Friday, April 4, 2025

ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆದ ಶಿಕ್ಷಕ ಗೋವಿಂದಸ್ವಾಮಿಗೆ ಸನ್ಮಾನ

ಸರ್ಕಾರಿ ನೌಕರರ ಸಂಘದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಂಗಾರದ ಪದಕ ಪಡೆದ ಭದ್ರಾವತಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಗೋವಿಂದಸ್ವಾಮಿ-ಜ್ಯೋತಿ ದಂಪತಿಯನ್ನು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ, ಯೋಗಪಟು ಗೋವಿಂದಸ್ವಾಮಿ ಪಂಜಾಬ್ ರಾಜ್ಯದ ಚಂಡೀಘಡದಲ್ಲಿ ನಡೆದ ಸರ್ಕಾರಿ ನೌಕರರ ಸಂಘದ ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯ ಪ್ರತಿನಿಧಿಸಿ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ತಮ್ಮದಾಗಿಸಿಕೊಂಡು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಈ ಹಿನ್ನಲೆಯಲ್ಲಿ ತಾಲೂಕು ಪ್ರಾಥಮಿಕ ಮತ್ತು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಗೋವಿಂದಸ್ವಾಮಿ ಮತ್ತು ಇವರ ಪತ್ನಿ ಜ್ಯೋತಿ ದಂಪತಿಯನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
    ಶಿಕ್ಷಕ, ಯೋಗಪಟು ಗೋವಿಂದಸ್ವಾಮಿಯವರ ಸಾಧನೆಯನ್ನು ಪ್ರಶಂಸಿಸಿ ಮತ್ತಷ್ಟು ಸಾಧನೆ ಮಾಡುವ ಮೂಲಕ ಯುವ ಕ್ರೀಡಾಪಟುಗಳಿಗೆ ಇವರ ಸಾಧನೆ ಪ್ರೇರಣೆಯಾಗಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಲಾಯಿತು. 
    ರಾಷ್ಟ್ರ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕ ಶಿವಲಿಂಗೇಗೌಡ, ದೈಹಿಕ ಶಿಕ್ಷಣ ಶಿಕ್ಷಕರಾದ ಕರಣ್‌ಸಿಂಗ್, ಗಿರೀಶ್, ನಾಗರಾಜ್ ನಾಯಕ್, ಸಿದ್ದಯ್ಯ, ಮುಂಜಿರಾ ನೂರ್ ಫಾತೀಮಾ, ರತ್ನಮ್ಮ, ಅಮೀರ್ ಉನ್ನೀಸಾ, ಸಂತೋಷ್, ಶ್ರೀಕಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಅನ್ನಮೇರಿ ನಿಧನ

    ಅನ್ನಮೇರಿ
    ಭದ್ರಾವತಿ : ಹಳೇನಗರ ವ್ಯಾಪ್ತಿಯ ಗಾಂಧಿನಗರದ ನಿವಾಸಿ ಅನ್ನಮೇರಿ(೫೮) ಶುಕ್ರವಾರ ನಿಧನ ಹೊಂದಿದ್ದಾರೆ. 
    ಇವರಿಗೆ ಮಗಳು ಮೊಮ್ಮಕ್ಕಳು ಇದ್ದಾರೆ. ಇವರ ಅಂತ್ಯಕ್ರಿಯೆ ನ್ಯೂಟೌನ್ ಬೈಪಾಸ್ ರಸ್ತೆಯಲ್ಲಿರುವ ಕ್ರೈಸ್ತ ಸಮಾಧಿಯಲ್ಲಿ ಶನಿವಾರ ನೆರವೇರಲಿದೆ. ತಾಲೂಕು ಕ್ರೈಸ್ತ ಸಮುದಾಯದ ಸ್ಥಳೀಯ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ವಿಜೃಂಭಣೆಯಿಂದ ಜರುಗಿದ ಭೂತನಗುಡಿ ಜಾತ್ರಾ ಮಹೋತ್ಸವ : ಜನರ ಮೆಚ್ಚುಗೆ ಪಡೆದ ಪೌರಾಣಿಕ ನಾಟಕ ಪ್ರದರ್ಶನ

