Sunday, November 3, 2024

ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ದೀಪಾವಳಿ

ಭದ್ರಾವತಿ ನಗರದ ನ್ಯೂಟೌನ್ ಶ್ರೀ ಪ್ರಜಾಪಿತ  ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ದೀಪಾವಳಿ ಹಬ್ಬ ವಿಶೇಷವಾಗಿ ಆಚರಿಸಲಾಯಿತು. 
    ಭದ್ರಾವತಿ : ನಗರದ ನ್ಯೂಟೌನ್ ಶ್ರೀ ಪ್ರಜಾಪಿತ  ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ದೀಪಾವಳಿ ಹಬ್ಬ ವಿಶೇಷವಾಗಿ ಆಚರಿಸಲಾಯಿತು. 
    ವಿಶ್ವವಿದ್ಯಾಲಯದ ಮಾಲಾ ಅಕ್ಕ ದೀಪಾವಳಿ ಹಬ್ಬದ ಧಾರ್ಮಿಕ ಪರಂಪರೆ, ಮಹತ್ವ ಕುರಿತು ವಿವರಿಸಿದರು. ನಮ್ಮೆಲ್ಲರ ಬದುಕಿನಲ್ಲಿ ದೀಪಾವಳಿ ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ವಿಶೇಷತೆಯಾಗಬೇಕು ಎಂದರು. 
    ದೀಪಾವಳಿ ಅಂಗವಾಗಿ ವಿಶ್ವವಿದ್ಯಾಲಯದಲ್ಲಿ ವಿಶೇಷ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ಭಕ್ತರಿಗೆ ಮಾಲಾ ಅಕ್ಕ ಹಬ್ಬದ ಶುಭಾಶಯ ಕೋರಿ ಅಶೀರ್ವದಿಸಿದರು. ನಂತರ ಮಹಾ ಪ್ರಸಾದ ವಿತರಣೆ ನಡೆಯಿತು. 
    ವಿಶ್ವವಿದ್ಯಾಲಯದಲ್ಲಿ ಪ್ರತಿಯೊಂದು ಹಬ್ಬ ವಿಶೇಷತೆಯಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಅಲ್ಲದೆ ಭಕ್ತರ ಸಂಖ್ಯೆ ಸಹ ಏರಿಕೆಯಾಗುತ್ತಿದೆ.ಪ್ರತಿದಿನ ಬಾಬಾರವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. 

ಕ್ರೈಸ್ತ ಧರ್ಮದ ಸಮಾಧಿ ಹಬ್ಬ

ಭದ್ರಾವತಿ ನಗರದ ಬೈಪಾಸ್ ರಸ್ತೆ, ಮಿಲ್ಟ್ರಿಕ್ಯಾಂಪ್ ಸಮೀಪದಲ್ಲಿರುವ ಕ್ರೈಸ್ತರ ಸಮಾಧಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಸಮಾಧಿ ಹಬ್ಬ ಕ್ರೈಸ್ತ ಭಕ್ತಾದಿಗಳಿಂದ ಆಚರಿಸಲಾಯಿತು. 
    ಭದ್ರಾವತಿ : ನಗರದ ಬೈಪಾಸ್ ರಸ್ತೆ, ಮಿಲ್ಟ್ರಿಕ್ಯಾಂಪ್ ಸಮೀಪದಲ್ಲಿರುವ ಕ್ರೈಸ್ತರ ಸಮಾಧಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಸಮಾಧಿ ಹಬ್ಬ ಕ್ರೈಸ್ತ ಭಕ್ತಾದಿಗಳಿಂದ ಆಚರಿಸಲಾಯಿತು. 
    ವಿಶ್ವ ಕ್ರೈಸ್ತ ಕ್ಯಾಥೋಲಿಕ್ ಧರ್ಮ ಸಭೆ ನಿರ್ಣಯದಂತೆ ನ.೨ರಂದು ಮೃತರ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕ್ರೈಸ್ತ ಧರ್ಮದ ಕುಟುಂಬಗಳಲ್ಲಿ ಮೃತರಾದ ಸದಸ್ಯರಿಗಾಗಿ ಅಂತ್ಯ ಕ್ರಿಯೆ ಸಲ್ಲಿಸಿದ ಸಮಾಧಿಯ ಸ್ಥಳದಲ್ಲಿ ಭಕ್ತರು ಅಂದು ಸೇರಿ ಧರ್ಮ ಗುರುಗಳೊಂದಿಗೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಪ್ರಾರ್ಥಿಸಲಾಗುವುದು. 
ಸಮಾಧಿಗಳ ಮೇಲೆ ಬೆಳೆದಿರುವ ಗಿಡ, ಪೊದೆಗಳನ್ನು ತೆಗೆದು, ಸ್ವಚ್ಚಗೊಳಿಸಿ ಸುಣ್ಣ ಬಣ್ಣಗಳನ್ನು ಹಚ್ಚಿ, ಹೂವಿನಿಂದ ಅಲಂಕರಿಸಿ, ಸಮಾಧಿಗಳ ಮೇಲೆ ಕ್ಯಾಂಡಲ್‌ಗಳನ್ನು ಹಚ್ಚಿ ನಿಧನರಾದ ಸಕಲರಿಗಾಗಿ ಪ್ರಾರ್ಥಿಸಲಾಯಿತು. 
    ಹಳೇ ನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದ ಧರ್ಮ ಗುರುಗಳಾದ ಫಾದರ್ ಸ್ಟೀವನ್ ಡೇಸಾ, ನ್ಯೂಟೌನ್ ಅಮಲೋದ್ಭವಿ ಮಾತೆ ಧರ್ಮ ಕೇಂದ್ರದ ಗುರುಗಳಾದ ಫಾದರ್ ಲ್ಯಾನ್ಸಿ ಡಿಸೋಜ, ಕಾಗದನಗರದ ಸೈಂಟ್ ಜೋಸೆಫ್ ದೇವಾಲಯ ಫಾದರ್ ಕ್ರಿಸ್ತುರಾಜ್, ಹಿರಿಯೂರು ಧರ್ಮ ಕೇಂದ್ರದ ಗುರುಗಳಾದ ಫಾದರ್ ಸಂತೋಷ್ ಪರೇರ, ನೆರೆಯ ಧರ್ಮ ಕೇಂದ್ರದ ಗುರುಗಳು, ಧರ್ಮ ಭಗಿನಿಯರು, ಭಕ್ತಾದಿಗಳು ಪಾಲ್ಗೊಂಡಿದ್ದರು.

