Saturday, March 19, 2022

ಸಂಬುದ್ಧ ಧಮ್ಮಾಂಕುರ ಟ್ರಸ್ಟ್ ವತಿಯಿಂದ ಹುಣ್ಣಿಮೆ ದಿನ

ಭದ್ರಾವತಿಯಲ್ಲಿ ಸಂಬುದ್ಧ ಧಮ್ಮಾಂಕುರ ಟ್ರಸ್ಟ್ ವತಿಯಿಂದ ಹೊಸ ನಂಜಾಪುರದ ನಿವೇಶನದಲ್ಲಿ ಪ್ರತಿ ತಿಂಗಳಿನಂತೆ ಈ ತಿಂಗಳು ಸಹ ಹುಣ್ಣಿಮೆ ದಿನ ಸರಳವಾಗಿ ಆಚರಿಸಲಾಯಿತು.
    ಭದ್ರಾವತಿ, ಮಾ. ೧೯: ಸಂಬುದ್ಧ ಧಮ್ಮಾಂಕುರ ಟ್ರಸ್ಟ್ ವತಿಯಿಂದ ಹೊಸ ನಂಜಾಪುರದ ನಿವೇಶನದಲ್ಲಿ ಪ್ರತಿ ತಿಂಗಳಿನಂತೆ ಈ ತಿಂಗಳು ಸಹ ಹುಣ್ಣಿಮೆ ದಿನ ಸರಳವಾಗಿ ಆಚರಿಸಲಾಯಿತು.
    ಬೌದ್ಧ ಧರ್ಮ ಉಪಾಸಕರಾದ ಪ್ರೊ. ಎಚ್. ರಾಚಪ್ಪ ಉಪನ್ಯಾಸ ನಡೆಸಿಕೊಟ್ಟರು. ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಕಾರ್ಯಪಾಲಕ ಇಂಜಿನಿಯರ್ ರಂಗರಾಜಪುರೆ, ಸಂಬುದ್ಧ ಧಮ್ಮಾಂಕುರ ಟ್ರಸ್ಟ್ ಆಡಳಿತ ಮಂಡಳಿಯ ಪ್ರಮುಖರಾದ ಸುರೇಶ್, ಬದರಿನಾರಾಯಣ, ನಂಜಾಪುರ ಶ್ರೀನಿವಾಸ್, ಎ. ತಿಪ್ಪೇಸ್ವಾಮಿ, ಎಸ್.ಎಸ್ ಭೈರಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಆರಂಭದಲ್ಲಿ ಗೌತಮ ಬುದ್ಧನ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಾಯಿತು.
    ಇತ್ತೀಚೆಗೆ ಸಂಬುದ್ಧ ಧಮ್ಮಾಂಕುರ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿದ್ದು, ಕ್ರಿಯಾಶೀಲವಾಗಿ ಮುನ್ನಡೆಯುತ್ತಿದೆ. ಟ್ರಸ್ಟ್ ಹೊಸ ನಂಜಾಪುರದಲ್ಲಿ ನಿವೇಶನ ಹೊಂದುವ ಜೊತೆಗೆ ಇದರ ಅಭಿವೃದ್ಧಿಗೆ ಮುಂದಾಗಿದೆ.

ಯುಗಾದಿ ಕವಿಗೋಷ್ಠಿ : ಆಸಕ್ತ ಕವಿಗಳಿಂದ ಕವನ ಆಹ್ವಾನ

    ಭದ್ರಾವತಿ, ಮಾ. ೧೯: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಯುಗಾದಿ ಕವಿಘೋಷ್ಠಿ ಹಮ್ಮಿಕೊಳ್ಳುತ್ತಿದ್ದು, ಆಸಕ್ತ ಕವಿಗಳಿಂದ ಕವನಗಳನ್ನು  ಆಹ್ವಾನಿಸಲಾಗಿದೆ.
    ಉತ್ತಮವಾದ ಯಾವುದೇ ವಿಷಯ ವಸ್ತುವುಳ್ಳ ಕವನಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗೆ ಮಾ. ೨೨ರೊಳಗೆ ಕಳುಹಿಸಬಹುದಾಗಿದೆ. ಕೆಲವೇ ಕವಿಗಳಿಗೆ ಮಾತ್ರ ಅವಕಾಶವಿದ್ದು, ಮೊದಲು ಕವನ ಕಳಿಸಿದ ಆಯ್ಕೆ ಯಾದ ಕವಿಗಳಿಗೆ ಮಾತ್ರ ವಾಚಿಸಲು ಅವಕಾಶ ನೀಡಲಾಗುವುದು. ಕಾರ್ಯಕ್ರಮದ ಸಂದರ್ಭದಲ್ಲಿ ಬಂದು ಕೇಳಿದರೆ ಅವಕಾಶ ಇರುವುದಿಲ್ಲ.
    ಹೆಚ್ಚಿನ ವಿವರಗಳಿಗೆ ಪರಿಷತ್ ಅಧ್ಯಕ್ಷರಾದ ಕೋಗಲೂರು ತಿಪ್ಪೇಸ್ವಾಮಿ, ಮೊ: ೯೦೦೮೫೧೫೪೩೨ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಪರಿಷತ್ ಕಾರ್ಯದರ್ಶಿಗಳಾದ ಎಚ್. ತಿಮ್ಮಪ್ಪ  ಮತ್ತು ಎಂ.ಈ ಜಗದೀಶ್ ಕೋರಿದ್ದಾರೆ.

