Wednesday, July 22, 2020

ಭದ್ರಾವತಿಯಲ್ಲಿ ೫ ಕೊರೋನಾ ಸೋಂಕು ಪತ್ತೆ

ಭದ್ರಾವತಿ, ಜು. ೨೨: ತಾಲೂಕಿನಲ್ಲಿ ಬುಧವಾರ ಪುನಃ ೫ ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಈ ಪೈಕಿ ಓರ್ವ ಪೊಲೀಸ್ ಸಿಬ್ಬಂದಿ ಮತ್ತು ಓರ್ವ ಕೆಎಸ್‌ಆರ್‌ಟಿಸಿ ನೌಕರ ಸೇರಿದ್ದಾರೆ. 
ಹಳೇನಗರದ ಕಂಚಿಬಾಗಿಲು ವೃತ್ತದ ಅಂಬೇಡ್ಕರ್ ನಗರದ ೨೮ ವರ್ಷದ ಪೊಲೀಸ್ ಸಿಬ್ಬಂದಿ ಮತ್ತು ೪೮ ವರ್ಷದ ವ್ಯಕ್ತಿಗೆ, ನ್ಯೂಟೌನ್ ಬೆಣ್ಣೆಕೃಷ್ಣ ಸರ್ಕಲ್ ಬಳಿ ೩೯ ವರ್ಷದ ವ್ಯಕ್ತಿಗೆ, ೫೫ ವರ್ಷದ ಕೆಎಸ್‌ಆರ್‌ಟಿಸಿ ನೌಕರನಿಗೆ ಮತ್ತು ಸಿರಿಯೂರು ತಾಂಡದ ೧೫ ವರ್ಷದ ಹುಡುಗನಿಗೆ ಸೋಂಕು ತಗುಲಿದೆ. 
ಮಂಗಳವಾರ ೧೦ ಪ್ರಕರಣ ದಾಖಲಾಗಿತ್ತು. ಬುಧವಾರ ೫ಕ್ಕೆ ಇಳಿದಿದ್ದು, ಇತ್ತೀಚೆಗೆ ಗ್ರಾಮೀಣ ಭಾಗದಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಇದರಿಂದಾಗಿ ಗ್ರಾಮೀಣ ಭಾಗದ ಜನರು ಸಹ ಆತಂಕಕ್ಕೆ ಒಳಗಾಗುವಂತಾಗಿದೆ. 

ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗೆ ಕೊರೋನಾ ಸೋಂಕು

ಭದ್ರಾವತಿ, ಜು. ೨೨: ನಗರದ ಹೊಸಮನೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್  ಸಿಬ್ಬಂದಿ ಒಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ಬುಧವಾರ ಪತ್ತೆಯಾಗಿದ್ದು, ಇದರಿಂದಾಗಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಲ್ಲಿ ಆತಂಕ ಹೆಚ್ಚಾಗಿದೆ. 
ಸುಮಾರು ೨೭ ವರ್ಷದ ಪೊಲೀಸ್ ಸಿಬ್ಬಂದಿಗೆ ಕಳೆದ ೪ ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಕೊರೋನಾ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಗಂಟಲು ಮಾದರಿಯನ್ನು ಪ್ರಯೋಗಾಯಲಕ್ಕೆ ಕಳುಹಿಸಿ ಕೊಡಲಾಗಿತ್ತು. ಇದೀಗ ಸೋಂಕು ತಗುಲಿರುವುದು ಖಚಿತವಾಗಿದ್ದು, ಈ ಹಿನ್ನಲೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಕೋವಿಡ್-೧೯ ಆಸ್ಪತ್ರೆಗೆ ದಾಖಲಿಸಲಾಗಿದೆ. 
ಕಳೆದ ಕೆಲವು ದಿನಗಳ ಹಿಂದೆ ಹೊಸಮನೆ ಎನ್‌ಎಂಸಿ ಬಡಾವಣೆ ಶಾಸಕ ಬಿ.ಕೆ ಸಂಗಮೇಶ್ವರ್ ನಿವಾಸದ ಸಮೀಪದ ರಸ್ತೆಯೊಂದರಲ್ಲಿ ಇಬ್ಬರು ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಆ ವ್ಯಾಪ್ತಿಯನ್ನು ಕಂಟೈನ್ಮೆಂಟ್  ವಲಯವನ್ನಾಗಿಸಲಾಗಿತ್ತು. ಈ ಪ್ರದೇಶದಲ್ಲಿ ಇದೀಗ ಸೋಂಕಿಗೆ ಒಳಗಾಗಿರುವ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದರು ಎನ್ನಲಾಗಿದೆ. 


