ಭಾನುವಾರ, ಜುಲೈ 27, 2025

ಪಡಿತರ ವಿತರಕರಿಗೆ ತಕ್ಷಣ ಕೆವೈಸಿ ಕಮಿಷನ್ ಹಣ ಪಾವತಿಸಿ : ಸಿದ್ದಲಿಂಗಯ್ಯ

ಭದ್ರಾವತಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ವತಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಲ್ಕರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ: ಸರ್ಕಾರ ತಕ್ಷಣ ಪಡಿತರ ವಿತರಿಕರಿಗೆ ಕೆವೈಸಿ ಕಮಿಷನ್ ಹಣ ನೀಡಬೇಕು. ಇಲ್ಲವಾದಲ್ಲಿ ಮುಂಬರುವ ಮಾಸಿಕದ ಪಡಿತರ ವಿಲೇವಾರಿ ಸ್ಥಗಿತಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ ಎಚ್ಚರಿಸಿದ್ದಾರೆ. 
    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಲ್ಕರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ೨೦೧೮ ರಿಂದ ೨೦೨೫ರ ವರೆಗೆ ನಿರಂತರವಾಗಿ ಶೇ.೯೮ ರಷ್ಟು ಕೆವೈಸಿ ಮಾಡಲಾಗಿದೆ. ಆದರೆ ಪಡಿತರ ವಿತರಕರಿಗೆ ೪-೫ ತಿಂಗಳಿನಿಂದ ಕಮಿಷನ್ ಹಣ ಬಂದಿರುವುದಿಲ್ಲ. ಈಗಾಗಲೇ ಈ ಸಂಬಂಧ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಪಡಿತರ ವಿತರಕರು ಸಂಕಷ್ಟಕ್ಕೆ ಒಳಗಾಗಿದ್ದು, ತಕ್ಷಣ ಕೆವೈಸಿ ಕಮಿಷನ್ ಹಣ ಪಾವತಿಸಬೇಕೆಂದು ಕೋರಲಾಗಿದೆ.  
    ಸಂಘದ ತಾಲೂಕು ಶಾಖೆ ಗೌರವಾಧ್ಯಕ್ಷ ಕೃಷ್ಣೋಜಿರಾವ್, ಅಧ್ಯಕ್ಷ ಆರ್. ನಾಗೇಶ್, ಉಪಾಧ್ಯಕ್ಷ ಎಸ್. ರಾಜೇಂದ್ರ, ಕಾರ್ಯದರ್ಶಿ ಆರ್. ಮಣಿ, ಸಂಘಟನಾ ಕಾರ್ಯದರ್ಶಿ ಜಿ. ಕುಮಾರ್, ಖಜಾಂಚಿ ಪ್ರವೀಣ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಜೀವನದಿ ಭದ್ರೆ ಭರ್ತಿಗೆ ಕೇವಲ ೩-೪ ಅಡಿ ಮಾತ್ರ ಬಾಕಿ : ಹೊಸಸೇತುವೆ ಮುಳುಗಡೆ

