Tuesday, September 28, 2021

ಬಗರ್‌ಹುಕುಂ ಸಾಗುವಳಿ ಸಮಿತಿಗೆ ೫ ಮಂದಿ ಸದಸ್ಯರ ನಾಮನಿರ್ದೇಶನ

ಅಧ್ಯಕ್ಷರಾಗಿ ಅಂತರಗಂಗೆ ಗ್ರಾಮ ಪಂಚಾಯಿತಿ ಸದಸ್ಯ ಬಿ. ನಾಗೇಶ್ ನೇಮಕ

ಬಿ. ನಾಗೇಶ್
    ಭದ್ರಾವತಿ, ಸೆ. ೨೮: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಹೊಸದಾಗಿ ೫ ಮಂದಿ ಸದಸ್ಯರನ್ನು ಸರ್ಕಾರ ನಾಮನಿರ್ದೇಶನಗೊಳಿಸಿ ಆದೇಶ ಹೊರಡಿಸಿದೆ.
    ಅಂತರಗಂಗೆ ಗ್ರಾಮದ ನಿವಾಸಿ, ಗ್ರಾಮ ಪಂಚಾಯಿತಿ ಸದಸ್ಯ ಬಿ. ನಾಗೇಶ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದ್ದು, ಉಳಿದಂತೆ ಒಕ್ಕಲಿಗ ಸಮಾಜದ ಹಿರಿಯ ಮುಖಂಡ, ಅಪ್ಪರ್‌ಹುತ್ತಾ ನಿವಾಸಿ ಎಚ್. ಕರಿಗೌಡ, ಭದ್ರಾಕಾಲೋನಿ ನಿವಾಸಿ, ಪರಿಶಿಷ್ಟ ಜಾತಿಯ ಮಾಲಾ ಧರ್ಮನಾಯ್ಕ್ ಮತ್ತು ಗುಡ್ಡದನೇರಲೆಕೆರೆ ಗ್ರಾಮದ ನಿವಾಸಿ ಸರಸ್ವತಿ ಅವರನ್ನು ಸದಸ್ಯರನ್ನಾಗಿ ಹಾಗು ತಾಲೂಕು ದಂಡಾಧಿಕಾರಿ ತಹಸೀಲ್ದಾರ್ ಅವರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಕಗೊಳಿಸಿ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಿ. ಬಲರಾಮ್ ಆದೇಶ ಹೊರಡಿಸಿದ್ದಾರೆ.
    ಈ ಹಿಂದೆ ಸರ್ಕಾರ ೨೪.೦೧.೨೦೨೦ರಲ್ಲಿ ನಾಮನಿರ್ದೇಶನಗೊಳಿಸಿದ್ದ ಸದಸ್ಯರ ಸದಸ್ಯತ್ವ ರದ್ದುಪಡಿಸಿ ಇದೀಗ ಹೊಸದಾಗಿ ಸದಸ್ಯರನ್ನು ನೇಮಕಗೊಳಿಸಿದೆ.

