ಶನಿವಾರ, ಆಗಸ್ಟ್ 5, 2023

ಪಿಎಸ್‌ಟಿ ಶಿಕ್ಷಕರ ಅನ್ಯಾಯ ಸರಿಪಡಿಸಿ : ಮನವಿ

ಪಿಎಸ್‌ಟಿ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯ  ಸರಿಪಡಿಸುವಂತೆ ಒತ್ತಾಯಿಸಿ ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಹಿತ ರಕ್ಷಣಾ ವೇದಿಕೆ ಭದ್ರಾವತಿ ತಾಲೂಕು ಶಾಖೆ ವತಿಯಿಂದ ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
     ಭದ್ರಾವತಿ, ಆ. ೬: ಪಿಎಸ್‌ಟಿ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯ  ಸರಿಪಡಿಸುವಂತೆ ಒತ್ತಾಯಿಸಿ ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಹಿತ ರಕ್ಷಣಾ ವೇದಿಕೆ ತಾಲೂಕು ಶಾಖೆ ವತಿಯಿಂದ ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 
ತಾಲೂಕಿನ ಪಿಎಸ್‌ಟಿ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ನಿಕಟ ಪೂರ್ವ ಸಿಆರ್‌ಪಿ ನಾಗರತ್ನಮ್ಮ, ಸಾಮಿತ್ರಿ ಬಾಯಿ ಪುಲೆ ಸಂಘದ ತಾಲೂಕು ಅಧ್ಯಕ್ಷೆ ಜೇನಮ್ಮ, ಹುಣಸೇಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಮಂಜುಳಮ್ಮ, ಸಿದ್ದಾಪುರ ತಾಂಡ ಸರ್ಕಾರಿ ಹಿರಿಯ ಪ್ರಾಥಮಿ ಶಾಲೆಯ ಡಿ. ಯಲ್ಲಪ್ಪ, ರುದ್ರೇಶ್‌, ಶಿವಕುಮಾರ ಸ್ವಾಮಿ ಸೇರಿದಂತೆ ಇನ್ನಿತರರ ನೇತೃತ್ವದಲ್ಲಿ  ಪ್ರತಿಭಟನೆ ನಡೆಸಿ  ತಮಗೆ ಆಗುತ್ತಿರುವ ಅನ್ಯಾಯ ತೋರ್ಪಡಿಸಿಕೊಂಡರು. 
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮ ೨೦೧೭, ತಿದ್ದುಪಡಿ ನಿಯಮ ೨೦೨೧ರಲ್ಲಿ ಆಗಿರುವ ಸಾಮಾಜಿಕ ತಾರತಮ್ಯ ಹಾಗು ಅನ್ಯಾಯಗಳನ್ನು ಸರಿಪಡಿಸಲು ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪುನರ್‌ ರಚಿಸುವಂತೆ ಕೋರಿದರು. 
ಮನವಿ ಸ್ವೀಕರಿಸಿದ  ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮನವಿಯನ್ನು ಮೇಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದರು.  

ಸಂವಾದ : ನಗರಕ್ಕೆ ಆ.೮ರಂದು ಬಹುಭಾಷಾ ಚಲನಚಿತ್ರ ನಟ ಪ್ರಕಾಶ್‌ ರಾಜ್‌

ಪ್ರಕಾಶ್‌ ರಾಜ್‌
    ಭದ್ರಾವತಿ, ಆ. ೦೫:  ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕಾರುಣ್ಯ ಚಾರಿಟಬಲ್‌ ಟ್ರಸ್ಟ್‌ ಸಹಯೋಗದೊಂದಿಗೆ ಆ.೮ರಂದು ಬೆಳಿಗ್ಗೆ ೧೦.೩೦ಕ್ಕೆ ನ್ಯೂಟೌನ್‌ ಸರ್‌.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರಂಗಭೂಮಿ, ಸಿನಿಮಾ ಮತ್ತು ಸಮಾಜ ವಿಷಯ ಕುರಿತು ಸಂವಾದ ಹಮ್ಮಿಕೊಳ್ಳಲಾಗಿದೆ.
    ಬಹುಭಾಷಾ ಚಲನಚಿತ್ರ ನಟ ಪ್ರಕಾಶ್‌ ರಾಜ್‌ ವಿಷಯ ಮಂಡಿಸಲಿದ್ದು, ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ. ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
    ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಕೆ.ಎಲ್‌ ಅಶೋಕ್‌, ಡಿಎಸ್‌ಎಸ್‌ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಪ್ರಗತಿಪರ ಮುಖಂಡ ಸುರೇಶ್‌, ರೈತ ಮುಖಂಡ ಬಾಲಕೃಷ್ಣ, ಸಮಾಲೋಚನೆ ಮನೋಶಾಸ್ತ್ರಜ್ಞೆ ಬಿ. ಅರುಣಾ ಭಾಸ್ಕರ್‌ ಮತ್ತು ಕಾರುಣ್ಯ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಜಿ. ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

