Thursday, June 4, 2020

ಎಸ್‌ಸಿಪಿ ಟಿಎಸ್‌ಪಿ ಕಾಮಗಾರಿಯಲ್ಲಿ ಅವ್ಯವಹಾರ : ಪ್ರತಿಭಟನೆ

ತಪ್ಪಿತಸ್ಥ ಇಂಜಿನಿಯರ್ ಅಮಾನತ್ತುಗೊಳಿಸಿ ತನಿಖೆ ಕೈಗೊಳ್ಳಲು ಆಗ್ರಹ

ಲೋಕೋಪಯೋಗಿ ಇಲಾಖೆ ವತಿಯಿಂದ ಎಸ್‌ಸಿಪಿ ಟಿಎಸ್‌ಪಿ ಮತ್ತು ವಾರ್ಷಿಕ ನಿರ್ವಹಣೆ(ಜಂಗಲ್ ಕಟಿಂಗ್) ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಈ ಹಿನ್ನಲೆಯಲ್ಲಿ ತಕ್ಷಣ ತಪ್ಪಿತಸ್ಥ ಇಂಜಿನಿಯರ್ ಅಮಾನತ್ತುಗೊಳಿಸಿ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿ ಗುರುವಾರ ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ ಲೋಕೋಪಯೋಗಿ ಕಛೇರಿ ಮುಂಭಾಗ ಕರ್ನಾಟಕ ರಾಜ್ಯ ಮಾದಿಗ ಸಮಾಜ ಸೇರಿದಂತೆ ಇನ್ನಿತರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಶಿವಕುಮಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಜೂ. ೪: ಲೋಕೋಪಯೋಗಿ ಇಲಾಖೆ ವತಿಯಿಂದ ಎಸ್‌ಸಿಪಿ ಟಿಎಸ್‌ಪಿ ಮತ್ತು ವಾರ್ಷಿಕ ನಿರ್ವಹಣೆ(ಜಂಗಲ್ ಕಟಿಂಗ್) ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಈ ಹಿನ್ನಲೆಯಲ್ಲಿ ತಕ್ಷಣ ತಪ್ಪಿತಸ್ಥ ಇಂಜಿನಿಯರ್ ಅಮಾನತ್ತುಗೊಳಿಸಿ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿ ಗುರುವಾರ ನಗರದ ತರೀಕೆರೆ ರಸ್ತೆಯಲ್ಲಿರುವ ಲೋಕೋಪಯೋಗಿ ಕಛೇರಿ ಮುಂಭಾಗ ಕರ್ನಾಟಕ ರಾಜ್ಯ ಮಾದಿಗ ಸಮಾಜ ಸೇರಿದಂತೆ ಇನ್ನಿತರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಶಿವಕುಮಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 
ನಗರ ಮತ್ತು ಗ್ರಾಮೀಣ ಭಾಗದಲ್ಲಿ ಎಸ್‌ಸಿಪಿ ಟಿಎಸ್‌ಪಿ ಯೋಜನೆಯಡಿ ೨೦೧೮-೨೦೧೯ ಮತ್ತು ೨೦೧೯-೨೦೨೦ನೇ ಸಾಲಿನಲ್ಲಿ ಸುಮಾರು ೧,೮೪,೦೦೦ ರು. ವೆಚ್ಚದಲ್ಲಿ ಕಾಮಗಾರಿಗಳು ನಡೆದಿವೆ. ಕೆಲವು ಭಾಗದಲ್ಲಿ ತಾಂತ್ರಿಕವಾಗಿ ಮಂಜೂರಾತಿ ಆಗಿರುವ ಜಾಗಗಳನ್ನು ಬಿಟ್ಟು ಬೇರೆ ಕಡೆ ಮಾಡಲಾಗಿದೆ. ಅಲ್ಲದೆ ಈ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಅಳತೆ ಪುಸ್ತಕ, ಬಿಲ್ ಪ್ರತಿಗಳು ಸೇರಿದಂತೆ ಕೆಲವು ಮುಖ್ಯ ದಾಖಲೆಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಆರೋಪಿಸಲಾಯಿತು. 
