Thursday, November 28, 2024

ಕುಮಾರ್‌ಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ

ಕುಮಾರ್ ಭದ್ರಾವತಿ 
ಭದ್ರಾವತಿ: ನಾಡು, ನುಡಿ, ಕಲೆ, ಸಾಹಿತ್ಯ, ಜನಪದ ಮತ್ತು ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕಲಾಭೂಮಿ ಪ್ರತಿಷ್ಠಾನದ ವತಿಯಿಂದ ನೀಡುವ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ ನಗರದ ಜನ್ನಾಪುರ ನಿವಾಸಿ ಕುಮಾರ್ ಭದ್ರಾವತಿರವರಿಗೆ ಲಭಿಸಿದೆ. 
ಗ್ರಂಥಾಲಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕುಮಾರ್‌ರವರು ಸಾಹಿತ್ಯ ಹಾಗು ರಂಗಭೂಮಿ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ನ.೨೯ರಂದು ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಛಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕುಮಾರ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.   
ಕುಮಾರ್ ಅವರನ್ನು ಸಿದ್ಧರೂಢನಗರದ ಡಾ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. 

ಅಮಲೋದ್ಬವಿ ಮಾತೆ ದೇವಾಲಯದ ವಾರ್ಷಿಕ ಮಹೋತ್ಸವಕ್ಕೆ ಚಾಲನೆ

ಕ್ರೈಸ್ತ ಸಮುದಾಯದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ಭದ್ರಾವತಿ ನಗರದ ನ್ಯೂಟೌನ್ ಅಮಲೋದ್ಬವಿ ಮಾತೆ ದೇವಾಲಯದ ವಾರ್ಷಿಕ ಮಹೋತ್ಸವದ ೯ ದಿನಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ಗುರುವಾರ ಮಾತೆಯ ಧ್ವಜಾರೋಹಣ ನೆರವೇರಿಸುವ ಮೂಲಕ ಹಾಸನ ಧರ್ಮ ಕೇಂದ್ರದ ಧರ್ಮ ಗುರುಗಳಾದ ಪ್ಯಾಟ್ರಿಕ್ ಜೋನಸ್ ಚಾಲನೆ ನೀಡಿದರು.
    ಭದ್ರಾವತಿ: ಕ್ರೈಸ್ತ ಸಮುದಾಯದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ನಗರದ ನ್ಯೂಟೌನ್ ಅಮಲೋದ್ಬವಿ ಮಾತೆ ದೇವಾಲಯದ ವಾರ್ಷಿಕ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. 
    ೯ ದಿನಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ಗುರುವಾರ ಮಾತೆಯ ಧ್ವಜಾರೋಹಣ ನೆರವೇರಿಸುವ ಮೂಲಕ ಹಾಸನ ಧರ್ಮ ಕೇಂದ್ರದ ಧರ್ಮ ಗುರುಗಳಾದ ಪ್ಯಾಟ್ರಿಕ್ ಜೋನಸ್ ಚಾಲನೆ ನೀಡಿದರು.
    ಧರ್ಮ ಕೇಂದ್ರದ ಗುರುಗಳಾದ ಲ್ಯಾನ್ಸಿ ಡಿಸೋಜ, ಹಿರಿಯೂರು ಧರ್ಮ ಕೇಂದ್ರದ ಗುರುಗಳಾದ ಫಾದರ್ ಸಂತೋಷ್ ಪೆರೇರ, ಧರ್ಮ ಭಗಿನಿಯರು, ಭಕ್ತಾದಿಗಳು ಪಾಲ್ಗೊಂಡಿದ್ದರು. ೯ ದಿನಗಳ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ತರೀಕೆರೆ ರಸ್ತೆಯ ಬೀದಿಬದಿ ವ್ಯಾಪಾರಿಗಳಿಗೆ ರೈಲ್ವೆ ಮೇಲ್ಸೇತುವೆ ಕೆಳಭಾಗದಲ್ಲಿ ಪುಡ್ ಕೋರ್ಟ್

ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ಅಧ್ಯಕ್ಷತೆಯಲ್ಲಿ ಸಭೆ 

ಭದ್ರಾವತಿ ನಗರಸಭೆ ವತಿಯಿಂದ ನಗರದ ತರೀಕೆರೆ ರೈಲ್ವೆ ಮೇಲ್ಸೇತುವೆ ಕೆಳಗೆ ಪುಡ್ ಕೋರ್ಟ್ ನಿರ್ಮಿಸುವ ಸಂಬಂಧ ಗುರುವಾರ ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. 
    ಭದ್ರಾವತಿ: ನಗರದ ತರೀಕೆರೆ ರಸ್ತೆಯ ಬೀದಿಬದಿ ವ್ಯಾಪಾರಿಗಳಿಗೆ ನಗರಸಭೆ ವತಿಯಿಂದ ರೈಲ್ವೆ ಮೇಲ್ಸೇತುವೆ ಕೆಳಭಾಗದಲ್ಲಿ ಪುಡ್ ಕೋರ್ಟ್ ನಿರ್ಮಿಸುವ ಸಂಬಂಧ ಗುರುವಾರ ನಗರಸಭೆ ಸಭಾಂಗಣದಲ್ಲಿ ಸಭೆ ನಡೆಯಿತು. 
    ತರೀಕೆರೆಯ ರಸ್ತೆ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೧೩, ೧೬ ಮತ್ತು ೧೭ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸುಸಜ್ಜಿತವಾದ ಪುಡ್ ಕೋರ್ಟ್ ನಿರ್ಮಿಸಲು ಉದ್ದೇಶಿಸಲಾಗಿದ್ದು, ಪುಡ್‌ಕೋರ್ಟ್ ಸಂಬಂಧ ನಡೆಯುತ್ತಿರುವ ೩ನೇ ಸಭೆ ಇದಾಗಿದೆ. ಇದು ಅಂತಿಮ ಸಭೆ ಎಂದು ವ್ಯಾಪಾರಿಗಳು ಭಾವಿಸಿಕೊಳ್ಳಬೇಕು. ಈ ಹಿಂದೆ ಮಹಾತ್ಮಗಾಂಧಿ ವೃತ್ತದ ಬಳಿ ಪುಡ್ ಕೋರ್ಟ್ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಈ ಭಾಗದಲ್ಲಿ ಪುಡ್ ಕೋರ್ಟ್ ನಿರ್ಮಿಸುವುದರಿಂದ ಜನಸಂದಣಿ ಹೆಚ್ಚಾಗುವ ಜೊತೆಗೆ ವ್ಯಾಪಾರಕ್ಕೆ ತೊಂದರೆಯಾಗುತ್ತಿತ್ತು. ಈ ಹಿನ್ನಲೆಯಲ್ಲಿ ಇದೀಗ ರೈಲ್ವೆ ಮೇಲ್ಸೇತುವೆ ಕೆಳಭಾಗದಲ್ಲಿ ಪುಡ್ ಕೋರ್ಟ್ ನಿರ್ಮಿಸಲು ಉದ್ದೇಶಿಸಲಾಗಿದೆ. ವ್ಯಾಪಾರಸ್ಥರು ಸಹಕರಿಸಬೇಕೆಂದು ಹಿರಿಯ ಸದಸ್ಯ ಬಿ.ಕೆ ಮೋಹನ್ ಮನವಿ ಮಾಡಿದರು. 
    ಪುಡ್ ಕೋರ್ಟ್ ನೀಲನಕ್ಷೆ ಸಹಿತ ನಗರಸಭೆ ಇಂಜಿನಿಯರ್ ಸಂತೋಷ್ ಪಾಟೀಲ್ ವಿವರವಾದ ಮಾಹಿತಿ ನೀಡಿದರು. ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಮಾತನಾಡಿ, ವ್ಯಾಪಾರಸ್ಥರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು. ಬೀದಿ ವ್ಯಾಪಾರಸ್ಥರ ಹಿತರಕ್ಷಣೆ ಮಾಡುವುದು ನಮ್ಮ ಉದ್ದೇಶವಾಗಿದೆ. ಯಾರು ಸಹ ಆತಂಕಪಡುವುದು ಬೇಡ ಎಂದರು. 

ಪುಡ್ ಕೋರ್ಟ್ ವಿವರ: 