ಪ್ರಾಚಾರ್ಯ ವೈ.ಡಿ ಹಿರಿಯಣ್ಣ ವಯೋನಿವೃತ್ತಿ : ಸನ್ಮಾನ

ಭದ್ರಾವತಿ ಹಳೇನಗರದ ತರೀಕೆರೆ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವೈ.ಡಿ ಹಿರಿಯಣ್ಣ ವಯೋನಿವೃತ್ತಿ  ಹೊಂದಿದ್ದು, ಇವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.  
    ಭದ್ರಾವತಿ, ಆ. ೫ : ಹಳೇನಗರದ ತರೀಕೆರೆ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವೈ.ಡಿ ಹಿರಿಯಣ್ಣ ವಯೋನಿವೃತ್ತಿ  ಹೊಂದಿದ್ದು, ಇವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.  
    ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಜಿಲ್ಲಾ ಉಪನಿರ್ದೇಶಕರ ನೇತೃತ್ವದಲ್ಲಿ ವೈ.ಡಿ ಹಿರಿಯಣ್ಣ ದಂಪತಿಯನ್ನು ಸನ್ಮಾನಿಸುವ ಮೂಲಕ ಅವರ ವೃತ್ತಿ ಸೇವೆಯನ್ನು ಸ್ಮರಿಸಲಾಯಿತು.
ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಯ ಪ್ರಾಚಾರ್ಯರು, ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿಯವರು, ಕಾಲೇಜು ಅಭಿವೃದ್ಧಿ ಸಮಿತಿ  ಸದಸ್ಯರು, ತಾಲೂಕು ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
,     ಕಾಲೇಜಿನ ಹಿರಿಯ ಉಪನ್ಯಾಸಕ ಎಚ್.ಬಿ ಪ್ರಕಾಶ್ ಅವರನ್ನು ಪ್ರಭಾರ ಪ್ರಾಚಾರ್ಯರ ಹುದ್ದೆಗೆ ನಿಯೋಜನೆ ಗೊಳಿಸಲಾಗಿದೆ.

ಅನಂತರಾಮ ನಿಧನ

ಅನಂತರಾಮ  
    ಭದ್ರಾವತಿ, ಆ. ೫: ನಗರದ ಮೈಸೂರು ಕಾಗದ ಕಾರ್ಖಾನೆ ನಗರಾಡಳಿತ ನೀರು ಸರಬರಾಜು ಇಲಾಖೆಯಲ್ಲಿ ಫ್ಲಂಬರ್‌ಉದ್ಯೋಗಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದ ಅನಂತರಾಮ(೬೭) ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದರು. ಅನಂತರಾಮ ಅವರು ನಿವೃತ್ತಿ ನಂತರ ಬೆಂಗಳೂರಿನಲ್ಲಿ ವಾಸವಾಗಿದ್ದರು. ಶುಕ್ರವಾರ ಸಂಜೆ ಹೃದಯಾಘಾತದಿಂದ ನಿಧನ ಹೊಂದಿದರು. ಇವರ ನಿಧನಕ್ಕೆ ಎಂಪಿಎಂ ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ಎಸ್. ಚಂದ್ರಶೇಖರ್‌ ಸೇರಿದಂತೆ ಕಾರ್ಮಿಕ ವರ್ಗದವರು ಸಂತಾಪ ಸೂಚಿಸಿದ್ದಾರೆ.

ಮುಜರಾಯಿ ಅರ್ಚಕರ ಸಂಘದ ಅಧ್ಯಕ್ಷರಾಗಿ ಬದರಿನಾರಾಯಣ ನೇಮಕ

ಎಚ್.ಎಸ್‌ ಬದರಿನಾರಾಯಣ
    ಭದ್ರಾವತಿ, ಆ. ೫ : ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ-ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ವತಿಯಿಂದ ತಾಲೂಕು ಮುಜರಾಯಿ ಅರ್ಚಕರ ಸಂಘಕ್ಕೆ ಅಧ್ಯಕ್ಷರಾಗಿ ಎಚ್.ಎಸ್‌ ಬದರಿನಾರಾಯಣ ನೇಮಕ ಗೊಂಡಿದ್ದಾರೆ.
    ಒಕ್ಕೂಟದ ರಾಜ್ಯಾಧ್ಯಕ್ಷ, ಶಾಸಕ ದಿನೇಶ್‌ ಗುಂಡೂರಾವ್‌ ೫ ವರ್ಷಗಳ ಅವಧಿಗೆ ಎಚ್.ಎಸ್‌ ಬದರಿನಾರಾಯಣ ಹಾಗು ಕಾರ್ಯದರ್ಶಿಯಾಗಿ ಎಂ. ಮಂಜುನಾಥ್‌  ನಾಗತಿ ಬೆಳಗಲು ಅವರನ್ನು  ನೇಮಕಾತಿಗೊಳಿಸಿ ಕೇಂದ್ರ ಸಮಿತಿಯ ಎಲ್ಲಾ ಆದೇಶಗಳನ್ನು ಪರಿಪಾಲಿಸಿಕೊಂಡು ಬರುವ ಜೊತೆಗೆ ಸಕಾಲದಲ್ಲಿ ಸಂಘದ ವರದಿಗಳನ್ನು ನೀಡುವಂತೆ ಕೋರಿದ್ದಾರೆ.


ಎಂ. ಮಂಜುನಾಥ್‌ ನಾಗತಿ ಬೆಳಗಲು
    ನೇಮಕಗೊಳ್ಳಲು ಕಾರಣಕರ್ತರಾದ ಒಕ್ಕೂಟದ ರಾಜ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌,  ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್‌ ದೀಕ್ಷಿತ್‌ ಮತ್ತು ಒಕ್ಕೂಟದ ಜಿಲ್ಲಾಧ್ಯಕ್ಷ ಮಿಥುನ್‌ ಅಯ್ಯಂಗಾರ್‌ ಅವರಿಗೆ ನೂತನ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಕೃತಜ್ಞತೆ ಸಲ್ಲಿಸಿದ್ದಾರೆ.