ರತಿ ಮನ್ಮಥರ ದಹನದೊಂದಿಗೆ ಬಣ್ಣ ಬಣ್ಣದ ರಂಗಿನಾಟಕ್ಕೆ ತೆರೆ

ಭದ್ರಾವತಿ ಹಳೇನಗರದ ವಿವಿಧೆಡೆ ಶನಿವಾರ ಹೋಳಿ ಸಂಭ್ರಮಾಚರಣೆ ನಡೆಸಿ ರತಿ ಮನ್ಮಥರ ದಹನದೊಂದಿಗೆ ಹಬ್ಬಕ್ಕೆ ತೆರೆ ಎಳೆಯಲಾಯಿತು.
    ಭದ್ರಾವತಿ, ಮಾ. ೧೯: ಹಳೇನಗರದ ವಿವಿಧೆಡೆ ಶನಿವಾರ ಹೋಳಿ ಸಂಭ್ರಮಾಚರಣೆ ನಡೆಸಿ ರತಿ ಮನ್ಮಥರ ದಹನದೊಂದಿಗೆ ಹಬ್ಬಕ್ಕೆ ತೆರೆ ಎಳೆಯಲಾಯಿತು.
    ಭೂತನಗುಡಿ ಭಾಗದಲ್ಲಿ ಶುಕ್ರವಾರ ಹೋಳಿ ಹಬ್ಬಕ್ಕೆ ತೆರೆ ಎಳೆಯಲಾಗಿತ್ತು. ಆದರೆ ಹಳೇನಗರ ಭಾಗದ ಕುಂಬಾರರ ಬೀದಿ, ಉಪ್ಪಾರರ ಬೀದಿ ಮತ್ತು ಬ್ರಾಹ್ಮಣ ಬೀದಿಗಳಲ್ಲಿ ಒಂದು ದಿನ ತಡವಾಗಿ ಹಬ್ಬಕ್ಕೆ ತೆರೆಯಲಾಯಿತು.
    ಪ್ರಮುಖ ರಸ್ತೆಗಳಲ್ಲಿ ಬಣ್ಣ ಬಣ್ಣದ ರಂಗಿನಾಟದೊಡನೆ ವಯಸ್ಸಿನ ಬೇಧಭಾವವಿಲ್ಲದೆ ಮಕ್ಕಳು, ಮಹಿಳೆಯರು ಮತ್ತು ಪುರುಷರು ಒಂದೆಡೆ ಸೇರಿ ಸಂಭ್ರಮಿಸಿದರು. ನಂತರ ಧಾರ್ಮಿಕ ಆಚರಣೆಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ರತಿಮನ್ಮಥರ ಮೆರವಣಿಗೆ ನಡೆಸಿ ದಹನದೊಂದಿಗೆ ಹಬ್ಬಕ್ಕೆ ತೆರೆ ಎಳೆಯಲಾಯಿತು. ಈ ಭಾಗದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.