ಪುಡ್ ಕೋರ್ಟ್ ಒಟ್ಟು ೧೬ ಮೀಟರ್ ಉದ್ದ ಹಾಗು ೮ ಮೀಟರ್ ಅಗಲವಿದ್ದು, ಮಧ್ಯದಲ್ಲಿ ರಸ್ತೆ, ಎರಡು ಬದಿ ಮಳಿಗೆಗಳು. ಎರಡು ಕಡೆ ಶೌಚಾಲಯ, ಎರಡು ಕಡೆ ಮಧ್ಯದಲ್ಲಿ ೧ ಮೀಟರ್ ಅಗಲದ ರಸ್ತೆ,  ಸದ್ಯದ ನೀಲನಕ್ಷೆಯಲ್ಲಿ ೩*೩ ಅಳತೆಯಲ್ಲಿ ಮಳಿಗೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ೨೬ ವ್ಯಾಪಾರಿಗಳಿಗೆ ಬೇಡಿಕೆಗಳು ಬಂದಿರುವ ಹಿನ್ನಲೆಯಲ್ಲಿ ಮಳಿಗೆಗಳ ವಿಸ್ತೀರ್ಣ ಕಡಿಮೆಗೊಳಿಸಲು ಉದ್ದೇಶಿಸಲಾಗಿದೆ. ಈ ಹಿಂದೆ ೨.೫ ಕೋ. ರು. ವೆಚ್ಚೆದಲ್ಲಿ ಪುಡ್ ಕೋರ್ಟ್ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ತಿರಸ್ಕಾರಗೊಂಡಿದ್ದು, ಇದೀಗ ನಗರಸಭೆ ಅನುದಾನದಲ್ಲಿ ಪುಡ್ ಕೋರ್ಟ್ ನಿರ್ಮಿಸಲಾಗುತ್ತಿದೆ. 

    ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸದಸ್ಯ ವಿ. ಕದಿರೇಶ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸುದೀಪ್ ಕುಮಾರ್, ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ತರೀಕೆರೆ ರಸ್ತೆಯ ಬಹುತೇಕ ಬೀದಿಬದಿ ವ್ಯಾಪಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ನಗರಸಭೆ ಮಾಜಿ ಸದಸ್ಯ ಆರ್. ಚಿನ್ನಪ್ಪ ನಿಧನ

ಆರ್. ಚಿನ್ನಪ್ಪ 
    ಭದ್ರಾವತಿ: ತಾಲೂಕಿನ ಸುಣ್ಣದ ಹಳ್ಳಿ ಮಾರುತಿ ನಗರ ಬಸಾಪುರ ನಿವಾಸಿ, ನಗರಸಭೆ ಮಾಜಿ ಸದಸ್ಯ ಆರ್. ಚಿನ್ನಪ್ಪ(೬೩) ಗುರುವಾರ ನಿಧನ ಹೊಂದಿದರು. 
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದರು. ಇವರ ಅಂತ್ಯಕ್ರಿಯೆ ನಗರದ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಚಿನ್ನಪ್ಪ ಹಿರಿಯ ಛಾಯಾ ಗ್ರಾಹಕರಾಗಿ, ಆಟೋ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಗರಸಭೆ ಸಮೀಪದ ಶ್ರೀ ನೇತಾಜಿ ಸುಭಾಷ್‌ಚಂದ್ರ ಬೋಸ್ ಆಟೋ ಚಾಲಕರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಅಲ್ಲದೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. 
    ಇವರ ನಿಧನಕ್ಕೆ ಶ್ರೀ ನೇತಾಜಿ ಸುಭಾಷ್‌ಚಂದ್ರ ಬೋಸ್ ಆಟೋ ಚಾಲಕರ ಸಂಘ, ನಗರಸಭೆ ಹಾಲಿ ಮತ್ತು ಮಾಜಿ ಸದಸ್ಯರು, ಛಾಯಾಗ್ರಾಹಕರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.  

