Friday, November 12, 2021

ಮಿತಿ ಮೀರಿದ ಮಾದಕ ವಸ್ತುಗಳ ಮಾರಾಟ, ಸೇವನೆ : ಸೂಕ್ತ ಕ್ರಮ ಕೈಗೊಳ್ಳಿ

ಗ್ರಾಮಾಂತರ ಯುವ ಕಾಂಗ್ರೆಸ್ ವತಿಯಿಂದ ಪೊಲೀಸ್ ಉಪಾಧೀಕ್ಷಕರಿಗೆ ಮನವಿ


ಭದ್ರಾವತಿ ತಾಲೂಕಿನಾದ್ಯಂತ ಮಾದಕ ವಸ್ತುಗಳ ಮಾರಾಟ ಹಾಗು ಸೇವನೆ ಹೆಚ್ಚಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮಾಂತರ ಯುವ ಕಾಂಗ್ರೆಸ್ ವತಿಯಿಂದ ಪೊಲೀಸ್ ಉಪಾಧೀಕ್ಷಕರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ನ. ೧೨: ತಾಲೂಕಿನಾದ್ಯಂತ ಮಾದಕ ವಸ್ತುಗಳ ಮಾರಾಟ ಹಾಗು ಸೇವನೆ ಹೆಚ್ಚಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮಾಂತರ ಯುವ ಕಾಂಗ್ರೆಸ್ ವತಿಯಿಂದ ಪೊಲೀಸ್ ಉಪಾಧೀಕ್ಷಕರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
    ತಾಲೂಕಿನಾದ್ಯಂತ ಮಾದಕ ವಸ್ತುಗಳ ಮಾರಾಟ ಹಾಗು ಸೇವನೆ ಹೆಚ್ಚಾಗುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ.  ಯುವ ಸಮುದಾಯದವರು ದಾರಿ ತಪ್ಪುತ್ತಿದ್ದು, ಮಾದಕ ವಸ್ತುಗಳನ್ನು ಮಾರಾಟ ಮಾಡುವವರನ್ನು ಯಾರು ಸಹ ಪ್ರಶ್ನಿಸದಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಜೊತೆಗೆ ಮಾರಾಕಾಸ್ತ್ರಗಳ ಬಳಕೆ ಸಹ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
    ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಎನ್. ಅಫ್ತಾಬ್ ಅಹಮದ್, ಉಪಾಧ್ಯಕ್ಷ ತಬ್ರೇಜ್ ಖಾನ್, ಪ್ರಧಾನ ಕಾರ್ಯದರ್ಶಿ ಸಜ್ಜಾದ್, ಅಮೋಸ್, ಜಬಿವುಲ್ಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತ್ರಿಪುರಾ ಸರ್ಕಾರ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರಿಗೆ ರಕ್ಷಣೆ ನೀಡಲಿ : ತಹಸೀಲ್ದಾರ್ ಮೂಲಕ ಮನವಿ