ಶಿಕ್ಷಕ ಸಿ.ಎಚ್ ನಾಗೇಂದ್ರಪ್ಪರಿಗೆ ರಾಜ್ಯಮಟ್ಟದ ಚಿನ್ಮಯಿಜ್ಞಾನಿ ಶಿಕ್ಷಕ ಪ್ರಶಸ್ತಿ

ಮೈಸೂರಿನ ಶರಣ ವಿಶ್ವವಚನ ಫೌಂಡೇಷನ್ ವತಿಯಿಂದ ನೀಡಲಾಗುವ ರಾಜ್ಯಮಟ್ಟದ 'ಚಿನ್ಮಯಿಜ್ಞಾನಿ ಶಿಕ್ಷಕ ಪ್ರಶಸ್ತಿ'ಯನ್ನು ಈ ಬಾರಿ ಭದ್ರಾವತಿ ನಗರಸಭೆ ವ್ಯಾಪ್ತಿಯ ಕಡದಕಟ್ಟೆ ಗ್ರಾಮದ ನವಚೇತನ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಎಚ್.ನಾಗೇಂದ್ರಪ್ಪ ಪಡೆದುಕೊಂಡಿದ್ದಾರೆ.
    ಭದ್ರಾವತಿ: ಮೈಸೂರಿನ ಶರಣ ವಿಶ್ವವಚನ ಫೌಂಡೇಷನ್ ವತಿಯಿಂದ ನೀಡಲಾಗುವ ರಾಜ್ಯಮಟ್ಟದ 'ಚಿನ್ಮಯಿಜ್ಞಾನಿ ಶಿಕ್ಷಕ ಪ್ರಶಸ್ತಿ'ಯನ್ನು ಈ ಬಾರಿ ನಗರಸಭೆ ವ್ಯಾಪ್ತಿಯ ಕಡದಕಟ್ಟೆ ಗ್ರಾಮದ ನವಚೇತನ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಎಚ್.ನಾಗೇಂದ್ರಪ್ಪ ಪಡೆದುಕೊಂಡಿದ್ದಾರೆ.
    ಪ್ರತಿ ಜಿಲ್ಲೆಯಿಂದ ಒಬ್ಬರಂತೆ ರಾಜ್ಯಾದ್ಯಂತ ಸುಮಾರು ೩೨ ಸಾಧಕ ಶಿಕ್ಷಕ, ಶಿಕ್ಷಕಿಯರನ್ನು ಗುರುತಿಸಿ ಆಯ್ಕೆಮಾಡುವ ಮೂಲಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೈಸೂರಿನ ಹೊಸಮಠದ ನಟರಾಜ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಬೀದರ್ ಜಿಲ್ಲೆಯ ಬಸವ ಕಲ್ಯಾಣ ಅನುಭವ ಮಂಟಪದ ಡಾ. ಶ್ರೀ ಬಸವಲಿಂಗ ಪಟ್ಟದೇವರು ದಿವ್ಯ ಸಾನಿಧ್ಯ ವಹಿಸಿದ್ದರು.
    ಮೈಸೂರಿನ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಶರಣು ವಿಶ್ವ ವಚನ ಫೌಂಡೇಶನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ, ರೂಪ ಕುಮಾರಸ್ವಾಮಿ, ವಿಶ್ರಾಂತ ಉಪ ನಿರ್ದೇಶಕ ಸ್ವಾಮಿ, ಮೈಸೂರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಿ ಸೋಮೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಾಲಂಗಿ ಸುರೇಶ್, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಶನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ ಅನಿಲ್, ಕ್ರಿಷ್ಟಿ, ಪ್ರಶಸ್ತಿ ಪುರಸ್ಕೃತ ಸಿ.ಎಚ್ ನಾಗೇಂದ್ರಪ್ಪನವರ ಅವರ ತಾಯಿ ಚಂದ್ರಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರಮಹಾಲಕ್ಷ್ಮಿ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ

ಭದ್ರಾವತಿ ವಿದ್ಯಾಮಂದಿರ ವಲಯದ ಚಾಮೇಗೌಡ ಏರಿಯಾದಲ್ಲಿ ನೂತನವಾಗಿ ವರಮಹಾಲಕ್ಷ್ಮಿ ಜ್ಞಾನವಿಕಾಸ ಕೇಂದ್ರ ಅಸ್ತಿತ್ವಕ್ಕೆ ಬಂದಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಒಕ್ಕೂಟದ ಅಧ್ಯಕ್ಷೆ ಪ್ರಮೀಳಾ ಉದ್ಘಾಟಿಸಿದರು.
    ಭದ್ರಾವತಿ, ಸೆ. ೨೮: ನಗರದ ವಿದ್ಯಾಮಂದಿರ ವಲಯದ ಚಾಮೇಗೌಡ ಏರಿಯಾದಲ್ಲಿ ನೂತನವಾಗಿ ವರಮಹಾಲಕ್ಷ್ಮಿ ಜ್ಞಾನವಿಕಾಸ ಕೇಂದ್ರ ಅಸ್ತಿತ್ವಕ್ಕೆ ಬಂದಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಒಕ್ಕೂಟದ ಅಧ್ಯಕ್ಷೆ ಪ್ರಮೀಳಾ ಉದ್ಘಾಟಿಸಿದರು.
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ವಲಯದ ವ್ಯಾಪ್ತಿಯಲ್ಲಿ ಸಾಮಾಜಿಕ ಸೇವಾ ಯೋಜನೆಗಳ ಜೊತೆಗೆ ಸದಸ್ಯರಿಗೆ ಆರೋಗ್ಯ, ಶಿಕ್ಷಣ, ಕಾನೂನು ಅರಿವು ಸೇರಿದಂತೆ ಇತ್ಯಾದಿ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಜ್ಞಾನವಿಕಾಸ ಕೇಂದ್ರಗಳನ್ನು ಆರಂಭಿಸಲಾಗಿದೆ.
    ಸ್ತ್ರೀ ರೋಗ ತಜ್ಞೆ ಡಾ. ವೀಣಾ ಎಸ್. ಭಟ್, ವಲಯದ ಮೇಲ್ವಿಚಾರಕ ವೀರೇಶ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಪ್ರೀತಿ, ಸೇವಾ ಪ್ರತಿನಿಧಿ ಹಾಗು ಕೇಂದ್ರದ ಎಲ್ಲಾ  ಸದಸ್ಯರು ಉಪಸ್ಥಿತರಿದ್ದರು.

ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

    ಭದ್ರಾವತಿ, ಸೆ. ೨೮: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
    ೬ ರಿಂದ ೧೦ನೇ ತರಗತಿವರೆಗಿನ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದ್ದು, ಪ್ರವರ್ಗ-೧, ೨ಎ, ೨ಬಿ, ೩ಎ, ೩ಬಿ, ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳ ಜನಾಂಗದ ವಿದ್ಯಾರ್ಥಿಗಳು ಸಹ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
    ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ಮಿತಿ ಪ್ರವರ್ಗ-೧, ಎಸ್.ಸಿ ಮತ್ತು ಎಸ್.ಟಿ ರು. ೨.೫೦ ಲಕ್ಷ, ಪ್ರವರ್ಗ-೨ಎ, ೨ಬಿ, ೩ಎ, ೩ಬಿ ಇತರೆ ಹಿಂದುಳಿದ ವರ್ಗ ರು.೧ ಲಕ್ಷ ನಿಗದಿಗೊಳಿಸಲಾಗಿದೆ.
    ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿ.೧೧.೧೦.೨೦೨೧ ಕಡೆಯ ದಿನವಾಗಿದ್ದು, ತಾಲೂಕುವಾರು ವಿದ್ಯಾರ್ಥಿ ನಿಲಯಗಳ ವಿವರ ಹಾಗು ವಿದ್ಯಾರ್ಥಿ ನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ ಮತ್ತು ಸರ್ಕಾರದ ಆದೇಶಕ್ಕಾಗಿ ಇಲಾಖೆಯ ವೆಬ್‌ಸೈಟ್ ನೋಡುವುದು.
    ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಗಳು ಕಂಡು ಬಂದಲ್ಲಿ ಇಲಾಖೆಯ ಈ-ಮೇಲ್ ವಿಳಾಸಕ್ಕೆ ಅಥವಾ ಜಿಲ್ಲಾ/ತಾಲೂಕು ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರನ್ನು ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸುವುದು. ಹೆಚ್ಚಿನ ಮಾಹಿತಿಗೆ ೦೮೨೮೨-೨೬೪೬೪೪, ೦೮೦-೮೦೫೦೩೭೦೦೦೬ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಹಿಂದು ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.