ಬಿಜೆಪಿಯಿಂದ ದುರ್ಬಳಕೆ : ಪರಿಶಿಷ್ಟ ಜಾತಿಗೆ ಸೇರಿದ ಹನುಮಂತನಾಯ್ಕರಿಗೆ ಅನ್ಯಾಯ

ಹನುಮಂತನಾಯ್ಕ
    ಭದ್ರಾವತಿ, ಮಾ. ೧೯: ಭಾರತೀಯ ಜನತಾ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಜೊತೆಗೆ ಹಂತ ಹಂತವಾಗಿ ಗುರುತಿಸಿಕೊಂಡು ತಾಲೂಕು ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಪರಿಶಿಷ್ಟ ಜಾತಿಗೆ ಸೇರಿದ ಹನುಮಂತನಾಯ್ಕ ವಿರುದ್ಧ ಪಕ್ಷದ ಕೆಲವರು ಷಡ್ಯಂತ್ರ ನಡೆಸಿ ಬಲಿಪಶು ಮಾಡಲಾಗಿದೆ ಎಂದು ತಾಲೂಕು ಬಂಜಾರ ಸಮಾಜದ ಪ್ರಮುಖರು ಆರೋಪಿಸಿದ್ದಾರೆ.
    ಮಂಡಲ ಅಧ್ಯಕ್ಷ ಎಂ. ಪ್ರಭಾಕರ ಹಾಗು ಅವರೊಂದಿಗಿನ ಕೆಲವು ವ್ಯಕ್ತಿಗಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಹನುಮಂತನಾಯ್ಕ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಉಚ್ಛಾಟನೆಗೊಳಿಸಿರುವುದು ಸರಿಯಲ್ಲ. ಇದನ್ನು ಬಂಜಾರ ಸಮಾಜ ಖಂಡಿಸುತ್ತದೆ.
    ಮಂಡಲ ಅಧ್ಯಕ್ಷ ಎಂ. ಪ್ರಭಾಕರ್‌ರವರು ಪರಿಶಿಷ್ಟ ಜಾತಿಗೆ ಸೇರಿದ ಹನುಮಂತನಾಯ್ಕರವರನ್ನು ದುರ್ಬಳಕೆ ಮಾಡಿಕೊಂಡಿದ್ದು, ಅಲ್ಲದೆ ವಿನಾಕಾರಣ  ಇಲ್ಲಸಲ್ಲದ ಆರೋಪಗಳನ್ನು ಮಾಡಿರುವುದು ವಿಷಾದನೀಯ ಬೆಳವಣಿಗೆಯಾಗಿದೆ. ಪ್ರಭಾಕರ್‌ರವರು ಮಾಡಿರುವ ಆರೋಪಗಳಿಗೆ ನೇರವಾಗಿ ಚರ್ಚಿಸಲು ಸಿದ್ದವಿದ್ದೇವೆ.
    ಪಕ್ಷದ ವರಿಷ್ಠರು ಈ ಸಂಬಂಧ ಗಮನ ಹರಿಸಿ ನ್ಯಾಯ ಒದಗಿಸಿಕೊಡಬೇಕು. ಅಲ್ಲದೆ ಹನುಮಂತನಾಯ್ಕ ಅವರನ್ನು ಪುನಃ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ತಾಲೂಕು ಬಂಜಾರ ಯುವಕರ ಸಂಘದ ಅಧ್ಯಕ್ಷ ಕೃಷ್ಣನಾಯ್ಕ ಹಾಗು ಬಂಜಾರ ಸಂಘದ ಅಧ್ಯಕ್ಷ ಪ್ರೇಮ್‌ಕುಮಾರ್ ಆಗ್ರಹಿಸಿದ್ದಾರೆ.

ವಿಜೃಂಭಣೆಯಿಂದ ಜರುಗಿದ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ

ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ತಾಲೂಕಿನ ಪುರಾಣ ಪ್ರಸಿದ್ದ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.
    ಭದ್ರಾವತಿ, ಮಾ. ೧೯: ಪ್ರತಿ ವರ್ಷದಂತೆ ಈ ಬಾರಿ ಸಹ ತಾಲೂಕಿನ ಪುರಾಣ ಪ್ರಸಿದ್ದ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.
    ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ ಮತ್ತು ಮಹಾಮಂಗಳಾರತಿ, ರಥಶುದ್ಧಿ ಪ್ರಧಾನ ಹೋಮ ಜರುಗಿದವು. ಮಧ್ಯಾಹ್ನ ೧೨.೩೦ಕ್ಕೆ ದೇವಸ್ಥಾನದಿಂದ ಆವರಣದಿಂದ ರಥೋತ್ಸವ ಆರಂಭಗೊಂಡಿತು. ದೇವಸ್ಥಾನದ ಪ್ರಧಾನ ಆರ್ಚಕರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಭಕ್ತರು ವೀರಾಂಜನೇಯ ಸ್ವಾಮಿಗೆ ಜೈಕಾರ ಹಾಕಿ ಸಂಭ್ರಮಿಸಿದರು. ವಿವಿಧ ಭಜನಾ ಮಂಡಳಿಗಳಿಂದ ಭಜನೆ ನೆರವೇರಿತು. ಗ್ರಾಮದ ಅಗಸೆ ಬಾಗಿಲಿನವರೆಗೂ ರಥೋತ್ಸವ ನಡೆಯಿತು. ನಂತರ ಅನ್ನ ಸಂಂತರ್ಪಣೆ ಕಾರ್ಯಕ್ರಮಗಳು ನಡೆದವು. ಆರ್ಯವೈಶ್ಯ ಸಮಾಜ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳಿಂದ ಭಕ್ತರಿಗೆ ಪಾನಕ, ಮಜ್ಜಿಗೆ, ಪ್ರಸಾದ ಸೇವೆ ವಿತರಣೆ ನಡೆಯಿತು.
    ಸುಣ್ಣದಹಳ್ಳಿ, ಮಾರುತಿ ನಗರ, ಮೊಸರಹಳ್ಳಿ, ತಾಷ್ಕೆಂಟ್‌ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಹಾಗೂ ನಗರ ಪ್ರದೇಶದ ಸಾವಿರಾರು ಭಕ್ತಾದಿಗಳು, ಗಣ್ಯರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭದ್ರಾವತಿ ತಾಲೂಕಿನ ಪುರಾಣ ಪ್ರಸಿದ್ದ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವದಲ್ಲಿ ಆರ್ಯವೈಶ್ಯ ಸಮಾಜ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳಿಂದ ಭಕ್ತರಿಗೆ ಪಾನಕ, ಮಜ್ಜಿಗೆ, ಪ್ರಸಾದ ಸೇವೆ ವಿತರಣೆ ನಡೆಯಿತು.