Monday, May 4, 2020

ಗೃಹ ರಕ್ಷಕ ದಳ ಸಿಬ್ಬಂದಿಗಳಿಗೆ ದಿನಸಿ, ಹಣ್ಣು, ಮಾಸ್ಕ್ ವಿತರಣೆ

ಭದ್ರಾವತಿಯಲ್ಲಿ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಗೌರವಾಧ್ಯಕ್ಷೆ ಡಾ. ಅನುರಾಧ ಪಟೇಲ್‌ರವರ ಸಹಕಾರದೊಂದಿಗೆ ಸೋಮವಾರ ಗೃಹ ರಕ್ಷಕ ದಳ ಸಿಬ್ಬಂದಿಗಳಿಗೆ ದಿನಸಿ ಸಾಮಗ್ರಿ, ಮಾಸ್ಕ್ ಹಾಗೂ ಹಣ್ಣು ವಿತರಿಸಲಾಯಿತು. 
ಭದ್ರಾವತಿ, ಮೇ. ೪: ಪ್ರಸ್ತುತ ಸಂಕಷ್ಟದ ಪರಿಸ್ಥಿತಿಯಲ್ಲೂ ಪೊಲೀಸರಂತೆ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಗೃಹ ರಕ್ಷಕ ದಳ ಸಿಬ್ಬಂದಿಗಳ ನೆರವಿಗೆ ನಗರದ ಚುಂಚಾದ್ರಿ ಮಹಿಳಾ ವೇದಿಕೆ ಮುಂದಾಗಿದೆ.
ಸೋಮವಾರ ವೇದಿಕೆ ಗೌರವಾಧ್ಯಕ್ಷೆ ಡಾ. ಅನುರಾಧ ಪಟೇಲ್‌ರವರ ಸಹಕಾರದೊಂದಿಗೆ ಸುಮಾರು ೨೦೦ ಮಂದಿ ಗೃಹ ರಕ್ಷಕ ದಳ ಸಿಬ್ಬಂದಿಗಳಿಗೆ ದಿನಸಿ ಸಾಮಗ್ರಿ, ಹಣ್ಣು ಹಾಗೂ ಮಾಸ್ಕ್‌ಗಳನ್ನು ವಿತರಿಸಲಾಯಿತು.
ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಸುಮಾರು ೪೦೦ ಉದ್ಯೋಗಿಗಳಿಗೆ, ಸುಮಾರು ೨೦೦ ಮಂದಿ ಸ್ಥಳೀಯರಿಗೆ ವೇದಿಕೆ ವತಿಯಿಂದ ಮಾಸ್ಕ್ ವಿತರಿಸಲಾಯಿತು. 
ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಸುಮಾರು ೪೦೦ ಉದ್ಯೋಗಿಗಳಿಗೆ, ಸುಮಾರು ೨೦೦ ಮಂದಿ ಸ್ಥಳೀಯರಿಗೆ ವೇದಿಕೆ ವತಿಯಿಂದ ಮಾಸ್ಕ್ ವಿತರಿಸಲಾಯಿತು.
ವೇದಿಕೆ ಅಧ್ಯಕ್ಷೆ ಪ್ರಭಾರಾಜು, ಉಪಾಧ್ಯಕ್ಷೆ ಎಂ.ಎಸ್ ಸುಧಾಮಣಿ ಹಾಗೂ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೊರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್‌ಡೌನ್ ಘೋಷಿಸಿದ ನಂತರ ವೇದಿಕೆಯು ನಿರಂತರವಾಗಿ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಮುಂದಾಗಿದ್ದು, ಪೌರಕಾರ್ಮಿಕರು, ಬಡ ಮಹಿಳೆಯರು, ನಿರಾಶ್ರಿತರು, ಗೃಹ ರಕ್ಷಕ ದಳದವರು, ಕಲಾವಿದರು ಸೇರಿದಂತೆ ಎಲ್ಲರಿಗೂ ಸಾಧ್ಯವಾದಷ್ಟು ನೆರವನ್ನು ನೀಡುವ ಮೂಲಕ ನಗರದಲ್ಲಿ ಗಮನ ಸೆಳೆದಿದೆ. 