ಭದ್ರಾವತಿ ನಗರದ ಭೂತನಗುಡಿಯಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನದ ೪೦ನೇ ವರ್ಷದ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ವರ್ಷ ಸಹ ವಿಜೃಂಭಣೆಯಿಂದ ಜರುಗಿತು. ಈ ಸಂಬಂಧ ಹಮ್ಮಿಕೊಳ್ಳಲಾಗಿದ್ದ ಶ್ರೀ ಶನೇಶ್ವರ ಮಹಾತ್ಮೆ ರಾಜ ವಿಕ್ರಮ ಪೌರಾಣಿಕ ನಾಟಕ ಪ್ರೇಕ್ಷಕರ ಮನಸೆಳೆಯಿತು.
    ಭದ್ರಾವತಿ : ನಗರದ ಭೂತನಗುಡಿಯಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನದ ೪೦ನೇ ವರ್ಷದ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ವರ್ಷ ಸಹ ವಿಜೃಂಭಣೆಯಿಂದ ಜರುಗಿತು. ಈ ಸಂಬಂಧ ಹಮ್ಮಿಕೊಳ್ಳಲಾಗಿದ್ದ ಶ್ರೀ ಶನೇಶ್ವರ ಮಹಾತ್ಮೆ ರಾಜ ವಿಕ್ರಮ ಪೌರಾಣಿಕ ನಾಟಕ ಪ್ರೇಕ್ಷಕರ ಮನಸೆಳೆಯಿತು.
    ಚನ್ನರಾಯಪಟ್ಟಣದ ಮಂಜುನಾಥ ಡ್ರಾಮಾ ಸೀನ್ ಸಪ್ಲೈಯರ್ ಇವರ ಭವ್ಯ ರಂಗ ವೇದಿಕೆಯಲ್ಲಿ ಬುಧವಾರ ರಾತ್ರಿ  ಶನೇಶ್ವರ ನಾಟಕ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಶನೇಶ್ವರ ಮಹಾತ್ಮೆ ರಾಜ ವಿಕ್ರಮ ಪೌರಾಣಿಕ ನಾಟಕದಲ್ಲಿ ಸ್ಥಳೀಯ ಕಲಾವಿದರು ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾದರು.  
    ಕಲಾವಿದರಾದ ಮಂಜುನಾಥ-ಶನಿದೇವರು, ಯ.ಎ ಕೃಷ್ಣಕುಮಾರ್-ವಿಕ್ರಮರಾಜ, ಮುಕೇಶ್-ಕಾರನಾಸ ಮುಲ್ಡ್ ಗುಣವಂತಿ ಗಂಡ ಸಿದ್ದಲಿಂಗು, ಶರತ್ ಕುಮಾರ್-ಸೇನಾಧಿಪತಿ ಸೂರ್ಯಗ್ರಹ ಡಂಗೂರ, ತಮ್ಮಣ್ಣ-ಬಡ ಬ್ರಾಹ್ಮಣ, ಗುಣವಂತಿ ಮುಲ್ಡಿ, ಲಕ್ಷ್ಮೀದೇವಿ, ಅರ್ಜುನ್-ಗುರುಗ್ರಹ, ಯಜಮಾನ ಬಸಪ್ಪ ತೇಲಿ ಶೆಟ್ಟಿ ಕಟಕ, ಸಂಜು ಎಂ.ಆರ್-ನಟಿ, ಕಾಳಿಕಾಂಬೆ ಕಟುಕ ಸಿಪಾಯಿ, ನತೀನ್ ಕುಮಾರ-ಶನಿಗ್ರಹ, ಕಳ್ಳ, ಕು. ವ್ಯಾಪಾರಿ, ಎಸ್. ಕಿರಣ್ ಅಂಬೇಕರ್-ಚಂದ್ರಸೇನ, ರಾಹು-ಕೇತು ಗ್ರಹ, ಆನಂದ-ಆದಿಮೂರ್ತಿ, ಕು.ವ್ಯಾಪಾರಿ, ಸುನೀಲ್ ಕುಮಾರ್-ಚಂದ್ರಗ್ರಹ ಚ. ಸೇನಾಧಿಪತಿ, ಪ್ರದೀಪ್ ಕುಮಾರ್-ನಂದಯ್ಯ ಶೆಟ್ಟಿ, ಅರುಣ್ ಕುಮಾರ್-ಬುಧಗ್ರಹ ಸಿಪಾಯಿ, ಅಭಿಲಾಷ್ ಜಿ.ಆರ್-ವಿಕ್ರಮ ಮಂತ್ರಿ, ಅಮೃತ್ ಜಿ.ಆರ್-ಶುಕ್ರಗ್ರಹ, ಎ. ದಯಾನಂದ-ಪದ್ಯಾವತಿ, ಸಚಿತ್ .ಎ-ಚ. ಮಂತ್ರಿ, ನಂಜುಂಡ-ಸುಮತಿ, ಅಲೋಲಿಕೆ, ಗೋಪಿ-ಕಟುಕ ಬೇಟೆಗಾರ, ಚಂದು-ಅ.ಪ ಸಖಿ, ಭುವನ್. ಆರ್-ಬಡ ಬ್ರಾಹ್ಮಣ ಮಗ ಮತ್ತು ನಿಖಿಲ್-ಬಡ ಬ್ರಾಹ್ಮಣ ಮಗಳು ಅ.ಪ ಸಖಿ ಪಾತ್ರಗಳಲ್ಲಿ ಅಭಿನಯಿಸಿದರು. 
    ಶ್ರೀ ಮಹಾಗಣಪತಿ, ಶ್ರೀ ಶನೈಶ್ವರ ಸ್ವಾಮಿ, ಶ್ರೀ ಕೆಂಚಮ್ಮ ದೇವಿ ಮತ್ತು ಭೂತಪ್ಪ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಕಳೆದ ೪೦ ವರ್ಷಗಳಿಂದಲೂ ಸ್ಥಳೀಯ ಭೂತನಗುಡಿ ಕಲಾವಿದರಿಂದ ನಾಟಕ ಪ್ರದರ್ಶನಗೊಳ್ಳುತ್ತಿದ್ದು, ಎಲ್ಲಾ ವಯಸ್ಸಿನವರು ನಾಟಕದಲ್ಲಿ ಅಭಿನಯಿಸುತ್ತಿದ್ದಾರೆ.  ಆಧುನಿಕ ಯುಗದ ಟಿ.ವಿ ಮಾಧ್ಯಮಗಳ  ಭರಾಟೆಯಲ್ಲಿ ರಂಗ ಪ್ರದರ್ಶನ ನಶಿಸುತ್ತಿದ್ದು, ಈ ರೀತಿಯ ನಾಟಕ ಪ್ರದರ್ಶನಗಳು ರಂಗಕರ್ಮಿಗಳನ್ನು ಉತ್ತೇಜಿಸುತ್ತಿದೆ ಎಂದು ಸಮಿತಿ ಅಧ್ಯಕ್ಷ ರಾಜೇಶ್ ನಾಟಕ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.  
    ಸಮಿತಿ ಪದಾಧಿಕಾರಿಗಳು, ಸೇವಾಕರ್ತರು, ಸ್ಥಳೀಯ ನಿವಾಸಿಗಳು ನಾಟಕ ಪ್ರದರ್ಶನ ವೀಕ್ಷಿಸುವ ಮೂಲಕ ಪ್ರೋತ್ಸಾಯಿಸಿದರು. 

