ಸೋಮವಾರ, ಸೆಪ್ಟೆಂಬರ್ 15, 2025

ವರ್ಷಾಂತ್ಯದೊಳಗೆ ವಿಐಎಸ್‌ಎಲ್ ಮರುನಿರ್ಮಾಣಕ್ಕೆ ಚಾಲನೆ ನೀಡಿ ಗುತ್ತಿಗೆ ಕಾರ್ಮಿಕರ ಹಿತಕಾಪಾಡಿ

ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಸಂಸ್ಥಾಪಕ ಅಧ್ಯಕ್ಷರಾದ ಭಾರತರತ್ನ ಸರ್.ಎಂ ವಿಶ್ವೇಶ್ವರಾಯರವರ ಜನ್ಮದಿನದ ಅಂಗವಾಗಿ ಸೋಮವಾರ ಗುತ್ತಿಗೆ ಕಾರ್ಮಿಕರ ಸಂಘದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಡಿಸೆಂಬರ್ ಅಂತ್ಯದೊಳಗೆ ಮರುನಿರ್ಮಾಣಗೊಳಿಸುವ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡುವ ಮೂಲಕ ಪ್ರಸ್ತುತ ಎದುರಿಸುತ್ತಿರುವ ಸಂಕಷ್ಟಗಳನ್ನು ದೂರ ಮಾಡಬೇಕೆಂದು ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. 
    ಕಾರ್ಖಾನೆ ಸಂಸ್ಥಾಪಕ ಅಧ್ಯಕ್ಷರಾದ ಭಾರತರತ್ನ ಸರ್.ಎಂ ವಿಶ್ವೇಶ್ವರಾಯರವರ ಜನ್ಮದಿನದ ಅಂಗವಾಗಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಪದಾಧಿಕಾರಿಗಳು,  ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಪ್ರಕ್ರಿಯೆಯಿಂದ ಕೈಬಿಡುವುದು, ಅಗತ್ಯವಿರುವ ಬಂಡವಾಳ ತೊಡಗಿಸುವುದು, ಗುತ್ತಿಗೆ ಕಾರ್ಮಿಕರಿಗೆ ತಿಂಗಳ ಪೂರ್ತಿ ಕೆಲಸ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ ೯೭೦ ದಿನಗಳಿಂದ ಕಾರ್ಖಾನೆ ಮುಂಭಾಗ ಹೋರಾಟ ನಡೆಸಲಾಗುತ್ತಿದೆ. ಆದರೆ ಬೇಡಿಕೆಗಳು ಇದುವರೆಗೂ ಈಡೇರಿಲ್ಲ. ಇದರಿಂದಾಗಿ ಗುತ್ತಿಗೆ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಸರ್ಕಾರ ಅವರ ಹಿತಕಾಪಾಡಲು ಮುಂದಾಗಬೇಕೆಂದರು. 
    ಈಗಾಗಲೇ ಕಾರ್ಖಾನೆ ಹೊಸದಾಗಿ ಮರು ನಿರ್ಮಾಣಗೊಳಿಸುವುದಾಗಿ ಕೇಂದ್ರ ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿಯವರು ಭರವಸೆ ನೀಡಿದ್ದು, ಅಲ್ಲದೆ ಈ ನಿಟ್ಟಿನಲ್ಲಿ ಸಂಸದ ಬಿ.ವೈ ರಾಘವೇಂದ್ರರವರು ಸಹ ಸಾಕಷ್ಟು ಶ್ರಮಿಸುತ್ತಿದ್ದಾರೆ. ಈ ವರ್ಷದ ಅಂತ್ಯದೊಳಗೆ ಮರುನಿರ್ಮಾಣಗೊಳ್ಳುವ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ಗುತ್ತಿಗೆ ಕಾರ್ಮಿಕರ ಬೇಡಿಕೆಗಳು ಈಡೇರಿಸಬೇಕೆಂದು ಕೋರಿದರು. 
    ಇದಕ್ಕೂ ಮೊದಲು ಕಾರ್ಖಾನೆ ಆಡಳಿತ ಕಛೇರಿ ಆವರಣದಲ್ಲಿರುವ ಸರ್.ಎಂ. ವಿಶ್ವೇಶ್ವರಾಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ವಂದನೆ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಗುತ್ತಿಗೆ ಕಾರ್ಮಿಕರು ಉಪಸ್ಥಿತರಿದ್ದರು. 

