
ಭದ್ರಾವತಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿದರು.
ಭದ್ರಾವತಿ: ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ. ಎಸ್.ಆರ್ ನಾಯಕ್ ರವರ ನಿಧನಕ್ಕೆ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಮೇ.೨೬ರಂದು ರಂದು ಸಂಜೆ ೫ ಗಂಟೆಗೆ ಬಿ.ಎಚ್ ರಸ್ತೆ, ತಿಮ್ಮಯ್ಯ ಮಾರ್ಕೆಟ್ ಮುಂಭಾಗದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಏರ್ಪಡಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಬಿ.ಎನ್ ರಾಜು ತಿಳಿಸಿದರು.
ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಡ ಜನರು, ರೈತರು ಮತ್ತು ಕಾರ್ಮಿಕರ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿಗಳಾಗಿ, ರಾಜ್ಯ ಮಾನವ ಹಕ್ಕುಗಳ ಅಯೋಗ ಮತ್ತು ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿರುವ ಎಸ್.ಆರ್ ನಾಯಕ್‌ರವರು ಮೇ.೧೮ರಂದು ನಿಧನರಾಗಿದ್ದು, ಇವರಿಗೆ ರಾಜ್ಯದ ಜನರ ಪರವಾಗಿ ಮನವಹಕ್ಕುಗಳ ಹೋರಟ ಸಮಿತಿಯಿಂದ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದರು.
ಬಡ ಕುಟುಂಬದ ಡಾ.ಎಸ್ ಆರ್. ನಾಯಕ್‌ರವರು ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ನಂತರ ಉನ್ನತ ಪದವಿಯೊಂದಿಗೆ ಜಿಲ್ಲಾ ನ್ಯಾಯಧೀಶರಾಗಿ, ಹೈಕೋರ್ಟ್ ನ್ಯಾಯಾಧೀಶರಾಗಿ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಪ್ರಾಮಾಣಿಕವಾಗಿ ಕರ್ತವ್ಯ ಸಲ್ಲಿಸಿ ಬಡ ಜನರ ಸೇವೆ ಮತ್ತು ಭಾರತ ಸಂವಿಧಾನದ ಆಶಯಗಳಿಗೆ ಬದ್ಧರಾಗಿ ನಡೆದುಕೊಂಡ ಅಪರೂಪದ ವ್ಯಕ್ತಿ ಎಂದರು.
೨೦೦೭ರಲ್ಲಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ದೇಶದಲ್ಲಿಯೇ ಕರ್ನಾಟಕ ರಾಜ್ಯ ನಂ. ೧ ಸ್ಥಾನ ಪಡೆಯಲು ಮುಖ್ಯ ಕಾರಣ ಡಾ.ಎಸ್.ಆರ್ ನಾಯಕ್. ಅವರು ಬಡವರ ಬಗ್ಗೆ ಹೆಚ್ಚು ಕಾಳಜಿ ಇಟ್ಟು ಅನೇಕ ಪ್ರಕರಣಗಳಲ್ಲಿ ಕೇವಲ ಟಿ.ವಿ ನ್ಯೂಸ್ ಮೂಲಕ ದೂರು ದಾಖಲಿಸಿ ಸಾಮಾನ್ಯ ಜನರಿಗೆ ನ್ಯಾಯ ಒದಗಿಸಿದ್ದು ಮರಿಯುವಂತಿಲ್ಲ. ಮಾನವ ಹಕ್ಕುಗಳು ಎಂಬ ಶಬ್ದವೇ ರಾಜ್ಯದಲ್ಲಿ ಮತ್ತು ದೇಶದಲ್ಲಿ ಪ್ರಖ್ಯಾತಿ ಪಡೆಯಲು ಡಾ. ಎಸ್ ಆರ್ ನಾಯಕ್ ರವರು ರಾಜ್ಯದ ಉದ್ದಗಲಕ್ಕೂ ಪದೇ ಪದೇ ಪ್ರವಾಸ ಮಾಡಿ ಸಾರ್ವಜನಿಕರಿಗೆ ಜಾಗೃತಿ ಮತ್ತು ಅರಿವು ಮೂಡಿಸಿದ್ದು ಕಾರಣವಾಗಿದೆ. ೨೦೧೦ರಲ್ಲಿ ತಿಮ್ಮಯ್ಯ ಮಾರ್ಕೆಟ್ ಅಕ್ರಮ ನೆಲ ಸಮ ಮಾಡಿ ಅಲ್ಲಿನ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಪ್ರಕರಣ ದಾಖಲಿಸಿ ನ್ಯಾಯ ಒದಗಿಸಿದ್ದಾರೆ. ೨೦೧೦ರಲ್ಲಿ ತಿಮ್ಮಯ್ಯ ಮಾರ್ಕೆಟ್ ಮುಂಭಾಗದಲ್ಲಿ ವಿಶ್ವಮಾನವ ಸಮಾವೇಶದಲ್ಲಿ ಭಾಗವಹಿಸಿ ಮಾನವ ಹಕ್ಕುಗಳ ಬಗ್ಗೆ ಹಾಗೂ ವಿಶ್ವಮಾನವ ಅಂಬೇಡ್ಕರ್ ಮತ್ತು ಬಸವಣ್ಣನವರ ಬಗ್ಗೆ ಸುದೀರ್ಘವಾಗಿ ವಿಚಾರವನ್ನು ಮಂಡಿಸಿದ್ದು, ಮರೆಯಲು ಸಾಧ್ಯವಿಲ್ಲ. ಇವರ ನಿಧನದಿಂದ ರಾಜ್ಯದ ಜನರಿಗೆ ತುಂಬಲಾರದ ನಷ್ಟವಾಗಿದೆ ಎಂದರು.
ಸಮಿತಿ ವತಿಯಿಂದ ಮೇ.೨೬ರಂದು ಸಂಜೆ ೫ ಗಂಟೆಗೆ ಬಿ ಎಚ್ ರಸ್ತೆ, ತಿಮ್ಮಯ್ಯ ಮಾರ್ಕೆಟ್ ಮುಂಭಾಗದಲ್ಲಿ ಭಾವ ಪೂರ್ಣ ಶ್ರದ್ಧಾಂಜಲಿ ಸಭೆ ಮತ್ತು ಮಾನವಹಕ್ಕುಗಳ, ಸಂವಿಧಾನ ಹಕ್ಕುಗಳ ಜಾಗೃತಿ ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಸಾರ್ವಜನಿಕರು, ಸಂಘ-ಸಂಸ್ಥೆಗಳ ಮುಖಂಡರು, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ರೈತರು, ಕಾರ್ಮಿಕರು ಸೇರಿದಂತೆ ಸಮಸ್ತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಟಿ.ಜಿ ಬಸವರಾಜಯ್ಯ, ಸಿದ್ದಲಿಂಗಯ್ಯ, ಸೆಲ್ವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.