ನೀರು ಪೋಲಾಗುವುದನ್ನು ತಡೆದು ಭತ್ತದ ಬೆಳೆ ಉಳಿಸಿ : ಕೆ.ಟಿ ಗಂಗಾಧರ್

ಭದ್ರಾವತಿ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ನೀರಾವರಿ ಇಲಾಖೆ ಬಿಆರ್‌ಎಲ್‌ಬಿಸಿ ಕಛೇರಿಯಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. 
ಭದ್ರಾವತಿ: ಭದ್ರಾ ನದಿಯಲ್ಲಿ ನೀರು ಪೋಲಾಗದಂತೆ ತಡೆದು ಮುಂದಿನ ದಿನಗಳಿಗೆ ಅಗತ್ಯವಿರುವಷ್ಟು ನೀರು ಜಲಾಶಯದಲ್ಲಿ ಸಂಗ್ರಹಿಸಿಟ್ಟುಕೊಂಡು ಉಳಿದ ನೀರನ್ನು ಭತ್ತದ ಬೆಳೆಗೆ ಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವರಿಷ್ಠ ಕೆ.ಟಿ ಗಂಗಾಧರ್ ಮನವಿ ಮಾಡಿದರು.
ಅವರು ಸೋಮವಾರ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ನೀರಾವರಿ ಇಲಾಖೆ ಬಿಆರ್‌ಎಲ್‌ಬಿಸಿ ಕಛೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಭದ್ರಾ ಜಲಾಯಶಯದಿಂದ ನಾಲೆಗಳಿಗೆ ಹರಿಸಲಾಗುತ್ತಿರುವ ನೀರನ್ನು ಮೇ.೭ರಂದು ನಿಲ್ಲಿಸಲು ಆದೇಶಿಸಲಾಗಿದೆ. ಪ್ರಸ್ತುತ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಭತ್ತ ಬೆಳೆಯಲಾಗಿದ್ದು, ಭತ್ತ ಕಟಾವಿಗೆ ಬರಲು ಕನಿಷ್ಠ ೧೦ ರಿಂದ ೧೨ ದಿನಗಳು ಬೇಕು. ಈ ಹಿನ್ನಲೆಯಲ್ಲಿ ನೀರಿನ ಅಗತ್ಯವಿದೆ. ಭದ್ರಾ ನದಿಯಲ್ಲಿ ನೀರು ಪೋಲಾಗುವುದನ್ನು ತಡೆದು ಬೆಳೆಗಳಿಗೆ ನೀರು ಒದಗಿಸಬೇಕೆಂದು ಒತ್ತಾಯಿಸಿದರು.