ಹಿರಿಯ ಪತ್ರಕರ್ತ ಕಣ್ಣಪ್ಪರಿಗೆ ಬಿಜೆಪಿ ಪಕ್ಷದಿಂದ ಸನ್ಮಾನ

ಅಲ್ ಇಂಡಿಯಾ ಮೊದಲಿಯಾರ್ ಸಂಘದ ನೂತನ ಅಧ್ಯಕ್ಷರಾದ ಭದ್ರಾವತಿ ನಗರದ ಹಿರಿಯ ಪತ್ರಕರ್ತ ಕಣ್ಣಪ್ಪರವರನ್ನು ಭಾರತೀಯ ಜನತಾ ಪಕ್ಷ ತಾಲೂಕು ಮಂಡಲ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ: ಅಲ್ ಇಂಡಿಯಾ ಮೊದಲಿಯಾರ್ ಸಂಘದ ನೂತನ ಅಧ್ಯಕ್ಷರಾದ ನಗರದ ಹಿರಿಯ ಪತ್ರಕರ್ತ ಕಣ್ಣಪ್ಪರವರನ್ನು ಭಾರತೀಯ ಜನತಾ ಪಕ್ಷ ತಾಲೂಕು ಮಂಡಲ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಕಣ್ಣಪ್ಪರವರು ತಾಲೂಕು ತಮಿಳು ಸಂಘ ಹಾಗು ಮೊದಲಿಯಾರ್ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ತಾಲೂಕು ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷರಾಗಿ, ಲಾರಿ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮೊದಲಿಯಾರ್ ಸಂಘದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 
    ಬಿಜೆಪಿ ಪ್ರಕೋಷ್ಟಗಳ ರಾಜ್ಯ ಸಂಯೋಜಕ ಎಸ್. ದತ್ತತ್ರಿ ಕಣ್ಣಪ್ಪರವರಿಗೆ ಉನ್ನತ ಮಟ್ಟದಲ್ಲಿ ಸಂಘದ ಜವಾಬ್ದಾರಿ ವಹಿಸಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ. ಅವರನ್ನು ಪಕ್ಷದ ವತಿಯಿಂದ ಸನ್ಮಾನಿಸುತ್ತಿರುವುದು ಸಂತಸವನ್ನುಂಟು ಮಾಡಿದೆ ಎಂದರು. 
    ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಮುಖಂಡರಾದ, ಮಂಗೋಟೆ ರುದ್ರೇಶ್, ಜಿ. ಆನಂದ ಕುಮಾರ್, ಎಂ.ಮಂಜುನಾಥ್, ಎಚ್. ತೀರ್ಥಯ್ಯ, ಬಿ.ಕೆ ಶ್ರೀನಾಥ್, ಅಣ್ಣಪ್ಪ, ಚನ್ನೆಶ್, ರಾಜಶೇಖರ್ ಉಪ್ಪಾರ, ಅವಿನಾಶ್, ಪಿ.ಜಿ ರಾಮಲಿಂಗಯ್ಯ, ಕಾ.ರಾ ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
 