ತಾಲೂಕು ಪಂಚಾಯಿತಿ ಕಛೇರಿಯಲ್ಲಿ ಲೋಕಾಯುಕ್ತ ನಿರೀಕ್ಷಕರಿಂದ ಅಹವಾಲು ಸ್ವೀಕಾರ

ಲೋಕಾಯುಕ್ತ ಸಭೆ, ಕಾರ್ಯ ಚಟುವಟಿಕೆ ಕುರಿತು ಮಾಹಿತಿ ನೀಡಿ : ವೀರಬಸಪ್ಪ 

ಭದ್ರಾವತಿ ತಾ.ಪಂ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಲೋಕಾಯುಕ್ತ ನಿರೀಕ್ಷಕ ವೀರಬಸಪ್ಪ ಎಲ್.ಕುಸಲಾಪುರರವರು ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಿದರು.   
    ಭದ್ರಾವತಿ: ಜನರಿಗೆ ಮಾಧ್ಯಮಗಳಿಂದ ಮಾಹಿತಿ ದೊರೆತರೆ ನಾಲ್ಕಾರು ಮಂದಿ ತಮ್ಮ ಬಳಿ ನೋವನ್ನು ಹೇಳಿಕೊಳ್ಳುತ್ತಾರೆ. ಅವರಲ್ಲಿ ಒಬ್ಬರಿಗಾದರೂ ನ್ಯಾಯ ಸಿಕ್ಕರೆ ಲೋಕಾಯುಕ್ತ ಇರುವುದಕ್ಕೂ ಸಾರ್ಥಕವಾಗುತ್ತದೆ. ಈ ಹಿನ್ನಲೆಯಲ್ಲಿ ಇಲಾಖೆಯ ಸಭೆ, ಕಾರ್ಯ ಚಟುವಟಿಕೆಗಳ ಕುರಿತು ಮಾಧ್ಯಮಗಳಿಗೆ ಸರಿಯಾಗಿ ಮಾಹಿತಿ ನೀಡಬೇಕು. ಇಲ್ಲದಿದ್ದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಅನುಸರಿಸಬೇಕಾಗುತ್ತದೆ  ಎಂದು ಲೋಕಾಯುಕ್ತ ನಿರೀಕ್ಷಕ ವೀರಬಸಪ್ಪ ಎಲ್. ಕುಸಲಾಪುರ ಎಚ್ಚರಿಸಿದರು. 
    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅರ್ಜಿ ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿ, ನಾವು ಕಾಟಾಚಾರಕ್ಕೆ ಸಭೆ ನಡೆಸಲು ಬರಲ್ಲ ಅಥವಾ ಅಧಿಕಾರಿಗಳ ಹೊಟ್ಟೆ ಮೇಲೆ ಹೊಡೆಯಲು ಬರಲ್ಲ. ದಬ್ಬಾಳಿಕೆ, ಅನ್ಯಾಯಕ್ಕೆ ಒಳಗಾದವರ, ಶೋಷಣೆಗೆ ಒಳಗಾದವರ ಸಂಕಷ್ಟಗಳಿಗೆ ಸ್ಪಂದಿಸುವುದು ಇಲಾಖೆ ಕರ್ತವ್ಯವಾಗಿದೆ. ಈ ಹಿನ್ನಲೆಯಲ್ಲಿ ಮಾಧ್ಯಮಗಳಿಗೆ ಇಲಾಖೆಯ ಸಭೆ, ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಬೇಕು ಎಂದರು. 
    ಸಾರ್ವಜನಿಕರಿಗೆ ಸರಿಯಾದ ವೇಳೆಗೆ ಅವರ ಕೆಲಸ ಮಾಡಿಕೊಟ್ಟರೆ ಅದೇ ಪುಣ್ಯದ ಕೆಲಸವಾಗುತ್ತದೆ. ಅಲೆದಾಡಿಸುವುದು ಬಿಡಬೇಕು. ಇದನ್ನು ಎಲ್ಲಾ ಇಲಾಖೆಗಳ ಅಧಿಕಾರಿಗಳು ತಿಳಿದುಕೊಳ್ಳಿ ಎಂದರು. 
    ತಾಲೂಕು ಕಚೇರಿ, ನಗರಸಭೆ, ನಾಲ್ಕಾರು ಪಿಡಿಓಗಳ ವಿರುದ್ದ ಬಹಳ ದೂರುಗಳು ಕೇಳಿ ಬಂದಿದೆ. ಸರಿಪಡಿಸಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕೈಗೊಳ್ಳುವುದಾಗಿ  ಎಚ್ಚರಿಸಿದರು.