ಅಭಿಯಂತರರ ದಿನ : ವಿಐಎಸ್‌ಎಲ್ ಸಂಸ್ಥಾಪಕ ಅಧ್ಯಕ್ಷರಿಗೆ ಗೌರವ ವಂದನೆ

ಸರ್‌ಎಂವಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಅಧಿಕಾರಿಗಳು, ಕಾರ್ಮಿಕರು

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸಂಸ್ಥಾಪಕರು, ಮೊದಲ ಅಧ್ಯಕ್ಷರಾದ ಭಾರತರತ್ನ, ದೇಶದ ಅಪ್ರತಿಮ ಅಭಿಯಂತರ ಸರ್.ಎಂ ವಿಶ್ವೇಶ್ವರಾಯರವರ ೧೬೫ನೇ ಜನ್ಮದಿನದ ಅಂಗವಾಗಿ ಸೋಮವಾರ `ಅಭಿಯಂತರರ ದಿನ' ಆಚರಿಸಲಾಯಿತು. 
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸಂಸ್ಥಾಪಕರು, ಮೊದಲ ಅಧ್ಯಕ್ಷರಾದ ಭಾರತರತ್ನ, ದೇಶದ ಅಪ್ರತಿಮ ಅಭಿಯಂತರ ಸರ್.ಎಂ ವಿಶ್ವೇಶ್ವರಾಯರವರ ೧೬೫ನೇ ಜನ್ಮದಿನದ ಅಂಗವಾಗಿ ಸೋಮವಾರ `ಅಭಿಯಂತರರ ದಿನ' ಆಚರಿಸಲಾಯಿತು. 
    ಕಾರ್ಖಾನೆ ಆಡಳಿತ ಕಛೇರಿ ಆವರಣದಲ್ಲಿರುವ ವಿಶ್ವೇಶ್ವರಾಯರವರ ಪ್ರತಿಮೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ವಂದನೆ ಸಲ್ಲಿಸಲಾಯಿತು. ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಮಹಾಪ್ರಬಂದಕ(ಸ್ಥಾವರ) ಕೆ.ಎಸ್ ಸುರೇಶ್, ಮಹಾಪ್ರಬಂಧಕ (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಮಿಶ್ರಾ ಸೇರಿದಂತೆ ಇನ್ನಿತರ ಅಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಒಂದು ತಿಂಗಳಲ್ಲಿ ವಿಐಎಸ್‌ಎಲ್ ಕಾರ್ಖಾನೆ ಮರುನಿರ್ಮಾಣ ಕಾರ್ಯ ಯಶಸ್ಸು : ಬಿ.ವೈ ರಾಘವೇಂದ್ರ


ಭದ್ರಾವತಿಯಲ್ಲಿ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ವತಿಯಿಂದ ಸೋಮವಾರ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನ ಮುಂಭಾಗದ ಶ್ರೀ ರಾಮ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರ್.ಎಂ ವಿಶ್ವೇಶ್ವರಾಯರವರ ೧೬೫ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ ರಾಘವೇಂದ್ರ ಪಾಲ್ಗೊಂಡು ಮಾತನಾಡಿದರು. 
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಹೊಸದಾಗಿ ಮರುನಿರ್ಮಾಣ ಮಾಡುವ ಕಾರ್ಯ ಮುಂದಿನ ಒಂದು ತಿಂಗಳಲ್ಲಿ ಯಶಸ್ಸು ಕಾಣಲಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು. 
    ಅವರು ಸೋಮವಾರ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ವತಿಯಿಂದ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನ ಮುಂಭಾಗದ ಶ್ರೀ ರಾಮ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರ್.ಎಂ ವಿಶ್ವೇಶ್ವರಾಯರವರ ೧೬೫ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
    ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಎಚ್.ಡಿ ಕುಮಾರಸ್ವಾಮಿಯವರು ನೀಡಿರುವ ಭರವಸೆ ಇನ್ನೊಂದು ತಿಂಗಳಲ್ಲಿ ಯಶಸ್ಸು ಕಾಣುವ ಲಕ್ಷಣಗಳು ಕಂಡು ಬರುತ್ತಿವೆ. ಕೇಂದ್ರ ಸರ್ಕಾರ ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್ (ವೈಜಾಗ್ ಸ್ಟೀಲ್ ಪ್ಲಾಂಟ್) ಪುನಶ್ಚೇತನಗೊಳಿಸಿದಂತೆ ಈ ಕಾರ್ಖಾನೆಗೂ ಅಗತ್ಯವಿರುವ ಬಂಡವಾಳ ತೊಡಗಿಸಿ ಕಾರ್ಖಾನೆಯ ಬ್ಲಾಸ್ಟ್ ಫರ್‍ನೇಸ್ ಘಟಕ ಉಳಿಸಿಕೊಂಡು ಮರುನಿರ್ಮಾಣ ಮಾಡುವ ಕಾರ್ಯ ಕೈಗೊಳ್ಳಲಿದೆ. ಈ ನಿಟ್ಟಿನಲ್ಲಿ ಕುಮಾರಸ್ವಾಮಿಯವರ ಶ್ರಮ ಹೆಚ್ಚಿನದ್ದಾಗಿದೆ ಎಂದರು. 
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಕೆ ಸಂಗಮೇಶ್ವರ್, ನಿವೃತ್ತ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದರು ನೀಡಿರುವ ಭರವಸೆಯಂತೆ ಕೆಲವು ದಿನಗಳನ್ನು ಕಾದು ನೋಡೋಣ. ಒಂದು ವೇಳೆ ಸಮಸ್ಯೆ ಬಗೆಹರಿಯದಿದ್ದಲ್ಲಿ ನಿಮ್ಮೊಂದಿಗೆ ನಾನು ಸಹ ಹೋರಾಟದಲ್ಲಿ ಪಾಲ್ಗೊಳ್ಳುವೆ ಎಂದರು. 
ಕಲ್ಯಾಣ ಕೇಂದ್ರದ ಅಧ್ಯಕ್ಷ ಅಧ್ಯಕ್ಷ ಬಿ.ಜಿ ರಾಮಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಕಾರ್ಮಿಕರಾದ ಎಸ್. ಗಜೇಂದ್ರ ಮತ್ತು ಡಾಕಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಕಲ್ಯಾಣ ಕೇಂದ್ರದ ಉಪಾಧ್ಯಕ್ಷ ಎಸ್. ಅಡವೀಶಯ್ಯ, ಪ್ರಧಾನ ಕಾರ್ಯದರ್ಶಿ ಬಿ. ಮಂಜುನಾಥ್, ಖಜಾಂಚಿ ಎಲ್. ಬಸವರಾಜಪ್ಪ, ಕಾರ್ಯಕಾರಿ ಸಮಿತಿ ಸದಸ್ಯ ಹಾ. ರಾಮಪ್ಪ, ಎಸ್.ಎಸ್ ಭೈರಪ್ಪ, ಕೆಂಪಯ್ಯ, ಜಿ. ಶಂಕರ್, ಬಿ.ಕೆ ರವೀಂದ್ರ ರೆಡ್ಡಿ, ಎಂ. ನಾಗರಾಜ ಮತ್ತು ಲಾಜರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಪ್ಯಾಲೆಸ್ಟೈನ್ ಧ್ವಜ ಪ್ರದರ್ಶನ : ಪ್ರಕರಣ ದಾಖಲು