ಸೇತುವೆಯಿಂದ ಕಾಲು ಜಾರಿ ನದಿಗೆ ಬಿದ್ದ ಯುವಕನನ್ನು ರಕ್ಷಿಸಿದ ಅಗ್ನಿಶಾಮಕ ಇಲಾಖೆ ತಂಡ

ಸೇತುವೆ ಮೇಲಿಂದ ಆಯ ತಪ್ಪಿ ಭದ್ರಾ ನದಿಗೆ ಬಿದ್ದ ಯುವಕನನ್ನು ಅಗ್ನಿಶಾಮಕ ಇಲಾಖೆ ತಂಡ ರಕ್ಷಿಸಿರುವ ಘಟನೆ ಭಾನುವಾರ ಬೆಳಗಿನ ಜಾವ ಭದ್ರಾವತಿಯಲ್ಲಿ ನಡೆದಿದೆ. 
    ಭದ್ರಾವತಿ: ಸೇತುವೆ ಮೇಲಿಂದ ಆಯ ತಪ್ಪಿ ಭದ್ರಾ ನದಿಗೆ ಬಿದ್ದ ಯುವಕನನ್ನು ಅಗ್ನಿಶಾಮಕ ಇಲಾಖೆ ತಂಡ ರಕ್ಷಿಸಿರುವ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ. 
    ನಗರದ ಬೈಪಾಸ್ ರಸ್ತೆ, ಆನೆಕೊಪ್ಪ ನಗರಸಭೆ ಪಂಪ್ ಹೌಸ್ ಸಮೀಪದ ಹೊಸ ಸೇತುವೆ ಮೇಲೆ ದುರ್ಘಟನೆ ನಡೆದಿದ್ದು, ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಹಾಗು ಸಿಬ್ಬಂದಿಗಳನ್ನೊಳಗೊಂಡ ತಂಡದ ಯಶಸ್ವಿ ಕಾರ್ಯಾಚರಣೆಯಿಂದಾಗಿ ಪವನ್(೨೫) ಪ್ರಾಣಾಪಾಯದಿಂದ ಪಾರಾಗಿದ್ದಾನೆ. 
    ಘಟನೆ ವಿವರ : 
    ಕಾರಿನಲ್ಲಿ ಬೆಂಗಳೂರಿಗೆ ತೆರಳಲು ಹೊಸದಾಗಿ ನಿರ್ಮಾಣಗೊಂಡಿರುವ ಸೇತುವೆ ಮೇಲೆ ಬೆಳಗಿನ ಜಾವ ಸುಮಾರು ೫.೩೦ರ ಸಮಯದಲ್ಲಿ ಕಾರು ನಿಲ್ಲಿಸಿ ಪೂಜೆ ಸಲ್ಲಿಸಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಕತ್ತಲೆ ಇದ್ದ ಕಾರಣ ಸೇತುವೆ ಒಂದು ಬದಿಯಲ್ಲಿ ನಿಂತಿದ್ದ ಪವನ್ ಆಕಸ್ಮಿಕವಾಗಿ ಕಾಲು ಜಾರಿ ಸೇತುವೆಯಿಂದ ನದಿಗೆ ಬಿದ್ದಿದ್ದಾನೆ. ಜೊತೆಯಲ್ಲಿದ್ದವರು ತಕ್ಷಣ ಆಗ್ನಿಶಾಮಕ ಇಲಾಖೆಗೆ ಕರೆ ಮಾಡಿದ್ದಾರೆ. 
    ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಇಲಾಖೆ ತಂಡ ಸುಮಾರು ೧ ಗಂಟೆ ನಿರಂತರ ಕಾರ್ಯಾಚರಣೆ ನಡೆಸಿ ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಪವನ್ ನದಿಗೆ ಬಿದ್ದ ಸ್ಥಳದಲ್ಲಿ ಹೆಚ್ಚಿನ ನೀರು ಇಲ್ಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣ ಆಂಬ್ಯುಲೆನ್ಸ್ ನೆರವಿನೊಂದಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. 
    ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ವಸಂತಕುಮಾರ್, ಸಿಬ್ಬಂದಿಗಳಾದ ಬಾಬು ಎಸ್. ಗೌಡ, ಪಿ. ಮಂಜುನಾಥ್, ಬಾಬಲು ಮಾನಿಕ ಬಾಯ್, ಪ್ರಜ್ವಲ್, ಉದಯ್, ಹಿರೇಮಠ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿರು.