Thursday, February 11, 2021

ಬೆಲೆ ಏರಿಕೆ ಖಂಡಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಮೆರವಣಿಗೆ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ

ಭದ್ರಾವತಿ ಅಗತ್ಯ ಆಹಾರ ಸಾಮಗ್ರಿಗಳು, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತಾಲೂಕು ಶಾಖೆ ವತಿಯಿಂದ ಗುರುವಾರ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಫೆ. ೧೧: ಅಗತ್ಯ ಆಹಾರ ಸಾಮಗ್ರಿಗಳು, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತಾಲೂಕು ಶಾಖೆ ವತಿಯಿಂದ ಗುರುವಾರ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
  ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬಡವರು, ಶ್ರೀಸಾಮಾನ್ಯರು ಬದುಕು ಸಾಗಿಸುವುದು ಕಷ್ಟಕರವಾಗಿದೆ. ಕೇಂದ್ರ ಸರ್ಕಾರ ಬೆಲೆ ಏರಿಕೆ ತಡೆಗಟ್ಟುವಲ್ಲಿ ವಿಫಲವಾಗಿದ್ದು, ತಕ್ಷಣ ಬೆಲೆ ಏರಿಕೆಗೆ ಕಡಿವಾಣ ಹಾಕುವಂತೆ ಸರ್ಕಾರಕ್ಕೆ ಸೂಚಿಸಬೇಕೆಂದು ಆಗ್ರಹಿಸಲಾಯಿತು.
    ರಂಗಪ್ಪ ವೃತ್ತದಿಂದ ತಾಲೂಕು ಕಛೇರಿವರೆಗೂ ಮೆರವಣಿಗೆ ನಡೆಸಲಾಯಿತು. ವೆಲ್ಫೇರ್ ಪಾರ್ಟಿ ಆಪ್ ಇಂಡಿಯಾ ತಾಲೂಕು ಶಾಖೆ ಅಧ್ಯಕ್ಷ ಅಬುಲ್‌ಖೈರ್, ಪ್ರಮುಖರಾದ ಜಿಲ್ಲಾ ಉಪಾಧ್ಯಕ್ಷ ನದೀಮ್ ಬಾಷಾ, ಮಹಿಳಾ ಪ್ರಮುಖರಾದ ರೋಹಿನಾ, ಶಮೀಮಾ, ಪರ್ವೀನ್ ಮತ್ತು ಅರ್ಕಿಯಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಫೆ.೧೪ರಂದು ಡಾ.ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣ ಜಾಗೃತಿ ಸಭೆ

    ಭದ್ರಾವತಿ, ಫೆ. ೧೧: ಡಾ. ಬಿ.ಆರ್ ಅಂಬೇಡ್ಕರ್ ಭವನ ಸಂರಕ್ಷಣಾ ಸಮಿತಿ ವತಿಯಿಂದ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಫೆ.೧೪ರಂದು ಬೆಳಿಗ್ಗೆ ೧೧ ಗಂಟೆಗೆ ಡಾ. ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣ ಜಾಗೃತಿ ಸಭೆ ಹಮ್ಮಿಕೊಳ್ಳಲಾಗಿದೆ.
     ಸಭೆಯನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ಸಮಿತಿ ಗೌರವಾಧ್ಯಕ್ಷ ಡಿ.ಸಿ ಮಾಯಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಮುಖರಾದ ಶಾರದಾ ಎಂ.ಜೆ ಅಪ್ಪಾಜಿ, ಕೆ.ಟಿ ಗಂಗಾಧರ್, ಇಂದಿರಾ ಬಿ. ಕೃಷ್ಣಪ್ಪ, ವಿಜಯಮ್ಮ ಎನ್ ಗಿರಿಯಪ್ಪ, ಜಿ.ಪಂ. ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ತಾ.ಪಂ. ಅಧ್ಯಕ್ಷೆ ಡಿ. ಲಕ್ಷ್ಮೀದೇವಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎನ್. ಕೃಷ್ಣಪ್ಪ, ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ. ಚಂದ್ರಶೇಖರಯ್ಯ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಿ. ಧರ್ಮಪ್ರಸಾದ್, ಬಿ.ಕೆ ಶ್ರೀನಾಥ್, ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ನಗರಸಭೆ ಪೌರಾಯುಕ್ತ ಮನೋಹರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ, ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೂದ್‌ಪೀರ್, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
    ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ ಮತ್ತು ಮಹಿಳಾ  ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪುರಂದರದಾಸರ ಆರಾಧನಾ ಮಹೋತ್ಸವ

ಭದ್ರಾವತಿಯಲ್ಲಿ ಪುರಂದರದಾಸರ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದವರೆಗೆ ಪುರಂದರದಾಸರ ಮೆರವಣಿಗೆ ನಡೆಯಿತು.
   ಭದ್ರಾವತಿ, ಫೆ. ೧೧: ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಹರಿದಾಸ ಮಹಿಳಾ ಮಂಡಳಿಯಿಂದ ಗುರುವಾರ ಪುರಂದರದಾಸರ ಆರಾಧನಾ ಮಹೋತ್ಸವ ಜರುಗಿತು.
ರಾಯರಿಗೆ ಪಂಚಾಮೃತ ಅಭಿಷೇಕ, ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದವರೆಗೆ ಪುರಂದರದಾಸರ ಮೆರವಣಿಗೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಜ್ಞಾನವಾಹಿನಿ ಭಜನಾ ಮಂಡಳಿ, ಹರಿಪ್ರಿಯಾ ಭಜನಾ ಮಂಡಳಿ ಸೇರಿದಂತೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಹಾಗು ವೇದಬ್ರಹ್ಮ ಶ್ರೀ ಗೋಪಾಲಚಾರ್‌ರವರಿಂದ ಉಪನ್ಯಾಸ ಕಾರ್ಯಕ್ರಮ ಜರುಗಿತು.  
     ಗೋಪಾಲಚಾರ್, ಶ್ರೀನಿವಾಸಚಾರ್, ಪ್ರಧಾನ ಅರ್ಚಕ ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ರಮಾಕಾಂತ್, ಮುರಳಿಧರ ತಂತ್ರಿ, ನಿರಂಜನ್ ಆಚಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.