ಪ್ರಸ್ತುತ ರಂಗಭೂಮಿ ಸಂಕುಚಿತಗೊಂಡಿರುವುದು ವಿಪರ್ಯಾಸದ ಸಂಗತಿ : ಹಿರಯ ರಂಗಕಲಾವಿದ ಕೆ.ಬಿ ಕಪನಿಗೌಡ

ಭದ್ರಾವತಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ವತಿಯಿಂದ ಜನ್ನಾಪುರ, ರಾಜಪ್ಪ ಲೇಔಟ್, ಅಂಗಾಳ ಪರಮೇಶ್ವರಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ಪ್ರಸ್ತುತ ದೊಡ್ಡ ಪ್ರಮಾಣದಲ್ಲಿ ಬೆಳೆಯಬೇಕಿದ್ದ ರಂಗಭೂಮಿ ಇಂದು ಸಂಕುಚಿತಗೊಂಡಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ವಿಕಸಂ ಹಿರಿಯ ರಂಗಕಲಾವಿದ ಕೆ.ಬಿ ಕಪನಿಗೌಡ ವಿಷಾದ ವ್ಯಕ್ತಪಡಿಸಿದರು. 
    ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ವತಿಯಿಂದ ಜನ್ನಾಪುರ, ರಾಜಪ್ಪ ಲೇಔಟ್, ಅಂಗಾಳ ಪರಮೇಶ್ವರಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 


ಭದ್ರಾವತಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ವತಿಯಿಂದ ಜನ್ನಾಪುರ, ರಾಜಪ್ಪ ಲೇಔಟ್, ಅಂಗಾಳ ಪರಮೇಶ್ವರಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ನೀನಾಸಂ ಕಲಾವಿದರಾದ ಕನ್ನಡ ಉಪನ್ಯಾಸಕ ಬಿ.ಎಚ್ ಗಿರಿಧರಮೂರ್ತಿ ಅವರ ರಾವಣನ ಪ್ರಾತ್ರಾಭಿನಯ ಪ್ರೇಕ್ಷಕರ ಮನಸೂರೆಗೊಂಡಿತು. 
    ರಂಗಭೂಮಿ ಕಲೆಗೆ ಪ್ರಸಿದ್ದವಾಗಿದ್ದ ನಗರದಲ್ಲಿ ಇಂದು ರಂಗಭೂಮಿ ಅವನತಿ ದಾರಿ ಹಿಡಿಯುತ್ತಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ಒಂದು ಕಾಲದಲ್ಲಿ ಬಯಲು ರಂಗಮಂದಿರ ಸೇರಿದಂತೆ ದೊಡ್ಡ ದೊಡ್ಡ ವೇದಿಕೆಗಳಲ್ಲಿ ರಂಗಭೂಮಿ ಕಲಾವಿದರು ತಮ್ಮ ಅಭಿನಯದ ಮೂಲಕ ಸಾವಿರಾರು ಪ್ರೇಕ್ಷಕರ ಮನಗೆಲ್ಲುತ್ತಿದ್ದ ಕಾಲ ಇಂದು ಕಣ್ಮರೆಯಾಗಿದೆ. ಈ ಹಿಂದೆ ಬಹಳಷ್ಟು ರಂಗ ತಂಡಗಳಿದ್ದವು. ರಂಗ ಕಲಾವಿದರು ಸಹ ಬಹಳಷ್ಟು ಮಂದಿ ಇದ್ದರು. ಆದರೆ ಇಂದು ರಂಗ ತಂಡಗಳು ಕಣ್ಮರೆಯಾಗಿವೆ. ಈ ನಡುವೆ ಬೆರಳೆಣಿಕೆಯಷ್ಟು ಕಲಾವಿದರು ಕಂಡು ಬರುತ್ತಿರುವುದು ನೋವಿನ ಸಂಗತಿಯಾಗಿದೆ. ರಂಗ ಕಲೆ ಉಳಿಸಿಕೊಳ್ಳುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಜಾನಪದ ಕಲಾವಿದ ತಮಟೆ ಜಗದೀಶ್‌ರವರು ಕೈಗೊಂಡಿರುವ ಪ್ರಯತ್ನ ಶ್ಲಾಘನೀಯ ಎಂದರು. 
    ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.  ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಬಿ. ಜಗದೀಶ್, ಜೀ ಕನ್ನಡ ಟಿವಿ ಚಾನಲ್‌ನಲ್ಲಿ ಪ್ರಸಾರವಾಗುವ `ಲಕ್ಷ್ಮೀ ನಿವಾಸ' ಧಾರವಾಹಿ ಮೂಗ ವೆಂಕಿ ಪಾತ್ರಧಾರಿ ಹವ್ಯಾಸಿ ರಂಗಭೂಮಿ ಕಲಾವಿದ ಚಂದ್ರಶೇಖರ ಶಾಸ್ತ್ರಿ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. 
ಸಂಘದ ಉಪಾಧ್ಯಕ್ಷೆ ರತ್ನಾ ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ವಿಕಸಂ ಹಿರಿಯ ರಂಗಕಲಾವಿದ ಕೆ.ಎಸ್ ರವಿಕುಮಾರ್‌ರವರಿಗೆ ಗೌರವ ಸಮರ್ಪಣೆ ನಡೆಯಿತು. 


   ಭದ್ರಾವತಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ವತಿಯಿಂದ ಜನ್ನಾಪುರ, ರಾಜಪ್ಪ ಲೇಔಟ್, ಅಂಗಾಳ ಪರಮೇಶ್ವರಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ನೀನಾಸಂ ಕಲಾವಿದರಾದ ಡಿ. ಇಂದುರವರ ವೀರರಾಣಿ ಕಿತ್ತೂರು ರಾಣಿ ಕಿತ್ತೂರು ಚೆನ್ನಮ್ಮನ ಪ್ರಾತ್ರಾಭಿನಯ ಪ್ರೇಕ್ಷಕರ ಮನ ಸೆಳೆಯಿತು. 
    ನಿವೃತ್ತ ಉಪನ್ಯಾಸಕ ಪ್ರೊ. ಎಂ. ಚಂದ್ರಶೇಖರಯ್ಯ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲುಯಜ್ಞಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಯು. ಮಹಾದೇವಪ್ಪ ಸೇರಿದಂತೆ ಸ್ಥಳೀಯ ಕಲಾವಿದರು.
    ಪ್ರಧಾನ ಕಾರ್ಯದರ್ಶಿ ತಮಟೆ ಜಗದೀಶ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಅಂಬೇಡ್ಕರ್ ಎಜ್ಯುಕೇಷನ್ ಟ್ರಸ್ಟ್ ಬಿ.ಇಡಿ ಕಾಲೇಜಿನ ಉಪನ್ಯಾಸಕ ಹನುಮಂತಪ್ಪ  ಕಾರ್ಯಕ್ರಮ ನಿರೂಪಿಸಿದರು.