ಭದ್ರಾವತಿ ನಗರದಲ್ಲಿ ಮೂವರು ಯುವಕರು ಪ್ಯಾಲೆಸ್ಟೈನ್  ಧ್ವಜ ಹಿಡಿದು ದ್ವಿಚಕ್ರ ವಾಹನದಲ್ಲಿ ಸುತ್ತಾಡಿರುವ ದೃಶ್ಯ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು. 
    ಭದ್ರಾವತಿ: ನಗರದಲ್ಲಿ ಮೂವರು ಯುವಕರು ಪ್ಯಾಲೆಸ್ಟೈನ್  ಧ್ವಜ ಹಿಡಿದು ದ್ವಿಚಕ್ರ ವಾಹನದಲ್ಲಿ ಸುತ್ತಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಹಳೆನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
    ಮಹಮದ್ ಪೈಗಂಬರ ಜನ್ಮದಿನದ ಸಂಭ್ರಮದ ಆಚರಣೆ ಹಿನ್ನೆಲೆಯಲ್ಲಿ ಸೆ.೮ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಈದ್ ಮಿಲಾದ್ ಬೃಹತ್ ಮೆರವಣಿಗೆ ದಿನದಂದು ಈ ಘಟನೆ ನಡೆದಿದೆ. ಮೂವರು ಯುವಕರು  ಪ್ಯಾಲೆಸ್ಟೈನ್ ಧ್ವಜ ಹಿಡಿದು ನಗರದ ರೈಲ್ವೆ ನಿಲ್ದಾಣದ ಮುಂಭಾಗ, ತಿಮ್ಮಯ್ಯ ಮಾರುಕಟ್ಟೆ ಬಳಿ ದ್ವಿಚಕ್ರ  ವಾಹನದಲ್ಲಿ ಬಿ. ಎಚ್ ರಸ್ತೆಯಲ್ಲಿ  ಸುತ್ತಾಡಿರುವ ದೃಶ್ಯ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಹರಿದಾಡುತ್ತಿದೆ.  ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ.  
    ಈ ಘಟನೆ ರಾಷ್ಟ್ರೀಯ ಏಕತೆಗೆ ಧಕ್ಕೆಯನ್ನುಂಟು ಮಾಡಿದ್ದು, ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ ವಹಿಸಿದ್ದಾರೆಂದು  ಹಿಂದೂಪರ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ. ತಕ್ಷಣ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. 
    ಇದೇ ದಿನ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವ ಘಟನೆ ಸಹ ನಡೆದಿರುವುದು ಬೆಳಕಿಗೆ ಬಂದು ಹೋರಾಟಗಳು ನಡೆದಿದ್ದವು. ಈ ಸಂಬಂಧ ಪ್ರಕರಣದ ತನಿಖೆ ಇನ್ನೂ  ನಡೆಯುತ್ತಿದ್ದು, ಈ ನಡುವೆ ಇದೀಗ ಈ ಘಟನೆ ಬೆಳಕಿಗೆ ಬಂದಿರುವುದು ನಗರದಲ್ಲಿ ಮತ್ತಷ್ಟು ಅಶಾಂತಿ ನಿರ್ಮಾಣಕ್ಕೆ ಕಾರಣವಾಗಿದೆ.

ಮಲೆನಾಡಿಗೆ ಸರ್.ಎಂ.ವಿ ಕೊಡುಗೆ ಅಪಾರ : ಬಿ.ವೈ ರಾಘವೇಂದ್ರ

ಭದ್ರಾವತಿಯಲ್ಲಿ  ಸೋಮವಾರ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ವತಿಯಿಂದ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನ ಮುಂಭಾಗದ ಶ್ರೀ ರಾಮ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರ್.ಎಂ ವಿಶ್ವೇಶ್ವರಾಯರವರ ೧೬೫ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ ರಾಘವೇಂದ್ರ, ಮುಖಂಡರಾದ ಜಿ. ಧರ್ಮಪ್ರಸಾದ್, ಕೆ.ಎಚ್ ತೀರ್ಥಯ್ಯ, ಮಂಗೋಟೆ ರುದ್ರೇಶ್ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ಮಲೆನಾಡಿಗೆ ಭಾರತರತ್ನ, ದೇಶದ ಅಪ್ರತಿಮ ಅಭಿಯಂತರ ಸರ್.ಎಂ ವಿಶ್ವೇಶ್ವರಾಯರವರ ಕೊಡುಗೆ ಅಪಾರವಾಗಿದ್ದು, ಅವರ ಸ್ಮರಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು. 
    ಅವರು ಸೋಮವಾರ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ವತಿಯಿಂದ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನ ಮುಂಭಾಗದ ಶ್ರೀ ರಾಮ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರ್.ಎಂ ವಿಶ್ವೇಶ್ವರಾಯರವರ ೧೬೫ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
    ವಿಶ್ವೇಶ್ವರಾಯರವರು ಜಿಲ್ಲೆಯಲ್ಲಿ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆ ಸ್ಥಾಪನೆ ಜೊತೆಗೆ ಲಿಂಗನಮಕ್ಕಿ ಜಲಾಶಯ, ಜೋಗ ಜಲಪಾತ ಮಹಾತ್ಮಗಾಂಧಿ ವಿದ್ಯುತ್ ಉತ್ಪಾದನಾ ಕೇಂದ್ರ ಸೇರಿದಂತೆ ಹಲವು ಕೊಡುಗೆ ನೀಡಿದ್ದಾರೆ. ಮಲೆನಾಡಿನ ಜನರ ಅನ್ನದಾತರಾಗಿದ್ದಾರೆ ಎಂದರು. 
    ನಿವೃತ್ತ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿಕೊಡಲು ಬದ್ಧನಾಗಿದ್ದೇನೆ. ಈಗಾಗಲೇ ಹಲವು ಸಮಸ್ಯೆಗಳು ಬಗಹರಿದಿವೆ. ಮನೆ ಬಾಡಿಗೆ ಹೆಚ್ಚಳ ಕಡಿಮೆಗೊಳಿಸುವ ಸಂಬಂಧ ಉಕ್ಕು ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು. 
    ಮೆಸ್ಕಾಂ ನಿವೃತ್ತ ಅಭಿಯಂತರ ಜೆ. ಶಿವಪ್ರಸಾದ್ ಸರ್.ಎಂ ವಿಶ್ವೇಶ್ವರಾಯರವರು ಕುರಿತು ಉಪನ್ಯಾಸ ನೀಡಿದರು. ಕಲ್ಯಾಣ ಕೇಂದ್ರದ ಅಧ್ಯಕ್ಷ ಅಧ್ಯಕ್ಷ ಬಿ.ಜಿ ರಾಮಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. 
    ಕಲ್ಯಾಣ ಕೇಂದ್ರದ ಉಪಾಧ್ಯಕ್ಷ ಎಸ್. ಅಡವೀಶಯ್ಯ, ಪ್ರಧಾನ ಕಾರ್ಯದರ್ಶಿ ಬಿ. ಮಂಜುನಾಥ್, ಖಜಾಂಚಿ ಎಲ್. ಬಸವರಾಜಪ್ಪ, ಕಾರ್ಯಕಾರಿ ಸಮಿತಿ ಸದಸ್ಯ ಹಾ. ರಾಮಪ್ಪ, ಎಸ್.ಎಸ್ ಭೈರಪ್ಪ, ಕೆಂಪಯ್ಯ, ಜಿ. ಶಂಕರ್, ಬಿ.ಕೆ ರವೀಂದ್ರ ರೆಡ್ಡಿ, ಎಂ. ನಾಗರಾಜ, ಲಾಜರ್ ಮತ್ತು ಗಜೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸದ ಬಿ.ವೈ ರಾಘವೇಂದ್ರ, ಮುಖಂಡರಾದ ಜಿ. ಧರ್ಮಪ್ರಸಾದ್, ಕೆ.ಎಚ್ ತೀರ್ಥಯ್ಯ, ಮಂಗೋಟೆ ರುದ್ರೇಶ್ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.