಹಾಗು ತರುಣ ಭಾರತಿ ವಿದ್ಯಾಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು.
    ಇವರ ನಿಧನಕ್ಕೆ ತಾಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎನ್. ಕೃಷ್ಣಪ್ಪ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.