ಭದ್ರಾವತಿಯಲ್ಲಿ ಭಾನುವಾರ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕು ೬ನೇ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಡಾ. ವೀಣಾ ಎಸ್ ಭಟ್‌ರವರಿಗೆ ಶಿವಮೊಗ್ಗ ಬೆಕ್ಕಿನಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿಯವರು ಸಮ್ಮೇಳನದ ಧ್ವಜ ಹಸ್ತಾಂತರಿಸಿದರು.
ಭದ್ರಾವತಿ, ಮಾ. ೨೮: ಪ್ರಸ್ತುತ ಜಗತ್ತಿನ ಎಲ್ಲಾ ಕ್ಷೇತ್ರಗಳಲ್ಲೂ ಕಲ್ಮಶ ತುಂಬಿಕೊಂಡಿದ್ದು, ಇವುಗಳಿಂದ ಪರಿಶುದ್ಧರಾಗಲು ವಚನಗಳು ಸಹಕಾರಿಯಾಗಿವೆ ಎಂದು ನಗರದ ಸ್ತ್ರೀರೋಗ ತಜ್ಞೆ, ವೈದ್ಯ ಸಾಹಿತಿ ಡಾ. ವೀಣಾ ಎಸ್. ಭಟ್ ಹೇಳಿದರು.
ಭಾನುವಾರ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕು ೬ನೇ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.
ವಚನಗಳು ದೈನಂದಿನ ಬದುಕಿನ ಭಾಗವಾಗಬೇಕು, ಬಸವಾದಿ ಶರಣರ ಚಾರಿತ್ರಿಕ ಪಾತ್ರಗಳನ್ನು ಕೇವಲ ನೆನಪು ಮಾಡಿಕೊಂಡರೆ ಸಾಲದು ಅವರು ಹಾಕಿಕೊಟ್ಟ ಹಾದಿಯಲ್ಲಿ ಕೆಲವು ಹೆಜ್ಜೆಗಳನ್ನಾದರೂ ಇಡಬೇಕು. ಕಾಯಕ, ದಾಸೋಹದ ಪರಿಕಲ್ಪನೆ ಪ್ರತಿಯೊಬ್ಬರಲ್ಲಿಯೂ ಮೂಡಬೇಕು ಆಗ ಮಾತ್ರ ಬದುಕಿನ ಸಾರ್ಥಕತೆ ಸಾಧ್ಯ ಎಂದರು.
ಜಗಜ್ಯೋತಿ ಬಸವಣ್ಣನವರ ಆಶಯದಂತೆ ನಮ್ಮ ನಡೆ-ನುಡಿ ಒಂದೇ ದಿಕ್ಕಿನಲ್ಲಿ ಸಾಗಬೇಕು. ಸಮಾನತೆ ಪರಿಕಲ್ಪನೆಯೊಂದಿಗೆ ಪರಿಶುದ್ಧ ಮನಸ್ಸು ಹೊಂದುವ ಮೂಲಕ ಬದುಕು ರೂಪಿಸಿಕೊಳ್ಳಬೇಕು. ಪರಿಶುದ್ಧ ಆಲೋಚನೆಗಳಿಂದ ನಮ್ಮ ದೇಹದ ಆರೋಗ್ಯ ವೃದ್ಧಿಸುವ ಜೊತೆಗೆ ಕೊರೋನಾದಂತಹ ಮಹಾಮಾರಿಯನ್ನೂ ಸಹ ಧೈರ್ಯದಿಂದ ಎದುರಿಸುವ ಸಾಮರ್ಥ್ಯ ಹೊಂದಬಹುದು. ಈ ನಿಟ್ಟಿನಲ್ಲಿ ಅಂತರಂಗ ಬಹಿರಂಗದ ಶುದ್ದಿ ವೈದ್ಯಲೋಕಕ್ಕೂ ಕೂಡ ಸವಾಲಾಗಿ ಪರಿಣಮಿಸುತ್ತದೆ ಎಂದರು.
ಶಾಸಕ ಬಿ.ಕೆ. ಸಂಗಮೇಶ್ವರ್ ಮಾತನಾಡಿ, ಶರಣರ ಬದುಕು ಜಾತಿ, ಧರ್ಮ ಸೇರಿದಂತೆ ಯಾವುದೇ ಬೇಧಭಾವವಿಲ್ಲದ ಸರ್ವಸಮಾನತೆಯ ಬದುಕಾಗಿದೆ. ಇದು ಕೇವಲ ೧೨ನೇ ಶತಮಾನಕ್ಕೆ ಮಾತ್ರ ಸೀಮಿತವಾಗಿಲ್ಲ ಇಂದಿಗೂ ಪ್ರಸ್ತುತವಾಗಿದೆ. ಶರಣರ ಆಶಯದಂತೆ ನಮ್ಮ ಬದುಕು ರೂಪುಗೊಳ್ಳಬೇಕು ಎಂದರು.
ಪ್ರಸ್ತುತ ಕ್ಷೇತ್ರದಲ್ಲಿ ಕೆಲವರು ಜಾತಿ, ಧರ್ಮದ ಹೆಸರಿನಲ್ಲಿ ವಿಷಬೀಜ ಬಿತ್ತಿ ರಾಜಕಾರಣ ಮಾಡಲು ಯತ್ನಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ರಾಜಕಾರಣದಲ್ಲಿ ಟೀಕೆ ಟಿಪ್ಪಣಿಗಳು ಸಾಮಾನ್ಯ ಅದನ್ನು ಎದುರಿಸುವ ಶಕ್ತಿ ದೇವರು ನನಗೆ ಕರುಣಿಸಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದ ಮತದಾರರೇ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆಂದು ಇತ್ತೀಚೆಗೆ ಕ್ಷೇತ್ರದಲ್ಲಿ ಉಂಟಾಗಿರುವ ಅಹಿತಕರ ಬೆಳವಣಿಗೆಗಳ ಕುರಿತು ಸಂಗಮೇಶ್ವರ್ ಮಾರ್ಮಿಕವಾಗಿ ನುಡಿದರು.