ಭದ್ರಾವತಿ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ನೀರಾವರಿ ಇಲಾಖೆ ಬಿಆರ್‌ಎಲ್‌ಬಿಸಿ ಕಛೇರಿಯಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. 
ಮುಂಗಾರು ವಿಳಂಬವಾದಲ್ಲಿ ತೋಟಗಾರಿಕೆ ಬೆಳೆಗಳಾದ ಅಡಿಕೆ, ಬಾಳೆ, ತೆಂಗು ಇತ್ಯಾದಿ ಬೆಳೆಗಳನ್ನು ಮುಂದೆ ರೈತರು ಉಳಿಸಿಕೊಳ್ಳಲು ಅನುವಾಗುವಂತೆ ಅಗತ್ಯವಾದ ನೀರನ್ನು ಜಲಾಶಯದಲ್ಲಿ ಕಾಪಾಡಿಕೊಂಡು ಸೂಕ್ತ ಸಮಯದಲ್ಲಿ ಹರಿಸಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಬಿಆರ್‌ಎಲ್‌ಬಿಸಿ ಕಾರ್ಯಪಾಲಕ ಅಭಿಯಂತರ ರವಿಚಂದ್ರ, ರೈತ ಸಂಘದ ತಾಲೂಕು ಅಧ್ಯಕ್ಷ ಎಚ್.ಪಿ ಹಿರಿಯಣ್ಣಯ್ಯ, ಜಿಲ್ಲಾ ಕಾರ್ಯಾಧ್ಯಕ್ಷ ಯಶವಂತರಾವ್ ಘೋರ್ಪಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ ವೀರೇಶ್, ಪಾಂಡುರಂಗ, ಗೋಪಾಲಪ್ಪ, ಪುಟ್ಟಪ್ಪ ಸೇರಿದಂತೆ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಕೊರೋನಾ ವೈರಸ್ ನಿರ್ಮೂಲನೆ ಕುರಿತ ಗಮನ ಸೆಳೆದ ಬೀದಿ ನಾಟಕ ಪ್ರದರ್ಶನ

