Thursday, December 30, 2021

ಬಾಬಳ್ಳಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಭದ್ರಾವತಿ ತಾಲೂಕಿನ ಬಾಬಳ್ಳಿ ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
    ಭದ್ರಾವತಿ, ಡಿ. ೩೦: ತಾಲೂಕಿನ ಬಾಬಳ್ಳಿ ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
    ಗ್ರಾಮದಲ್ಲಿ ಬಸ್ ನಿಲ್ದಾಣ ಹಾಗು ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಶಾಸಕರು, ಗ್ರಾಮದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಎಲ್ಲಾ ಜಾತಿ, ಧರ್ಮದವರೊಂದಿಗೆ ಜಾತ್ಯಾತೀತ ಮನೋಭಾವನೆಯಿಂದ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
    ಗ್ರಾಮದಲ್ಲಿ ಸಾರ್ವಜನಿಕ ಗ್ರಂಥಾಲಯ ಮತ್ತು ಕುಡಿಯುವ ನೀರಿನ ಬೃಹತ್ ಟ್ಯಾಂಕ್ ಮಂಜೂರು ಮಾಡಿಸುವ ಜೊತೆಗೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.
    ಸರ್‌ಎಂವಿ ಸರಕಾರಿ ಕಾಲೇಜಿನ ಉಪನ್ಯಾಸಕ ಡಾ. ಬಿ.ಎಂ ನಾಸೀರ್‌ಖಾನ್ ಶಿಕ್ಷಣದ ಮಹತ್ವದ ಕುರಿತು ಹಾಗು ಡಾ. ಧನಂಜಯ ಗ್ರಾಮೀಣಾಭಿವೃದ್ಧಿ ಕುರಿತು ಮತ್ತು ಹಿರಿಯ ನಾಗರೀಕ ಇಸ್ಮಾಯಿಲ್ ಖಾನ್ ರಾಷ್ಟ್ರೀಯ ಏಕೀಕರಣ ಕುರಿತು ಮಾತನಾಡಿದರು.
    ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೋಪಾಲಗಿರಿ, ಶೇಷಗಿರಿ, ಬಲರಾಮ್ ಗಿರಿ, ನ್ಯಾಯವಾದಿ ಪರಮೇಶಿ, ಶಂಕರ್ ನಾಯ್ಕ್ ಮತ್ತು ಆಸಿಫ್ ಅಲಿ ಹಾಗು ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವೈಶಾಲಿ ಸಿಂಗ್ ನಿರೂಪಿಸಿದರು. ರಸೂಲ್ ಖಾನ್ ಸ್ವಾಗತಿಸಿ, ವಂದಿಸಿದರು.

ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ ಪೂರ್ಣ ಪ್ರಮಾಣದ ತರಗತಿ ಆರಂಭಕ್ಕೆ ಆಗ್ರಹ

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ  


ಪದವಿ ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತರಗತಿಗಳನ್ನು ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭದ್ರಾವತಿಯಲ್ಲಿ ಗುರುವಾರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
    ಭದ್ರಾವತಿ, ಡಿ. ೩೦: ಪದವಿ ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತರಗತಿಗಳನ್ನು ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಕೋವಿಡ್-೧೯ ಸೋಂಕಿನ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ಶಾಲಾ-ಕಾಲೇಜುಗಳಲ್ಲಿ ೨ನೇ ಲಾಕ್‌ಡೌನ್ ನಂತರ ತರಗತಿಗಳು ಆರಂಭಗೊಂಡಿವೆ. ಪಾಠ-ಪ್ರವಚನಗಳು ಭರದಿಂದ ಸಾಗುತ್ತಿವೆ. ಅಲ್ಲದೆ ಅನೇಕ ವಿದ್ಯಾರ್ಥಿಗಳು ವಿವಿಧ ಕೋರ್ಸುಗಳಿಗೆ ಪ್ರವೇಶ ಪಡೆಯಲು ಮುಂದಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತರಗತಿಗಳನ್ನು ಬಹಿಷ್ಕರಿಸಿರುವುದರಿಂದ ಪೂರ್ಣಪ್ರಮಾಣದಲ್ಲಿ ತರಗತಿಗಳು ನಡೆಯುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಸರ್ಕಾರ ತಕ್ಷಣ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವ ಜೊತೆಗೆ ಪೂರ್ಣಪ್ರಮಾಣದಲ್ಲಿ ತರಗತಿಗಳನ್ನು ಆರಂಭಿಸುವಂತೆ ಆಗ್ರಹಿಸಲಾಯಿತು.
    ರಾಜ್ಯದ ಸರ್ಕಾರಿ ಹಾಗು ಖಾಸಗಿ ವಿಶ್ವ ವಿದ್ಯಾಲಯಗಳಲ್ಲಿ ಸರ್ಕಾರಿ ಕೋಟಾದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ೨೦೨೧-೨೨ನೇ ಸಾಲಿನಲ್ಲಿ ೨೦,೦೦೦ ರು. ಕಾಲೇಜು ಶುಲ್ಕ ಹಾಗು ಸ್ಕಿಲ್ ಲ್ಯಾಬ್ ಸೌಲಭ್ಯಕ್ಕಾಗಿ ೧೦,೦೦೦ ರು. ಗಳಿಂದ ೨೦,೦೦೦ ರು.ಗಳ ವರೆಗೆ ಹೆಚ್ಚುವರಿ ಶುಲ್ಕ ವಸೂಲಿಗೆ ಸರ್ಕಾರ ಕಾಲೇಜುಗಳಿಗೆ ಅವಕಾಶ ಕಲ್ಪಿಸಿದೆ. ಇದರಿಂದಾಗಿ ೪೦,೦೦೦ ರು. ಶುಲ್ಕವನ್ನು ಹೆಚ್ಚುವರಿಯಾಗಿ ವಿದ್ಯಾರ್ಥಿಗಳು ಭರಿಸುವಂತಾಗಿದೆ. ಕೋವಿಡ್-೧೯ರ ಪರಿಣಾಮ ಪ್ರಸ್ತುತ ಎಲ್ಲೆಡೆ ಆರ್ಥಿಕ ಸಂಕಷ್ಟ ಎದುರಾಗಿದೆ. ಮಧ್ಯಮ ಹಾಗು ಬಡವರ್ಗದವರು ಶುಲ್ಕ ಪಾವತಿಸುವುದು ಕಷ್ಟಕರವಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಶುಲ್ಕ ಹೆಚ್ಚಳಕ್ಕೆ ಹೊರಡಿರುವ ಆದೇಶವನ್ನು ತಕ್ಷಣ ಹಿಂಪಡೆಯುವ ಮೂಲಕ ಮಧ್ಯಮ ಹಾಗು ಬಡವರ್ಗದವರ ಹಿತ ಕಾಯ ಬೇಕೆಂದು ಮನವಿ ಮಾಡಲಾಯಿತು.  
    ಇದಕ್ಕೂ ಮೊದಲು ವಿದ್ಯಾರ್ಥಿಗಳು ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಿಂದ ವಿಐಎಸ್‌ಎಲ್ ಕ್ರೀಡಾಂಗಣ ರಸ್ತೆ, ಡಬ್ಬಲ್ ರಸ್ತೆ, ಅಂಡರ್ ಬ್ರಿಡ್ಜ್ ಮೂಲಕ ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ ಮತ್ತು ರಂಗಪ್ಪ ವೃತ್ತ ಮೂಲಕ ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.
    ವಿದ್ಯಾರ್ಥಿ ಪ್ರಮುಖರಾದ ಆಕಾಶ್, ಮನು, ಅಭಿಲಾಷ್, ವಿಜಯ್, ಸುಚಿತ್ರ, ಸ್ಪೂರ್ತಿ ಮತ್ತು ಸಹನಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಗಿರಿಜಮ್ಮ ನಿಧನ


ಗಿರಿಜಮ್ಮ
    ಭದ್ರಾವತಿ, ಡಿ. ೩೦: ಶಿವಮೊಗ್ಗ ಶಾಂತಲಾ ಸ್ಪೆರೋಕ್ಯಾಸ್ಟ್ ಪ್ರೈವೇಟ್ ಲಿಮಿಟೆಡ್ ಆಡಳಿತ ಮಂಡಳಿ ನಿರ್ದೇಶಕ ಜಿ.ಎಸ್ ಯೋಗೇಶ್ ಕುಮಾರ್‌ರವರ ತಾಯಿ, ಜನ್ನಾಪುರ ಕಿತ್ತೂರು ರಾಣಿ ಚೆನ್ನಮ್ಮ ಬಡಾವಣೆ ನಿವಾಸಿ ಗಿರಿಜಮ್ಮ(೯೬) ನಿಧನ ಹೊಂದಿದರು.
    ಇವರ ಅಂತ್ಯಕ್ರಿಯೆ ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ ಗುರುವಾರ ಮಧ್ಯಾಹ್ನ ನೆರವೇರಿತು. ಗಿರಿಜಮ್ಮನವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಪರಮೇಶ್ವರ್, ಬಸವರಾಜ್, ಜೇಡಿಕಟ್ಟೆ ಶ್ರೀ ಮರುಳಸಿದ್ದೇಶ್ವರ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ಎಸ್. ವಾಗೀಶ್, ವೀರಶೈವ ಸೇವಾ ಸಮಿತಿ ಅಧ್ಯಕ್ಷ ಮಹೇಶ್‌ಕುಮಾರ್, ಶಾಂತಲಾ ಸ್ಪೆರೋಕ್ಯಾಸ್ಟ್ ಪ್ರೈವೇಟ್ ಲಿಮಿಟೆಡ್ ಆಡಳಿತ ಮಂಡಳಿ ಹಾಗು ಇನ್ನಿತರ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.