Thursday, October 1, 2020

ಓರ್ವ ಮನೆಗಳ್ಳನ ಬಂಧನ : ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ವಶ

ಹಳೇನಗರ-ನ್ಯೂಟೌನ್ ಠಾಣೆ ಪೊಲೀಸರ ಜಂಟಿ ಕಾರ್ಯಾಚರಣೆ

 ಮನೆಗಳ್ಳತನ ಪ್ರಕರಣಗಳಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬನನ್ನು ಭದ್ರಾವತಿ ಹಳೇನಗರ ಹಾಗು ನ್ಯೂಟೌನ್ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ ಗುರುವಾರ ನಡೆದಿದ್ದು, ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
      ಭದ್ರಾವತಿ, ಅ. ೧: ಮನೆಗಳ್ಳತನ ಪ್ರಕರಣಗಳಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬನನ್ನು ಹಳೇನಗರ ಹಾಗು ನ್ಯೂಟೌನ್ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ ಗುರುವಾರ ನಡೆದಿದ್ದು, ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
      ಶಿವಮೊಗ್ಗ ಬಸವಾಪುರ ಹಾಯ್‌ಹೊಳೆ ನಿವಾಸಿ ವೆಂಕಟೇಶ್ ಅಲಿಯಾಸ್ ಕೆಮ್ಮಣ್ಣುಗುಂಡಿ(೪೪) ಎಂಬಾತನನ್ನು ಬಂಧಿಸಲಾಗಿದ್ದು, ಈತನನಿಂದ ಒಟ್ಟು ೫.೯೮ ಲಕ್ಷ ರು. ಮೌಲ್ಯದ ೧೩೩ ಗ್ರಾಂ. ತೂಕದ ಚಿನ್ನದ ಆಭರಣ, ೨೯ ಸಾವಿರ ರು. ಮೌಲ್ಯದ ೫೯೯ ಗ್ರಾಂ. ತೂಕದ ಬೆಳ್ಳಿಯ ಆಭರಣ ಹಾಗು ಅಂದಾಜು ೧೫ ಸಾವಿರ ರು. ಮೌಲ್ಯದ ಎಲ್‌ಇಡಿ ಟಿ.ವಿ ಸೇರಿದಂತೆ ಒಟ್ಟು ೬.೪೨ ಲಕ್ಷ ರು. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.
      ಈತನ ವಿರುದ್ಧ ಹಳೇನಗರ ಮತ್ತು ನ್ಯೂಟೌನ್ ಪೊಲೀಸ್ ಠಾಣೆಗಳಲ್ಲಿ ಹಾಗು ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ಮತ್ತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಒಟ್ಟು ೪ ಮನೆಗಳ್ಳತನ ಪ್ರಕರಣಗಳು ದಾಖಲಾಗಿದ್ದವು.
      ಪ್ರಕರಣಗಳನ್ನು ಬೇಧಿಸಲು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ ಶಾಂತರಾಜು, ಹೆಚ್ಚುವರಿ ರಕ್ಷಣಾಧಿಕಾರಿ ಡಾ. ಎಚ್.ಡಿ ಶೇಖರ್, ಪೊಲೀಸ್ ಉಪಾಧೀಕ್ಷಕ ಸುಧಾಕರ ಎಸ್ ನಾಯ್ಕ ಮಾರ್ಗದರ್ಶನದಲ್ಲಿ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
      ಹಳೇನಗರ ಪೊಲೀಸ್ ಠಾಣಾಧಿಕಾರಿ ಶ್ರೀನಿವಾಸ್, ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಸಿಬ್ಬಂದಿ ವೆಂಕಟೇಶ್, ನ್ಯೂಟೌನ್ ಪೊಲೀಸ್ ಠಾಣೆ ಸಿಬ್ಬಂದಿ ಮಂಜುನಾಥ, ಪಾಲಾಕ್ಷನಾಯ್ಕ, ನಗರ ವೃತ್ತ ನಿರೀಕ್ಷಕರ ಕಛೇರಿ ಸಿಬ್ಬಂದಿ ಸುನಿಲ್, ಹಳೇನಗರ ಪೊಲೀಸ್ ಠಾಣೆ ಸಿಬ್ಬಂದಿ ಹಾಲೇಶ್, ಚಾಲಕ ಮಧುಸೂಧನ್ ಸೇರಿದಂತೆ ಇನ್ನಿತರರು ಪ್ರಕರಣಗಳ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪ್ರಕರಣ ಯಶಸ್ವಿಯಾಗಿ ಬೇಧಿಸಿರುವ ತಂಡವನ್ನು ಜಿಲ್ಲಾ ರಕ್ಷಣಾಧಿಕಾರಿಗಳು ಅಭಿನಂದಿಸಿದ್ದಾರೆ.

ಗಾಂಜಾ ಅಮಲಿಗೆ ಓರ್ವ ಬಲಿ ?

ಭದ್ರಾವತಿ ಹೊಸಮನೆ ಹನುಮಂತನಗರದಲ್ಲಿ  ಓರ್ವನನ್ನು  ಭೀಕರವಾಗಿ ಕೊಲೆ ಮಾಡಿರುವುದು. 
ಭದ್ರಾವತಿ, ಅ. ೧: ನಗರದ ಹೊಸಮನೆ  ಹನುಮಂತನಗರದಲ್ಲಿ  ಓರ್ವನನ್ನು  ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
      ಶಾರುಖ್ ಖಾನ್(೨೬) ಎಂಬಾತನನ್ನು ಕೊಲೆ ಮಾಡಲಾಗಿದೆ.  ಘಟನೆ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.  ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ.  ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ  ಪರಿಶೀಲನೆ ನಡೆಸಿದ್ದಾರೆ.
   ಸ್ಥಳೀಯರ ಮಾಹಿತಿ ಪ್ರಕಾರ ಈ ಭಾಗದಲ್ಲಿ ಓಸಿ,  ಇಸ್ಪೀಟ್, ಗಾಂಜಾ ಸೇವನೆ ಸೇರಿದಂತೆ ಹಲವು ಕಾನೂನು ಬಾಹಿರ ಕೃತ್ಯಗಳು ನಡೆಯುತ್ತಿದ್ದು, ಕೊಲೆಯಾದ ವ್ಯಕ್ತಿ ಕೂಡ ಈ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದನು. ಅಲ್ಲದೆ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಆತನ ಕೊಲೆ ನಡೆದಿರುವ ಸಾಧ್ಯತೆ ಇದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.