೨೦೧೯ ಮತ್ತು ೨೦೨೦ ನೇ ಸಾಲಿನ ಎನ್.ಎಂ ರಸ್ತೆ ಎಸ್‌ಎಚ್ ೬೫ರ ಸರಪಳಿ ೧೪೯.೮ ರಿಂದ ೧೮೬.೬ ಕಿ.ಮೀ ಆಯ್ದ ಭಾಗದಲ್ಲಿ ವಾರ್ಷಿಕ ನಿರ್ವಹಣೆ ಕಾಮಗಾರಿ ಮಾಡದೆ ಸುಮಾರು ೨೦ ಲಕ್ಷ ರು. ಬಿಲ್ ಸಂಬಂಧಪಟ್ಟ ಗುತ್ತಿಗೆದಾರರಿಗೆ ಪಾವತಿಸಲಾಗಿದೆ ಎಂದು ದೂರಲಾಯಿತು. 
ಈ ಎಲ್ಲಾ ಅಕ್ರಮಗಳಿಗೆ ಕಾರಣರಾಗಿರುವ ಇಂಜಿನಿಯರ್ ಅಮಾನತ್ತುಗೊಳಿಸಿ ತನಿಖೆ ನಡೆಸುವ ಮೂಲಕ ಕಾನೂನು ಕ್ರಮ ಕೈಗೊಂಡು ಸರ್ಕಾರದ ಬೊಕ್ಕಸಕ್ಕೆ ಉಂಟಾಗಿರುವ ನಷ್ಟವನ್ನು ಅವರಿಂದ ಮರುಪಾವತಿಸಬೇಕೆಂದು ಆಗ್ರಹಿಸಲಾಯಿತು. 
ಪ್ರತಿಭಟನೆಯಲ್ಲಿ ಕರ್ನಾಟಕ ಜನಸೈನ್ಯ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಹನುಮಮ್ಮ, ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್,  ಐ.ವಿ ಸಂತೋಷ್‌ಕುಮಾರ್, ಪುಟ್ಟರಾಜು, ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯಾಗಿ ಡಾ. ಕೋಟ್ರೇಶಪ್ಪ

ಭದ್ರಾವತಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯಾಗಿ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಕೋಟ್ರೇಶಪ್ಪ ಪ್ರಭಾರ ಅಧಿಕಾರ ವಹಿಸಿಕೊಂಡರು. 
ಭದ್ರಾವತಿ, ಜೂ. ೪: ಕೊನೆಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗುರುವಾರ ಕರ್ತವ್ಯದಿಂದ ಬಿಡುಗಡೆಗೊಂಡಿದ್ದು, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಕೋಟ್ರೇಶಪ್ಪ ಪ್ರಭಾರ ಅಧಿಕಾರ ವಹಿಸಿಕೊಂಡರು.
ತಾಲೂಕು ಪಂಚಾಯಿತಿ ಸದಸ್ಯರು ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ ವಿರುದ್ಧ ಬುಧವಾರ ಹಲವು ಆರೋಪಗಳನ್ನು ಮಾಡುವ ಮೂಲಕ ಕರ್ತವ್ಯದಿಂದ ಬಿಡುಗಡೆಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಇದರ ಪರಿಣಾಮ ಕರ್ತವ್ಯದಿಂದ ತಕ್ಷಣ ಬಿಡುಗಡೆಗೊಳಿಸುವುದಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿ ದೂರವಾಣಿ ಮೂಲಕ ಭರವಸೆ ನೀಡಿದ್ದರು.
ಈ  ಹಿನ್ನಲೆಯಲ್ಲಿ ಪ್ರಭಾರ ಅಧಿಕಾರಿಯಾಗಿ ಡಾ. ಕೋಟ್ರೇಶಪ್ಪ ಅವರನ್ನು ನೇಮಕಗೊಳಿಸಿದ್ದಾರೆ. ತಮ್ಮಣ್ಣಗೌಡರವರು ಅಧಿಕಾರ ಹಸ್ತಾಂತರಿಸಿದರು.
ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಸ್. ರಮೇಶ್, ಸದಸ್ಯ ಕೆ. ಮಂಜುನಾಥ್, ಮುಖಂಡರಾದ ಶ್ರೀಧರ್, ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಮದ್ಯಪಾನ ನಿಷೇಧಿಸಿ, ಮೈಕ್ರೋ ಫೈನಾನ್ಸ್ ಹಾವಳಿ ತಪ್ಪಿಸಿ

ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ 

ರಾಜ್ಯದಲ್ಲಿ ತಕ್ಷಣ ಮದ್ಯಪಾನ ನಿಷೇಧಿಸುವಂತೆ ಹಾಗೂ ಮೈಕ್ರೋ ಫೈನಾನ್ಸ್‌ಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ಗುರುವಾರ ಸಂಯುಕ್ತ ಜನತಾದಳ ವತಿಯಿಂದ ಭದ್ರಾವತಿಯಲ್ಲಿ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿ ತಹಸೀಲ್ದಾರ್ ಶಿವಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಜೂ. ೪: ರಾಜ್ಯದಲ್ಲಿ ತಕ್ಷಣ ಮದ್ಯಪಾನ ನಿಷೇಧಿಸುವಂತೆ ಹಾಗೂ ಮೈಕ್ರೋ ಫೈನಾನ್ಸ್‌ಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ಗುರುವಾರ ಸಂಯುಕ್ತ ಜನತಾದಳ ವತಿಯಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿ ತಹಸೀಲ್ದಾರ್ ಶಿವಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 
ಲಾಕ್‌ಡೌನ್ ಹಿನ್ನಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಮದ್ಯ ಮಾರಾಟ ಪುನಃ ಆರಂಭಗೊಂಡಿರುವುದರಿಂದ ಒಂದೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿಯಲ್ಲಿರುವ ಕುಟುಂಬಗಳು ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗಿದೆ. ಈ ಹಿಂದೆ ತಾವು ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾರಾಯಿ ನಿಷೇಧಗೊಳಿಸಿದ್ದು, ಇಂದಿಗೂ ರಾಜ್ಯದ ಜನರು ಮರೆಯುವಂತಿಲ್ಲ. ಇದೀಗ ಸಂಪೂರ್ಣ ಮದ್ಯಪಾನ ನಿಷೇಧಿಸುವ ಮೂಲಕ ಈ ಬಾರಿ ಗಾಂಧಿ ಜಯಂತಿಗೆ ವಿಶಿಷ್ಟ ಕೊಡುಗೆ ನೀಡುವ ಜೊತೆಗೆ ರಾಷ್ಟ್ರದಲ್ಲಿಯೇ ಮಾದರಿ ರಾಜ್ಯವನ್ನಾಗಿಸಬೇಕೆಂದು ಒತ್ತಾಯಿಸಲಾಯಿತು. 