ನಗರದ ವಿವಿಧೆಡೆ ಜಾಗೃತಿ ಮೂಡಿಸುತ್ತಿರುವ ರಂಗ ಕಲಾವಿದರು, ವಿದ್ಯಾರ್ಥಿಗಳು 

ಭದ್ರಾವತಿ ನಗರಸಭೆ ಮುಂಭಾಗ ಸೋಮವಾರ ಕೊರೋನಾ ವೈರಸ್ ನಿರ್ಮೂಲನೆ ಹಾಗೂ ಇದರ ವಿರುದ್ಧ ಹೋರಾಟ ನಡೆಸುತ್ತಿರುವವರಿಗೆ ಅಭಿನಂದನೆ ಕುರಿತ ಬೀದಿ ನಾಟಕ ಪ್ರದರ್ಶನ ಗಮನ ಸೆಳೆಯಿತು. 
ಭದ್ರಾವತಿ: ಒಂದೆಡೆ ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೋನಾ ವೈರಸ್ ನಿರ್ಮೂಲನೆ ಕುರಿತು ಜಾಗೃತಿ, ಮತ್ತೊಂದೆಡೆ ಇದರ ವಿರುದ್ಧ ಹಗಲಿರುಳು ಹೋರಾಟ ನಡೆಸುತ್ತಿರುವವರಿಗೆ ಅಭಿನಂದನೆ ಸಲ್ಲಿಸುವ ಪರಿ ಕಲಾವಿದರು ಅದ್ಭುತವಾಗಿ ಅಭಿನಯದ ಮೂಲಕ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದ ಘಟನೆ ಸೋಮವಾರ ನಡೆಯಿತು.
ಕಾಗದ ನಗರದ ವಿಕಸಂ ಕಲಾ ತಂಡ ಹಾಗೂ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ರೋವರ್ಸ್ ಮತ್ತು ರೇಂಜರ್‍ಸ್ ವಿದ್ಯಾರ್ಥಿಗಳು ಪೊಲೀಸ್ ಮತ್ತು ಆರೋಗ್ಯ ಇಲಾಖೆ, ಪತ್ರಕರ್ತರ ಸಂಘ, ಗುರು ಆರ್ಟ್ಸ್, ಚಿಗುರು ಕಲಾ ತಂಡದ ಸಹಕಾರದೊಂದಿಗೆ ಬೀದಿ ನಾಟಕ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು.
ನಗರ ಸಭೆ ಮುಂಭಾಗ ಮೊದಲ ಪ್ರದರ್ಶನಕ್ಕೆ ಪೌರಾಯುಕ್ತ ಮನೋಹರ್ ಚಾಲನೆ ನೀಡಿದರು. ಕೆ.ಬಿ ರೇವಣ್ಣ(ಪೊಲೀಸ್), ಎಸ್.ಐ ವರುಣ್‌ಕುಮಾರ್(ವೈದ್ಯ), ಎಂ. ಸಹನ(ಮಾಧ್ಯಮ ಪ್ರತಿನಿಧಿ), ಪೂಜಾ(ಆಶಾ ಕಾರ್ಯಕರ್ತೆ), ಆರ್. ಸಹನ(ನರ್ಸ್), ಚಿನ್ಮಯಿ(ಆಶಾ ಕಾರ್ಯಕರ್ತೆ), ಕೆ. ವಿನೋದ್(ಪೌರ ಕಾರ್ಮಿಕ), ಎಂ. ಸಚಿನ್(ಪೌರ ಕಾರ್ಮಿಕ), ಎಸ್. ರಾಕೇಶ್(ಪೌರ ಕಾರ್ಮಿಕ), ರುಮಾನ(ಪೌರ ಕಾರ್ಮಿಕ), ಆರ್. ಮನೋಜ್(ಪೌರ ಕಾರ್ಮಿಕ), ಕೆ.ಎಂ ರವಿಕಿರಣ್(ಪೌರ ಕಾರ್ಮಿಕ), ಎಚ್.ಎಸ್ ಅಭಿಷೇಕ್(ಪೌರ ಕಾರ್ಮಿಕ), ಮೋಹನ್(ಕೊರೋನಾ ವೈರಸ್), ಪುಟ್ಟಣ್ಣ(ಯಮ) ಪಾತ್ರಧಾರಿಗಳಾಗಿ ಅಭಿನಯಿಸಿದರು.
ಸಹ ಪ್ರಾಧ್ಯಾಪಕ ಎಸ್. ವರದರಾಜ್ ಮೇಲ್ವಚಾರಕರಾಗಿ, ವಿಕಸಂ ಕಲಾ ತಂಡದ ಕೆ.ಎಸ್ ರವಿಕುಮಾರ್ ನಿರ್ದೇಶಕರಾಗಿ, ಗುರು ಆರ್ಟ್ಸ್‌ನ ಬಿ. ಗುರು ವಿನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು. ತಮಟೆ ಜಗದೀಶ್, ಜಿ. ದಿವಾಕರ್, ಜಿ. ರವಿಕುಮಾರ್ ಮತ್ತು ಡಿ.ಆರ್ ಹರೀಶ ವಿವಿಧ ವಾದ್ಯಗಳೊಂದಿಗೆ ಹಾಡುಗಾರಿಕೆ ನಡೆಸಿಕೊಟ್ಟರು.
೨ನೇ ಪ್ರದರ್ಶನ ರಂಗಪ್ಪ ವೃತ್ತದ ಜೆಎಂಎಫ್‌ಸಿ ನ್ಯಾಯಾಲಯದ ಮುಂಭಾಗ ಹಾಗೂ ೩ನೇ ಪ್ರದರ್ಶನ ಅಂಬೇಡ್ಕರ್ ವೃತ್ತದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಬಳಿ ನಡೆಯಿತು.
ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ ಉಮಾಶಂಕರ್, ಪ್ರಾಧ್ಯಾಪಕರಾದ ಡಾ. ಬಿ.ಎಂ. ನಾಸಿರ್‌ಖಾನ್, ಡಾ. ಸಿ.ಎಸ್ ಷಣ್ಮುಖಪ್ಪ, ಡಾ. ಶಿವರುದ್ರಪ್ಪ, ನಗರಸಭೆ ಕಂದಾಯಾಧಿಕಾರಿ ರಾಜ್‌ಕುಮಾರ್, ಪರಿಸರ ಅಭಿಯಂತರ ರುದ್ರೇಗೌಡ, ಅಖಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ, ದೈಹಿಕ ಶಿಕ್ಷಕ ಶಿವಲಿಂಗೇಗೌಡ, ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಹಾಯಕ ನಿಲೇಶ್‌ರಾಜ್, ವಸಂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.