Thursday, September 10, 2020

ಕೆ.ಎಲ್ ಅಶೋಕ್ ಮೇಲೆ ಪೊಲೀಸ್ ದೌರ್ಜನ್ಯಕ್ಕೆ ಖಂಡನೆ

ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆಗೆ ನಿರ್ಧಾರ

ಭದ್ರಾವತಿ ಮಿಲ್ಟ್ರಿಕ್ಯಾಂಪ್ ಲೋಕೋಪಯೋಗಿ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಗುರುವಾರ ಪ್ರಗತಿಪರ ಸಂಘಟನೆಗಳ ಸಭೆ ನಡೆಯಿತು.
ಭದ್ರಾವತಿ, ಸೆ. ೧೦: ಕರ್ನಾಟಕ ಕೋಮು ಸೌಹಾರ್ದ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್ ಅಶೋಕ್‌ರವರ ಮೇಲಿನ ಪೊಲೀಸ್ ದೌರ್ಜನ್ಯವನ್ನು ನಗರದ ಪ್ರಗತಿಪರ ಸಂಘಟನೆಗಳ ಮುಖಂಡರು ಖಂಡಿಸಿದ್ದಾರೆ.
       ಗುರುವಾರ ಮಿಲ್ಟ್ರಿಕ್ಯಾಂಪ್ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಪ್ರಮುಖರು ಅಶೋಕ್‌ರವರು ಎರಡು ದಶಕಗಳಿಗೂ ಹೆಚ್ಚು ಕಾಲ ಪ್ರಗತಿಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದು, ಸೌಹಾರ್ದತೆ ನೆಲೆಗಟ್ಟಿನಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇವರು ಕುಟುಂಬ ಸಮೇತ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿಗೆ ತೆರಳಿದ್ದಾಗ ಅಲ್ಲಿನ ಪೊಲೀಸರು ಕ್ಷಲ್ಲಕ ಕಾರಣ ಮುಂದಿಟ್ಟುಕೊಂಡು ಅವಮಾನಿಸಿದ್ದಾರೆ. ಇದನ್ನು ಸಂಘಟನೆ ಖಂಡಿಸುತ್ತದೆ ಎಂದರು.
     ಉದ್ದೇಶಪೂರ್ವಕವಾಗಿ ಅಶೋಕ್‌ರವರನ್ನು ಅವಮಾನಿಸಿ ದರ್ಪದಿಂದ ವರ್ತಿಸಿರುವ ಪೊಲೀಸ್ ಸಿಬ್ಬಂದಿ ಹಾಗು ಠಾಣಾಧಿಕಾರಿಯನ್ನು ತಕ್ಷಣ ಅಮಾನತು ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈಗಾಗಲೇ ಈ ಸಂಬಂಧ ವಿವಿಧ ಸಂಘಟನೆಗಳಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿದ್ದು, ನಗರದಲ್ಲೂ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲು ತೀರ್ಮಾನಿಸಿದರು.
     ಪ್ರಗತಿಪರ ಸಂಘಟನೆಗಳ ಪ್ರಮುಖರಾದ ಸುರೇಶ್, ಜಿ. ರಾಜು, ಜೆಬಿಟಿ ಬಾಬು, ಎಚ್. ರವಿಕುಮಾರ್, ಇಬ್ರಾಹಿಂ ಖಾನ್, ಈ.ಪಿ ಬಸವರಾಜ್, ರಾಜೇಂದ್ರ ಸೇರಿದಂತೆ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ರೋಟರಿ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ

ಭದ್ರಾವತಿಯಲ್ಲಿ ರೋಟರಿ ಕ್ಲಬ್ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಶಿಕ್ಷಕರ ದಿನಾಚರಣೆ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಸರಳವಾಗಿ ಜರುಗಿತು. ೫ ಜನ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ, ಸೆ. ೧೦: ನಗರದ ರೋಟರಿ ಕ್ಲಬ್ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಶಿಕ್ಷಕರ ದಿನಾಚರಣೆ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಸರಳವಾಗಿ ಜರುಗಿತು.
      ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪೂರ್ವ ಪ್ರಾಥಮಿಕ ಕೇಂದ್ರದ ಶಿಕ್ಷಕಿ ಸೌಭಾಗ್ಯ, ಪ್ರಾಥಮಿಕ ಶಾಲೆ ಶಿಕ್ಷಕಿ ಮೀನಾಕ್ಷಿ, ಪ್ರೌಢಶಾಲೆ ಶಿಕ್ಷಕ ಗಣೇಶ್, ಆನಂದ ಮಾರ್ಗ ಶಾಲೆಯ ಇಬ್ಬರು ಅಚಾರ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
      ರೋಟರಿ ಕ್ಲಬ್ ಅಧ್ಯಕ್ಷ ಬಿ.ಎಂ ಶಾಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜೋನಲ್ ಲೆಫ್ಟಿನೆಂಟ್ ಡಾ. ಕೆ ನಾಗರಾಜ್, ಪ್ರಮುಖರಾದ ಕೆ.ಬಿ ಪ್ರಭಾಕರ ಬೀರಯ್ಯ, ತೀರ್ಥಯ್ಯ, ಪಿ.ಸಿ ಜೈನ್, ಅಡವೀಶಯ್ಯ, ರಾಘವೇಂದ್ರ ಉಪಾಧ್ಯಾಯ, ಸುಂದರ್ ಬಾಬು, ದುಷ್ಯಂತ್‌ರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶಾಂತಿಬಾಯಿ ನಿಧನ

ಶಾಂತಿಬಾಯಿ
ಭದ್ರಾವತಿ, ಸೆ. ೧೦: ನಗರದ ಹಾಲಪ್ಪ ವೃತ್ತದಲ್ಲಿರುವ ಗೌತಮ್ ಸೈಕಲ್ ಸ್ಟೋರ್ ಮಾಲೀಕ ಲಲಿತ್‌ಕುಮಾರ್ ಜೈನ್‌ರವರ ತಾಯಿ ಶಾಂತಿಬಾಯಿ(೮೦) ಗುರುವಾರ ನಿಧನ ಹೊಂದಿದರು.
      ೪ ಹೆಣ್ಣು, ೨ ಗಂಡು ಮಕ್ಕಳು, ಮೊಮ್ಮಕ್ಕಳು, ಸೊಸೆ ಹಾಗು ಅಳಿಯಂದಿರನ್ನು ಹೊಂದಿದ್ದರು. ಮಧ್ಯಾಹ್ನ ನಗರದ ಜೈನ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿತು. ಹಳೇನಗರದ ಭೂತನಗುಡಿಯಲ್ಲಿ ವಾಸವಾಗಿದ್ದ ಶಾಂತಿಬಾಯಿಯವರು ಜೈನ ಧರ್ಮದ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವ ಜೊತೆಗೆ ಚಾತುರ್ಮಾಸ ಅವಧಿಯಲ್ಲಿ ಉಪವಾಸ ವ್ರತ ಕೈಗೊಳ್ಳುತ್ತಿದ್ದರು.
     ಮೃತರ ನಿಧನಕ್ಕೆ ನಗರದ ಜೈನ ಸಮಾಜ, ರೋಟರಿ ಕ್ಲಬ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಗವಿರಂಗಯ್ಯ ನಿಧನ

ಗವಿರಂಗಯ್ಯ
ಭದ್ರಾವತಿ, ಸೆ. ೧೦: ಹಳೇನಗರದ ಮಹಿಳಾ ಸೇವಾ ಸಮಾಜದ ಉಪಾಧ್ಯಕ್ಷೆ ಕಮಲ ಕುಮಾರಿಯವರ ಪತಿ ಗವಿರಂಗಯ್ಯ(೬೯) ನಿಧನ ಹೊಂದಿದರು.
      ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು, ಸೊಸೆಯಂದಿರು, ಮೊಕ್ಕಳನ್ನು ಹೊಂದಿದ್ದರು.  ಗವಿರಂಗಯ್ಯ ಸಹಾಯಕ ಕೃಷಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಇವರ ಅಂತ್ಯಕ್ರಿಯೆ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಗುರುವಾರ ನೆರವೇರಿತು.
    ಇವರ ನಿಧನಕ್ಕೆ ಮಹಿಳಾ ಸೇವಾ ಸಮಾಜ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.