    ಸಭೆ ಆರಂಭದಲ್ಲಿ ಅರ್ಜಿದಾರ ಪುಟ್ಟಸ್ವಾಮಿ, ಜೇಡಿಕಟ್ಟೆ ಸರ್ವೇ ನಂ ೬೫ರ ಜಮೀನು ಪೋಡು ಮಾಡಿಕೊಡುವಂತೆ ತಾಲೂಕು ಕಚೇರಿಗೆ ಅರ್ಜಿ ನೀಡಿ ೪ ವರ್ಷಗಳಾದರೂ ಅಲೆದಾಡಿಸುತ್ತಿದ್ದಾರೆ. ಕಚೇರಿಗೆ ಹೋದರೆ ಸರಿಯಾಗಿ ಮಾಹಿತಿ ನೀಡದೆ ಸತಾವಣೆ ಮಾಡುತ್ತಾರೆಂದು ಆರೋಪಿಸಿದರು. ಆಗ ನಿರೀಕ್ಷಕ ವೀರಬಸಪ್ಪ ನಾವು ಒಂದು ತಿಂಗಳಲ್ಲಿ ಎಡಿಎಲ್‌ಆರ್ ಅವರಿಂದ ವರದಿ ತರಿಸಿಕೊಂಡಿದ್ದೇವೆ ಎಂದರು. ಆಗ ಸರ್ವೇಯರ್ ಯತೀಶ್ ಮಾಹಿತಿ ನೀಡಿದರು.
    ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್.ಗೌಡ, ಜನ್ನಾಪುರ ಅಂತರಘಟ್ಟಮ್ಮ ದೇವಾಲಯದ ಬಳಿ ನಗರಸಭೆಯು ಅಕ್ರಮ ಖಾತೆ ದಾಖಲು ಮಾಡಿದೆ ಎಂದು ಫಿಲ್ಟರ್ ಶೆಡ್ ನಾಗರೀಕ ಹಿತ ರಕ್ಷಣಾ ಸಮಿತಿವತಿಯಿಂದ ದೂರು ಸಲ್ಲಿಸಲಾಗಿದೆ. ಈ ಸಂಬಂಧ ವಿಚಾರಣೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. 
    ಡಿಬಿ ಹಳ್ಳಿ ಯಡೇಹಳ್ಳಿ ಸರ್ವೇ ನಂ. ೬೬ರಲ್ಲಿ ೩೪ ಜನರಿಗೆ ಸರ್ಕಾರ ತಲಾ ೨ ಎಕರೆ  ಭೂಮಿ ಮಂಜೂರು ಮಾಡಿದ್ದರೂ ಸಹ ಅರಣ್ಯ ಇಲಾಖೆ ಸಾಗುವಳಿ ಮಾಡಲು ಬಿಡುತ್ತಿಲ್ಲ. ಪಿಟಿಸಿಎಲ್ ಭೂಮಿಯನ್ನು ಬಿಡಿಸಿಕೊಟ್ಟ ಮೇಲೆ ಮತ್ತೆ ಉಪ ವಿಭಾಗಾಧಿಕಾರಿಗಳು ವಿರೋಧಿಗಳಿಗೆ ರಕ್ಷಣೆ ನೀಡುತ್ತಾ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆಂದು ಆರೋಪಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ದೂರು ನೀಡಿದರು.
    ಜನ್ನಾಪುರದ ಫಿಲ್ಟರ್‌ಶೆಡ್ ನ್ಯಾಯಬೆಲೆ ಅಂಗಡಿ ಮೇಲೆ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್.ಗೌಡ ಎಂಬುವರು ಆಗಾಗ್ಗೆ ಸುಳ್ಳು ಕೇಸು ಹಾಕಿಸುತ್ತಿದ್ದಾರೆಂದು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಸಿ.ಆರ್ ಶಿವರಾಮ್ ದೂರು ಸಲ್ಲಿಸಿದರು.
    ಜೇಡಿಕಟ್ಟೆ ಸರ್ವೇ ನಂ. ೭೧ರಲ್ಲಿ ೩.೩೯ ಎಕರೆ ಬೀಳು ಬಿದ್ದಿದ್ದ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಿ.ತೀರ್ಥೇಶ್ ದೂರು ನೀಡಿದರು. 
    ದಾನವಾಡಿ ಗ್ರಾಮದಲ್ಲಿ ೧.೩೨ ಎಕರೆ ಜಮೀನು ಇದ್ದು, ಗಂಗಾ ಕಲ್ಯಾಣ ಯೋಜನೆ ಮಂಜೂರಾಗಿದ್ದರೂ ಸಹ ಇನ್ನೂ ಹಣ ನೀಡಿಲ್ಲವೆಂದು ಶಿವಮ್ಮ ಎಂಬುವರು ದೂರು ನೀಡಿದರು. 
    ಉಪ ತಹಸೀಲ್ದಾರ್ ಉಮೇಶ್, ತಾ.ಪಂ. ಸಹಾಯಕ ನಿರ್ದೇಶಕ ಉಪೇಂದ್ರ ಬಾಬು ಉಪಸ್ಥಿತರಿದ್ದರು. ಸಭೆಯಲ್ಲಿ ವಲಯ ಅರಣ್ಯಾಧಿಕಾರಿ ದುಗ್ಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ಲೋಕಾಯುಕ್ತ ಕಚೇರಿ ಸಿಬ್ಬಂದಿಗಳಾದ ಪ್ರಕಾಶ್ ಮತ್ತು ಟೀಕಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.