ಕಸಾಪ ವತಿಯಿಂದ ಆನ್‌ಲೈನ್ ಮುಖಾಂತರ ಗಾಯನ ಸ್ಪರ್ಧೆ

ಭದ್ರಾವತಿ, ಜು. ೨೨: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮೊದಲ ಬಾರಿಗೆ ಆನ್‌ಲೈನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ೭೪ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೇಶ ಭಕ್ತಿಗೀತೆಗಳ(ತಾಳ, ಪರಿಕರಗಳು, ಕೊರೋಕಿ) ಇಲ್ಲದೆ ಗಾಯನ ಸ್ಪರ್ಧೆ ಆಯೋಜಿಸಲಾಗಿದೆ. 
೧೪ ವರ್ಷದೊಳಗಿನ ಕಿರಿಯರ ಮತ್ತು ೧೫ ವರ್ಷ ಮೇಲ್ಪಟ್ಟ ಹಿರಿಯರ ಎರಡು ವಿಭಾಗದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ೩ ರಿಂದ ೪ ನಿಮಿಷದ ಗಾಯನದ ವಿಡಿಯೋ ಮಾಡಿ ಕಳಿಸಿಕೊಡಬೇಕು. ವಿಡಿಯೋ ಮಾಡುವಾಗ ಮೊದಲು ಸ್ಪರ್ಧಿಯ ಹೆಸರು, ವಿಳಾಸ ತಿಳಿಸಬೇಕು. ಗಾಯನದ ವಿಡಿಯೋ ಕ್ಲಿಪ್ ಮೊ: ೯೭೩೧೧೫೭೭೯೩ ಅಥವಾ ೯೪೪೯೯೫೧೩೦೦ ವಾಟ್ಸ್‌ಆಪ್ ನಂಬರ್‌ಗೆ ಜು.೩೦, ಸಂಜೆ ೫ ಗಂಟೆಯೊಳಗೆ ಕಳಿಸಿ ಕೊಡಬೇಕು. 
ವಿಜೇತರಾದ ಮೊದಲ ಮಂದಿಗೆ ಆ.೧೫ರ ಸ್ವಾತಂತ್ರ್ಯ ದಿನಾಚರಣೆಯಂದು ಬಹುಮಾನಗಳನ್ನು ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗೆ ಕಸಾಪ ಅಧ್ಯಕ್ಷ ಅಪೇಕ್ಷ ಮಂಜುನಾಥ್, ಮೊ: ೯೭೩೧೧೫೭೭೯೩, ಕಾರ್ಯದರ್ಶಿ ಚನ್ನಪ್ಪ, ಮೊ: ೯೪೪೯೯೫೧೩೦೦ ಸಂಖ್ಯೆಗೆ ಕರೆ ಮಾಡಬಹುದಾಗಿದೆ. 