ತ್ರಿಪುರಾ ರಾಜ್ಯದಲ್ಲಿ ಅಲ್ಪ ಸಂಖ್ಯಾತ ಮುಸ್ಲಿಂ ಸಮುದಾಯದವರ ಮೇಲೆ ನಡೆಯುತ್ತಿರುವ ದಾಳಿಯನ್ನು ಅಲ್ಲಿನ ಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶುಕ್ರವಾರ ಭದ್ರಾವತಿಯಲ್ಲಿ ದಾರುಲ್ ಉಲೂಮ್ ಹಜ್‌ರತ್ ಸೈಯದ್ ಸಾದತ್ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ನ. ೧೨: ತ್ರಿಪುರಾ ರಾಜ್ಯದಲ್ಲಿ ಅಲ್ಪ ಸಂಖ್ಯಾತ ಮುಸ್ಲಿಂ ಸಮುದಾಯದವರ ಮೇಲೆ ನಡೆಯುತ್ತಿರುವ ದಾಳಿಯನ್ನು ಅಲ್ಲಿನ ಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶುಕ್ರವಾರ ದಾರುಲ್ ಉಲೂಮ್ ಹಜ್‌ರತ್ ಸೈಯದ್ ಸಾದತ್ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು, ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮೇಲಿನ ದಾಳಿಗೆ ಪ್ರತಿಕಾರವಾಗಿ ಈಶಾನ್ಯ ರಾಜ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ದಾಳಿಯ ವಿಚಾರದಲ್ಲಿ ಬಿಜೆಪಿಯೇತರ ಪಕ್ಷಗಳು ದಿವ್ಯ ಮೌನಕ್ಕೆ ಒಳಗಾಗಿರುವುದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ಭಾರತ ಜಾತ್ಯಾತೀತ ರಾಷ್ಟ್ರವಾಗಿದ್ದು, ಎಲ್ಲರೂ ಸಮಾನತೆಯಿಂದ ಬದುಕುತ್ತಿದ್ದಾರೆ. ಈ ನಡುವೆ ಮುಸ್ಲಿಂ ಸಮುದಾಯದವರನ್ನು ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಸಂಘ ಪರಿವಾರ ಪ್ರೇರಿತ ಫ್ಯಾಶಿಸ್ಟ್ ದಾಳಿ ಶೋಚನೀಯವಾಗಿದ್ದು, ಇದರ ವಿರುದ್ಧ ಧ್ವನಿ ಎತ್ತಬೇಕಾದ ದೇಶದ ಮುಖ್ಯವಾಹಿನಿಗಳಾಗಿರುವ ಜಾತ್ಯಾತೀತ ಪಕ್ಷಗಳ ಮೌನ ಅಘಾತಕಾರಿ ಬೆಳವಣಿಗೆಯಾಗಿದೆ ಎಂದು ಅಸಮಾಧಾನ ತೋರ್ಪಡಿಸಿದರು.
    ತ್ರಿಪುರಾ ಸರ್ಕಾರ ಮುಸ್ಲಿಂ ಸಮುದಾಯದವರ ಮೇಲಿನ ದಾಳಿಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕೈಗೊಳ್ಳಬೇಕು. ಆ ಮೂಲಕ ಅಲ್ಪ ಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.

ನ.೧೩ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ, ನ. ೧೨: ನಗರದ ಜೆಪಿಎಸ್ ಕಾಲೋನಿಯಲ್ಲಿರುವ ಮೆಸ್ಕಾಂ ೧೧೦/೩೩/೧೧ ಕೆವಿ ಮತ್ತು ಮಾಚೇನಹಳ್ಳಿಯ ೧೧೦/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ನ.೧೩ರ ಶನಿವಾರ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    ನ್ಯೂಟೌನ್, ನ್ಯೂಕಾಲೋನಿ, ಐಟಿಐ, ಆಕಾಶವಾಣಿ, ಕಾಗದನಗರ, ಸುರಗಿತೋಪು, ಆನೇಕೊಪ್ಪ, ಉಜ್ಜನಿಪುರ, ಬುಳ್ಳಾಪುರ, ಹುಡ್ಕೋ ಕಾಲೋನಿ, ಬೊಮ್ಮನಕಟ್ಟೆ, ಹೊಸಸಿದ್ದಾಪುರ, ಹಳೇಸಿದ್ದಾಪುರ, ಹೊಸೂರು ತಾಂಡ್ಯ, ಹುತ್ತಾ ಕಾಲೋನಿ, ಜನ್ನಾಪುರ, ಬಿ.ಎಚ್ ರಸ್ತೆ, ಅಪ್ಪರ್ ಹುತ್ತಾ, ಲೋಯರ್ ಹುತ್ತಾ, ಜಿಂಕ್‌ಲೈನ್, ಸಿರಿಯೂರು, ತರೀಕೆರೆ ರಸ್ತೆ, ಸಾದತ್ ಕಾಲೋನಿ, ನೆಹರು ನಗರ, ಸುಣ್ಣದಹಳ್ಳಿ, ಬಸವನಗುಡಿ, ಶಿವನಿ ವೃತ್ತ, ಹಿರಿಯೂರು, ಹೊಳೆ ಗಂಗೂರು, ಕಾರೇಹಳ್ಳಿ, ಕಂಬದಾಳ್ ಹೊಸೂರು, ಹೊನ್ನಹಟ್ಟಿ ಹೊಸೂರು, ಹುಣಸೇಕಟ್ಟೆ, ಕಾಳನಕಟ್ಟೆ, ಹೊಳೆ ನೇರಳೇಕೆರೆ, ಅಂತರಗಂಗೆ, ದೊಣಬಘಟ್ಟ, ಬಾರಂದೂರು, ಕಲ್ಲಹಳ್ಳಿ, ಯರೇಹಳ್ಳಿ, ಮಾವಿನಕೆರೆ, ದೊಡ್ಡೇರಿ, ತಡಸ, ಬಿಳಿಕಿ, ಕೆಂಪೇಗೌಡನಗರ, ಬೊಮ್ಮನಹಳ್ಳಿ, ಕುಂಬಾರ ಗುಂಡಿ, ಹಳೇ ಬಾರಂದೂರು, ಹಳ್ಳಿಕೆರೆ, ಅಪ್ಪಾಜಿ ಬಡಾವಣೆ, ಉಕ್ಕುಂದ, ರತ್ನಾಪುರ, ಕೆಂಚೇನಹಳ್ಳಿ, ಗಂಗೂರು, ಬಿಸಿಲುಮನೆ, ದೇವರನರಸೀಪುರ, ಶಿವಪುರ, ಅಡ್ಲಘಟ್ಟ, ಅಂಬುದಹಳ್ಳಿ, ಅರಳಿಕೊಪ್ಪ, ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ, ಜೇಡಿಕಟ್ಟೆ, ಹಳೇಜೇಡಿಕಟ್ಟೆ, ಡೈರಿ ವೃತ್ತ, ಮಲವಗೊಪ್ಪ, ನಿದಿಗೆ, ಹೊನ್ನವಿಲೆ, ಮಜ್ಜಿಗೇನಹಳ್ಳಿ, ಕಲ್ಲಹಳ್ಳಿ ಗ್ರಾ.ಪಂ. ವ್ಯಾಪ್ತಿ, ಹಾಗಲಮನೆ, ವೀರಾಪುರ, ಸಿರಿಯೂರು ತಾಂಡ, ಸಿರಿಯೂರು, ಶಿವರಾಮನಗರ, ವಿಶ್ವೇಶ್ವರಯ್ಯನಗರ, ಶಂಕಲೀಪುರ, ಹುಲಿರಾಮನಕೊಪ್ಪ, ಹಾಗಲಮನೆ, ಮತಿಘಟ್ಟ ಮತ್ತು ಹಾತಿಕಟ್ಟೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.

ನಡೆ, ನುಡಿ, ಕ್ರಿಯಾಶೀಲತೆಯಿಂದ ವ್ಯಕ್ತಿತ್ವ : ಎಚ್.ಎನ್ ಮಹಾರುದ್ರ

ಭದ್ರಾವತಿ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಕೋಶಾಧ್ಯಕ್ಷ ಜಿ.ಎನ್ ಸತ್ಯಮೂರ್ತಿಯವರ ೭೦ನೇ ವರ್ಷದ ಜನ್ಮದಿನ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ನ. ೧೨: ನಡೆ, ನುಡಿ ಹಾಗು ಕ್ರಿಯಾಶೀಲತೆ ಪ್ರತಿಯೊಬ್ಬರ ವ್ಯಕ್ತಿತ್ವವನ್ನು ಎಲ್ಲೆಡೆ ಗುರುತಿಸಲ್ಪಡುವಂತೆ ಮಾಡುತ್ತವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಉಪಾಧ್ಯಕ್ಷ ಎಚ್.ಎನ್ ಮಹಾರುದ್ರ ಹೇಳಿದರು.
    ಅವರು ನಗರದ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಕೋಶಾಧ್ಯಕ್ಷ ಜಿ.ಎನ್ ಸತ್ಯಮೂರ್ತಿಯವರ ೭೦ನೇ ವರ್ಷದ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಸತ್ಯಮೂರ್ತಿಯವರು ತಮ್ಮ ವಯಸ್ಸನ್ನು ಲೆಕ್ಕಿಸದೆ ಪರಿಷತ್‌ನಲ್ಲಿ ಇಂದಿಗೂ ಕ್ರಿಯಾಶೀಲರಾಗಿರುವುದು ಅವರಲ್ಲಿನ ವಿಶೇಷ ವ್ಯಕ್ತಿತ್ವವನ್ನು ತೋರಿಸುತ್ತದೆ. ಅವರ ನಡೆ, ನುಡಿ ಸಹ ಎಲ್ಲರಿಗೂ ಮಾದರಿಯಾಗಿದೆ. ಇಂತಹ ವ್ಯಕ್ತಿಯ ಜನ್ಮದಿನವನ್ನು ಪರಿಷತ್ ತಾಲೂಕು ಮಾಜಿ ಅಧ್ಯಕ್ಷರಾದ ಅಪೇಕ್ಷ ಮಂಜುನಾಥ್‌ರವರು ವಿಶೇಷವಾಗಿ ಆಚರಣೆ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
    ಅಪೇಕ್ಷ ನೃತ್ಯ ಕಲಾವೃಂದ ಸೇರಿದಂತೆ ವಿವಿಧ ಸಂಘಟನೆಗಳಿಂದ ಸನ್ಮಾನಿಸಿ ಗೌರವಿಸಲಾಯಿತು. ಪರಿಷತ್ ಪ್ರಮುಖರಾದ ಅಪೇಕ್ಷ ಮಂಜುನಾಥ್, ಸಿ. ಚನ್ನಪ್ಪ, ಡಾ.ಬಿ.ಎಂ ನಾಸೀರ್‌ಖಾನ್, ವೈ.ಕೆ ಹನುಮಂತಯ್ಯ, ಅರಳೇಹಳ್ಳಿ ಅಣ್ಣಪ್ಪ, ಕತ್ತಲಗೆರೆ ತಿಮ್ಮಪ್ಪ, ಜೆ.ಎನ್ ಬಸವರಾಜಪ್ಪ, ಎನ್. ಮಂಜುನಾಥ್, ಸಿದ್ದಪ್ಪ, ಕುಮಾರ್, ಎ. ತಿಪ್ಪೇಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ, ತಮಿಳು ಸಮಾಜದ ಪ್ರಮುಖರಾದ ಸುರೇಶ್‌ಕುಮಾರ್, ವೀರಭದ್ರನ್, ನಾರಾಯಣ, ಚಂದ್ರಶೇಖರ್, ವಿ. ಮಣಿ, ಮುತ್ತುಸ್ವಾಮಿ, ಸ್ತ್ರೀ ರೋಗ ತಜ್ಞೆ ಡಾ. ವೀಣಾ ಎಸ್ ಭಟ್, ರೈಫಲ್ ಅಸೋಸಿಯೇಷನ್ ರವಿ, ಡಿಎಸ್‌ಎಸ್ ಪ್ರಮುಖರಾದ ರವಿನಾಯ್ಕ, ಶಿವುನಾಯ್ಕ ಹಾಗೂ ಜಿ.ಎನ್ ಸತ್ಯಮೂರ್ತಿಯವರ ಕುಟುಂಬ ವರ್ಗದವರು, ಸ್ನೇಹಿತರು, ಹಿತೈಷಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.