ಜಿಲ್ಲೆಯಲ್ಲಿ ಸುಮಾರು ೫೫ಕ್ಕೂ ಹೆಚ್ಚಿನ ಮೈಕ್ರೋ ಫೈನಾನ್ಸ್‌ಗಳಿದ್ದು, ಬಹುತೇಕ ಫೈನಾನ್ಸ್‌ಗಳು ಆರ್‌ಬಿಐ ಮಾರ್ಗಸೂಚಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿವೆ. ಕೊರೋನಾ ಲಾಕ್‌ಡೌನ್ ಪರಿಣಾಮ ಉದ್ಯೋಗವಿಲ್ಲದೆ ಎಲ್ಲೆಡೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಈ ಹಿನ್ನಲೆಯಲ್ಲಿ ಸರ್ಕಾರ ಆಗಸ್ಟ್‌ವರೆಗೂ ಸದಸ್ಯರಿಗೆ ತಕ್ಷಣ ಹಣ ಪಾವತಿಸುವಂತೆ ಒತ್ತಾಯಿಸುವಂತಿಲ್ಲ ಎಂದು ಆದೇಶಿಸಿದೆ. ಆದರೆ ಈ ಆದೇಶವನ್ನು ಉಲ್ಲಂಘಿಸಿ ತಕ್ಷಣ ಹಣ ಪಾವತಿಸುವಂತೆ ಮಹಿಳಾ ಸದಸ್ಯರಿಗೆ ತೀವ್ರ ಒತ್ತಡ ಹಾಕಲಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ಕ್ರಮ ಕೈಗೊಂಡು ಪರವಾನಗಿ ರದ್ದುಗೊಳಿಸಬೇಕು. ಅಲ್ಲದೆ ಈ ಫೈನಾನ್ಸ್‌ಗಳಲ್ಲಿ ಬಡ ವರ್ಗದ ಜನರು ಪಡೆದಿರುವ ಸಾಲ ಮನ್ನಾ  ಮಾಡಬೇಕೆಂದು ಆಗ್ರಹಿಸಲಾಯಿತು. 
ಮನೆ ಮನೆಗೆ ಅಡುಗೆ ಅನಿಲ ಪೂರೈಸುವ ವಿತರಕರು ನಿಗದಿತ ದರ ಪಡೆಯದೆ ೩೦ ರಿಂದ ೪೦ ರು. ಹೆಚ್ಚಿಗೆ ಪಡೆಯುತ್ತಿದ್ದಾರೆ. ಸಂಕಷ್ಟದ ಸಮಯದಲ್ಲಿ ಗ್ರಾಹಕರಿಂದ ಹೆಚ್ಚಿನ ಹಣ ಸುಲಿಗೆ ಮಾಡುವುದು ಸರಿಯಲ್ಲ. ಈ ಸಂಬಂಧ ತಕ್ಷಣ ಕ್ರಮ ಕೈಗೊಳ್ಳಬೇಕು. ಔರಾದ್‌ಕರ್ ವರದಿ ಜಾರಿಗೆ ತರುವ ಮೂಲಕ ಪೊಲೀಸ್ ಸಿಬ್ಬಂದಿಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವುದು. ಸರ್ಕಾರ ಶಾಲೆಗಳ ಆರಂಭಕ್ಕೆ ಮುಂದಾಗಿರುವುದು ಸರಿಯಲ್ಲ. ಶಾಲಾ ಮಕ್ಕಳಿಗೆ ಸರ್ಕಾರದ ಯಾವುದೇ ಮಾರ್ಗಸೂಚಿ ತಿಳಿಯುವುದಿಲ್ಲ. ಅಲ್ಲದೆ ಮಕ್ಕಳು ಮಾರ್ಗಸೂಚಿಗಳನ್ನು ಪಾಲಿಸುವುದು ಕಷ್ಟಕರವಾಗಿದೆ. ಈ ಪರಿಸ್ಥಿತಿಯಲ್ಲಿ ಶಾಲೆಗಳನ್ನು ಆರಂಭಿಸುವುದರಿಂದ ಹೆಚ್ಚಿನ ಆಪಾಯ ಎದುರಾಗಲಿದೆ. ಇದನ್ನು ಅರಿತು ತಕ್ಷಣ ಶಾಲೆಗಳನ್ನು ಆರಂಭಿಸದಿರುವಂತೆ ಮನವಿ ಮಾಡಲಾಯಿತು. 
ಪಕ್ಷದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್.ಗೌಡ ನೇತೃತ್ವ ವಹಿಸಿದ್ದರು. ರೈತ ಮುಖಂಡ ಸುಬ್ಬೇಗೌಡ, ಮುಖಂಡರಾದ ರವಿನಾಯ್ಕ, ರವಿ,  ಮಾನವ ಹಕ್ಕುಗಳ ಹೋರಾಟ ಸಮಿತಿ ಉಪಾಧ್ಯಕ್ಷ ಎಂ.ವಿ ಚಂದ್ರಶೇಖರ್, ಕರ್ನಾಟ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.