ಬುಧವಾರ ರಾತ್ರಿ ನಿಧನ ಹೊಂದಿದ ಭದ್ರಾವತಿ ಕ್ಷೇತ್ರದ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿರುವ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು.
ಭದ್ರಾವತಿ, ಸೆ. ೩: ಬುಧವಾರ ರಾತ್ರಿ ನಿಧನ ಹೊಂದಿದ ಕ್ಷೇತ್ರದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಸಾವಿರಾರು ಮಂದಿ ಕಾರ್ಯಕರ್ತರು, ಅಭಿಮಾನಿಗಳ ಕಣ್ಣಂಚಿನಲ್ಲಿ ಲೀನವಾಗಿದ್ದು, ಗುರುವಾರ ಸಂಜೆ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಿತು.
ಅಪ್ಪಾಜಿಯವರ ಅಂತಿಮ ಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡ ಕಾರಣ ಬೆಳಿಗ್ಗೆ ೧೧ ಗಂಟೆಗೆ ನಡೆಯಬೇಕಿದ್ದ ಅಂತ್ಯಕ್ರಿಯೆ ವಿಳಂಬವಾಗಿದ್ದು, ತಾಲೂಕಿನ ಗೋಣಿಬೀಡು ಗ್ರಾಮದಲ್ಲಿರುವ ಅಪ್ಪಾಜಿಯವರ ತೋಟ ತಲುಪುವಲ್ಲಿ ಸಂಜೆಯಾಯಿತು. ಈ ನಡುವೆ ಬಾರಿ ಮಳೆಯಿಂದಾಗಿ ಮತ್ತಷ್ಟು ವಿಳಂಬವಾಯಿತು. ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಲಾಗಿದ್ದು, ಪುತ್ರ, ನಗರಸಭೆ ಸದಸ್ಯ ಎಂ.ಎ ಅಜಿತ್ ಅಗ್ನಿ ಸ್ಪರ್ಶ ನೆರವೇರಿಸಿದರು.
ಅಪ್ಪಾಜಿ ಮೃತಪಟ್ಟ ನಂತರ ಅವರಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಆದರೂ ಸಹ ಮುನ್ನಚ್ಚರಿಕೆ ಕ್ರಮಗಳೊಂದಿಗೆ ಬೆಳಿಗ್ಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವರ ನಿವಾಸದಲ್ಲಿ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಕೊರೋನಾ ಭೀತಿ ನಡುವೆಯೂ ಅಗಲಿದ ನಾಯಕನ ಅಂತಿಮ ದರ್ಶನಕ್ಕೆ ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಆಗಮಿಸಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಹೆಚ್ಚಿನ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.