ಭದ್ರಾವತಿ ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾ ನದಿ ಪ್ರವಾಹ ಉಂಟು ಮಾಡಿದ್ದು, ಭಾನುವಾರ ಬೆಳಿಗ್ಗೆ ಹೊಸಸೇತುವೆ ಸಂಪೂರ್ಣವಾಗಿ ಮುಳುಗಡೆಗೊಂಡಿದೆ. 
    ಭದ್ರಾವತಿ : ತಾಲೂಕಿನ ಜೀವ ಭದ್ರಾ ನದಿ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಲು ಕೇವಲ ೩-೪ ಅಡಿ ಮಾತ್ರ ಬಾಕಿ ಉಳಿದಿದೆ. ಈ ಬಾರಿ ನಿರೀಕ್ಷೆಗಿಂತ ಬಹುಬೇಗನೆ ಭರ್ತಿಯಾಗುತ್ತಿದ್ದು, ಇದರಿಂದಾಗಿ ಜಲಾಶಯ ನಂಬಿಕೊಂಡಿರುವ ರೈತರ ಮುಖದಲ್ಲಿ ಸಂತಸ ಮೂಡಿದೆ. 
    ಭಾನುವಾರ ಬೆಳಗ್ಗೆ ಜಲಾಶಯದ ನೀರಿನ ಮಟ್ಟ ೧೮೦.೬ ಅಡಿ ತಲುಪಿದೆ. ಒಟ್ಟು ೧೮೬ ಅಡಿ ಎತ್ತರದ ಜಲಾಶಯ ಸಂಜೆ ವೇಳೆಗೆ ಮತ್ತಷ್ಟು ಭರ್ತಿಯಾಗಿದ್ದು, ಇದರಿಂದಾಗಿ ಸೋಮವಾರ ಅಥವಾ ಮಂಗಳವಾರ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವ ನಿರೀಕ್ಷೆ ಇದೆ. 
    ಪ್ರಸ್ತುತ ಜಲಾಶಯದ ಒಳ ಹರಿವು ೩೯,೦೧೭ ಕ್ಯೂಸೆಕ್ ಇದ್ದು, ಇಷ್ಟೆ ಪ್ರಮಾಣ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದಾಗಿ ನದಿ ತೀರದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾ ನದಿ ಪ್ರವಾಹ ಉಂಟು ಮಾಡಿದ್ದು, ಭಾನುವಾರ ಬೆಳಿಗ್ಗೆ ಹೊಸಸೇತುವೆ ಸಂಪೂರ್ಣವಾಗಿ ಮುಳುಗಡೆಗೊಂಡಿದೆ. ನಂತರ ಪುನಃ ನೀರಿನ ಪ್ರಮಾಣ ಕಡಿಮೆಯಾಗಿದೆ. ಶನಿವಾರ ಮಧ್ಯಾಹ್ನದಿಂದಲೇ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಳಿಸಲಾಗಿದೆ. ತಾಲೂಕು ಆಡಳಿತ ಹಾಗು ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
    ಭದ್ರಾ ಜಲಾಶಯದ ವ್ಯಾಪ್ತಿಯಲ್ಲಿ ಬೆಳಿಗ್ಗೆ ಸ್ವಲ್ಪ ಮಳೆಯಾಗಿದ್ದು, ನಂತರ ಸಂಜೆವರೆಗೂ ಮಳೆಯಾಗಿಲ್ಲ. ಕಳೆದ ವರ್ಷದ ಇದೆ ದಿನ ೧೭೮ ಅಡಿ ನೀರು ಸಂಗ್ರಹವಾಗಿತ್ತು. 

ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಸಹಕಾರ್ಯದರ್ಶಿಯಾಗಿ ಬಿಳಿಕಿ ಶ್ರೀ

ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ 
    ಭದ್ರಾವತಿ : ತಾಲೂಕಿನ ಬಿಳಿಕಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಬೆಂಗಳೂರಿನ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಸಹಕಾರ್ಯದರ್ಶಿಯಾಗಿ ನೂತನವಾಗಿ ಆಯ್ಕೆಯಾಗಿದ್ದಾರೆ. 
    ೩೫ ವರ್ಷಗಳಿಂದ ಬಿಳಿಕಿ ಹಿರೇಮಠದ ಪೀಠಾಧ್ಯಕ್ಷರಾಗಿರುವ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಹಲವಾರು ಬೃಹತ್ ಧಾರ್ಮಿಕ ಕಾರ್ಯಗಳನ್ನು ಯಶಸ್ವಿಯಾಗಿ ಕೈಗೊಳ್ಳುವ ಜೊತೆಗೆ ಹಿರೇಮಠವನ್ನು ಸಾಕಷ್ಟು ಅಭಿವೃದ್ಧಿಗೊಳಿಸಿದ್ದು, ಅಲ್ಲದೆ ಸಂಘಟನಾ ಚಟುವಟಿಕೆಗಳಲ್ಲೂ ಸಹ ತೊಡಗಿಸಿಕೊಂಡಿದ್ದಾರೆ. ಮಲೆನಾಡು ವೀರಶೈವ ಮಠಾಧೀಶರ ಪರಿಷತ್‌ನಲ್ಲಿ ಹಲವಾರು ವರ್ಷಗಳಿಂದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಇವರ ಸಂಘಟನಾ ಸಾಮರ್ಥ್ಯ ಮನಗಂಡು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಸಹಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ. 
    ಬಿಳಿಕಿ ಶ್ರೀಗಳಿಗೆ ನಗರದ ವೀರಶೈವ ಸಮಾಜದ ವಿವಿಧ ಸಂಘಟನೆಗಳ ಪ್ರಮುಖರಾದ ಮಹೇಶ್ ಕುಮಾರ್, ಸಿದ್ದಲಿಂಗಯ್ಯ, ಸತೀಶ್ ಕುಮಾರ್, ಡಾ. ಜಿ.ಎಂ ನಟರಾಜ್, ವಾಗೀಶ್, ರುದ್ರೇಶ್ ಶಾಸ್ತ್ರಿ, ಆನಂದ ಸ್ವಾಮಿ ಹಾಗು ಬಿಳಿಕಿ ಮಠದ ಭಕ್ತರು ಮತ್ತು ಗ್ರಾಮಸ್ಥರು ಗುರು ನಮನ ಸಲ್ಲಿಸಿದ್ದಾರೆ.