ಸಹೋದರನಿಂದಲೇ ಅನ್ಯಾಯ : ಬೀದಿಗೆಬಿದ್ದ ಕುಟುಂಬ

ಇಬ್ಬರು ಅಂಧ ವಿಕಲಚೇತನ ಮಕ್ಕಳನ್ನು ಹೊಂದಿರುವ ಭದ್ರಾವತಿ ತಾಲೂಕಿನ ಅಗರದಹಳ್ಳಿ ಗ್ರಾಮದ ನಿವಾಸಿ ಖಾಜಾವಲಿ ಕುಟುಂಬ. 
ಭದ್ರಾವತಿ, ಜು. ೨೨: ಇಬ್ಬರು ಅಂಧ ವಿಕಲಚೇತನ ಮಕ್ಕಳನ್ನು ಹೊಂದಿರುವ ತಾಲೂಕಿನ ಅಗರದಹಳ್ಳಿ ಗ್ರಾಮದ ಕುಟುಂಬವೊಂದರ ಬದುಕು ಇದೀಗ ಬೀದಿಗೆ ಬೀಳುವ ಹಂತಕ್ಕೆ ತಲುಪಿದ್ದು, ೧ ಎಕರೆ ಬಗರ್‌ಹುಕುಂ ಸಾಗುವಳಿ ಜಮೀನಿಗಾಗಿ ತಾಲೂಕು ದಂಡಾಧಿಕಾರಿಗಳ ಮೊರೆ ಹೋಗಿದೆ. 
ಅಗರದಹಳ್ಳಿ ಗ್ರಾಮದ ನಿವಾಸಿ ಖಾಜಾವಲಿ ಕುಟುಂಬ ಸಂಕಷ್ಟಕ್ಕೆ ಒಳಗಾಗಿದೆ. ಬಹಳ ವರ್ಷಗಳಿಂದ ಖಾಜಾವಲಿ ತನ್ನ ಅಣ್ಣ ಸಹೋದರ ಅಬ್ದುಲ್ ಜೊತೆ ವಾಸಿಸುತ್ತಿದ್ದು, ರಜೀಯಾ ಬೇಗಂ ಎಂಬ  ಮಹಿಳೆಯನ್ನು ವಿವಾಹವಾಗಿ ಇಬ್ಬರು ಅಂಧ ವಿಕಲಚೇತನ ಮಕ್ಕಳನ್ನು ಹೊಂದಿದ್ದಾರೆ. ಈ ಕುಟುಂಬಕ್ಕೆ ಕಾನೂನು ಪ್ರಕಾರ ಬರಬೇಕಾದ ೧ ಎಕರೆ ಜಮೀನು ಲಭಿಸಿಲ್ಲ. ಅಣ್ಣನಿಂದಲೇ ಅನ್ಯಾಯಕ್ಕೆ ಒಳಗಾಗಿದೆ. 
ಘಟನೆ ವಿವರ: 
ಖಾಜಾವಲಿ ಮತ್ತು ಅಬ್ದುಲ್ ಇಬ್ಬರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾಗ ತಾಲೂಕಿನ ಹಂಚಿನ ಸಿದ್ದಾಪುರ ಗ್ರಾಮದ ಸರ್ವೆ ನಂ.೩೨ರಲ್ಲಿ  ೨ ಎಕರೆ ಬಕರ್‌ಹುಕುಂ ಸಾಗುವಳಿ ಜಮೀನು ಹೊಂದಿದ್ದು, ಸರ್ಕಾರ ಕಾನೂನು ಪ್ರಕಾರ ಒಂದು ಕುಟುಂಬಕ್ಕೆ ೧ ಎಕರೆ ಬಗರ್‌ಹುಕುಂ ಜಮೀನು ಮಂಜೂರಾತಿ ಮಾಡಿದ್ದು, ಆದರೆ ಈ ೨ ಎಕರೆ ಜಮೀನು ಮಾತ್ರ ಸಹೋದರ ಅಬ್ದುಲ್ ಕುಟುಂಬಕ್ಕೆ ನೀಡಲಾಗಿದೆ. ಅಲ್ಲದೆ ಜಮೀನು ದಾಖಲೆ ಪತ್ರಗಳನ್ನು ಸಹ ಮಾಡಿಕೊಡಲಾಗಿದೆ. ೨ ಎಕರೆ ಜಮೀನಿನಲ್ಲಿ ೧ ಎಕರೆ ಖಾಜಾವಲಿ ಕುಟುಂಬಕ್ಕೆ ನೀಡದೆ ಅನ್ಯಾಯ ವೆಸಗಲಾಗಿದೆ. 
ಸಹೋದರ ಅಬ್ದುಲ್ ತನ್ನ ಬಳಿ ದಾಖಲೆ ಪತ್ರಗಳು ಇರುವ ಕಾರಣ ಖಾಜಾವಲಿ ಕುಟುಂಬ ಜಮೀನು ಸಾಗುವಳಿ ಮಾಡದಂತೆ ತಡೆಯೊಡ್ಡುತ್ತಿದೆ. ಇದರಿಂದಾಗಿ ಆತಂಕಕ್ಕೆ ಒಳಗಾಗಿರುವ ಕುಟುಂಬ ರೈತ ಸಂಘದ ಬಳಿ ತನ್ನ ಸಂಕಷ್ಟ ಹೇಳಿಕೊಂಡಿದೆ. 
ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬದ ನೆರವಿಗೆ ರೈತ ಸಂಘದ ಹಿರಿಯ ಮುಖಂಡ ಯಶವಂತರಾವ್ ಘೋರ್ಪಡೆ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಮುಂದಾಗಿದ್ದು, ಬುಧವಾರ ಈ ಸಂಬಂಧ ಅನ್ಯಾಯಕ್ಕೆ ಒಳಗಾಗಿರುವ ಕುಟುಂಬದೊಂದಿಗೆ ತಾಲೂಕು ಕಛೇರಿಗೆ ಆಗಮಿಸಿ ತಹಸೀಲ್ದಾರ್ ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಡುವಂತೆ ಮನವಿ ಮಾಡಿದ್ದಾರೆ. 
ಅಧಿಕಾರಿಗಳಿಂದ ಕಾನೂನು ಉಲ್ಲಂಘನೆ: 
ರೈತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ ವೀರೇಶ್ ಪತ್ರಿಕೆಯೊಂದಿಗೆ ಮಾತನಾಡಿ, ಅಧಿಕಾರಿಗಳು ಕಾನೂನು ಉಲ್ಲಂಘಿಸಿ ಜಮೀನು ಮಂಜೂರಾತಿ ಮಾಡಿದ್ದಾರೆ. ನಡೆದಿರುವ ತಪ್ಪನ್ನು ಅವರೇ ಸರಿಪಡಿಸಿ ಕೊಡಬೇಕು. ಇಬ್ಬರು ಅಂಧ ಮಕ್ಕಳೊಂದಿಗೆ ಜೀವನ ನಡೆಸುವುದೇ ಕಷ್ಟಕರವಾಗಿ ಈ ನಡುವೆ ಈ ಕುಟುಂಬಕ್ಕೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ. ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಬೆದರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ಕುಟುಂಬದ ನೆರವಿಗೆ ತಾಲೂಕು ಆಡಳಿತ ಮುಂದಾಗಬೇಕು. ತಹಸೀಲ್ದಾರ್‌ರವರು ಸಮಸ್ಯೆ ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದರು.